Friday, 22nd November 2024

US Presidential Elections: ನ್ಯೂಯಾರ್ಕ್‌ನ ಬ್ಯಾಲೆಟ್ ಪೇಪರ್‌ನಲ್ಲಿ ಭಾರತೀಯ ಭಾಷೆಗೂ ಇದೆ ಸ್ಥಾನ! ಅದು ಹಿಂದಿಯಲ್ಲ!

ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಮೆರಿಕದಲ್ಲಿ ಇದೀಗ ಅಧ್ಯಕ್ಷೀಯ ಚುನಾವಣೆ (US Presidential Elections) ಜೋರಾಗಿಯೇ ಸದ್ದು ಮಾಡುತ್ತಿದೆ. ರಿಪಬ್ಲಿಕನ್ (Republican) ಮತ್ತು ಡೆಮಾಕ್ರಾಟಿಕ್ (Democratic) ಎಂಬ ಎರಡೇ ಪಕ್ಷಗಳ ನಡುವೆ ದೇಶದ ಅಧ್ಯಕ್ಷ ಪದವಿಗಾಗಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಎಲೆಕ್ಷನ್ ಜಿದ್ದಾಜಿದ್ದಿನಲ್ಲಿ ಘಟಾನುಘಟಿ ನಾಯಕರ ನಡುವೆ ಹಣಾಹಣಿ ನಡೆಯುತ್ತದೆ. ಈ ಬಾರಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಕಣದಲ್ಲಿದ್ದರೆ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ (Kamala Harris) ಕಣದಲ್ಲಿದ್ದಾರೆ.

ಇನ್ನು, ಅಮೆರಿಕಾದ ನ್ಯೂಯಾರ್ಕ್ (New York) ಪಟ್ಟಣದಲ್ಲಿ 200 ಭಾಷೆಗಳನ್ನು ಮಾತನಾಡುವ ಜನರಿದ್ದಾರೆ ಎಂಬ ಮಾಹಿತಿಯನ್ನು ಸಿಟಿ ಪ್ಲ್ಯಾನಿಂಗ್ ಇಲಾಖೆ ನೀಡಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತಪತ್ರದಲ್ಲಿ (ಬ್ಯಾಲೆಟ್ ಪೇಪರ್) ಇಂಗ್ಲಿಷ್ ಹೊರತುಪಡಿಸಿ ಜಗತ್ತಿನ ಬೇರೆ ನಾಲ್ಕು ಭಾಷೆಗಳಿಗೆ ಮಾತ್ರವೇ ಅವಕಾಶವನ್ನು ಕಲ್ಪಿಸಲಾಗಿದೆ. ಭಾರತೀಯರಾದ ನಮಗೆ ಖುಷಿಯ ವಿಚಾರವೆಂದರೆ, ಈ ನಾಲ್ಕು ಭಾಷೆಗಳಲ್ಲಿ ಬಂಗಾಲಿ (Bengali) ಭಾಷೆಯೂ ಒಂದಾಗಿ ಸ್ಥಾನವನ್ನು ಪಡೆದುಕೊಂಡಿದೆ. ಇನ್ನುಳಿದ ಮೂರು ಭಾಷೆಗಳೆಂದರೆ, ಚೈನೀಸ್, ಸ್ಪ್ಯಾನಿಷ್ ಮತ್ತು ಕೊರಿಯನ್ ಭಾಷೆಗಳಾಗಿವೆ.

