ವಾಷಿಂಗ್ಟನ್: ನಾಸಾ (NASA) ಗಗನಯಾತ್ರಿಗಳಾದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ (Sunita Williams) ಹಾಗೂ ಬಚ್ ವಿಲ್ಮೋರ್ (Butch Wilmore) ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (International Space Station-ISS)ದಲ್ಲೇ ಬಾಕಿಯಾಗಿದ್ದಾರೆ. ಇದೀಗ ಅವರು ಅಲ್ಲಿಂದಲೇ ಭೂಮಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ʼʼಇದು ನನಗೆ ಅತ್ಯಂತ ಹೆಚ್ಚು ಸಂತೋಷ ನೀಡುವ ಸ್ಥಳ. ನಾನು ಇಲ್ಲಿರುವುದನ್ನು ಇಷ್ಟಪಡುತ್ತೇನೆʼʼ ಎಂದು ಹೇಳಿದ್ದಾರೆ.
ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನು ಬಾಹ್ಯಾಕಾಶಕ್ಕೆ ಕರೆದೊಯ್ದಿದ್ದ ಬಾಹ್ಯಾಕಾಶ ನೌಕೆ ಸ್ಟಾರ್‌ಲೈನರ್ (Starliner) ಕಳೆದ ವಾರ ಅವರಿಬ್ಬರನ್ನು ಅಲ್ಲೇ ಬಿಟ್ಟು ಭೂಮಿಗೆ ಮರಳಿದೆ. ದೋಷ ಕಾಣಿಸಿಕೊಂಡಿದ್ದರಿಂದ ಸ್ಟಾರ್‌ಲೈನರ್ ಮರಳಿದೆ. ಸ್ಟಾರ್‌ಲೈನರ್ ಮರಳಿದ ನಂತರ ಮೊದಲ ಬಾರಿಗೆ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ನೀಡಿದ ಮೊದಲ ಪ್ರತಿಕ್ರಿಯೆ ಇದಾಗಿದೆ.
#WATCH | #NASA astronauts Butch Wilmore and #SunitaWilliams, who have seen their return to earth held by months due to technical problems with the Boeing Starliner, called the delay “testing times” but said they were grateful for more time on the International Space Station… pic.twitter.com/FvZOX3xx4T
— DD News (@DDNewslive) September 14, 2024
ಗಗನಯಾತ್ರಿಗಳು ಈಗಾಗಲೇ 3 ತಿಂಗಳು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ಭೂಮಿಗೆ ಮರಳಲು ಇನ್ನೂ 5 ತಿಂಗಳು ಬೇಕಾಗಬಹುದು. ಇದಕ್ಕೆ ಸಂಬಂಧಿಸಿದಂತೆ ಇಬ್ಬರು ಮಾತನಾಡಿ, ʼʼನಾವು ಇದಕ್ಕೆ ಸಿದ್ಧರಿದ್ದೇವೆ. 8 ದಿನಗಳಿಂದ 8 ತಿಂಗಳವರೆಗೆ, ನಾವು ನಮ್ಮ ಅತ್ಯುತ್ತಮವಾದದ್ದನ್ನು ನೀಡುತ್ತೇವೆʼʼ ಎಂದು ಹೇಳಿದ್ದಾರೆ. ಕಕ್ಷೆಯಲ್ಲಿ ಹಲವು ತಿಂಗಳು ಕಳೆಯುವುದು ಕಷ್ಟವಾಗಿದೆ ಎನ್ನುವುದನ್ನು ಅವರು ಒಪ್ಪಿಕೊಂಡಿದ್ದಾರೆ. 2025ರ ಫೆಬ್ರವರಿ ಅಂತ್ಯದ ವೇಳೆಗೆ ಅವರು ಹಿಂದಿರುಗಲಿದ್ದಾರೆ ಎಂದು ಈಗಾಗಲೇ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ನಾಸಾ) ಸ್ಪಷ್ಟಪಡಿಸಿದೆ. ಆರಂಭದಲ್ಲಿ ಎಂಟು ದಿನಗಳ ಪರೀಕ್ಷೆ ಎಂದು ಭಾವಿಸಲಾಗಿದ್ದ ಸಿಬ್ಬಂದಿಗೆ ಇದು ಎಂಟು ತಿಂಗಳ ಕಾರ್ಯಾಚರಣೆಯಾಗಿ ಮಾರ್ಪಟ್ಟಿದೆ. ವಿಲ್ಮೋರ್ ಮತ್ತು ವಿಲಿಯಮ್ಸ್ ಉಳಿಯಲಿರುವ ಐಎಸ್‌ಎಸ್‌ನಲ್ಲಿ ಹೆಚ್ಚುವರಿ ಆಹಾರ ಮತ್ತು ಸರಬರಾಜು ಸಂಗ್ರಹ ಇದೆ.
