Friday, 20th September 2024

Vladimir Putin: ಸಮಯ ಸಿಕ್ಕಾಗಲೆಲ್ಲ ಮಕ್ಕಳು ಮಾಡಿ; ರಷ್ಯನ್ನರಿಗೆ ಕರೆ ನೀಡಿದ ಅಧ್ಯಕ್ಷ ಪುಟಿನ್

Vladimir Putin

ಮಾಸ್ಕೋ: ಕೆಲಸದ ಒತ್ತಡದಲ್ಲಿ ಸಂತಾನೋತ್ಪತ್ತಿಯನ್ನು ನಿರ್ಲಕ್ಷ್ಯ ಮಾಡಬೇಡಿ. ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು ಲೈಂಗಿಕ ಸಂಪರ್ಕದಲ್ಲಿ ತೊಡಗಿಸಿಕೊಳ್ಳಿ- ಇದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಉದುರಿಸಿದ ನುಡಿಮುತ್ತುಗಳು. ಕುಸಿಯುತ್ತಿರುವ ಜನನ ಪ್ರಮಾಣವನ್ನು ಹೆಚ್ಚಿಸಲು ಊಟ, ಚಹಾ ವಿರಾಮದ ವೇಳೆಯನ್ನು ಲೈಂಗಿಕ ಕ್ರಿಯೆಗೂ ಬಳಸುವಂತೆ ಸಲಹೆ ನೀಡಿ ಚರ್ಚೆ ಹುಟ್ಟು ಹಾಕಿದ್ದಾರೆ.

ಮೆಟ್ರೋ ವರದಿ ಪ್ರಕಾರ, ರಷ್ಯಾದಲ್ಲಿ ಫಲವತ್ತತೆ ದರವು ಪ್ರಸ್ತುತ ಪ್ರತಿ ಮಹಿಳೆಗೆ ಸುಮಾರು 1.5 ಮಕ್ಕಳಿದ್ದು, ಇದು ಜನಸಂಖ್ಯೆ ಸ್ಥಿರತೆಗೆ ಅಗತ್ಯವಿರುವ 2.1 ದರಕ್ಕಿಂತ ಕಡಿಮೆ. ಹೆಚ್ಚುವರಿಯಾಗಿ ಎರಡು ವರ್ಷಗಳ ಹಿಂದೆ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಆರಂಭಿಸಿದಾಗಿನಿಂದ 10 ಲಕ್ಷಕ್ಕೂ ಹೆಚ್ಚು ಮಂದಿ, ಮುಖ್ಯವಾಗಿ ಯುವ ಜನರು ದೇಶ ತೊರೆದಿದ್ದಾರೆ.

“ರಷ್ಯಾದ ಜನರ ಸಂರಕ್ಷಣೆ ನಮ್ಮ ಅತ್ಯುನ್ನತ ರಾಷ್ಟ್ರೀಯ ಆದ್ಯತೆಯಾಗಿದೆ” ಎಂದು ಪುಟಿನ್ ಒತ್ತಿ ಹೇಳಿದ್ದಾರೆ. “ರಷ್ಯಾದ ಭವಿಷ್ಯವು ನಮ್ಮಲ್ಲಿ ಎಷ್ಟು ಮಂದಿ ಇರುತ್ತಾರೆ ಎಂಬುದರ ಮೇಲೆ ನಿಂತಿದೆ. ಇದು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯವಾಗಿದೆ” ಎಂದು ಅವರು ತಿಳಿಸಿದ್ದಾರೆ.

