Friday, 22nd November 2024

US Presidential Election 2024: ಅಮೆರಿಕ ಅಧ್ಯಕ್ಷ ಚುನಾವಣೆ ಮತ ಎಣಿಕೆ ಆರಂಭ, ಡೊನಾಲ್ಡ್‌ ಟ್ರಂಪ್‌ ಭಾರಿ ಮುನ್ನಡೆ

trump kamala

ವಾಷಿಂಗ್ಟನ್:‌ ಅಮೆರಿಕದ ಅಧ್ಯಕ್ಷರ ಚುನಾವಣೆಯ (US Presidential Election 2024) ಮತ ಎಣಿಕೆ ಆರಂಭವಾಗಿದ್ದು, ಡೊನಾಲ್ಡ್‌ ಟ್ರಂಪ್‌ (Donald Trump) ಮುನ್ನಡೆ ಸಾಧಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಇಂಡಿಯಾನಾ, ಕೆಂಟುಕಿ ಮತ್ತು ವೆಸ್ಟ್ ವರ್ಜಿನಿಯಾಗಳಲ್ಲಿ ಗೆದ್ದಿದ್ದರೆ, ಕಮಲಾ ಹ್ಯಾರಿಸ್ (Kamala Harris) ವರ್ಮೊಂಟ್‌ ಅನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ.

ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮತ್ತು ಡೆಮೋಕ್ರಾಟ್ ಪಕ್ಷದ ಕಮಲಾ ಹ್ಯಾರಿಸ್ ನಡುವಿನ ತುರುಸಿನ ಸ್ಪರ್ಧೆಯ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಲಕ್ಷಾಂತರ ಅಮೆರಿಕನ್ನರು ಮಂಗಳವಾರ ಮತ ಚಲಾಯಿಸಿದ್ದಾರೆ. ಚುನಾವಣಾ ಟ್ರ್ಯಾಕರ್ ಅಸೋಸಿಯೇಟೆಡ್ ಪ್ರೆಸ್ ಪ್ರಕಾರ ಇಂಡಿಯಾನಾ, ಕೆಂಟುಕಿಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ಗೆ ಗೆಲುವಿನ ಸಾಧ್ಯತೆ ಕಂಡುಬಂದಿದ್ದರೆ, ಡೆಮೋಕ್ರಾಟ್ ಕಮಲಾ ಹ್ಯಾರಿಸ್ ವರ್ಮೊಂಟ್ ಅನ್ನು ಗೆದ್ದುಕೊಂಡಿದ್ದಾರೆ. ಉಳಿದ ರಾಜ್ಯಗಳಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ.

ರಾಷ್ಟ್ರೀಯವಾಗಿ, ಒಟ್ಟು 538 ಚುನಾವಣಾ ಮತಗಳು ಅಥವಾ ಮತದಾರರು ಇದ್ದಾರೆ. ಅಂದರೆ ಅಭ್ಯರ್ಥಿಯು ಗೆಲ್ಲಲು 270 ಮತ ಗಳಿಸುವ ಅಗತ್ಯವಿದೆ. 2020 ರ ಚುನಾವಣೆಗಳಲ್ಲಿ, ಅಧ್ಯಕ್ಷ ಜೋ ಬೈಡೆನ್ ಅವರು 306 ಚುನಾವಣಾ ಮತಗಳನ್ನು ಗೆದ್ದು ಟ್ರಂಪ್ ಅವರನ್ನು ಸೋಲಿಸಿದ್ದರು. ಟ್ರಂಪ್ ಕೇವಲ 232 ಚುನಾವಣಾ ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದರು.

US ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಗಳು‌ ಮುಂದಿನ ಅಧ್ಯಕ್ಷರನ್ನು ಮಾತ್ರವಲ್ಲದೆ ಕಾಂಗ್ರೆಸ್‌ನ ಎರಡು ಚೇಂಬರ್‌ಗಳಾದ ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅನ್ನು ಯಾವ ಪಕ್ಷವು ನಿಯಂತ್ರಿಸುತ್ತದೆ ಎಂಬುದನ್ನು ನಿರ್ಧರಿಸುತ್ತದೆ.

