Friday, 22nd November 2024

ಉಕ್ರೇನ್‌ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ; ಉಪಪ್ರಧಾನಿ ಸೇರಿ ಸಚಿವರ ಸಾಮೂಹಿಕ ರಾಜೀನಾಮೆ

Ukraine

ಕೀವ್‌: ಉಕ್ರೇನ್‌ (Ukraine)ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದ್ದು, ಸರ್ಕಾರದ ಪುನರ್‌ರಚನೆಯ ಮುಂಚಿತವಾಗಿ ಕ್ಯಾಬಿನೆಟ್‌ ಸಚಿವರು ಸೇರಿ ಕನಿಷ್ಠ 6 ಮಂದಿ ಉನ್ನತ ಮಟ್ಟದ ಅಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರದ ಪ್ರಮುಖ ಹುದ್ದೆಯಾದ ಶಸ್ತ್ರಾಸ್ತ್ರ ಉತ್ಪಾದನೆಯ ಉಸ್ತುವಾರಿ ಹೊಂದಿರುವ ಕೈಗಾರಿಕಾ ಸಚಿವರು ಸೇರಿ ಕೆಲವು ಉನ್ನತ ಸ್ಥಾನಮಾನಗಳನ್ನು ಹೊಂದಿರುವ ನಾಯಕರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿ ತಿಳಿಸಿದೆ. ಆಡಳಿತಾರೂಢ ಸರ್ವೆಂಟ್ ಆಫ್ ದಿ ಪೀಪಲ್ ಪಕ್ಷ (Servant of the People party)ದ ಸಂಸದೀಯ ನಾಯಕ ಡೇವಿಡ್ ಅರಾಖಾಮಿಯಾ (David Arakhamia) ಇತ್ತೀಚೆಗೆ ಸರ್ಕಾರ ಪುನರ್‌ರಚನೆಯಾದ ಬಳಿಕ  ಕ್ಯಾಬಿನೆಟ್‌ ಅರ್ಧದಷ್ಟು ಬದಲಾಗಲಿದೆ ಎಂದು ಹೇಳಿಕೆ ನೀಡಿದ್ದರು. ಅದರಂತೆ ಇದೀಗ ಈ ಬೆಳವಣಿಗೆ ಕಂಡು ಬಂದಿದೆ.  ಉಕ್ರೇನ್‌ ಮೇಲೆ ರಷ್ಯಾ ದಾಳಿ ಮುಂದುವರಿದಿರುವ ಹಿನ್ನಲೆಯಲ್ಲಿ ಈ ಬದಲಾವಣೆಗೆ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ರಾಜೀನಾಮೆ ನೀಡಿದವರು

ಮಂಗಳವಾರ ರಾಜೀನಾಮೆ ಸಲ್ಲಿಸಿದವರಲ್ಲಿ ಕೈಗಾರಿಕಾ ಸಚಿವ ಅಲೆಕ್ಸಾಂಡರ್ ಕಾಮಿಶಿನ್, ನ್ಯಾಯಾಂಗ ಸಚಿವ ಡೆನಿಸ್ ಮಾಲಿಯುಸ್ಕಾ, ಪರಿಸರ ಸಂರಕ್ಷಣಾ ಸಚಿವ ರುಸ್ಲಾನ್ ಸ್ಟ್ರೈಲೆಟ್ಸ್, ಉಪ ಪ್ರಧಾನಿಗಳಾದ ಓಲ್ಹಾ ಸ್ಟೆಫಾನಿಶಿನಾ ಮತ್ತು ಇರಿನಾ ವೆರೆಶ್ಚುಕ್ ಹಾಗೂ ಉಕ್ರೇನ್‌ನ ಸ್ಟೇಟ್‌ ಪ್ರಾಪರ್ಟಿ ಪಂಡ್‌ನ ಮುಖ್ಯಸ್ಥ ವಿಟಾಲಿ ಕೋವಲ್ ಸೇರಿದ್ದಾರೆ. ರಾಷ್ಟ್ರಾಧ್ಯಕ್ಷರ ಹಿರಿಯ ಸಹಾಯಕರಲ್ಲಿ ಒಬ್ಬರಾದ ರೊಸ್ಟಿಸ್ಲಾವ್ ಶುರ್ಮಾ ಅವರನ್ನೂ ವಜಾಗೊಳಿಸಲಾಗಿದೆ.

