Friday, 27th December 2024

Viral Video: ನವದಂಪತಿಯ ಟ್ರಕ್ ‘ಅಂಬಾರಿ’ – ಪತಿಯ ಜೊತೆಗೇ ಇರಲು ಕೆಲಸ ಬಿಟ್ಟು ಟ್ರಕ್ ಏರಿದ ಪತ್ನಿ!

ಇದೊಂಥರಾ ‘ಅಂಬಾರಿ’ (Ambari) ಚಿತ್ರದ ಕಥೆಯಂತಿದೆ. ಅಲ್ಲಿ ತನ್ನ ಗೆಳತಿಯನ್ನು ಆಕೆಯ ಪ್ರೇಮಿ ಸೈಕಲ್ ಮೂಲಕ ದೇಶ ಸುತ್ತಿಸಿದ್ರೆ, ಇಲ್ಲಿ ವಿವಾಹಿತ ಜೋಡಿಯೊಂದು ಟ್ರಕ್ ಅನ್ನೇ ಮನೆ ಮಾಡಿಕೊಂಡು ಊರು ಸುತ್ತುತ್ತಿದೆ. ಆದ್ರೆ ಇಲ್ಲಿ ಕಥೆಗೊಂದು ಸಣ್ಣ ಟ್ವಿಸ್ಟ್ ಇದೆ! ತನ್ನ ಗಂಡನ ಲಾಂಗ್ ಡ್ರೈವ್ ಕೆಲಸಕ್ಕೆ ಸಾಥ್ ನೀಡಲು ಆತನ ಪತ್ನಿ ತಾನು ಮಾಡ್ತಿದ್ದ ಕೆಲಸವನ್ನೇ ಬಿಟ್ಟು ಪತಿಯ ಜೊತೆ ಟ್ರಕ್ ನಲ್ಲೇ (Truck) ವಾಸ ಮಾಡುವ ನಿರ್ಧಾರ ಕೈಗೊಂಡಿದ್ದಾಳೆ. ಅಮೆರಿಕಾದಿಂದ (USA) ಬಂದಿರುವ ಈ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದ (Social Media) ಗಮನ ಸೆಳೆದಿದ್ದು ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.

ಸಂಬಂಧದಲ್ಲಿ ದೀರ್ಘಕಾಲೀನ ಗ್ಯಾಪ್ ನಿಡುವುದು ಸವಾಲಿನ ವಿಷಯವೇ ಸರಿ. ಅದರಲ್ಲೂ ಮದುವೆಯಾದ ಜೋಡಿಗಳು ತುಂಬ ಸಮಯ ದೂರ ದೂರವಿರುವುದು ದೂರದ ಮಾತೇ ಸರಿ. ಇಂತಹ ಸನ್ನಿವೇಶವನ್ನು ಅಮೆರಿಕಾದ ದಂಪತಿ ಬಹಳ ಚಾಕಚಕ್ಯತೆಯಿಂದ ಎದುರಿಸಿದ್ದಾರೆ. ಟ್ರಕ್ ಡ್ರೈವರ್ ಆಗಿರುವ ತನ್ನ ಗಂಡನ ಜೊತೆಯೇ ಇರಲು ನಿರ್ಧರಿಸಿರುವ ಆತನ ಪತ್ನಿ ಇದಕ್ಕಾಗಿ ತನ್ನ ಕೆಲಸಕ್ಕೇ ರಾಜೀನಾಮೆ ನೀಡಿ ಗಂಡನ ಹೊಸ ಟ್ರಕ್ ಏರಿದ್ದಾಳೆ. ಇದೀಗ ಗಂಡ-ಹೆಂಡತಿಯನ್ನು ಹೊತ್ತ ಟ್ರಕ್ ‘ಅಂಬಾರಿ’ಯಂತೆ ಎಲ್ಲೆಡೆ ಸುತ್ತುತ್ತಿದೆ!

29 ವರ್ಷ ಪ್ರಾಯದ ಮಿಲಾ ಎಂಬಾಕೆಯೇ ಈ ನಿರ್ಧಾರವನ್ನು ಕೈಗೊಂಡಿರುವ ಮಹಿಳೆಯಾಗಿದ್ದು, ಈಕೆ ಇದೀಗ ಯಾವಾಗಲೂ ತನ್ನ ಟ್ರಕ್ ನಲ್ಲಿ ಲಾಂಗ್ ಡ್ರೈವ್ ನಲ್ಲಿರುವ ಮತ್ತು ಇದಕ್ಕಾಗಿ ಬಹುಕಾಲ ಮನೆಯಿಂದ ದೂರವಿರುವ 31 ವರ್ಷದ ತನ್ನ ಪತಿ ಜರ್ಮೈನ್ ಗೋಸ್ಕರ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ ಎಂದು ‘ದಿ ಸನ್’ (The Sun) ವರದಿ ಮಾಡಿದೆ.

ಟ್ರಕ್ ಚಾಲಕನಾಗಿರುವ ಜರ್ಮೈನ್ ತನ್ನ ಟ್ರಕ್ ಮೂಲಕ ಬೃಹತ್ ಗಾತ್ರದ ರೆಫ್ರಿಜರೇಟರ್ ಗಳನ್ನು ಅಮೆರಿಕಾದ ವಿವಿಧ ರಾಜ್ಯಗಳಿಗೆ ಸಾಗಿಸುತ್ತಿರುತ್ತಾರೆ. ಈತನ ಬಹಳಷ್ಟು ಸಮಯ ಪ್ರಯಾಣದಲ್ಲೇ ಕಳೆಯುತ್ತದೆ, ಮತ್ತು ಹಲವಾರು ದಿನಗಳವರೆಗೆ ಈತ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸುತ್ತಲೇ ಇರಬೇಕಾಗುತ್ತದೆ.

