Saturday, 16th November 2024

Viral Video: ಟ್ರಂಪ್‌ 2.0 ಆಡಳಿತದಲ್ಲಿ ತುಳಸಿ ಗಬ್ಬಾರ್ಡ್‌ಗೆ ಅತ್ಯುನ್ನತ ಸ್ಥಾನ; ನೆಟ್ಟಿಗರನ್ನು ರೋಮಾಂಚನಗೊಳಿಸಿದ ವಿಡಿಯೊ ಇಲ್ಲಿದೆ

ವಾಷಿಂಗ್ಟನ್‌: ಅಮೆರಿಕದಲ್ಲಿ ನೂತನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಇದೀಗ ಡೊನಾಲ್ಡ್‌ ಟ್ರಂಪ್‌ (Donald Trump) ಗೆಲುವಿನ ನಗೆಯನ್ನು ಬೀರಿದ್ದಾರೆ. ಟ್ರಂಪ್‌ ಟೀಂನಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸುವವರ ಪಟ್ಟಿ ಹಾಗೂ ಅವರ ವಿವರಗಳು ಸಹ ಒಂದೊಂದಾಗಿ ಹೊರಬೀಳುತ್ತಿದೆ. ಈ ನಡುವೆ ಇಂಡೋ-ಅಮೇರಿಕನ್‌ ಮಹಿಳೆಯಾಗಿರುವ ತುಳಸಿ ಗಬ್ಬಾರ್ಡ್‌ (Tulsi Gabbard) ಅವರು ಟ್ರಂಪ್‌ ಆಡಳಿತದಲ್ಲಿ ಅತ್ಯುನ್ನತ ಹುದ್ದೆಯೊಂದನ್ನು ಅಲಂಕರಿಸಲಿದ್ದಾರೆ. ಅವರ ಸಾಹಸ ಕಾರ್ಯದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ (Viral Video) ಆಗುತ್ತಿದೆ. ಗುಪ್ತಚರ ದಳದಲ್ಲಿ ಅವರು ಉನ್ನತ ಹುದ್ದೆಯನ್ನು ಅಲಂಕರಿಸಲಿದ್ದು, ಈ ಮೂಲಕ ದೇಶದ ಅತ್ಯುನ್ನತ ಹುದ್ದೆಗೇರುತ್ತಿರುವ ಪ್ರಥಮ ಹಿಂದು-ಅಮೆರಿಕನ್‌ ಆಗಿ ಗಬ್ಬಾರ್ಡ್‌ ಗುರುತಿಸಲ್ಪಟ್ಟಿದ್ದಾರೆ. ತುಳಸಿ ಗಬ್ಬಾರ್ಡ್‌ ಅವರನ್ನು ಟ್ರಂಪ್‌ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿಯನ್ನಾಗಿ (DNI) ನೇಮಿಸಿದ್ದಾರೆ. ಹಾಗೆಂದು ತುಳಸಿ ಹೆಸರು ಈ ಹಿಂದೆಯೂ ಸಾಕಷ್ಟು ಪ್ರಚಾರದಲ್ಲಿತ್ತು. ಅಲ್ಲಿನ ರಾಜಕಾರಣದಲ್ಲಿ ತುಳಸಿ ಅವರದ್ದು ಪರಿಚಿತ ಮುಖವೇ.

ತುಳಸಿ ಅವರು ಗನ್‌ ಮತ್ತು ಪಿಸ್ತೂಲ್‌ ಹಿಡಿದುಕೊಂಡು ಫೈರಿಂಗ್‌ ಅಭ್ಯಾಸ ಮಾಡುತ್ತಿರುವ ಹಾಗೂ ಕೆಲವೊಂದು ಸಾಹಸ ಕವಾಯತುಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ವಿಡಿಯೊ ಇದಾಗಿದೆ. ತುಳಸಿ ಅವರ ಈ ಸಾಹಸ ಕಾರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ಇದನ್ನು ನೋಡಿದ ನೆಟ್ಟಿಗರು ಹಲವು ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. “ಆಕೆ ಅತ್ಯದ್ಭುತ..” ಎಂದು ಒಬ್ಬ ಎಕ್ಸ್‌ ಬಳಕೆದಾರರು ಕಮೆಂಟ್‌ ಮಾಡಿದ್ದಾರೆ. “ಗುರಿ ನಿಜವಾಗ್ಲೂ ಚೆನ್ನಾಗಿದೆ” ಎಂದು ಇನ್ನೊಬ್ಬರು ತಿಳಿಸಿದ್ದಾರೆ. “ಇದನ್ನು ನೋಡಿದ ಬಳಿಕ ನನಗೆ ಅಮೆರಿಕನ್‌ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ. ಈಕೆ ವಾಷಿಂಗ್ಟನ್‌ನ ರಾಣಿ ಡಯಾನಾ ಹಾಗೂ ರಸ್ತೆಗಿಳಿದರೆ ಕಮಾಂಡೋʼʼ ಎಂದು ಇನ್ನೊಬ್ಬರ ಹೇಳಿದ್ದಾರೆ.

