Monday, 23rd December 2024

Shot Dead: ಯುನೈಟೆಡ್‌ ಹೆಲ್ತ್‌ಕೇರ್‌ ಸಿಇಒ ಮೇಲೆ ಗುಂಡಿನ ದಾಳಿ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ನ್ಯೂಯಾರ್ಕ್:‌ ಯುನೈಟೆಡ್ ಹೆಲ್ತ್‌ಕೇರ್ (United Health Care) ಸಿಇಒ ಬ್ರಿಯಾನ್ ಥಾಂಪ್ಸನ್(Brian Thompson) ಅವರ ಮೇಲೆ ಶಂಕಿತ ವ್ಯಕ್ತಿಯೊಬ್ಬ ಬುಧವಾರ(ಡಿ .4) ಬೆಳ್ಳಂಬೆಳಗ್ಗೆ ಮಾರಣಾಂತಿಕವಾಗಿ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನ್ಯೂಯಾರ್ಕ್ ಹಿಲ್ಟನ್ ಮಿಡ್‌ಟೌನ್‌ನ (New York Hilton Midtown) ಹೊರಗೆ ಈ ದಾರುಣ ಘಟನೆ ಸಂಭವಿಸಿದ್ದು, ಬಹುದೊಡ್ಡ ಹೆಲ್ತ್‌ ಇನ್ಸುರೆನ್ಸ್‌ ಕಂಪನಿಯೊಂದು ಆಯೋಜಿಸಿದ್ದ ಹೂಡಿಕೆದಾರರ (Investor) ಸಮಾವೇಶದಲ್ಲಿ ಥಾಂಪ್ಸನ್ ಮುಖ್ಯ ಭಾಷಣ ಮಾಡಲು ಹೊರಡುವ ವೇಳೆಯಲ್ಲಿ ಅಂದರೆ ಬೆಳಗ್ಗೆ 7 ಗಂಟೆಗೆ ಸರಿಯಾಗಿ ಗುಂಡಿನ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ (Shot Dead).

“ಇದು ಈ ಮೊದಲೇ ನಿರ್ಧರಿಸಿ ಉದ್ದೇಶಪೂರ್ವಕವಾಗಿ ಮಾಡಿರುವ ಕೃತ್ಯ” ಎಂದು NYPD ಕಮಿಷನರ್ ಜೆಸ್ಸಿಕಾ ಟಿಶ್ ಸುದ್ದಿಗಾರರಿಗೆ ತಿಳಿಸಿದ್ದಾರೆ. “ಶಂಕಿತ ವ್ಯಕ್ತಿ ತನ್ನ ಕೆಲಸ ಪ್ರಾರಂಭಿಸುವ ಮೊದಲು ತುಂಬಾ ಹೊತ್ತು ಘಟನೆ ನಡೆದಿರುವ ಸ್ಥಳದಲ್ಲಿ ಕಾದಿದ್ದಾನೆ. ನಿರ್ದಿಷ್ಟ ಗುರಿ ಇರಿಸಿಕೊಂಡು ಈ ದಾಳಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನ್ಯೂಯಾರ್ಕ್ ಮೇಯರ್ ಎರಿಕ್ ಆಡಮ್ಸ್ ತನಿಖೆಗೆ ಸಂಪೂರ್ಣ ಬೆಂಬಲ ನೀಡಿದ್ದು,”ಈ ದುರಂತ ಘಟನೆಯು ನಮ್ಮ ನಗರದ ವ್ಯಾಪ್ತಿಯಲ್ಲಿ ನಡೆದಿಲ್ಲವಾದರೂ, ಆರೋಪಿಯನ್ನು ಬಂಧಿಸಲು ನಾವು ಪಟ್ಟುಬಿಡದೆ ಕೆಲಸ ಮಾಡುತ್ತಿದ್ದೇವೆ” ಎಂದಿದ್ದಾರೆ. ಟಿಶ್ ಅವರ ಪ್ರಕಾರ ಶಂಕಿತ ವ್ಯಕ್ತಿಯು ಹುಡ್ ಜಾಕೆಟ್ ಮತ್ತು ಮುಖವಾಡ ಧರಿಸಿದ್ದು,ಕೈಯಲ್ಲಿ ಗನ್‌ ಹಿಡಿದು ಥಾಂಪ್ಸನ್‌ ಮೇಲೆ ಎರಡು ಬಾರಿ ಗುಂಡು ಹಾರಿಸಿದ್ದಾನೆ. ಮೊದಲ ಗುಂಡು ದೇಹದ ಹಿಂಭಾಗಕ್ಕೆ ತಾಗಿದ್ದು, ಎರಡನೇ ಗುಂಡು ನೇರವಾಗಿ ಕಾಲಿಗೆ ತಾಗಿದೆ. ಗುಂಡು ಹಾರಿಸಿದ ಕೂಡಲೇ ಆರೋಪಿ ಇ-ಬೈಕ್‌ನಲ್ಲಿ ಸೆಂಟ್ರಲ್ ಪಾರ್ಕ್ ಕಡೆಗೆ ಪಲಾಯನ ಮಾಡಿದ್ದಾನೆ. ತಕ್ಷಣದಲ್ಲೇ ವೈದ್ಯಕೀಯ ಆರೈಕೆ ಮಾಡಿ ಮೌಂಟ್ ಸಿನೈ ವೆಸ್ಟ್ ಆಸ್ಪತ್ರೆಗೆ ಸಾಗಿಸಿದರೂ ಗುಂಡಿನ ದಾಳಿಯಿಂದ ತೀವ್ರವಾಗಿ ಘಾಸಿಗೊಂಡಿದ್ದ ಥಾಂಪ್ಸನ್ ಸಾವನ್ನಪ್ಪಿದ್ದಾರೆ.

