Saturday, 4th January 2025

Viral Video: ವೇಗವಾಗಿ ರೈಲು ಬರುತ್ತಿದ್ದಂತೆ ವ್ಯಕ್ತಿಯನ್ನು ಟ್ರ್ಯಾಕಿಗೆ ತಳ್ಳಿದ ಯುವಕ – ಮುಂದೇನಾಯ್ತು..?

ಮ್ಯಾನ್ ಹಟನ್‌: 23 ವರ್ಷದ ಯುವಕನೊಬ್ಬ 45 ವರ್ಷ ಪ್ರಾಯದ ಪ್ರಯಾಣಿಕರೊಬ್ಬರನ್ನು ಚಲಿಸುತ್ತಿರುವ ರೈಲಿನತ್ತ ತಳ್ಳಿದ ಘಟನೆ ಮ್ಯಾನ್‌ ಹಟನ್‌ನಲ್ಲಿ ನಡೆದಿದೆ. ಈ ಭಯಾನಕ ಘಟನೆಯಲ್ಲಿ ಪ್ರಯಾಣಿಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ತಲೆಭಾಗಕ್ಕೆ ಗಾಯವಾಗಿದೆ. ಗಾಯಾಳುವನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯ ವಿಡಿಯೋ ಇದೀಗ ಹೊರಬಿದ್ದಿದ್ದು, ಎಲ್ಲೆಡೆ ವೈರಲ್ (Viral Video) ಆಗುತ್ತಿದೆ.

ಆರೋಪಿತನನ್ನು 23 ವರ್ಷದ ಕಮೇಲ್ ಹಾಕಿನ್ಸ್ ಎಂದು ಗುರುತಿಸಲಾಗಿದ್ದು, ಈತ ಸುಮಾರು 1.30 ಗಂಟೆಯ ಹೊತ್ತಿಗೆ ಟ್ರ್ಯಾಕಿಗೆ ಬಂದವನೇ ಅಲ್ಲಿ ನಿಂತಿದ್ದ ವ್ಯಕ್ತಿಯನ್ನು ಕೆಳಗಡೆ ತಳ್ಳಿದ್ದಾನೆ. ಅದೇ ಕ್ಷಣದಲ್ಲಿ ರೈಲೊಂದು ಅಲ್ಲಿಂದ ಪಾಸಾಗುತ್ತಿರುವುದು ಈ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಆರೋಪಿ ಯುವಕ ಅತ್ತಿತ್ತ ಓಡಾಡುತ್ತಿದ್ದವನೇ ಅಲ್ಲೇ ಟ್ರ್ಯಾಕ್ ಬದಿಯಲ್ಲಿ ಫೋನಲ್ಲಿ ಮಾತನಾಡುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ಇದ್ದಕ್ಕಿದ್ದಂತೆ ತಳ್ಳಿಬಿಟ್ಟಿದ್ದಾನೆ. ಈ ವೇಳೆ ವೇಗವಾಗಿ ರೈಲೊಂದು ಪಾಸಾದರೂ ಆ ವ್ಯಕ್ತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ತಿಳಿದುಬಂದಿದೆ.

ಈ ಘಟನೆ ನಡೆದ ತಕ್ಷಣವೇ ಫೈರ್ ಡಿಪಾರ್ಟ್ಮೆಂಟ್ ನಿಂದ ಎಮರ್ಜೆನ್ಸಿ ರೆಸ್ಪಾಂಡ್ ಟೀಂ ಸದಸ್ಯರು ಘಟನಾ ಸ್ಥಳಕ್ಕೆ ಧಾವಿಸಿ, ಗಾಯಾಳು ವ್ಯಕ್ತಿಯನ್ನು ರೈಲ್ವೇ ಟ್ರ್ಯಾಕಿನಿಂದ ಮೇಲೆತ್ತಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಿದ್ದಾರೆಂದು ಮಾಧ್ಯಮ ವರದಿಗಳು ತಿಳಿಸಿವೆ. ತುರ್ತು ಸ್ಪಂದನಾ ತಂಡದ ಸ್ಪಂದನೆಯಿಂದ ಹೆಚ್ಚಿನ ದುರಂತವೊಂದು ತಪ್ಪಿ ಹೋದಂತಾಗಿದೆ.

@ಕಾಲಿನ್ ರಗ್ ಎಂಬ ಎಕ್ಸ್ ಯೂಸರ್ ಮಾಡಿರುವ ಟ್ವೀಟ್ ಪ್ರಕಾರ ಎನ್.ವೈ.ಪಿ.ಡಿ. ಈ ಘಟನೆಗೆ ಸಂಬಂಧಿಸಿದಂತೆ ತನಿಖೆಯೊಂದನ್ನು ಪ್ರಾರಂಭಿಸಿದೆ. ಘಟನಾ ಸ್ಥಳದ ವಿಡಿಯೋ ಫೂಟೇಜ್ ಗಳ ಆಧಾರದಲ್ಲಿ ಆರೋಪಿಯನ್ನು ಪತ್ತೆ ಹಚ್ಚಲಾಗಿದ್ದು ಆತನನ್ನು ಹಾಕಿನ್ಸ್ ಎಂದು ಗುರುತಿಸಲಾಗಿದೆ. ಈತನನ್ನು ಕೊಲಂಬಸ್ ಸರ್ಕಲ್ ಬಳಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಈತನ ಮೇಲೆ ಕೊಲೆ ಕೃತ್ಯಕ್ಕೆ ಪ್ರಯತ್ನವೆಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಯ ಮೇಲೆ ಇನ್ನೂ ಹೆಚ್ಚುವರಿ ಆರೋಪಗಳನ್ನು ಹೊರಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Viral Post: ಈ ವರ್ಷ 3ನೇ ಮಹಾಯುದ್ಧ ಫಿಕ್ಸ್… ಕೊರೋನಾ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದವನಿಂದ ಮತ್ತೊಂದು ಭಯಾನಕ ಭವಿಷ್ಯವಾಣಿ!

ಆರೋಪಿ ಯುವಕ ಹಾಕಿನ್ಸ್ ಅಪರಾಧ ನಂಟುಳ್ಳ ಯುವಕನಾಗಿದ್ದು, 2019ರಲ್ಲಿ ಪೊಲೀಸ್ ಅಧಿಕಾರಿಯೊಬ್ಬರನ್ನು ಗಾಯಗೊಳಿಸಿದ ಆರೋಪವಿದೆ. ಈತ ಅಕ್ಟೋಬರ್ ನಿಂದ ಹಲವಾರು ಓಪನ್ ಕೇಸ್ ಗಳಲ್ಲಿ ಭಾಗಿಯಾಗಿರುವುದಾಗಿಯೂ ತಿಳಿದುಬಂದಿದೆ. ಇವುಗಳಲ್ಲಿ ಹಲ್ಲೆ, ಕಿರುಕುಳ ಮತ್ತು ಕಾನೂನು ಬಾಹಿರವಾಗಿ ಶಸ್ತ್ರಾಸ್ತ್ರಗಳನ್ನು ಇರಿಸಿಕೊಂಡಿರುವ ಆರೋಪಗಳಿವೆ.