Wednesday, 23rd October 2024

Yahya Sinwar: ಹಮಾಸ್ ನಾಯಕ ಯಾಹ್ಯಾ ಸಿನ್ವರ್‌ನನ್ನು ಹತ್ಯೆಗೈದು ಬೆರಳು ಕತ್ತರಿಸಿದ ಇಸ್ರೇಲ್ ಸೈನಿಕರು; ಕಾರಣವೇನು?

Yahya Sinwar

ಜೆರುಸಲೇಂ: ಹಮಾಸ್‌ ನಾಯಕ ಯಾಹ್ಯಾ ಸಿನ್ವರ್‌ (Yahya Sinwar) ಹೊಡೆದುರಳಿಸಿದ ಇಸ್ರೇಲ್‌ ಸೇನೆ (Israeli military) ಸೇಡು ತೀರಿಸಿಕೊಂಡಿದೆ. ಗಾಜಾದ ಮೇಲೆ ದಾಳಿ ನಡೆಸಿ ಯಾಹ್ಯಾ ಸಿನ್ವರ್‌ನನ್ನು ಹೊಡೆದುರುಳಿಸಿರುವ ಇಸ್ರೇನ್ ಸೇನೆ ಆತನ ಕೊನೆ ಕ್ಷಣದ ದೃಶ್ಯಗಳನ್ನು ಬಿಡುಗಡೆ ಮಾಡಿದೆ. ಯಾಹ್ಯಾ ಸಿನ್ವರ್‌ ಹತನಾಗಿರುವುದನ್ನು ಹಮಾಸ್ ಸಹ ದೃಢಪಡಿಸಿದೆ. ಈ ಮಧ್ಯೆ ಇಸ್ರೇಲ್‌ ಸೈನಿಕರು ಡಿಎನ್‌ಎ ಪರೀಕ್ಷೆಗಾಗಿ, ಸಿನ್ವರ್‌ನ ಸಾವನ್ನು ದೃಢಪಡಿಸಲು ಆತನ ಕೈ ಬೆರಳನ್ನು ಕತ್ತರಿಸಿ ಒಯ್ದಿದ್ದಾರೆ.

ಸದ್ಯ ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಫೋಟೊಗಳು ಮತ್ತು ವಿಡಿಯೊಗಳಲ್ಲಿ ತಲೆಯ ಗಾಯದೊಂದಿಗೆ, ತೋರು ಬೆರಳನ್ನು ಕತ್ತರಿಸಿದ ಸ್ಥಿತಿಯಲ್ಲಿ ಕಟ್ಟಡದ ಅವಶೇಷಗಳಲ್ಲಿ ಅರ್ಧ ಹೂತು ಹೋಗಿರುವ ಸಿಲ್ವರ್‌ನ ಮೃತದೇಹ ಕಂಡು ಬಂದಿದೆ. ಯಾಹ್ಯಾ ಸಿನ್ವರ್‌ ಸುಮಾರು 20 ವರ್ಷಗಳ ಕಾಲ ಇಸ್ರೇಲ್ ಜೈಲಿನಲ್ಲಿದ್ದ. ಹಾಗಾಗಿ ಇಸ್ರೇಲ್ ಯಾಹ್ಯಾ ಸಿನ್ವರ್‌ನ ಡಿಎನ್‌ಎ ಪ್ರೊಫೈಲ್ ಹೊಂದಿದೆ. 2011ರಲ್ಲಿ ಕೈದಿಗಳ ಅದಲು-ಬದಲು ಪ್ರಕ್ರಿಯೆ ಸಂದರ್ಭದಲ್ಲಿ ಯಾಹ್ಯಾ ಸಿನ್ವರ್‌ನನ್ನು ಬಿಡುಗಡೆಗೊಳಿಸಲಾಗಿತ್ತು. ಬಿಡುಗಡೆಯ ಅನಂತರ ಸಿನ್ವಾರ್ ಮತ್ತೆ ಹಮಾಸ್‌ನ ಭಯೋತ್ಪಾದಕ ಸಂಘಟನೆಯ ಉನ್ನತ ಹುದ್ದೆಗೆ ಏರಿದ್ದು, 2012ರಲ್ಲಿ ಆತನನ್ನು ರಾಜಕೀಯ ಬ್ಯೂರೋಗೆ ಆಯ್ಕೆ ಮಾಡಲಾಗಿತ್ತು.