ಆರೋಗ್ಯ ಸಚಿವ ಡಾ.ಯೆವ್ಗೆನಿ ಶೆಸ್ಟೊಪಲೋವ್ ಕೂಡ ಇದನ್ನೇ ಪ್ರತಿಪಾದಿಸಿದ್ದಾರೆ. ಜನಸಂಖ್ಯೆ ಕುಸಿಯಲು ಕೆಲಸವನ್ನು ನೆಪ ಮಾಡಬಾರದೆಂದು ಅವರು ಹೇಳಿದ್ದಾರೆ. “ಕೆಲಸದ ಒತ್ತಡದಿಂದ ಮಗು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವುದು ಸೂಕ್ತ ಕಾರಣವಲ್ಲ. ಅದೊಂದು ಕುಂಟ ನೆಪ. ವಿರಾಮದ ಸಮಯದಲ್ಲಿ ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹಿಂದೆಯೂ ಪ್ರಸ್ತಾವಿಸಿದ್ದ ಪುಟಿನ್‌

ರಷ್ಯಾದ ಜನಸಂಖ್ಯಾ ಕುಸಿತದ ಬಗ್ಗೆ ಪುಟಿನ್ ಎಚ್ಚರಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅವರು ರಷ್ಯಾದ ಮಹಿಳೆಯರು ಕನಿಷ್ಠ 8 ಮಕ್ಕಳಿಗೆ ಜನ್ಮ ನೀಡುವಂತೆ ಕರೆ ನೀಡಿದ್ದರು. “ನಮ್ಮ ಅನೇಕ ಜನಾಂಗೀಯ ಗುಂಪುಗಳು ನಾಲ್ಕು, ಐದು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವ ಬಲವಾದ ಕುಟುಂಬ ಪರಂಪರೆಯನ್ನು ಮುಂದುವರಿಸುತ್ತಿವೆ. ನಮ್ಮ ಅನೇಕ ಅಜ್ಜಿಯರು ಮತ್ತು ಮುತ್ತಜ್ಜಿಯರು ಏಳು, ಎಂಟು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿದ್ದರು ಎಂಬುದನ್ನು ನಾವು ನೆನಪಿನಲ್ಲಿಡೋಣ” ಎಂದು ಪುಟಿನ್ ಹೇಳಿದ್ದರು.

ಜನಸಂಖ್ಯೆ ಪ್ರಮಾಣ ಕುಸಿತ

ರಷ್ಯಾದ ಜನನ ಪ್ರಮಾಣವು 1999ರ ನಂತರದ ಅತ್ಯಂತ ಕಡಿಮೆ ಮಟ್ಟಕ್ಕೆ ತಲುಪಿದೆ. ಈ ವರ್ಷದ ಜೂನ್‌ನಲ್ಲಿ ಶಿಶು ಜನನದ ಪ್ರಮಾಣ 1,00,000ಕ್ಕಿಂತ ಕಡಿಮೆಯಾಗಿದೆ. ರೊಸ್ಟಾಟ್ ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ, 2024ರ ಮೊದಲಾರ್ಧದಲ್ಲಿ ರಷ್ಯಾದಲ್ಲಿ 5,99,600 ಮಕ್ಕಳು ಜನಿಸಿದ್ದಾರೆ. ಇದು 2023ರ ಇದೇ ಅವಧಿಗೆ ಹೋಲಿಸಿದರೆ 16,000 ಕಡಿಮೆ. ಇದೇ ವೇಳೆ ಜನವರಿ ಮತ್ತು ಜೂನ್ ನಡುವೆ 3,25,100 ಸಾವುಗಳು ದಾಖಲಾಗಿವೆ. ಇದು ದೇಶದ ಜನಸಂಖ್ಯೆಯ ನೈಸರ್ಗಿಕ ಕುಸಿತದ ವೇಗವನ್ನು ಸೂಚಿಸುತ್ತದೆ. ದೇಶದ ಜನಸಂಖ್ಯೆಯ ಕುಸಿತವು ಶೇ. 18ರಷ್ಟು ವೃದ್ಧಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: BAPS Swaminarayan Temple: ಅಮೆರಿಕದ ಸ್ವಾಮಿನಾರಾಯಣ ದೇವಸ್ಥಾನದ ಮೇಲೆ ದಾಳಿ; ಖಲಿಸ್ತಾನಿಗಳ ಕೈವಾಡ?