Friday, 22nd November 2024

JD Vance: ಅಮೆರಿಕದಲ್ಲಿ ಯುವಕರು ಈ ಕಾರಣಕ್ಕಾಗಿ ತೃತೀಯ ಲಿಂಗಿಗಳಾಗುತ್ತಿದ್ದಾರೆ… ನಾಲಿಗೆ ಹರಿಬಿಟ್ಟ ಟ್ರಂಪ್‌ ಪಕ್ಷದ ಅಭ್ಯರ್ಥಿ

ವಾಷಿಂಗ್ಟನ್‌: ಅಮೆರಿಕ(America)ದಲ್ಲಿ ಇದೀಗ ಅಧ್ಯಕ್ಷೀಯ ಚುನಾವಣಾ ಕಾವು ಜೋರಾಗಿದೆ. ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಗಳು ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಚಾರದ ಸಂದರ್ಭದಲ್ಲಿ ಆರೋಪ-ಪ್ರತ್ಯಾರೋಪಗಳು, ನಿಂದನೆ-ಜಗಳಗಳು ಸರ್ವೇಸಾಮಾನ್ಯವೆಂಬಂತಾಗಿದೆ. ಈ ನಡುವೆ ಅಭ್ಯರ್ಥಿಗಳು ನೀಡುವ ವಿವಾದಾತ್ಮಕ ಹೇಳಿಕೆಗಳಿಗೂ ಏನೂ ಕಡಿಮೆ ಇಲ್ಲದಂತಾಗಿದೆ. ಇಂತಹದ್ದೇ ಒಂದು ಘಟನೆಯಲ್ಲಿ ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಜೆಡಿ ವ್ಯಾನ್ಸ್(JD Vance) ತೃತೀಯ ಲಿಂಗಿಗಳ ಕುರಿತು ಹಗುರವಾಗಿ ಮಾತನಾಡುವ ಮೂಲಕ ನಾಲಗೆ ಹರಿಬಿಟ್ಟಿದ್ದಾರೆ.

ಲೆವಿ ಲೀಗ್ಸ್ ನಲ್ಲಿ ಮಾತನಾಡಿದ ಜೆಡಿ ವ್ಯಾನ್ಸ್, ಪ್ರತಿಷ್ಠಿತ ಕಾಲೇಜುಗಳಲ್ಲಿ ದಾಖಲಾತಿ ಪಡೆಯುವ ಏಕಮಾತ್ರ ಉದ್ದೇಶದಿಂದ ಕೆಲವು ಬಿಳಿಯರ ಮಕ್ಕಳನ್ನು ತೃತೀಯ ಲಿಂಗಿಗಳನ್ನಾಗಿ ‘ಮಾಡಲು’ ಉತ್ತೇಜಿಸಲಾಗುತ್ತಿದೆ ಎಂದು ಹೇಳುವ ಮೂಲಕ ಹೊಸ ವಿವಾದದ ಕಿಡಿ ಹಚ್ಚಿದ್ದಾರೆ. ಜೋ ರೋಗನ್ ಎಂಬವರ ಜೊತೆಗಿನ ಪಾಡ್ ಕಾಸ್ಟ್ ಕಾರ್ಯಕ್ರಮದಲ್ಲಿ ವ್ಯಾನ್ಸ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದು, “ಒಂದು ವೇಳೆ ನೀವು ಮಧ್ಯಮ ವರ್ಗ ಅಥವಾ ಮೇಲ್ ಮಧ್ಯಮ ವರ್ಗದ ಬಿಳಿ ಜನಾಂಗಕ್ಕೆ ಸೇರಿರುವ ಪೋಷಕರಾಗಿದ್ದಲ್ಲಿ, ಮತ್ತು ನಿಮ್ಮ ಮಕ್ಕಳು ಹಾರ್ವರ್ಡ್ ಅಥವಾ ಯಾಲೆ ವಿಶ್ವವಿದ್ಯಾನಿಲಯಕ್ಕೆ ಹೋಗುವ ಬಗ್ಗೆ ಮಾತ್ರವೇ ನೀವು ಯೋಚಿಸುತ್ತಿದ್ದರೆ, ಖಂಡಿತವಾಗಿಯೂ ಮೇಲ್ ಮಧ್ಯಮವರ್ಗದ ಮಕ್ಕಳಿಗೆ ಆ ಕನಸು ಕಷ್ಟದ ದಾರಿಯೇ ಸರಿ.. ಆದರೆ ಅವರಿಗೆ ಈ ದೇಶದ ಡಿ.ಇ.ಐ (ಡೈವರ್ಸಿಟಿ, ಈಕ್ವಿಟಿ ಮತ್ತು ಇನ್ ಕ್ಲೂಷನ್) ಆಡಳಿತ ವ್ಯವಸ್ಥೆಯಲ್ಲಿ ಭಾಗವಹಿಸಲು ಇರುವ ಏಕೈಕ ಮಾರ್ಗವೆಂದರೆ ಅವರು ತೃತೀಯ ಲಿಂಗಿಗಳಾಗಿ ಬದಲಾಗುವುದು..’ ಎಂಬ ಹೇಳಿಕೆಯನ್ನು ಅವರು ನೀಡಿದ್ದಾರೆ.

