ಸ್ಟಾಕ್‌ಹೋಮ್: ಪ್ರಧಾನಿ ಸ್ಟೀಫನ್ ಲೋಫ್ವೆನ್ ಸೋಮವಾರ ಸಂಸತ್‌ನಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಸೋಲು ಕಂಡಿದ್ದಾರೆ. ಈ ಮೂಲಕ ದೇಶದ ಇತಿಹಾಸದಲ್ಲಿ ಅವಿಶ್ವಾಸ ಗೊತ್ತುವಳಿ ಮೂಲಕ ಪದಚ್ಯುತಗೊಂಡ ಮೊದಲ ಪ್ರಧಾನಿ ಎನಿಸಿಕೊಂಡಿದ್ದಾರೆ. ಸ್ವೀಡನ್ ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ನಾಯಕರಾಗಿದ್ದಾರೆ.
ಸರ್ಕಾರದಲ್ಲಿ ಸೇರಿಕೊಂಡಿಲ್ಲದ ಎಡ ಪಕ್ಷವು ಸರ್ಕಾರದ ಕೆಲವೊಂದು ನಿರ್ಧಾರ ಗಳನ್ನು ವಿರೋಧಿಸಿ ಕಳೆದ ಮಂಗಳವಾರ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಿದ್ಧತೆ ನಡೆಸಿತ್ತು. ತಕ್ಷಣ ಚುನಾವಣೆ ಘೋಷಣೆ ಅಥವಾ ಉಸ್ತುವಾರಿ ಸರ್ಕಾರದ ಮುಖ್ಯಸ್ಥ ರಾಗಿ ಮುಂದುವರಿಯುವ ಎರಡು ಅವಕಾಶಗಳಷ್ಟೇ ಪ್ರಧಾನಿಗೆ ಇದೀಗ ಉಳಿದಿದ್ದು, ಒಂದು ವಾರದೊಳಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ.
2018ರಲ್ಲಿ ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸ್ಟೀಫನ್ ಅವರು ಸೋಷಿಯಲ್ ಡೆಮಾಕ್ರಾಟ್ಸ್, ಗ್ರೀನ್ಸ್, ಸೆಂಟರ್ ಪಾರ್ಟಿ ಮತ್ತು ಲಿಬರಲ್ಸ್ ಪಾರ್ಟಿಯನ್ನೊಳಗೊಂಡ ಸರ್ಕಾರ ಮುಂದಾಳತ್ವ ವಹಿಸಿದ್ದರು.