Wednesday, 27th November 2024

Viral Video: 20 ವರ್ಷ ಜೈಲು ಶಿಕ್ಷೆ ಬಳಿಕ ರಿಲೀಸ್‌… ತನ್ನಿಂದ ಕೊಲೆಯಾದ ವ್ಯಕ್ತಿಯ ಮನೆಯ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಹಂತಕ!

ಮನುಷ್ಯ ಒಬ್ರ ಮೇಲೆ ರಿವೇಂಜ್ ತಗೋಬೇಕಂದ್ರೆ ಏನು ಬೇಕಾದ್ರೂ ಮಾಡ್ತಾನೆ ಅನ್ನೋದಕ್ಕೆ ಹಲವಾರು ಉದಾಹರಣೆಗಳು ನಮ್ಮ ಸುತ್ತಮುತ್ತ ನಮಗೆ ಸಿಗುತ್ತಿರುತ್ತವೆ. ಇದೀಗ ಅಂತಹುದ್ದೇ ಒಂದು ‘ರಿವೇಂಜ್ ಸ್ಟೋರಿ’ ಇದೀಗ ಸೋಷಿಯಲ್ ಮೀಡಿಯಾದ ತುಂಬೆಲ್ಲಾ ಸಿಕ್ಕಾಪಟ್ಟೆ ವೈರಲ್ (Viral Video) ಆಗ್ತಿದೆ. ಈ ಘಟನೆ ನಮ್ಮ ನೆರೆಯ ರಾಷ್ಟ್ರ ಚೀನಾದಲ್ಲಿ (China) ನಡೆದಿದ್ದು, ಇಲ್ಲೊಬ್ಬ ಭೂಪ ಕೊಲೆ ಕೇಸಿನಲ್ಲಿ ಶಿಕ್ಷೆ ಅನುಭವಿಸಿ 20 ವರ್ಷ ಜೈಲಿನಲ್ಲಿ ಕಳೆದು ಬಂದ ಮೇಲೆ ತಾನು ಕೊಲೆ ಮಾಡಿದ್ದ ಸಂತ್ರಸ್ತ ವ್ಯಕ್ತಿಯ ಮನೆಯ ಮುಂದೆಯೇ ಪಟಾಕಿ ಸಿಡಿಸಿ ತನ್ನ ಬಿಡುಗಡೆಯನ್ನು ಸಂಭ್ರಮಿಸಿದ್ದಾನೆ. ಈ ಸಂದರ್ಭದಲ್ಲಿ ಆತ ಒಂದು ಐಷಾರಾಮಿ ಬಾಂಕ್ವೆಟ್ ಅನ್ನೂ ಸಹ ಹಿಡಿದುಕೊಳ್ಳುವ ಮೂಲಕ ಗಮನಸೆಳೆದಿದ್ದಾನೆ.

ಈತನ ಹುಚ್ಚಾಟ ಇಲ್ಲಿಗೇ ನಿಲ್ಲದೆ, ಆ ಸಂತ್ರಸ್ತನ ಮನೆಯವರು ಆತನಿಗೆ ಈ ರೀತಿ ಮಾಡದಂತೆ ಪರಿಪರಿಯಾಗಿ ಬೇಡಿಕೊಂಡರೂ ಆತ ಪಟಾಕಿ ಹೊಡೆಯುವದನ್ನು ನಿಲ್ಲಿಸಲಿಲ್ಲ, ಬಳಿಕ ಸ್ಥಳೀಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದ ಬಳಿಕವಷ್ಟೇ ಈತನ ಈ ಹುಚ್ಚು ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ.

ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ (South China Morning Post) ವರದಿಗಳ ಪ್ರಕಾರ, ಸಂತ್ರಸ್ತ ವ್ಯಕ್ತಿಯ ಪುತ್ರ ಈ ಕೊಲೆ ಅಪರಾಧಿಯ ಹುಚ್ಚು ಸಂಭ್ರಮಾಚರಣೆಯನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು ಚೀನಾದ ಸಾಮಾಜಿಕ ಜಾಲತಾಣ ಡ್ಯೂಯಿನ್ ನಲ್ಲಿ ಪೋಸ್ಟ್ ಮಾಡಿದ ಬಳಿಕವಷ್ಟೇ ಈ ಘಟನೆ ಹೊರಪ್ರಪಂಚಕ್ಕೆ ಗೊತ್ತಾಗಿದೆ.