ಈ ಜೋಡಿ 2017ರಲ್ಲಿ ಪರಸ್ಪರ ಒಬ್ಬರೊನ್ನೊಬ್ಬರು ಭೇಟಿಯಾಗಿದ್ದರು ಮತ್ತು 2018ರಲ್ಲಿ ಡೇಟಿಂಗ್ ಪ್ರಾರಂಭಿಸಿದ್ದರು ಹಾಗೂ 2019ರಲ್ಲಿ ವಿವಾಹ ಬಂಧನಕ್ಕೊಳಗಾಗಿದ್ದರು. ಮಿಲಾಳಿಗೆ ತನ್ನ ಜೊತೆ ಟ್ರಕ್ ನಲ್ಲೇ ಜೊತೆಯಾಗುವಂತೆ ಐಡಿಯಾ ಕೊಟ್ಟಿದ್ದೇ ಜರ್ಮೈನ್ ಅಂತೆ! ಅಂದ ಹಾಗೆ, ಮಿಲಾ ವಿಮಾನ ನಿಲ್ದಾಣವೊಂದರಲ್ಲಿ ಎಲೆಕ್ಟ್ರಿಕ್ ಕಾರ್ಟ್ ಚಾಲಕಿಯಾಗಿ ಕೆಲಸ ಮಾಡುತ್ತಿದ್ದಳು.

ಈ ಸುದ್ದಿಯನ್ನೂ ಓದಿ: Viral Video: ಪತ್ನಿಯ ಆರೋಗ್ಯಕ್ಕಾಗಿ ವಿ.ಆರ್.ಎಸ್. ಪಡ್ಕೊಂಡ ಪತಿ; ವಿದಾಯ ಕೂಟದಲ್ಲೇ ಪ್ರಾಣ ಬಿಟ್ಟ ಹೆಂಡತಿ: ವಿಡಿಯೊ ಇಲ್ಲಿದೆ

ಮಿಲಾಳಿಗೆ ಟ್ರಾವೆಲ್ ಮಾಡುವುದೆಂದರೆ ಬಹಳ ಇಷ್ದದ ವಿಷಯ. ಹಾಗಾಗಿ ಅವಳಿಗೆ ಸಿಕ್ಕಿದ ಗಂಡನೂ ಟ್ರಕ್ ಡ್ರೈವರ್ ಆಗಿರುವ ಕಾರಣ ಆಕೆ ತನ್ನ ಕೆಲಸಕ್ಕೆ ರಾಜಿನಾಮೆಯನ್ನು ನೀಡಿ ಗಂಡನೊಂದಿಗೆ ಟ್ರಕ್ ಏರಿದ್ದಾಳೆ. ಜರ್ಮೈನ್ ಇದೀಗ ತಾನೆ ಹೊಚ್ಚ ಹೊಸ ಟ್ರಕ್ ಖರೀದಿಸಿದ್ದು, ಆತ ಕೆಲಸ ಮಾಡುವ ಕಂಪೆನಿಯೂ ಸಹ ಆತನಿಗೆ ಫ್ಲೆಕ್ಸಿಬಲ್ ವರ್ಕ್ ಟೈಂ ನೀಡಿ ಸಹಕರಿಸಿದೆ. ಈ ಮೂಲಕ ಜರ್ಮೈನ್ ಇದೀಗ ತನ್ನ ರೂಟನ್ನು ತಾನೇ ಆಯ್ದುಕೊಳ್ಳಬಹುದಾಗಿದೆ ಹಾಗೂ ಆತನಿಗೆ ಪತ್ನಿಯನ್ನೂ ಸಹ ಜೊತೆಗೆ ಕರೆದುಕೊಂಡು ಹೋಗಲು ಪರ್ಮಿಷನ್ ದೊರಕಿದೆ.

ಇದೀಗ, ಈ ದಂಪತಿ ತಮ್ಮ ಟ್ರಕ್ ಒಳಗಡೆಯೇ ಕಿಚನ್ ಹಾಗೂ ಬೆಡ್ ರೂಂ ಸಿದ್ಧಪಡಿಸಿಕೊಂಡಿದ್ದಾರೆ ಹಾಗೂ ಇಲ್ಲೇ ವಾಸಿಸಲು ಪ್ರಾರಂಭಿಸಿದ್ದಾರೆ. ಟ್ರಕ್ ಸ್ಟಾಪ್ ಗಳಲ್ಲಿ ಅಥವಾ ಪೆಟ್ರೋಲ್ ಸ್ಟೇಷನ್ ಗಳಲ್ಲಿ ತಮ್ಮ ಟ್ರಕ್ ನಿಲ್ಲಿಸುವ ಇವರು ಅಲ್ಲೇ ಸ್ನಾನಾದಿ ನಿತ್ಯ ಕರ್ಮಗಳನ್ನು ಪೂರೈಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಈ ಸಂಚಾರ ಪ್ರಿಯ ದಂಪತಿಯ ಟ್ರಕ್ ಲೈಫ್ ನ ಶಾರ್ಟ್ ವಿಡಿಯೋ ಒಂದು ನೆಟ್ಟಿಗರ ಮನ ಗೆದ್ದಿದೆ.