ರಾಕ್‌ಫೆಲ್ಲರ್ ಸೆಂಟರ್‌ನ ಮಿಡ್‌ಟೌನ್ ಜಿಲ್ಲೆಯಲ್ಲಿ ನಡೆದ ಭೀಕರ ಗುಂಡಿನ ದಾಳಿಯಿಂದಾಗಿ ಸ್ಥಳೀಯರು ಆತಂಕಗೊಂಡಿದ್ದಾರೆ. ಹಿಲ್ಟನ್ ಹೋಟೆಲ್ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಿತ್ತು. ಥಾಂಪ್ಸನ್‌ ಹೋಟೆಲ್‌ ಒಳಗೆ ಪ್ರವೇಶಿಸುತ್ತಿದ್ದಂತೆ ಅವರ ಮೇಲೆ ಗುಂಡು ಹಾರಿಸಲಾಗಿದೆ. ಶಂಕಿತ ವ್ಯಕ್ತಿಯ ಚಲನವಲನಗಳನ್ನು ಸಿಸಿಟಿವಿ ದೃಶ್ಯಾವಳಿಯಲ್ಲಿಕಂಡುಬಂದಿದೆ. ಯುನೈಟೆಡ್ ಹೆಲ್ತ್‌ಕೇರ್ ಮತ್ತು ಯುಎಸ್ ಹೆಲ್ತ್‌ಕೇರ್ ಸಿಸ್ಟಮ್‌ನ ಪ್ರಮುಖ ಆಟಗಾರ ಈ ಘಟನೆ ಕುರಿತು ಮಾತನಾಡಿದ್ದು, ಭಯಾನಕ ಘಟನೆಯಿಂದಾಗಿ ಆಘಾತಗೊಂಡಿದ್ದೇನೆ ಎಂದು ಹೇಳಿ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಮಿನ್ನೇಸೋಟ ಗವರ್ನರ್ ಟಿಮ್ ವಾಲ್ಜ್ ಈ ಹತ್ಯೆಯನ್ನು “ಇದು ಭಯಾನಕ ಕೃತ್ಯ ಮತ್ತು ಥಾಂಪ್ಸನ್‌ ಸಾವಿನಿಂದಾಗಿ ಹೆಲ್ತ್‌ಕೇರ್‌ ಕಮ್ಯುನಿಟಿಗೆ ತುಂಬಾ ನಷ್ಟವಾಗಿದೆ ” ಎಂದಿದ್ದಾರೆ.

ಶಂಕಿತನ ಕುರಿತು ಮಾಹಿತಿ ನೀಡಿ ಅವನ ಬಂಧನಕ್ಕೆ ಸಹಾಯ ಮಾಡುವವರಿಗೆ $10,000 ಬಹುಮಾನವನ್ನು ಘೋಷಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Donald Trump : ಮತ್ತೊಂದು ಬಾರಿ ಗುಂಡಿನ ದಾಳಿಯಿಂದ ಬಚಾವಾದ ಡೊನಾಲ್ಡ್ ಟ್ರಂಪ್‌