ಸಂಸದೀಯ ನಾಯಕ ಡೇವಿಡ್ ಅರಾಖಾಮಿಯಾ ಈ ಬಗ್ಗೆ ಮಾತನಾಡಿ, “ಭರವಸೆ ನೀಡಿದಂತೆ ಈ ವಾರ ಸಂಪುಟ ಸಭೆಯ ಪುನರ್‌ರಚನೆಯಾಗಲಿದೆ. ಕ್ಯಾಬಿನೆಟ್ ಸಚಿವರ ಶೇ. 50ಕ್ಕಿಂತ ಹೆಚ್ಚು ಸಿಬ್ಬಂದಿಯನ್ನು ಬದಲಾಯಿಸಲಾಗುವುದು. ಶೀಘ್ರದಲ್ಲಿಯೇ ತೆರವಾದ ಸ್ಥಾನಗಳಿಗೆ ನೇಮಕಾತಿ ನಡೆಯಲಿದೆ” ಎಂದು ಹೇಳಿದ್ದಾರೆ.

ಮಂಗಳವಾರ ಸಂಜೆ ತಮ್ಮ ವೀಡಿಯೊ ಭಾಷಣದಲ್ಲಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky), “ಸರ್ಕಾರದ ಕೆಲವು ಕ್ಷೇತ್ರಗಳನ್ನು ಬಲಪಡಿಸಲು ನಿರ್ಧರಿಸಿದ್ದೇವೆ. ಅದಕ್ಕಾಗಿ ಸಚಿವ ಸಂಪುಟ ಸಭೆಯಲ್ಲಿ ಬದಲಾವಣೆ ತರಲಿದ್ದೇವೆ.  ಅಧ್ಯಕ್ಷರ ಕಚೇರಿಯಲ್ಲಿಯೂ ಬದಲಾವಣೆಗಳು ಇರಲಿದೆ” ಎಂದು ಸೂಚನೆ ನೀಡಿದ್ದರು.

ಪ್ರತಿಪಕ್ಷಗಳಿಂದ ಟೀಕೆ

ಸದ್ಯ ಸರ್ಕಾರದ ಈ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಪ್ರತಿಪಕ್ಷದ ನಾಯಕಿ ಇರಿನಾ ಗೆರಾಶ್ಚೆಂಕೊ ಅವರು ಈ ಬಗ್ಗೆ ಮಾತನಾಡಿ,ʼʼಇದು ಸಚಿವರಿಲ್ಲದ ಸರ್ಕಾರ. ಬೌದ್ಧಿಕ ಮತ್ತು ಸಿಬ್ಬಂದಿ ಬಿಕ್ಕಟ್ಟಿನ ಬಗ್ಗೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆʼʼ ಎಂದು ಟೀಕಿಸಿದ್ದಾರೆ. ಸರ್ಕಾರದ ಒಗ್ಗಟ್ಟು ನಾಶವಾಗಿದೆ ಎಂದೂ ಅವರು ಕಿಡಿ ಕಾರಿದ್ದಾರೆ. 2022ರಲ್ಲಿ ರಷ್ಯಾ-ಉಕ್ರೇನ್‌ ಯುದ್ಧ ಆರಂಭವಾದಾಗಿನಿಂದ ಇದುವರೆಗೆ ಹಲವು ಬಾರಿ ಸಂಪುಟ ಸಭೆಯನ್ನು ಬದಲಾಯಿಸಲಾಗಿದೆ.

https://x.com/ZelenskyyUa/status/1830933556832473177

ರಷ್ಯಾದಿಂದ ಕ್ಷಿಪಣಿ ದಾಳಿ; ಪೋಲ್ಟವಾದಲ್ಲಿ 51 ಮಂದಿ ಸಾವು

ಉಕ್ರೇನ್‌ನ ಪೋಲ್ಟವಾ ನಗರದಲ್ಲಿ ಮಂಗಳವಾರ ನಡೆದ ರಷ್ಯಾದ  ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 51 ಜನರು ಸಾವನ್ನಪ್ಪಿದ್ದಾರೆ ಮತ್ತು 180 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಷ್ಯಾದ ಪಡೆಗಳು ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ನಡೆಸಿವೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: Israel-Hamas Conflict: 6 ಮಂದಿ ಒತ್ತೆಯಾಳುಗಳ ಶವ ಪತ್ತೆಯಾದ ಬೆನ್ನಲ್ಲೇ ಇಸ್ರೇಲ್‌ನಲ್ಲಿ ಭುಗಿಲೆದ್ದ ಆಕ್ರೋಶ