ವಾಷಿಂಗ್ಟನ್: ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್(Donald Trump) ಮಾಜಿ ಅಧ್ಯಕ್ಷ ಜೋ ಬೈಡನ್ (Trump-Biden) ಅವರನ್ನು ಬುಧವಾರ ಶ್ವೇತ ಭವನದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. 2020ರ ಚುನಾವಣೆಯಲ್ಲಿ ಬೈಡನ್ ವಿರುದ್ಧ ಸೋತ ನಂತರ, ಬುಧವಾರ ಟ್ರಂಪ್ ಮೊದಲ ಬಾರಿಗೆ ಶ್ವೇತ ಭವನಕ್ಕೆ ಭೇಟಿ ನೀಡಿದರು.
ಭೇಟಿಯಲ್ಲಿ ಬಿಡೆನ್ ಮತ್ತು ಟ್ರಂಪ್ ಉಕ್ರೇನ್ ಮತ್ತು ಮಧ್ಯಪ್ರಾಚ್ಯದ ಬಗ್ಗೆ ಚರ್ಚಿಸಿದರು. ಅಮೆರಿಕ ರಾಷ್ಟ್ರೀಯ ಭದ್ರತೆಗೆ ಉಕ್ರೇನ್ ಅನ್ನು ಬೆಂಬಲಿಸುವುದು ಮುಖ್ಯ ಹಾಗೂ ಶಾಂತಿ ಕಾಪಾಡುವಲ್ಲಿ ಪ್ರಮಖ ಪಾತ್ರ ವಹಿಸಬೇಕು ಎಂದು ಬೈಡನ್ ಹೇಳಿದ್ದಾರೆ ಎಂದು ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ತಿಳಿಸಿದ್ದಾರೆ.
ಬುಧವಾರ ಶ್ವೇತ ಭವನಕ್ಕೆ ಭೇಟಿ ನೀಡಿದ ಟ್ರಂಪ್ ದಂಪತಿಯನ್ನು , ಬೈಡನ್, ಓವಲ್ ಕಚೇರಿಯಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು. ಜೋ ಬೈಡನ್ ಪತ್ನಿ ಜಿಲ್ ಬೈಡನ್, ಮೆಲಾನಿಯಾ ಟ್ರಂಪ್ ಅವರನ್ನು ಉದ್ದೇಶಿಸಿ ಅಭಿನಂದನಾ ಪತ್ರವನ್ನು ನೀಡಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರನ್ನು ಅರಿಜೋನಾ ಸೇರಿ ಎಲ್ಲಾ 7 ನಿರ್ಣಾಯಕ ರಾಜ್ಯಗಳಲ್ಲಿ ಸೋಲು ಕಾಣುವಂತೆ ಮಾಡಿ, ಗೆಲುವಿನ ನಗೆ ಬೀರಿದ್ದಾರೆ. ಮ್ಯಾಜಿಕ್ ನಂಬರ್ 270 ಅನ್ನು ದಾಟಿರುವ ಟ್ರಂಪ್ ಅವರು, 2025ರ ಜನವರಿ 20ರಂದು ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಈ ಹಿಂದೆ ಟ್ರಂಪ್ ಹಾಗೂ ಬೈಡನ್ ಒಬ್ಬರನ್ನೊಬ್ಬರು ಬಹಳ ಕಟುವಾಗಿ ಟೀಕಿಸಿದ್ದರು. 2020ರಲ್ಲಿ ಬೈಡನ್ ಅಧ್ಯಕ್ಷರಾದ ನಂತರ ಟ್ರಂಪ್‌ರನ್ನು ಶ್ವೇತ ಭವನಕ್ಕೆ ಆಹ್ವಾನಿಸಿದ್ದು, ಟ್ರಂಪ್ ಆಹ್ವಾನವನ್ನು ಸ್ವೀಕರಿಸಿರಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಪರ ಪ್ರಚಾರ ಕೈಗೊಂಡಿದ್ದ ಬೈಡನ್ ಟ್ರಂಪ್ ಬೆಂಬಲಿಗರನ್ನು ಕಸ ಎಂದು ಹೇಳಿದ್ದು ಸಾಕಷ್ಟು ವಿವಾದ ಹುಟ್ಟುಹಾಕಿತ್ತು.
ಇದನ್ನೂ ಓದಿ : ಅಮೆರಿಕಾದಲ್ಲಿ ಕಾನೂನುಬದ್ಧ ಗರ್ಭಪಾತದ ಹಕ್ಕು ರದ್ದು
ಜನವರಿಯಲ್ಲಿ ಶ್ವೇತ ಭವನಕ್ಕೆ ಅಧಿಕೃತವಾಗಿ ಕಾಲಿಡುವ ಟ್ರಂಪ್ ತಮ್ಮ ಸಂಪುಟದಲ್ಲಿ ಎಲಾನ್ ಮಸ್ಕ್ ಸೇರಿದಂತೆ ಹಲವರಿಗೆ ಸ್ಥಾನ ನೀಡಿದ್ದಾರೆ. ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಅವರಿಗೂ ಟ್ರಂಪ್ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ ಎಂದು ತಿಳಿದು ಬಂದಿದೆ. ʼಸರ್ಕಾರದ ದಕ್ಷತಾ ಇಲಾಖೆ’ಯ ನೇತೃತ್ವ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ವಿವೇಕ್ ರಾಮಸ್ವಾಮಿ ಚುನಾವಣೆಯಿಂದ ಹಿಂದೆ ಸರಿದು ಟ್ರಂಪ್ ಅವರ ಸ್ಪರ್ಧೆಗೆ ಅನುವು ಮಾಡಿಕೊಟ್ಟು ಬೆಂಬಲಿಸಿದ್ದರು.