Sunday, 15th December 2024

ಸಚಿವ ಎಸ್.ಜೈಶಂಕರ್ ತಾಷ್ಕೆಂಟ್‌ಗೆ ನಾಳೆ ಭೇಟಿ

ಉಜ್ಬೇಕಿಸ್ತಾನ್: ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಸಚಿವರ ಸಮಾವೇಶದಲ್ಲಿ ಪಾಲ್ಗೊಳ್ಳಲು ಉಜ್ಬೆಕ್ ರಾಜಧಾನಿ ತಾಷ್ಕೆಂಟ್‌ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಗುರುವಾರದಿಂದ ಎರಡು ದಿನಗಳ ಭೇಟಿ ನೀಡಲಿ ದ್ದಾರೆ.

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಮತ್ತು ಪಾಕಿಸ್ತಾನಿ ಸಹವರ್ತಿ ಬಿಲಾ ವಲ್ ಭುಟ್ಟೋ ಸಹ ಎಸ್​​ಸಿಒ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ವಾಂಗ್ ಮತ್ತು ಲಾವ್ರೊವ್ ಸೇರಿದಂತೆ ಎಸ್‌ಸಿಒ ರಾಷ್ಟ್ರಗಳ ಕೆಲವು ಸಹವರ್ತಿಗಳೊಂದಿಗೆ ಜೈಶಂಕರ್ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಜೈಶಂಕರ್ ಅವರ ಭೇಟಿಯನ್ನು ಪ್ರಕಟಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಎಸ್​ಸಿಒ ವಿದೇಶಾಂಗ ಮಂತ್ರಿಗಳ ಸಭೆಯು ಸೆಪ್ಟೆಂಬರ್ 15-16 ರಂದು ಸಮರ್ಕಂಡ್‌ನಲ್ಲಿ ನಡೆಯಲಿದೆ. ಈ ವೇಳೆ, ಎಸ್​ಸಿಒ ಶೃಂಗಸಭೆಯ ಕುರಿತು ಚರ್ಚಿಸಲಿದೆ. ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಉಜ್ಬೇಕಿಸ್ತಾನಕ್ಕೆ ತೆರಳುವ ಸಾಧ್ಯತೆ ಇದೆ.

ಎಸ್‌ಸಿಒ ಕೌನ್ಸಿಲ್ ಆಫ್ ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ಉಜ್ಬೇಕಿಸ್ತಾನ್ ಗಣರಾಜ್ಯದ ವಿದೇಶಾಂಗ ವ್ಯವಹಾರಗಳ ಹಂಗಾಮಿ ಸಚಿವ ವ್ಲಾಡಿಮಿರ್ ನೊರೊವ್ ಅವರ ಆಹ್ವಾನದ ಮೇರೆಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಜು.28-29 ರಂದು ಉಜ್ಬೇಕಿಸ್ತಾನ್‌ಗೆ ಭೇಟಿ ನೀಡಲಿದ್ದಾರೆ.