ಟ್ರಂಪ್ ಮತ್ತು ಹ್ಯಾರಿಸ್ ನಡುವೆ ತುರುಸಿನ ಸ್ಪರ್ಧೆಯನ್ನು ಸಮೀಕ್ಷೆದಾರರು ಊಹಿಸಿದ್ದಾರೆ. ಇದರ ಫಲಿತಾಂಶವು ಪೆನ್ಸಿಲ್ವೇನಿಯಾ, ಫ್ಲೋರಿಡಾ, ವಿಸ್ಕಾನ್ಸಿನ್ ಮತ್ತು ಇತರ ಪ್ರಮುಖ ಸ್ವಿಂಗ್ ರಾಜ್ಯಗಳ ಮೇಲೆ ಅವಲಂಬಿತವಾಗಿದೆ. ಅಲ್ಲಿ ಕೆಲವೇ ಸಾವಿರ ಮತಗಳು ಮಾಪಕಗಳನ್ನು ಬದಲಾಯಿಸಬಹುದು.

ಹಿಂದಿನ ಸೋಮವಾರ, ಹ್ಯಾರಿಸ್ ಮತ್ತು ಟ್ರಂಪ್ ಇಬ್ಬರೂ ಅಧ್ಯಕ್ಷೀಯ ಚುನಾವಣೆ ಪ್ರಚಾರವನ್ನು ಪೆನ್ಸಿಲ್ವೇನಿಯಾದಲ್ಲಿ ಮಾಡುವ ಮೂಲಕ ಮುಗಿಸಿದರು. ಇದು ಶ್ವೇತಭವನಕ್ಕೆ ಯಾರು ಹೋಗುತ್ತಾರೆ ಎಂಬುದನ್ನು ನಿರ್ಧರಿಸುವಲ್ಲಿ ನಿರ್ಣಾಯಕ. ಹ್ಯಾರಿಸ್ ಭವಿಷ್ಯದ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದರೆ, ಟ್ರಂಪ್ ಹೆಸರನ್ನು ಉಲ್ಲೇಖಿಸದೆ ತನ್ನ ಎದುರಾಳಿಯನ್ನು ಟೀಕಿಸಿದ್ದರು.

2024 ರ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷೀಯ ಚುನಾವಣೆಯು ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ತೀವ್ರವಾದ ಬಿರುಸನ್ನು ಕಂಡಿದೆ. ಟ್ರಂಪ್‌ ಅವರ ವಿಚಾರಣೆ, ಶಿಕ್ಷೆಯಿಂದ ಹಿಡಿದು ಅವರ ಕಿವಿಗೆ ಗುಂಡು ಬೀಳುವ ವರೆಗೆ ನಾಟಕೀಯ ಘಟನೆಗಳು, ಚರ್ಚೆ, ವವಾದ ನಡೆದಿದ್ದವು. ಶ್ವೇತಭವನಕ್ಕೆ ಪುನಃ ಪ್ರವೇಶಿಸುವ ಹಾಲಿ ಅಧ್ಯಕ್ಷ ಜೋ ಬೈಡೆನ್‌ರ ಕನಸನ್ನು ಕಮಲಾ ಹ್ಯಾರಿಸ್ ಅವರ ಕೊನೆಯ ಕ್ಷಣದ ನಾಮನಿರ್ದೇಶನ ಭಗ್ನಗೊಳಿಸಿತ್ತು. ಚುನಾಯಿತರಾದರೆ ಕಮಲಾ ಹ್ಯಾರಿಸ್‌ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆಯಾಗಲಿದ್ದಾರೆ.

ಇದನ್ನೂ ಓದಿ: US presidential election 2024: ಟ್ರಂಪ್‌ಗೆ ಮತ್ತೆ ಅಮೆರಿಕ ಅಧ್ಯಕ್ಷ ಪಟ್ಟ! ಥಾಯ್ಲೆಂಡ್ ಹಿಪ್ಪೋ ನುಡಿಯಿತು ಸ್ಫೋಟಕ ಭವಿಷ್ಯ