Saturday, 14th December 2024

ಸುಲವೆಸಿ ದ್ವೀಪದಲ್ಲಿ ಭೂಕುಸಿತ: 14 ಜನ ಸಾವು

ಕಾರ್ತ: ಧಾರಾಕಾರ ಮಳೆಯಿಂದಾಗಿ ಇಂಡೋನೇಷ್ಯಾದ ಸುಲವೆಸಿ ದ್ವೀಪದಲ್ಲಿ ಭೂಕುಸಿತ ಉಂಟಾಗಿದ್ದು, ಕನಿಷ್ಠ 14 ಜನ ಸಾವನ್ನಪ್ಪಿದ್ದಾರೆ. ಮೂವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ದಕ್ಷಿಣ ಸುಲವೇಸಿ ಪ್ರಾಂತ್ಯದ ತಾನಾ ತೊರಾಜಾ ಜಿಲ್ಲೆಯಲ್ಲಿ ಮೊದಲು ಸುತ್ತಮುತ್ತಲಿನ ಬೆಟ್ಟಗಳಿಂದ ನಾಲ್ಕು ಮನೆಗಳ ಮೇಲೆ ಮಣ್ಣು ಬಿದ್ದಿದೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಗುನಾರ್ಡಿ ಮುಂಡು ತಿಳಿಸಿದ್ದಾರೆ.

ಹತ್ತಾರು ಸೈನಿಕರು, ಪೊಲೀಸರು ಮತ್ತು ಸ್ವಯಂಸೇವಕರು ದೂರದ, ಗುಡ್ಡಗಾಡು ಪ್ರದೇಶದ ಮಕಾಲೆ ಮತ್ತು ದಕ್ಷಿಣ ಮಕಾಲೆ ಗ್ರಾಮಗಳಲ್ಲಿ ಹುಡುಕಾಟದಲ್ಲಿ ತೊಡಗಿದ್ದಾರೆ. ಭಾನುವಾರ ಮುಂಜಾನೆ ರಕ್ಷಕರು 8 ವರ್ಷದ ಬಾಲಕಿ ಸೇರಿದಂತೆ ಇಬ್ಬರು ಗಾಯ ಗೊಂಡ ಜನರನ್ನು ಹೊರತೆಗೆದು ಹತ್ತಿರದ ಆಸ್ಪತ್ರೆಗೆ ಸಾಗಿಸಿದರು ಎಂದು ಮುಂಡು ತಿಳಿಸಿದ್ದಾರೆ.

ಭಾನುವಾರ ಮಧ್ಯಾಹ್ನದ ವೇಳೆಗೆ ರಕ್ಷಕರು ಮಕಾಲೆ ಗ್ರಾಮದಲ್ಲಿ ಕನಿಷ್ಠ 11 ಶವಗಳನ್ನು ಮತ್ತು ದಕ್ಷಿಣ ಮಕಾಲೆಯಲ್ಲಿ ಮೂರು ಮೃತದೇಹಗಳನ್ನು ವಶಪಡಿಸಿಕೊಂಡಿದ್ದಾರೆ. 3 ವರ್ಷದ ಬಾಲಕಿ ಸೇರಿದಂತೆ ಮೂವರಿಗಾಗಿ ಇನ್ನೂ ಶೋಧ ನಡೆಸುತ್ತಿದ್ದಾರೆ. ಕೆಟ್ಟ ಹವಾಮಾನ, ಭೂಸಿತದ ಸಡಿಲ ಮಣ್ಣು ರಕ್ಷಣಾ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ಅಬ್ದುಲ್ ಮುಹಾರಿ ತಿಳಿಸಿದ್ದಾರೆ.