ಬಾಹ್ಯಾಕಾಶದಿಂದಲೇ ಮತ ಚಲಾವಣೆ
ವಿಶೇಷ ಎಂದರೆ ನವೆಂಬರ್‌ನಲ್ಲಿ ನಡೆಯಲಿರುವ ಅಮೇರಿಕ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಮತ ಚಲಾಯಿಸಲಿದ್ದಾರೆ. ಬಾಹ್ಯಾಕಾಶದಿಂದ ಮತ ಚಲಾಯಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು 1997ರಲ್ಲಿ ಅಂಗೀಕರಿಸಲಾಗಿದ್ದು, ಆ ಮೂಲಕ ಅವರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 1997ರಲ್ಲಿ ನಾಸಾದ ಗಗನಯಾತ್ರಿ ಡೇವಿಡ್ ವುಲ್ಫ್ ಮೀರ್ ಬಾಹ್ಯಾಕಾಶ ನಿಲ್ದಾಣದಿಂದಲೇ ಮತ ಚಲಾಯಿಸಿದ್ದರು.
ಫುಟ್‌ಬಾಲ್ ಮೈದಾನದ ಗಾತ್ರದ ವಿಜ್ಞಾನ ಪ್ರಯೋಗಾಲಯ
ಐಎಸ್‌ಎಸ್ ಸುಮಾರು 250 ಮೈಲುಗಳ ದೂರದಲ್ಲಿರುವ ಫುಟ್‌ಬಾಲ್ ಮೈದಾನದ ಗಾತ್ರದ ವಿಜ್ಞಾನ ಪ್ರಯೋಗಾಲಯ. ರಷ್ಯಾದ ಸೋಯುಜ್ ಕ್ಯಾಪ್ಸುಲ್ ಸೇರಿದಂತೆ ಇತರ ಬಾಹ್ಯಾಕಾಶ ನೌಕೆಗಳಲ್ಲಿ ವಿವಿಧ ಸಮಯಗಳಲ್ಲಿ ಆಗಮಿಸಿದ ಇತರ ಏಳು ಗಗನಯಾತ್ರಿಗಳು ಈಗಾಗಲೇ ಅಲ್ಲಿದ್ದಾರೆ. ವಿಲ್ಮೋರ್ ಮತ್ತು ವಿಲಿಯಮ್ಸ್ ಇತರರೊಂದಿಗೆ ಸೇರಿ ವಿಜ್ಞಾನ ಪ್ರಯೋಗಗಳನ್ನು ಮುಂದುವರಿಸುವ ನಿರೀಕ್ಷೆಯಿದೆ.
ಆಗಸ್ಟ್ 6ರ ತಡರಾತ್ರಿ ಐಸ್‌ಎಸ್‌ನಿಂದ ಕಳಚಿಕೊಂಡು ಹೊರಟ ಸ್ಟಾರ್‌ಲೈನರ್, ಬೆಳಿಗ್ಗೆ ಸುಮಾರು 9:30ಕ್ಕೆ ನ್ಯೂ ಮೆಕ್ಸಿಕೋದಲ್ಲಿನ ವೈಟ್ ಸ್ಯಾಂಡ್ಸ್ ಸ್ಪೇಸ್ ಹಾರ್ಬರ್‌ನಲ್ಲಿ ನಿಧಾನವಾಗಿ ಇಳಿಯಿತು. ಪ್ಯಾರಾಚೂಟ್‌ಗಳು ಹಾಗೂ ಏರ್‌ಬ್ಯಾಗ್‌ಗಳ ಮೂಲಕ ಇಳಿದ ನೌಕೆ ದಾರಿಯಲ್ಲಿ ಯಾವುದೇ ತೊಂದರೆಗೆ ಒಳಗಾಗಲಿಲ್ಲ.
ಈ ಸುದ್ದಿ ಓದಿ: Sunita Williams: ಸುನೀತಾ ವಿಲಿಯಮ್ಸ್ ಇರುವ ಗಗನನೌಕೆಯಲ್ಲಿ ನಿಗೂಢ ಸದ್ದು!