ಇಲ್ಲಿನ ಟೈಂಸ್ ಸ್ಕ್ಯಾರ್ ನಲ್ಲಿ ಸೇಲ್ಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿರುವ ಬಂಗಾಲಿ ಮೂಲದ ಸುಭ್ ಶೇಷ್ ಎನ್ನುವವರು ಹೇಳುವ ಪ್ರಕಾರ, ಬಂಗಾಲಿ ಭಾಷೆ ಬ್ಯಾಲೆಟ್ ಪೇಪರ್ ನಲ್ಲಿ ಇರುವ ಕಾರಣ ತಮ್ಮ ತಂದೆಗೆ ಮತ ಚಲಾಯಿಸಲು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ನನ್ನಂತವರಿಗೆ ಇಂಗ್ಲಿಷ್ ಭಾಷೆ ತಿಳಿದಿದೆ. ಆದರೆ, ನಮ್ಮ ಸಮುದಾಯದಲ್ಲಿ ಹಲವರು ತಮ್ಮ ಮಾತೃಭಾಷೆಯಲ್ಲಿಯೇ ಚೆನ್ನಾಗಿ ವ್ಯವಹರಿಸಬಲ್ಲವರಿದ್ದಾರೆ. ಈ ಕ್ರಮದಿಂದಾಗಿ ಅವರಿಗೂ ಮತದಾನ ಮಾಡಲು ಸುಲಭವಾಗುತ್ತದೆ. ಬಂಗಾಲಿ ಭಾಷೆ ಬ್ಯಾಲೆಟ್ ಪೇಪರ್ ನಲ್ಲಿರುವುದರಿಂದ ನನ್ನ ತಂದೆಗೆ ಖಂಡಿತವಾಗಿಯೂ ಖುಷಿ ಮತ್ತು ಸಹಕಾರಿಯಾಗಲಿದೆ..” ಎಂದು ಅವರು ಅಭಿಪ್ರಾಯಪಡುತ್ತಾರೆ.

ಬಂಗಾಲಿ ಭಾಷೆಯನ್ನು ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ಬ್ಯಾಲೆಟ್ ಪೇಪರ್ ನಲ್ಲಿ ಸೇರಿಸಿರುವ ವಿಚಾರವು ಕಾನೂನು ಅಗತ್ಯತೆಯೊಂದಿಗೆ ಸಂಬಂಧವನ್ನು ಹೊಂದಿದೆ. ಅದರಂತೆ ನಿರ್ದಿಷ್ಟ ಕಾನೂನಿನ ಪ್ರಕಾರ, ನ್ಯೂಯಾರ್ಕ್ ನಗರದಲ್ಲಿ ಚುನಾವಣಾ ಸಂಬಂಧಿ ವಸ್ತುಗಳನ್ನು ಬಂಗಾಲಿ ಭಾಷೆಯಲ್ಲೂ ಸಹ ನೀಡಬೇಕಾಗಿದೆ. ಇದು ಕೇವಲ ಬ್ಯಾಲೆಟ್ ಪೇಪರ್‌ಗೆ ಮಾತ್ರ ಸಂಬಂಧಿಸಿದ್ದಲ್ಲ. ಬದಲಾಗಿ ಚುನಾವಣಾ ಪರಿಕರಗಳಿಗೂ ಇದು ಅನ್ವಯಿಸುತ್ತದೆ. ಈ ಮೂಲಕ ಬೆಂಗಾಲಿ ಮಾತನಾಡುವ ಮತದಾರರಿಗೆ ಅವರ ಭಾಷೆಯಲ್ಲೇ ಸೌಲಭ್ಯವನ್ನು ಒದಗಿಸಿಕೊಡುವುದನ್ನು ಇದು ಖಚಿತಪಡಿಸುವುದಾಗಿದೆ.

ಇದನ್ನೂ ಓದಿ: ಬಾಹ್ಯಾಕಾಶದಿಂದಲೇ ಸುನಿತಾ ವಿಲಿಯಮ್ಸ್‌ ವೋಟಿಂಗ್‌! ಮತದಾನ ಹೇಗೆ ನಡೆಯುತ್ತೆ ಗೊತ್ತಾ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಬಂಗಾಲಿ ಭಾಷೆಯು ಭಾಷಾ ಪಟ್ಟಿಯಲ್ಲಿ ಯಾಕೆ ಸ್ಥಾನ ಪಡೆದಿದೆ ಎಂಬುದರ ಬಗ್ಗೆ ರಿಯಾನ್ ಅವರು ವಿವರಿಸಿದ್ದು ಹೀಗೆ, “ಭಾಷಾ ಅಳವಡಿಕೆ ಬಗ್ಗೆ ಒಂದು ಕಾನೂನು ಪ್ರಕ್ರಿಯೆ ನಡೆಯುತ್ತದೆ. ಮತ್ತೆ ನಿಮಗೆಲ್ಲ ತಿಳಿದಿರುವಂತೆ ಭಾರತ ವೈವಿಧ್ಯಮಯ ಭಾಷೆಗಳ ತವರಾಗಿದೆ. ಹಾಗಾಗಿ ಈ ಕಾನೂನು ಪ್ರಕ್ರಿಯೆಗೆ ಒಂದು ತಾರ್ಕಿಕ ಅಂತ್ಯವನ್ನು ನೀಡಲು ಏಷ್ಯಾ ಭಾರತೀಯ ಭಾಷೆಗಳನ್ನು ಹೆಚ್ಚಾಗಿ ಬಳಸುವ ಒಂದು ಪ್ರದೇಶ ಬೇಕಿತ್ತು. ಬಳಿಕ, ಒಂದಷ್ಟು ಸಮಾಲೋಚನೆಗಳ ನಂತರ, ಬಂಗಾಳಿ ಭಾಷೆಗೆ ಆ ಅದೃಷ್ಟ ಒಲಿಯಿತು..” ಎಂದು ಅವರು ವಿವರಿಸುತ್ತಾರೆ.

