Saturday, 4th January 2025

Terror Attack: ಹೊಸ ವರ್ಷಾಚರಣೆ ಮಧ್ಯೆ ಅಮೆರಿಕದಲ್ಲಿ ಭಯೋತ್ಪಾದಕ ದಾಳಿ; 10 ಮಂದಿ ಸಾವು

Terror Attack

ವಾಷಿಂಗ್ಟನ್‌: ಜಗತ್ತು ಹೊಸ ವರ್ಷ (New Year)ವನ್ನು ಸಂಭ್ರಮದಿಂದ ಸ್ವಾಗತಿಸುತ್ತಿದ್ದಂತೆ ಅಮೆರಿಕದಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆದಿದೆ. ನ್ಯೂ ಓರ್ಲಿಯನ್ಸ್‌ (New Orleans)ನಲ್ಲಿ ನಡೆದ ಈ ದಾಳಿಯಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು, 30 ಹೆಚ್ಚು ಮಂದಿಗೆ ಗಾಯಗಳಾಗಿವೆ (Terror Attack).

ಅಮೆರಿಕದ ದಕ್ಷಿಣ ಭಾಗದಲ್ಲಿರುವ ನ್ಯೂ ಓರ್ಲಿಯನ್ಸ್‌ ನಗರದಲ್ಲಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿದ್ದ ಜನ ಸಮೂಹವನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ. ʼʼಮೊದಲಿಗೆ ಟ್ರಕ್‌ ನಗರದ ಫ್ರೆಂಚ್ ಕ್ವಾರ್ಟರ್‌ನ ಬೌರ್ಬನ್ ಸ್ಟ್ರೀಟ್‌ನಲ್ಲಿ ಜನಸಮೂಹಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಚಾಲಕ ಕೆಳಗಿಳಿದು ಗುಂಡು ಹಾರಿಸಿದ್ದಾನೆʼʼ ಎಂದು ಪೊಲೀಸರು ತಿಳಿಸಿದ್ದಾರೆ.

ಈ ದಾಳಿ ಉದ್ದೇಶಪೂರ್ವಕವಾಗಿತ್ತು ಮತ್ತು ಶಂಕಿತ ಭದ್ರತಾ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನ್ಯೂ ಓರ್ಲಿಯನ್ಸ್ ಮೇಯರ್ ಲಾಟೋಯಾ ಕ್ಯಾಂಟ್ರೆಲ್ ಘಟನೆಯನ್ನು “ಭಯೋತ್ಪಾದಕ ದಾಳಿ” ಎಂದು ಕರೆದಿದ್ದಾರೆ.

ಬಾರ್‌ ಮತ್ತು ಕ್ಲಬ್‌ಗಳಿಗೆ ಜನಪ್ರಿಯವಾಗಿರುವ ಬೌರ್ಬನ್ ಸ್ಟ್ರೀಟ್‌ನಲ್ಲಿ ಜನರು ಮೈಮರೆತು ಹೊಸ ವರ್ಷ ಸ್ವಾಗತಿಸುತ್ತಿರುವಾಗ ಈ ದಾಳಿ ನಡೆದಿದೆ. ನ್ಯೂ ಓರ್ಲಿಯನ್ಸ್‌ನಲ್ಲಿ ಹೊಸ ವರ್ಷದ ಆಚರಣೆಯ ಕೊನೆಯಲ್ಲಿ ಮತ್ತು ನಗರದ ಸೀಸರ್ಸ್ ಸೂಪರ್‌ಡೋಮ್‌ನಲ್ಲಿ ಆಯೋಜಿಸಿದ್ದ ಫುಟ್ಬಾಲ್ ಕ್ವಾರ್ಟರ್ ಫೈನಲ್ ಆರಂಭಕ್ಕೆ ಕೆಲವೇ ಗಂಟೆಗಳ ಮೊದಲು ಈ ಘಟನೆ ನಡೆದಿದೆ. ಈ ಪಂದ್ಯಾವಳಿಗೆ ಸಾವಿರಾರು ಮಂದಿ ಆಗಮಿಸುವ ನಿರೀಕ್ಷೆ ಇತ್ತು. ಇದನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ.

ಈತನ್ಮಧ್ಯೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಘಟನಾ ಸ್ಥಳದಲ್ಲಿ ಸ್ಫೋಟಕ ಸಾಧನವನ್ನು ವಶಕ್ಕೆ ಪಡೆದಿದೆ ಮತ್ತು ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದೆ. ಅದಾಗ್ಯೂ ಹೆಚ್ಚಿನ ವಿವರಗಳನ್ನು ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಬೌರ್ಬನ್ ಸ್ಟ್ರೀಟ್ ದಾಳಿಗೆ ಬಳಸಲಾದ ಟ್ರಕ್ ಟೆಕ್ಸಾಸ್ ಪರವಾನಗಿಯನ್ನು ಹೊಂದಿತ್ತು ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Turkey Terror Attack: ಟರ್ಕಿ ರಾಜಧಾನಿಯಲ್ಲಿ ಭಯೋತ್ಪಾದಕ ದಾಳಿ; 4 ಮಂದಿ ಸಾವು