Wednesday, 11th December 2024

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಸ್ವಯಂ ಕ್ವಾರಂಟೈನ್

ವಾಷಿಂಗ್ಟನ್: ಸೋಂಕಿತನೊಂದಿಗೆ ಸಂಪರ್ಕ ಹೊಂದಿದ ವಿಚಾರ ತಿಳಿಯುತ್ತಲೇ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಅವರು ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

ಹೌದು. ಕೊರೋನಾವೈರಸ್ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಹೊಂದಿದ್ದ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಅವರು ಸ್ವಯಂ ಸಂಪರ್ಕತಡೆ (ಕ್ವಾರಂಟೈನ್)ಯಲ್ಲಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ‘ಕೋವಿಡ್‍-19 ಸೋಂಕಿತರೊಬ್ಬರೊಂದಿಗೆ ತಾವು ಸಂಪರ್ಕ ಹೊಂದಿರುವುದು ಗೊತ್ತಾಗಿದೆ. ರೋಗಲಕ್ಷಣಗಳಿಲ್ಲದೆ ನಾನು ಆರೋಗ್ಯವಾಗಿದ್ದೇನೆ. ಆದರೂ, ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಅನುಸಾರ ಕೆಲ ದಿನಗಳ ಕಾಲ ಸ್ವಯಂ-ಸಂಪರ್ಕತಡೆಯಲ್ಲಿದ್ದು, ಮನೆಯಿಂದಲೇ ಕಾರ್ಯನಿರ್ವಹಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಸೋಂಕು ಹರಡುವಿಕೆ ತಡೆಯಲು ಮತ್ತು ಆರೋಗ್ಯರಕ್ಷಣಾ ವ್ಯವಸ್ಥೆಗಳ ಹೊರೆ ತಪ್ಪಿಸಲು ಸಾಂಕ್ರಾಮಿಕ ರೋಗದ ನಡುವೆ ಆರೋಗ್ಯ ಮಾರ್ಗಸೂಚಿಗಳನ್ನು ಪಾಲಿಸುವುದು ಅತಿಮುಖ್ಯವಾಗಿದ ಎಂದು ಅವರು ಪ್ರತಿಪಾದಿಸಿದ್ದಾರೆ.

ಅಂತೆಯೇ ನಾವೆಲ್ಲರೂ ಆರೋಗ್ಯ ಮಾರ್ಗಸೂಚಿಗಳನ್ನು ಅನುಸರಿಸುವುದು ಅತ್ಯಂತ ಮುಖ್ಯವಾಗಿದೆ. ಸೋಂಕಿತರ ಸಂಪರ್ಕ ತಿಳಿದ ಕೂಡಲೇ ಸ್ವಯಂ ನಿರ್ಬಂಧ ಹೇರಿಕೊಂಡರೆ ನಾವು ಕೋವಿಡ್ ಸೋಂಕಿನ ಪ್ರಸರಣದ ಸರಪಳಿಯನ್ನು ಮುರಿಯ ಬಹುದು. ಆ ಮೂಲಕ ವೈರಸ್ ಇತರರಿಗೆ ಸೋಂಕದಂತೆ ನಿಗ್ರಹಿಸಬಹುದು. ಅಲ್ಲದೆ ಆರೋಗ್ಯ ವ್ಯವಸ್ಥೆಗಳನ್ನು ರಕ್ಷಿಸಬಹುದು ಎಂದು 55 ವರ್ಷದ ಮಾಜಿ ಇಥಿಯೋಪಿಯಾದ ಆರೋಗ್ಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರು ಹೇಳಿದ್ದಾರೆ.