ಇಷ್ಟು ಮಾತ್ರವಲ್ಲದೇ ವ್ಯಾನ್ಸ್ ಅವರು ತೃತೀಯ ಲಿಂಗಿಗಳ ಕೆಲ ಹಕ್ಕುಗಳ ಕುರಿತಾಗಿಯೂ ನೀಡಿರುವ ಹೇಳಿಕೆಗಳು ಇದೀಗ ಅಮೆರಿಕಾದಲ್ಲಿ ಒಂದು ವರ್ಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. “ನಾನು ಎರಡು ವರ್ಷ ಪ್ರಾಯದ ಮಗಳೊಬ್ಬಳ ತಂದೆಯಾಗಿದ್ದೇನೆ. ಆದರೆ ನಾನು ಆಕೆ ಯಾವುದೇ ಅಥ್ಲೆಟಿಕ್ ಕೂಟಗಳಲ್ಲಿ ಭಾಗವಹಿಸುವುದನ್ನು ಇಷ್ಟಪಡುವುದಿಲ್ಲ, ಯಾಕೆಂದರೆ ಆಕೆಯ ಮೇಲೆ ಮಾರಣಾಂತಿಕ ಹಲ್ಲೆಯಾಗುವ ಸಾಧ್ಯತೆಗಳಿವೆ, ಇದು ಹೇಗೆಂದರೆ ಕ್ರೀಡೆಗಳಲ್ಲಿ ಆರು ಇಂಚಿನ ಒಬ್ಬ ಹುಡುಗ ಆಕೆಯೊಂದಿಗೆ ಸ್ಪರ್ಧೆ ಮಾಡಬಹುದಾಗಿದೆ” ಎಂದು ಅವರು ಹೇಳಿದ್ದಾರೆ.

ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿರುವ ವ್ಯಾನ್ಸ್ ಪ್ರಕಾರ ಡೋನಾಲ್ಡ್ ಟ್ರಂಪ್ ಅವರಿಗೆ ‘ಸಾಮಾನ್ಯ ಸಲಿಂಗಿ’ಗಳ ಮತಗಳು ಬೀಳುವ ಸಾಧ್ಯತೆಗಳಿವೆಯಂತೆ. ಇನ್ನು ಈ ಪಾಡ್ ಕಾಸ್ಟ್ ಕಾರ್ಯಕ್ರಮದಲ್ಲಿ ವ್ಯಾನ್ಸ್ ಅಮೆರಿಕಾದಲ್ಲಿರುವ ಗರ್ಭಪಾತ ಕಾನೂನುಗಳ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ.

ಅವರ ಪ್ರಕಾರ ಮಹಿಳೆಯರು ತಮ್ಮ ಗರ್ಭಪಾತಗಳನ್ನು ಸಾರ್ವಜನಿಕವಾಗಿ ಸಂಭ್ರಮಿಸುತ್ತಿದ್ದಾರೆ ಮತ್ತು ಬರ್ತ್ ಡೇ ಕೇಕ್ ಕತ್ತರಿಸಿ ಅವುಗಳ ಫೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ. ಹೀಗೆ ಮಾಡುವುದರ ಬಗ್ಗೆ ವ್ಯಾನ್ಸ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.ಈ ರೀತಿಯಾಗಿ ‘ದಿ ಜೋ ರೋಗನ್ ಎಕ್ಸ್ ಪಿರಿಯನ್ಸ್’ ಎಂಬ ಶೀರ್ಷಿಕೆಯಲ್ಲಿ ಪ್ರಸಾರಗೊಳ್ಳುತ್ತಿರುವ ಈ ಪಾಡ್ ಕಾಸ್ಟ್ ಮೂರು ನಾಲ್ಕು ಕಂತುಗಳನ್ನು ಹೊಂದಿದ್ದು, ಇದರಲ್ಲಿ ವ್ಯಾನ್ಸ್ ಅವರು ಡೊನಾಲ್ಡ್ ಟ್ರಂಪ್ ಮೇಲೆ ನಡೆದ ಹತ್ಯಾ ಯತ್ನ ಮತ್ತು ಪರಿಸರ ಬದಲಾವಣೆ ಸೇರಿದಂತೆ ಹಲವಾರು ವಿಚಾರಗಳ ಕುರಿತಾಗಿ ತಮ್ಮ ಅಬಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Gold Country: ಅತಿ ಹೆಚ್ಚು ಚಿನ್ನ ಹೊಂದಿದ ದೇಶಗಳಲ್ಲಿ ಅಮೆರಿಕ ನಂ.1; ಭಾರತಕ್ಕೆ ಎಷ್ಟನೇ ಸ್ಥಾನ?