ವಾಷಿಂಗ್ಟನ್: ಉದ್ಯೋಗ ಪ್ರತಿಯೊಬ್ಬರಿಗೂ ಇಂದು ಬಹಳ ಅವಶ್ಯಕ. ಉದ್ಯೋಗ ನಿರ್ವಹಿಸುವ ಸ್ಥಳದಲ್ಲಿನ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಅದೇ ರೀತಿ ಕೆಲವರು ನಿಯಮ ಮೀರಿದಾಗ ಕಂಪನಿ ಕೂಡ ತನ್ನ ಹಕ್ಕನ್ನು ಚಲಾಯಿಸಿ, ಕರ್ತವ್ಯ ಲೋಪ ಆರೋಪದ ಮೇಲೆ ಉದ್ಯೋಗಿಯನ್ನು ಅಮಾನತು ಮಾಡುವ ಅಧಿಕಾರ ಹೊಂದಿದೆ. ಈ ನಿಟ್ಟಿನಲ್ಲಿ ಮಹಿಳೆಯೊಬ್ಬರನ್ನು ಕಂಪನಿ ನಿಯಮ ಉಲ್ಲಂಘಿಸಿದ ಆರೋಪದಡಿ ಕೆಲಸದಿಂದ ಅಮಾನತುಗೊಳಿಸಿದೆ. ಬಳಿಕ ಅದೇ ಕಂಪನಿ 30 ಲಕ್ಷ ರೂ. ಪರಿಹಾರ ನೀಡಿದ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ (Viral News).
ಏನಾಗಿತ್ತು?
ಕ್ರೊಯ್ಡಾನ್ ಟ್ರಿಬ್ಯುನಲ್ ಎನ್ನುವ ಏಜೆನ್ಸಿಯು ಎಲಿಜಬೆತ್ ಬೆನಾನ್ಸಿ ಎನ್ನುವ ಯುವತಿಯನ್ನು ಕೆಲಸಕ್ಕೆ ನೇಮಿಸಿತ್ತು. ಆಕೆ ಕೆಲಸದ ಸ್ಥಳದಲ್ಲಿ ಅತೀ ಕಿರಿಯ ಉದ್ಯೋಗಿ ಎಂಬ ಪ್ರಶಂಸೆ ಕೂಡ ಪಡೆದಿದ್ದರು. ಆಕೆಯನ್ನು ನೇಮಕ ಮಾಡುವಾಗ 18 ವರ್ಷ ವಯಸ್ಕಳಾಗಿದ್ದು ಕೆಲಸಕ್ಕೆ ನೇಮಕ ಮಾಡಿದ್ದ ವಿಚಾರವೇ ಕಂಪನಿಗೆ ಸಾಕಷ್ಟು ತೊಂದರೆ ಉಂಟಾಗಲು ಕಾರಣವಾಗಿತ್ತು. ಕೆಲಸದ ಸ್ಥಳದಲ್ಲಿ ಮ್ಯಾನೇಜರ್ ಹಾಗೂ ಇತರರು ಕೂಡ ಈಕೆಯ ನೇಮಕಕ್ಕೆ ತಕರಾರು ಎತ್ತಿದ್ದು ಆಕೆಯನ್ನು ವಜಾ ಮಾಡಲು ಕಂಪನಿಗೆ ಅನೇಕರು ಸೂಚಿಸಿದ್ದರು. ಆದರೆ ಯಾವುದೇ ಸೂಕ್ತ ಕಾರಣ ಇಲ್ಲದೆ ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಲು ಕಂಪನಿಯ ಆಡಳಿತ ಮಂಡಳಿ ನಿರಾಕರಿಸಿತ್ತು.
ಕ್ಷುಲ್ಲಕ ಕಾರಣ?
ಬಳಿಕ ಅವರು ಸ್ಪೋರ್ಟ್ಸ್ ಶೂ ಧರಿಸಿ ಆಫೀಸಿಗೆ ಬಂದ ಕಾರಣ ಕಂಪನಿಯ ಡ್ರೆಸ್ ಕೋಡ್ ನಿಯಮಕ್ಕೆ ವಿರುದ್ಧವಾಗಿದೆ ಎಂದು ಕೆಲಸದಿಂದ ವಜಾ ಮಾಡಲಾಯಿತು. ಶೂ ಧರಿಸಿದ್ದರು ಎಂಬ ಆರೋಪಕ್ಕೆ ಕೆಲಸ ಕಳೆದುಕೊಂಡ ಮಹಿಳೆಗೆ ಭತ್ಯೆ ನೀಡಲು ಕಂಪನಿ ನಿರಾಕರಿಸಿದೆ.
ನ್ಯಾಯಾಂಗದ ಮೊರೆ
ಬಳಿಕ ಎಲಿಜಬೆತ್ ನ್ಯಾಯಾಂಗದ ಮೊರೆ ಹೋಗಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆಕೆ ಉದ್ಯೋಗದಲ್ಲಿ ಯಾವುದೇ ಲೋಪ ಮಾಡಿಲ್ಲ. ಆಕೆ ಸ್ಪೋರ್ಟ್ಸ್ ಶೂ ಧರಿಸಿದ್ದಳು ಎನ್ನುವುದು ಉದ್ಯೋಗದಿಂದ ವಜಾ ಮಾಡಲಿರುವ ಸೂಕ್ತ ಕಾರಣ ಅಲ್ಲ. ಅಷ್ಟು ಮಾತ್ರವಲ್ಲದೆ ಆಕೆಗೆ ಕಂಪನಿ ಯಾವುದೇ ಭತ್ಯೆ ಕೂಡ ನೀಡದಿರುವುದು ವಿಷಾದನೀಯ. ಇಂತಹ ಕ್ಷುಲ್ಲಕ ಕಾರಣಕ್ಕೆ ಅಮಾನತು ಮಾಡಿದ್ದ ಕಂಪನಿಯ ನಿಯಮ ಸರಿ ಇಲ್ಲ ಎಂದು ದೂರಿ, ವಯಸ್ಸಿನ ಆಧಾರದ ಮೇಲೆ ಇಂತಹ ತಾರತಮ್ಯ ಮಾಡುವುದು ಅಸಮಂಜಸ ಎಂದು ತೀರ್ಪು ನೀಡಿದೆ.
ಅದರ ಜತೆಗೆ ಆಕೆಗೆ 29.187 ಪೌಂಡ್‌ಗಳನ್ನು (30 ಲಕ್ಷ ರೂ.) ಪರಿಹಾರ ನೀಡುವಂತೆ ಸೂಚಿಸಲಾಗಿದೆ. ಈ ಮೂಲಕ ಆಕೆ ಕಿರಿಯಳು ಎಂಬ ಕಾರಣಕ್ಕೆ ಕಂಪನಿ ತೆಗೆದುಕೊಂಡ ನಿರ್ಧಾರ ಪ್ರಶ್ನಿಸಿ ಎಲಿಜಬೆತ್ ಪರವಾಗಿ ನ್ಯಾಯಾಲಯ ತೀರ್ಪು ನೀಡಿದೆ.ಈ ಮೂಲಕ ಕೆಲಸದಿಂದ ವಜಾ ಆಗಿದ್ದರೂ ಕೂಡ ಎಲಿಜಬೆತ್ ಅವರು ಕಂಪನಿಯಿಂದ ದೊಡ್ಡ ಮೊತ್ತದ ಪರಿಹಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ನ್ಯಾಯದ ವಿಚಾರದಲ್ಲಿ ಎಲ್ಲರೂ ಸಮಾನರು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.