ದುಬೈ: ದಾರಿಯಲ್ಲಿ ಚಿನ್ನ ಕಂಡರೆ ಯಾರು ತಾನೆ ಹಾಗೇ ಬಿಟ್ಟು ಬಿಡುತ್ತಾರೆ? ಒಂದೋ ಜೇಬಿನಲ್ಲಿ ಹಾಕಿಕೊಳ್ಳುತ್ತಾರೆ, ಇಲ್ಲವಾದರೆ ಅದನ್ನು ಯಾರಿಗೆ ಸೇರಿದೆಯೋ ಅವರಿಗೆ ಒಪ್ಪಿಸಲು ಪ್ರಯತ್ನಿಸುತ್ತಾರೆ. ಆದರೆ ದುಬೈ ರಸ್ತೆಯಲ್ಲಿ ಚಿನ್ನ ಕಂಡರೂ ಯಾರು ಮುಟ್ಟುವುದಿಲ್ಲ. ಈ ಮೂಲಕ ದುಬೈ (Dubai road) ಎಷ್ಟು ಸುರಕ್ಷಿತವಾಗಿದೆ (Dubai security) ಎಂಬುದನ್ನು ಇನ್‌ಸ್ಟಾಗ್ರಾಮ್ ಪ್ರಭಾವಶಾಲಿಯಾದ ಲೇಲಾಫ್‌ಶೋಂಕರ್ ಸಾಬೀತುಪಡಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ವೈರಲ್ (Viral Video) ಆಗಿದೆ.
ದುಬೈನಲ್ಲಿ ಭದ್ರತೆ ಹೇಗಿದೆ ಎಂಬುದನ್ನು ಪ್ರದರ್ಶಿಸುವ ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಬಳಿಕ ದುಬೈಯ ಸುರಕ್ಷತೆಯ ಬಗ್ಗೆ ವಿಶ್ವ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.
ಸುಪ್ರಸಿದ್ದ ರೆಸ್ಟೋರೆಂಟ್‌ಗಳು ಮತ್ತು ಉಡುಪುಗಳ ಅಂಗಡಿಗಳಿಗೆ ಹೆಸರುವಾಸಿಯಾಗಿರುವ ದುಬೈನ ಸತ್ವಾ ಸ್ಟ್ರೀಟ್‌ನಲ್ಲಿ ಲೇಲಾಫ್‌ಶೋಂಕರ್ ಅವರು , ದಾರಿಹೋಕರ ನಡವಳಿಕೆಯನ್ನು ಪರೀಕ್ಷಿಸಲು ಪ್ರಯೋಗವೊಂದನ್ನು ನಡೆಸಿದ್ದಾರೆ. ಅವರು ನಿಲ್ಲಿಸಿದ್ದ ಬಿಎಂಡಬ್ಲ್ಯೂ ಕಾರಿನ ಹುಡ್‌ಗೆ ಚಿನ್ನದ ನೆಕ್ಲೇಸ್ ಮತ್ತು ಕಿವಿಯೋಲೆಗಳನ್ನು ಸಿಕ್ಕಿಸಿ ಹೊರಟು ಹೋದರು. ಕೆಲವು ಗಂಟೆಗಳ ಕಾಲ ಬಿಟ್ಟು ಬಂದರೂ ಚಿನ್ನದ ನೆಕ್ಲೇಸ್ ಮತ್ತು ಕಿವಿಯೋಲೆಗಳು ಹಾಗೇ ಇದ್ದವು.
