Wednesday, 1st January 2025

Viral Video: ದುಬಾರಿ ಮದುವೆ; ವಧುವಿನ ಮನೆ ಮೇಲೆ ವಿಮಾನದಿಂದ ಹಣದ ಸುರಿಮಳೆ: ವಿಡಿಯೊ ವೈರಲ್

ಇಸ್ಲಾಮಾಬಾದ್:‌ ಸೋಶಿಯಲ್ ಮೀಡಿಯಾದಲ್ಲಿ ಹಲವು ವಿಚಿತ್ರಗಳನ್ನು ನೋಡುತ್ತಿರುತ್ತೇವೆ. ದುಬಾರಿ ಮದುವೆ, ತೀರಾ ಸರಳ ಮದುವೆ ಹೀಗೆ ಇನ್ನಿತರ ಪೋಸ್ಟ್‌ ಮತ್ತು ವಿಡಿಯೊಗಳು ನಮ್ಮ ಗಮನ ಸೆಳೆಯುತ್ತಿರುತ್ತವೆ. ಇದೀಗ ದುಬಾರಿ ಮದುವೆಯ ವಿಡಿಯೊವೊಂದು ಸಖತ್ ವೈರಲ್ ಆಗಿದೆ. ಪಾಕಿಸ್ತಾನದಲ್ಲಿ(Pakistan) ವರನ ತಂದೆಯೊಬ್ಬ ತನ್ನ ಮಗನ ಮದುವೆಗೆ ವಿಮಾನವನ್ನು ಬಾಡಿಗೆಗೆ ತೆಗೆದುಕೊಂಡು ವಧುವಿನ ಮನೆಯ ಮೇಲೆ ಲಕ್ಷಾಂತರ ರೂಪಾಯಿ ನೋಟುಗಳ ಮಳೆಗೈದಿದ್ದಾರೆ. ಈ ವಿಡಿಯೊ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ (Viral Video).

ಮದುವೆ ಎಂಬುದು ಪ್ರತಿಯೊಬ್ಬರ ಬದುಕಿನ ಅಮೂಲ್ಯ ಕ್ಷಣ. ಹೊಸ ಬದುಕಿನತ್ತ ಹತ್ತಾರು ಆಸೆ ಮತ್ತು ಕನಸುಗಳೊಂದಿಗೆ ಹೆಜ್ಜೆಯಿಡುತ್ತಾರೆ. ಕೆಲವರು ತಮ್ಮ ಮದುವೆ ಸಮಾರಂಭವನ್ನು ಅದ್ಧೂರಿ ಆಗಿ ಆಚರಿಸುವ ಮೂಲಕ ಸುದ್ದಿಯಾಗುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೊದಲ್ಲಿ ವರನ ತಂದೆ ತನ್ನ ಮಗನ ಮದುವೆಗೆ ವಿಮಾನವನ್ನು ಬಾಡಿಗೆಗೆ ಪಡೆದು ವಧುವಿನ ಮನೆಯ ಮೇಲೆ ನೋಟುಗಳನ್ನು ಸುರಿಸಿದ್ದಾರೆ. ಆಕಾಶದಲ್ಲಿ ಹಾರಾಡುತ್ತಿರುವ ವಿಮಾನದಿಂದ ನೋಟನ್ನು ಬೀಳಿಸುತ್ತಿರುವ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡಿದೆ. ಈ ಘಟನೆಯು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ ಎನ್ನಲಾಗಿದೆ.

ಈ ವಿಡಿಯೊವನ್ನು Amalqa ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ವರನ ತಂದೆ ತನ್ನ ಮಗನ ಮದುವೆಗೆ ವಿಮಾನವನ್ನು ಬಾಡಿಗೆಗೆ ತೆಗೆದುಕೊಂಡು ವಧುವಿನ ಮನೆಯ ಮೇಲೆ ನೋಟಿನ ಮಳೆಗೈದಿದ್ದಾರೆ. ವರನು ತನ್ನ ತಂದೆಯ ಋಣವನ್ನು ತನ್ನ ಜೀವನದುದ್ದಕ್ಕೂ ತೀರಿಸುತ್ತಾನೆ ಎಂದು ಕ್ಯಾಪ್ಶನ್ ನೀಡಲಾಗಿದೆ. ಈ ವಿಡಿಯೊದಲ್ಲಿ ವಿಮಾನವು ಆಕಾಶದಲ್ಲಿ ಹಾರುತ್ತಿರುವುದನ್ನು ಸ್ಪಷ್ಟವಾಗಿ ನೋಡಬಹುದು. ಸ್ವಲ್ಪ ಸಮಯದ ನಂತರ ವಿಮಾನದಿಂದ ರಾಶಿ ರಾಶಿ ನೋಟುಗಳು ಬೀಳುತ್ತವೆ.

ಈ ವಿಡಿಯೊ ಲಕ್ಷಗಟ್ಟಲೆ ವೀಕ್ಷಣೆಯನ್ನು ಪಡೆದುಕೊಂಡಿದ್ದು, ನೆಟ್ಟಿಗರು ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ”ವರದಕ್ಷಿಣೆಯು ಸಮಾಜದ ಅನಿಷ್ಟ” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ”ಈ ತಂದೆಯಿಂದ ಭವಿಷ್ಯದಲ್ಲಿ ಹುಡುಗ ಇಷ್ಟು ಹೊರೆ ಹೊರುತ್ತಾನೆ ಎಂದು ಯೋಚಿಸಿರಲಿಲ್ಲ’’ ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ‘‘ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಪಾಕಿಸ್ತಾನಕ್ಕೆ ಸಾಲ ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು’’ ಎಂದು ಕಿಚಾಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ‌Viral Video: ಬಿಬಿಎಂಪಿ ನಿರ್ಲಕ್ಷ್ಯ; 83ರ ಇಳಿ ವಯಸ್ಸಿನಲ್ಲಿ ಬೀದಿ ಕಸ ಗುಡಿಸುವ ಅಜ್ಜ: ವಿಡಿಯೊ ವೈರಲ್