ಕ್ವೀನ್ಸ್ ಪ್ರದೇಶದಲ್ಲಿನ ದಕ್ಷಿಣ ಏಷ್ಯಾ ಸಮುದಾಯದವರು ಮೊದಲಿಗೆ 2013ರಲ್ಲಿ ಬ್ಯಾಲೆಟ್ ಪೇಪರ್‌ನಲ್ಲಿ ಬಂಗಾಲಿ ಭಾಷೆಯನ್ನು ಕಾಣುತ್ತಾರೆ. 1965ರ ಮತದಾನ ಹಕ್ಕು ಕಾಯ್ದೆಯಡಿಯಲ್ಲಿ ಫೆಡರಲ್ ಸರಕಾರವು ನ್ಯೂಯಾರ್ಕ್ ನಗರಾಡಳಿತಕ್ಕೆ ಬಂಗಾಲಿ ಭಾಷಾ ಸಹಾಯವನ್ನೊದಗಿಸಲು ಆದೇಶಿಸುವ ಮೂಲಕ ಈ ಪ್ರಕ್ರಿಯೆ ಪ್ರಾರಂಭಗೊಂಡಿತು. ಇದರಿಂದಾಗಿ ಭಾರತ ಮತ್ತು ಬಾಂಗ್ಲಾ ದೇಶದ ಬಂಗಾಲಿ ಮಾತನಾಡುವ ಪ್ರದೇಶದಿಂದ ಬಂದಿರುವ ಮತದಾರರಿಗೆ ಈ ಸೌಲಭ್ಯ ಅನುಕೂಲಕರವಾಗಲಿದೆ. ಈ ಸೌಲಭ್ಯದ ಬಗ್ಗೆ ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ ನ ಅಧ್ಯಕ್ಷರಾಗಿರುವ ಡಾ. ಅವಿನಾಶ್ ಗುಪ್ತಾ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಫ್ಲೊರಿಡಾ ವಿಶ್ವವಿದ್ಯಾನಿಲಯದ ಎಲೆಕ್ಷನ್ ಲ್ಯಾಬ್ ನ ಮಾಹಿತಿಗಳ ಪ್ರಕಾರ ಈಗಾಗಲೇ 78 ಮಿಲಿಯನ್ ಅಮೆರಿಕನ್ನರು ಈಗಾಗಲೇ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪೆನ್ಸುಲ್ವೇನಿಯಾ ಮತ್ತು ಮಿಚಿಗನ್ ಪ್ರದೇಶದ ಮತಗಳು ನಿರ್ಣಾಯಕವೆಂದೆಣಿಸಿವೆ. ಇನ್ನುಳಿದಂತೆ ಅರಿಝೋನಾ, ನೇವಡಾ, ವಿಸ್ಕಾನ್ಸಿನ್, ನಾರ್ತ್ ಕರೋಲಿನಾ ಮತ್ತು ಜಾರ್ಜಿಯಾ ಪ್ರದೇಶಗಳ ಮತಗಳೂ ನಿರ್ಣಾಯಕವಾಗಿದೆ. ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರು ಜಯಶಾಲಿಯಾಗಬೇಕಾದರೆ 270 ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಪಡೆಯಬೇಕಾಗಿರುತ್ತದೆ.