ಸೈನಿಕರು ತಂದಿರುವ ಬೆರಳಿನ ಡಿಎನ್‌ಎ ಮತ್ತು ಯಾಹ್ಯಾ ಸಿನ್ವರ್‌ನ ಡಿಎನ್‌ಎ ಪ್ರೊಫೈಲ್‌ ಪರಸ್ಪರ ಹೊಂದಾಣಿಕೆಯಾಗಿದೆ ಎಂದು ಇಸ್ರೇಲ್ ನ್ಯಾಷನಲ್ ಸೆಂಟರ್ ಆಫ್ ಫೋರೆನ್ಸಿಕ್ ಮೆಡಿಸಿನ್‌ನ ಮೂಲಗಳು ದೃಢಪಡಿಸಿವೆ ಎಂದು ಸಿಎನ್‌ಎನ್‌ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ದೃಢವಾದ ಬಳಿಕವೇ ಇಸ್ರೇಲ್ ಯಾಹ್ಯಾ ಸಿನ್ವರ್‌ ಹತ್ಯೆಯ ಬಗ್ಗೆ ಎಂದು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಸೈನಿಕರು ಮೊದಲು ಯಾಹ್ಯಾ ಸಿನ್ವರ್‌ನ ಹಲ್ಲುಗಳಿಂದ ಗುರುತು ದೃಢಪಡಿಸಲು ಪ್ರಯತ್ನಿಸಿದ್ದರು. ಸಂಪೂರ್ಣ ಖಚಿತತೆಗಾಗಿ ಬೆರಳು ಕತ್ತರಿಸಿ ತೆಗೆದುಕೊಂಡು ಹೋಗಿದ್ದರು ಎನ್ನಲಾಗಿದೆ.

ವಿಡಿಯೊ ವೈರಲ್‌

ಸದ್ಯ ಇಸ್ರೇಲ್‌ ಸೇನೆ ಬಿಡುಗಡೆ ಮಾಡಿರುವ ಯಾಹ್ಯಾ ಸಿನ್ವರ್‌ನ ಕೊನೆಯ ಕ್ಷಣದ ವಿಡಿಯೊ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಶೆಲ್ ದಾಳಿಯಿಂದ ಗೋಡೆಗಳು ಹಾರಿಹೋಗಿರುವ ಪಾಳುಬಿದ್ದ ಗಾಜಾದ ಅಪಾರ್ಟ್‌ಮೆಂಟ್‌ ಒಂದರಲ್ಲಿ ಯಾಹ್ಯಾ ಸಿನ್ವರ್‌ ಕುಳಿತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಗಾಯಗೊಂಡ ಸಿನ್ವರ್ ಸೋಫಾದ ಮೇಲೆ ಕುಳಿತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಅವರ ಬಲಗೈ ತೀವ್ರವಾಗಿ ಗಾಯಗೊಂಡಿರುವುದು ಕಂಡುಬಂದಿದೆ. ಡ್ರೋನ್ ಸಮೀಪಿಸುತ್ತಿದ್ದಂತೆ ಯಾಹ್ಯಾ ಸಿನ್ವರ್‌ ಅದರತ್ತ ಕೋಲೊಂದನ್ನು ಎಸೆಯುವುದು ಸೆರೆಯಾಗಿದೆ.

ಯಾಹ್ಯಾ ಸಿನ್ವರ್ 2023ರಲ್ಲಿ ಇಸ್ರೇಲ್ ಮೇಲೆ ನಡೆದ ಭಯಾನಕ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ. ಯಾಹ್ಯಾ ಸಿನ್ವರ್ ಅಂದಿನಿಂದ ಇಸ್ರೇಲ್‌ನ ವಾಂಟೆಡ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ. 2023ರ ಅಕ್ಟೋಬರ್ 7ರಂದು ಹಮಾಸ್ ನೇತೃತ್ವದ ಬಂದೂಕುಧಾರಿಗಳು ಇಸ್ರೇಲ್ ಮೇಲೆ ದಾಳಿ ನಡೆಸಿ ಸುಮಾರು 1,200 ಜನರನ್ನು ಕೊಂದಿದ್ದರು. 250ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಗಾಜಾಕ್ಕೆ ಕರೆದೊಯ್ದಿದ್ದರು. ಇದೀಗ ಆತನ ಮೇಲೆ ಇಸ್ರೇಲ್‌ ಭರ್ಜರಿಯಾಗಿಯೇ ಸೇಡು ತೀರಿಸಿಕೊಂಡಿದೆ.

ತನ್ನ ನಾಯಕ ಯಾಹ್ಯಾ ಸಿನ್ವರ್ ಇಸ್ರೇಲ್ ದಾಳಿಯಲ್ಲಿ ಸತ್ತಿದ್ದಾನೆ ಎಂದು ಹಮಾಸ್ ಮುಖಂಡ ಖಲೀಲ್ ಅಲ್ ಯಾಹ್ಯಾ ಖಚಿತಪಡಿಸಿದ್ದಾನೆ.

Yahya Sinwar: ಯಾಹ್ಯಾ ಸಿನ್ವರ್‌ ಹತ್ಯೆ; ಯಾರಾಗ್ತಾರೆ ಮುಂದಿನ ಹಮಾಸ್‌ ನಾಯಕ? ಇಲ್ಲಿದೆ ಸಂಭಾವ್ಯರ ಪಟ್ಟಿ