Wednesday, 8th January 2025

Taliban Bans Windows: ಹೆಣ್ಣು ಮಕ್ಕಳಿರುವ ಮನೆಯಲ್ಲಿ ಕಿಟಕಿಯೂ ಇರುವಂತಿಲ್ಲ; ತಾಲಿಬಾನ್‌ನ ವಿಚಿತ್ರ ಕಾನೂನು!

ಕಾಬೂಲ್: ತಾಲಿಬಾನ್ ಅಫ್ಘಾನಿಸ್ತಾನವನ್ನು(Afghanistan) ವಶಪಡಿಸಿಕೊಂಡು ಸರ್ಕಾರ ರಚಿಸಿದಾಗಿನಿಂದ ಅಲ್ಲಿನ ಪರಿಸ್ಥಿತಿ ಬಿಗಡಾಯಿಸಿದೆ. ಮಹಿಳೆಯರು ಅಸಹಾಯಕ ಸ್ಥಿತಿಯಲ್ಲಿದ್ದಾರೆ. ತಾಲಿಬಾನ್ ಮಹಿಳೆಯರ ವಿರುದ್ಧವಾಗಿ ಸಾಕಷ್ಟು ಕಾನೂನುಗಳನ್ನು ಜಾರಿಗೆ ತಂದಿದೆ. ಬಟ್ಟೆ ಧರಿಸುವುದರಲ್ಲೂ ಸ್ವಾತಂತ್ರ್ಯ ಇಲ್ಲದಂತಾಗಿದೆ. ಮಹಿಳೆಯರು ತಮ್ಮ ಮನೆಯಲ್ಲಿಯೇ ನರಕ ಯಾತನೆ ಅನುಭವಿಸುತ್ತಿದ್ದಾರೆ. ಅವರು ಸಾರ್ವಜನಿಕ ಸ್ಥಳಗಳಾದ ಹೋಟೆಲ್, ಪಾರ್ಕ್​, ಬ್ಯೂಟಿ ಪಾರ್ಲರ್, ಶಾಲೆ, ಕಾಲೇಜುಗಳು ಎಲ್ಲಿಗೂ ಹೋಗುವಂತಿಲ್ಲ. ಸಾರ್ವಜನಿಕವಾಗಿ ಹಾಡುವಂತೆಯೂ ಇಲ್ಲ. ಅಷ್ಟು ಸಾಲದು ಎಂಬಂತೆ ತಾಲಿಬಾನ್‌ ಇತ್ತೀಚೆಗೆ ವಿಚಿತ್ರ ನಿಯಮವೊಂದನ್ನು ಹೊರಡಿಸಿದೆ. ಹೆಣ್ಣು ಮಕ್ಕಳಿರುವ ಮನೆಯಲ್ಲಿ ಕಿಟಕಿ ಇರುವಂತಿಲ್ಲ. ಮನೆಯ ಕಿಟಿಕಿಯಿಂದ ಮಹಿಳೆಯರು ಹೊರಗೆ ನೋಡುವಂತೆಯೂ ಇಲ್ಲ(Taliban Bans Windows)

ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಸರ್ಕಾರವಿದ್ದು, ಅದು ಮಹಿಳೆಯರಿಗಾಗಿಯೇ ಪ್ರತಿದಿನ ಹೊಸ ಹೊಸ ಕಾನೂನುಗಳನ್ನು ಜಾರಿಗೊಳಿಸುತ್ತಿದೆ. ಈ ಹಿಂದಿನಿಂದಲೂ ಹಿಜಾಬ್ ಧರಿಸುವುದು, ಬ್ಯೂಟಿಪಾರ್ಲರ್, ಪಾರ್ಕ್​, ಹೋಟೆಲ್, ಶಾಲೆ, ಕಾಲೇಜುಗಳಿಗೆ ನಿಷೇಧವಿತ್ತು. ಈಗ ತೀರಾ ವಿಚಿತ್ರ ಎಂಬಂತೆ ಮನೆ ಹೊರಗಿದ್ದ ಕಾನೂನು ಮನೆ ಒಳಗೂ ಬಂದಿದೆ. ಹೊಸದಾಗಿ ಕಟ್ಟಡಗಳ ನಿರ್ಮಾಣ ಮಾಡುವಾಗ ಮಹಿಳೆಯರಿರುವ ವಸತಿ ಕಟ್ಟಡದಲ್ಲಿ ಕಿಟಕಿಯನ್ನು ನಿರ್ಮಿಸುವುದನ್ನು ತಾಲಿಬಾನ್ ಕಡ್ಡಾಯವಾಗಿ ನಿಷೇಧಿಸಿದೆ.