ಇನ್ನು ಕೆಲವರು ತುಳಸಿ ಗಬ್ಬಾರ್ಡ್‌ ಅವರ ಈ ಸಾಹಸದ ವಿಡಿಯೊ ನೋಡಿ ಅದೆಷ್ಟು ಇಂಪ್ರೆಸ್‌ ಆಗಿದ್ದಾರೆಂದರೆ, ಅಮೆರಿಕಾದ ಅಧ್ಯಕ್ಷೆಯಾಗಬೇಕೆಂದು ಬಯಸುತ್ತಿದ್ದಾರೆ. “2025ರಲ್ಲಿ ತುಳಸಿ ಪ್ರಪ್ರಥಮ ಮಹಿಳಾ ಅಧ್ಯಕ್ಷೆಯಾಗಲಿದಾರೆʼʼ ಎಂದು ಮಗದೊಬ್ಬರು ಅಭಿಪ್ರಾಯ ವ್ಯಕ್ಷತಪಡಿಸಿದ್ದಾರೆ.
ಇದನ್ನೂ ಓದಿ: Fire Accident: ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ; 10 ಶಿಶುಗಳ ಸಜೀವ ದಹನ

ತುಳಸಿ ಗಬ್ಬಾರ್ಡ್‌ ಅವರು ಡೆಮಾಕ್ರೆಟಿಕ್‌ ಪಕ್ಷದ ಸದಸ್ಯೆಯಾಗಿದ್ದು, 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಆಕೆ ಅಧ್ಯಕ್ಷೀಯ ಹುದ್ದೆಗೆ ಪಕ್ಷದಿಂದ ಆಕಾಂಕ್ಷಿಯಾಗಿದ್ದರು. ನಂತರದ ದಿನಗಳಲ್ಲಿ ಆಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ಟೀಕಾಕಾರ್ತಿಯಾಗಿ ಬದಲಾಗಿದ್ದರು ಮತ್ತು ಡೆಮಾಕ್ರಾಟಿಕ್‌ ಪಕ್ಷವನ್ನು ತೊರೆದು ರಿಪಬ್ಲಿಕನ್‌ ಪಕ್ಷವನ್ನು ಸೇರಿಕೊಂಡಿದ್ದರು.

ತುಳಸಿ ಅವರು 2003ರಲ್ಲಿ ಯುಎಸ್‌ ಆರ್ಮಿಗೆ ಸೇರ್ಪಡೆಗೊಂಡು, ಇರಾಕ್‌ ಹಾಗೂ ಕುವೈಟ್‌ಗಳಲ್ಲಿ ಅಮೆರಿಕ ಸೇನೆಯ ಪರವಾಗಿ ಕರ್ತವ್ಯ ನಿರ್ವಹಿಸಿದ್ದರು. ಅವರು ದಶಕಗಳಿಗೂ ಹೆಚ್ಚು ಕಾಲ ಅಮೆರಿಕ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಸೇವಾ ಸಂದರ್ಭದಲ್ಲಿ ಆಕೆ ಕೋಂಬ್ಯಾಟ್‌ ಮೆಡಿಕಲ್‌ ಬ್ಯಾಡ್‌ ಮತ್ತು ಮೆರಿಟೋರಿಯಸ್‌ ಸರ್ವಿಸ್‌ ಮೆಡಲ್‌ ಗಳನ್ನು ಸಂಪಾದಿಸಿಕೊಂಡಿದ್ದರು. ಹೀಗೆ ಅಮೆರಿಕ ಸೇನೆಯಲ್ಲಿ ಪಳಗಿದ ಹಿಂದೂ-ಅಮೆರಿಕನ್‌ ಮಹಿಳೆ ರಾಜಕೀಯದಲ್ಲಿಯೂ ಛಾಪು ಮೂಡಿಸುತ್ತಿದ್ದಾರೆ.