ಕಂದು ಬಣ್ಣದ ವೆಸ್ಟ್ ಟಾಪ್ ಮತ್ತು ಕಪ್ಪು ಶಾರ್ಟ್ಸ್ ಧರಿಸಿದ್ದ ಲೇಲಾಫ್‌ಶೋಂಕರ್ ಸಾರ್ವಜನಿಕರ ಪ್ರತಿಕ್ರಿಯೆಯನ್ನು ವೀಕ್ಷಿಸಲು ಹತ್ತಿರದ ಆಭರಣ ಅಂಗಡಿಗೆ ತೆರಳಿದರು. ವಾಹನ ದಟ್ಟಣೆ ಹೆಚ್ಚಿದ್ದರೂ ಯಾರೂ ಕೂಡ ಲೇಲಾಫ್‌ಶೋಂಕರ್ ಅವರು ಇಟ್ಟಿದ್ದ ಚಿನ್ನವನ್ನು ದೋಚಲು ಮುಂದಾಗಲಿಲ್ಲ. ಒಬ್ಬ ವ್ಯಕ್ತಿಯು ನೆಲಕ್ಕೆ ಬಿದ್ದ ಕಿವಿಯೋಲೆಯನ್ನು ಎತ್ತಿ ಮರಳಿ ಮತ್ತೆ ಕಾರಿನ ಮೇಲೆ ಇಟ್ಟರು. ಇದೆಲ್ಲವೂ ವಿಡಿಯೊದಲ್ಲಿ ದಾಖಲಾಗಿದೆ.
ದುಬೈನ ಸುರಕ್ಷತೆಯ ಬಗ್ಗೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದು, ನಗರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಪ್ರಯೋಗವು ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನೂ ಬೆರಗುಗೊಳಿಸಿದೆ.
ಯುಎಇಯ ರಾಷ್ಟ್ರೀಯ ದಿನದ ಸಂದರ್ಭದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊ ಸಾಕಷ್ಟು ವೈರಲ್ ಆಗಿದೆ. ಸುಮಾರು 2.8 ಮಿಲಿಯನ್ ಮಂದಿ ಇದನ್ನು ವೀಕ್ಷಿಸಿದ್ದು, ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.
Is Dubai really this safe? Or they pay influencers for such kinda marketing? pic.twitter.com/75u80l93we
— Chirag Barjatya (@chiragbarjatyaa) December 3, 2024
ಅನೇಕರು ದುಬೈನ ಭದ್ರತಾ ಕ್ರಮಗಳು ಮತ್ತು ಅದರ ದುಬೈ ವಾಸಿಗಳ ಪ್ರಾಮಾಣಿಕತೆಯನ್ನು ಶ್ಲಾಘಿಸಿದ್ದಾರೆ. ಇನ್ನು ಕೆಲವರು ಈ ಪ್ರಯೋಗದ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದು ಮಾರ್ಕೆಟಿಂಗ್ ಅಭಿಯಾನದ ಭಾಗವಾಗಿದೆಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಕೆಲವರು ದುಬೈನಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅನೇಕರು ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡ ಘಟನೆಗಳನ್ನು ವಿವರಿಸಿದ್ದಾರೆ.
ಇದನ್ನೂ ಓದಿ: Viral News: ಹೊಟ್ಟೆಗೆ ಗುಂಡೇಟು ಬಿದ್ದರೂ ಜೀಪನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಪ್ರಯಾಣಿಕರ ಪ್ರಾಣ ಕಾಪಾಡಿದ ಚಾಲಕ!
ಕ್ರಿಮಿನಲ್ ಕೃತ್ಯಗಳಿಗೆ ತ್ವರಿತ ಮತ್ತು ಕಠಿಣ ಶಿಕ್ಷೆಯ ಭಯದಿಂದ ದುಬೈನಲ್ಲಿ ಹೆಚ್ಚು ಸುರಕ್ಷತೆ ಇದೆ ಎಂದು ವಿಮರ್ಶಕರೊಬ್ಬರು ಹೇಳಿದ್ದಾರೆ. ಸುರಕ್ಷಿತ ತಾಣವಾಗಿ ದುಬೈ ಜಾಗತಿಕವಾಗಿಯೂ ಸಮೀಕ್ಷೆಗಳಲ್ಲಿ ಗುರುತಿಸಲ್ಪಟ್ಟಿದೆ. ಈ ವೈರಲ್ ವಿಡಿಯೊ ಅದಕ್ಕೆ ಸಾಕ್ಷಿಯಾಗಿದೆ. ವಿಭಿನ್ನ ಅಭಿಪ್ರಾಯಗಳ ಹೊರತಾಗಿಯೂ ಸ್ಥಳೀಯ ನಿವಾಸಿಗಳು ಮತ್ತು ಸಂದರ್ಶಕರಿಗೆ ದುಬೈ ಎಷ್ಟು ಸುರಕ್ಷಿತವಾಗಿದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.