ಮಹಿಳೆಯರ ಗೌಪ್ಯತೆ ಕಾಪಾಡುವ ದೃಷ್ಟಿಯಿಂದ ಈ ಕಾನೂನನ್ನು ಹೊರಡಿಸಲಾಗಿದೆ ಎಂದು ಹೇಳಲಾಗಿದೆ. ಇನ್ನು ಆಸ್ತಿ ಮಾಲೀಕರಿಗೆ ಕಟ್ಟುನಿಟ್ಟಿನ ಮಿತಿಗಳನ್ನು ವಿಧಿಸಲಾಗಿದೆ. ಮನೆಯನ್ನು ನಿರ್ಮಿಸುವ ವ್ಯಕ್ತಿಗಳು ಮಹಿಳೆಯರಿರುವ ಅಡುಗೆ ಮನೆ, ಅಂಗಳ, ಬಾವಿ ಇತರೆ ಸ್ಥಳಗಳಲ್ಲಿ ಕಿಟಕಿಗಳನ್ನು ನಿರ್ಮಿಸಬಾರದು ಎಂದು ತಾಲಿಬಾನ್‌ ಎಚ್ಚರಿಕೆ ನೀಡಿದೆ. ಈ ಮೊದಲೇ ನಿರ್ಮಿತವಾಗಿರುವ ಕಟ್ಟಡಗಳು ಈ ನಿರ್ದೇಶನಗಳನ್ನು ಉಲ್ಲಂಘಿಸುವ ಕಿಟಕಿ ಹೊಂದಿದ್ದರೆ ಮಾಲೀಕರು ಗೋಡೆಯನ್ನು ನಿರ್ಮಿಸಬೇಕು ಎಂದು ಹೇಳಿದೆ. ಹೊಸ ಕಟ್ಟಡಗಳಲ್ಲಿ ಇಂತಹ ಕಿಟಕಿಗಳನ್ನು ನಿರ್ಮಾಣ ಮಾಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಾದ ಮೇಲ್ವಿಚಾರಣೆಗೆ ಸೂಚನೆ ನೀಡಲಾಗಿದೆ.

2021ರಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡಿದ್ದು, ಮಹಿಳೆಯರ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿದೆ. ಇದರಲ್ಲಿ ಶಿಕ್ಷಣ ಮತ್ತು ಮನೆಯ ಹೊರಗೆ ಉದ್ಯೋಗದ ಮೇಲಿನ ನಿಷೇಧಗಳು ಸೇರಿವೆ. ಮಾನವ ಹಕ್ಕುಗಳ ಆಯೋಗವು ತಾಲಿಬಾನ್‌ ನಡೆಯನ್ನು ತೀವ್ರವಾಗಿ ಖಂಡಿಸುತ್ತಾ ಬರುತ್ತಿದ್ದಾರೆ. ಮಹಿಳೆಯರು ಅಕ್ಕಪಕ್ಕದ ಮನೆಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಇತ್ತೀಚೆಗೆ ತಾಲಿಬಾನ್ ಸರ್ಕಾರದ ಇಸ್ಲಾಮಿಕ್ ಕಾನೂನಿನ ಅನ್ವಯದ ಅಡಿಯಲ್ಲಿ ಸಾರ್ವಜನಿಕವಾಗಿ ಹಾಡುವುದನ್ನು ನಿಷೇಧಿಸಲಾಗಿತ್ತು.
ಕೆಲವು ಸ್ಥಳೀಯ ರೇಡಿಯೋ ಮತ್ತು ದೂರದರ್ಶನ ಕೇಂದ್ರಗಳು ಹೆಣ್ಣುಮಕ್ಕಳ ಧ್ವನಿಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಿವೆ.

ಈ ಸುದ್ದಿಯನ್ನೂ ಓದಿ:‌Viral Video: ಬಿಬಿಎಂಪಿ ನಿರ್ಲಕ್ಷ್ಯ; 83ರ ಇಳಿ ವಯಸ್ಸಿನಲ್ಲಿ ಬೀದಿ ಕಸ ಗುಡಿಸುವ ಅಜ್ಜ: ವಿಡಿಯೊ ವೈರಲ್