ತನ್ನ ತಂದೆಯನ್ನು ಕೊಲೆ ಮಾಡಿದ ವ್ಯಕ್ತಿಯ ಬಗ್ಗೆ ಮಾತನಾಡಿರುವ ಸಂತ್ರಸ್ತ ವ್ಯಕ್ತಿಯ ಪುತ್ರ, “ನನಗೊಂದು ಅವಕಾಶ ಸಿಕ್ಕಿದ್ರೆ, ನಾನು ಆ ಕೊಲೆಗಾರನೊಂದಿಗೆ ಮಾತನಾಡಲು ಬಯಸ್ತೇನೆ. ನನ್ನ ಸಿಟ್ಟನ್ನು ಆತನ ಮೇಲೆ ತೋರ್ಪಡಿಸಲು ಅಲ್ಲ, ಬದಲಾಗಿ, ಆತ ಯಾಕೆ ಎರಡು ಕುಟುಂಬಗಳನ್ನು ನೋವಿನ ಕೂಪಕ್ಕೆ ದೂಡಿದ ಆ ನಿರ್ಧಾರವನ್ನು ತೆಗೆದುಕೊಂಡ ಎಂದು ಕೇಳುವುದಕ್ಕಾಗಿ! ಆದರೆ ಈ ವ್ಯಕ್ತಿ ಜೈಲಿನಿಂದ ಬಿಡುಗಡೆಯಾಗಿ ಬಂದ ತಕ್ಷಣ ಇನ್ನೊಬ್ಬರನ್ನು ನೋಯಿಸುವ ಕೆಲಸವನ್ನು ಮಾಡಿದ್ದಾನೆ” ಎಂದು ಕ್ಸಿಯಾಂಗ್ ಹೆಸರಿನ ಆ ಯುವಕ ಇನ್ನೊಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: Sabarimala Temple: ಶಬರಿಮಲೆ ದೇಗುಲದ ಗರ್ಭಗುಡಿಗೆ ಬೆನ್ನು ಹಾಕಿ ನಿಂತು ಪೊಲೀಸರ ಪೋಸ್‌; ವಿವಾದ ಹುಟ್ಟು ಹಾಕಿದ ಫೋಟೊ

ತನ್ನ ತಂದೆ ಅವರ ನೆರೆಹೊರೆಯವರು ಸುಪಾರಿ ಕೊಟ್ಟಿದ್ದ ಬಾಡಿಗೆ ಹಂತಕರಿಂದ ಹತ್ಯೆಯಾದ ಸಂದರ್ಭದಲ್ಲಿ ಕ್ಸಿಯಾಂಗ್ 15 ವರ್ಷದ ಬಾಲಕನಾಗಿದ್ದ ಮತ್ತು ಆತನ ತಂದೆಗೆ 39 ವರ್ಷ ಪ್ರಾಯವಾಗಿತ್ತು. ವರದಿಗಳ ಪ್ರಕಾರ ಈತನ ತಂದೆಯನ್ನು ಬೆಡ್ ರೂಂನಲ್ಲಿ ಸಾಯಿಸಿ ಬಳಿಕ ಆ ದೇಹಕ್ಕೆ ಬೆಂಕಿ ಹಚ್ಚಲಾಗಿತ್ತು.

ಈ ಭೀಕರ ಘಟನೆಯಿಂದ ಆ ಕುಟುಂಬ ಎಲ್ಲಿಯವರೆಗೆ ಭೀತಿಗೊಳಗಾಗಿತ್ತು ಎಂದರೆ ಈ ಬಾಲಕನಿಗೆ ತಂದೆಯ ಮೃತದೇಹವನ್ನು ತೋರಿಸಿರಲಿಲ್ಲ ಮಾತ್ರವಲ್ಲದೇ ಮೃತ ವ್ಯಕ್ತಿಯ ಕುಟುಂಬಕ್ಕೆ ಕೊಲೆಗಾರರ ಕಡೆಯಿಂದ ನಿರಂತರ ಬೆದರಿಕೆಗಳು ಬರುತ್ತಿದ್ದವು ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಇನ್ನು, ಜೈಲಿನಿಂದ ಬಿಡುಗಡೆಗೊಂಡ ಕೊಲೆಗಾರ, ಸಂತ್ರಸ್ತ ವ್ಯಕ್ತಿಯ ಮನೆಯ ಮುಂದೆ ದುಬಾರಿ ಬಾಂಕ್ವೆಟನ್ನು ಹಾರಿಸಿದ್ದಾನೆ. ಮಾತ್ರವಲ್ಲದೇ, ತನ್ನ ಪುನರಾಗಮನವನ್ನು ಸಾರುವುದಕ್ಕಾಗಿ ಅವರ ಮನೆಯ ಮುಂದೆ ಪಟಾಕಿಗಳನ್ನು ಸಿಡಿಸಿದ್ದಾನೆ. ಸ್ಥಳೀಯ ಪೊಲೀಸರು ಮಧ್ಯ ಪ್ರವೇಶಿಸಿ ಆ ವ್ಯಕ್ತಿಯೊಂದಿಗೆ ಮತ್ತು ಸಂತ್ರಸ್ತ ವ್ಯಕ್ತಿಯ ಮನೆಯವರೊಂದಿಗೆ ಮಾತುಕತೆ ನಡೆಸಿದ ಬಳಿಕವಷ್ಟೇ ಕೊಲೆ ಅಪರಾಧಿ ಅಲ್ಲಿಂದ ತೆರಳಿದ್ದಾನೆ ಎಂದು ತಿಳಿದುಬಂದಿದೆ.