Monday, 9th December 2024

Yahya Sinwar: ‘ಯೂನಿಸ್‌ನ ಕಟುಕ’ ಯಾಹ್ಯಾ ಸಿನ್ವಾರ್‌ನನ್ನೇ ಇಸ್ರೇಲ್‌ ಟಾರ್ಗೆಟ್ ಮಾಡಿ ಕೊಂದಿದ್ದು ಯಾಕೆ?

Yahya Sinwar

ಇಸ್ರೇಲ್ (Israel) ಮೇಲೆ 2023ರ ಅಕ್ಟೋಬರ್ 7 ರಂದು ನಡೆದ ದಾಳಿಯ ಮಾಸ್ಟರ್ ಮೈಂಡ್ (mastermind) ಹಮಾಸ್ ನಾಯಕ (Hamas leader) ಯಾಹ್ಯಾ ಸಿನ್ವಾರ್ (Yahya Sinwar) ಅನ್ನು ಸರಿಸುಮಾರು ಒಂದು ವರ್ಷಗಳ ಬಳಿಕ ಇಸ್ರೇಲ್ ಸೇನೆ ಕೊಂದು ಹಾಕಿದೆ. ಯಾಹ್ಯಾ ಸಿನ್ವಾರ್ ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ (world’s most wanted terrorists) ಒಬ್ಬನಾಗಿದ್ದು, ಗುರುವಾರ ಗಾಜಾದಲ್ಲಿ ಆತನನ್ನು ಹತ್ಯೆ ಮಾಡಲಾಗಿದೆ.

2023ರ ಅಕ್ಟೋಬರ್ 7 ರಂದು ನಡೆದ ದಾಳಿಯಲ್ಲಿ ಇಸ್ರೇಲ್ ನ 1,200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಹಮಾಸ್‌ನ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥನಾಗಿದ್ದ ಸಿನ್ವಾರ್‌ “ಬುಚರ್ ಆಫ್‌ ಖಾನ್ ಯೂನಿಸ್‌ ” ಎಂದೇ ಕುಖ್ಯಾತಿ ಪಡೆದಿದ್ದ. ಇಬ್ಬರು ಇಸ್ರೇಲ್ ಸೈನಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಸಿನ್ವಾರ್‌ನನ್ನು ಎರಡು ದಶಕಗಳ ಕಾಲ ಜೈಲಿನಲ್ಲಿ ಬಂಧಿಸಲಾಗಿತ್ತು. ಗಿಲಾಡ್ ಶಾಲಿಟ್ ಒಪ್ಪಂದದ ಹಿನ್ನೆಲೆಯಲ್ಲಿ ಆತನನ್ನು 2011 ರಲ್ಲಿ ಬಿಡುಗಡೆ ಮಾಡಲಾಗಿತ್ತು.

ಇಸ್ರೇಲ್ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಅವರು ಸಿನ್ವಾರ್‌ನನ್ನು ‘ಸಾಮೂಹಿಕ ಕೊಲೆಗಾರ’ ಎಂದು ಕರೆದಿದ್ದಾರೆ. ಅಲ್ಲದೆ ಅಕ್ಟೋಬರ್ 7ರ ಹತ್ಯಾಕಾಂಡ ಮತ್ತು ದೌರ್ಜನ್ಯಗಳಿಗೆ ಜವಾಬ್ದಾರ ಎಂದು ಹೇಳಿದ್ದಾರೆ.

ಸಿನ್ವಾರ್ ಹತ್ಯೆಯನ್ನು ‘ಜಗತ್ತಿಗೆ ಒಳ್ಳೆಯ ದಿನ’ ಎಂದು ಯುಎಸ್ ಅಧ್ಯಕ್ಷ ಜೋ ಬೈಡೆನ್ ಶ್ಲಾಘಿಸಿದ್ದಾರೆ. ಗಾಜಾ ಕದನ ವಿರಾಮ ಮತ್ತು ಒತ್ತೆಯಾಳು ಒಪ್ಪಂದಕ್ಕೆ ಆತ ಪ್ರಮುಖ ಅಡಚಣೆಯಾದ್ದ ಎಂದು ಅಭಿಪ್ರಾಯಪಟ್ಟಿದೆ. ಈ ಘಟನೆ ಇಸ್ರೇಲ್‌, ಯುನೈಟೆಡ್ ಸ್ಟೇಟ್ಸ್‌ ಮತ್ತು ಜಗತ್ತಿಗೆ ಒಳ್ಳೆಯ ದಿನ. ಈಗ ಮಧ್ಯಪ್ರಾಚ್ಯದಲ್ಲಿ ಶಾಂತಿಗೆ ಅವಕಾಶ ಇದೆ ಎಂದು ಬೈಡೆನ್ ಹೇಳಿದರು.

Yahya Sinwar

ರಾಜಿಯಾಗದ ಹಮಾಸ್ ಅಧಿಕಾರಿಗಳಲ್ಲಿ ಒಬ್ಬ ಸಿನ್ವಾರ್

1962ರಲ್ಲಿ ಖಾನ್ ಯೂನಿಸ್‌ನಲ್ಲಿ ಜನಿಸಿದ ಸಿನ್ವಾರ್ ಹಮಾಸ್‌ನ ರಾಜಿಯಾಗದ ಉನ್ನತ ಅಧಿಕಾರಿಗಳಲ್ಲಿ ಒಬ್ಬ ಎನ್ನಲಾಗಿದೆ. ಗಾಜಾದ ಇಸ್ಲಾಮಿಕ್ ವಿಶ್ವವಿದ್ಯಾನಿಲಯದಲ್ಲಿ ಕುಕೃತ್ಯದಲ್ಲಿ ತೊಡಗಿದ್ದಕ್ಕಾಗಿ 1980ರ ದಶಕದ ಆರಂಭದಲ್ಲಿ ಇಸ್ರೇಲ್‌ ಆತನನ್ನು ಪದೇ ಪದೆ ಬಂಧಿಸಿತ್ತು. ಪದವಿಯ ಅನಂತರ ಇಸ್ರೇಲ್ ವಿರುದ್ಧ ಹೋರಾಟಗಾರರ ಸಂಘಟನೆ ಸ್ಥಾಪಿಸಿದ್ದ ಸಿನ್ವಾರ್‌. ಅದನ್ನು ಆ ಬಳಿಕ ಹಮಾಸ್‌ನ ಮಿಲಿಟರಿ ವಿಭಾಗವಾದ ಕಸ್ಸಾಮ್ ಬ್ರಿಗೇಡ್ಸ್ ಆಗಿ ಮಾರ್ಪಡಿಸಿದ್ದ.

1987ರಲ್ಲಿ ಶೇಖ್ ಅಹ್ಮದ್ ಯಾಸಿನ್ ಸ್ಥಾಪಿಸಿದ ತಂಡವನ್ನು ಸೇರಿದ ತಕ್ಷಣ ಸಿನ್ವಾರ್ ಹಮಾಸ್ ನಾಯಕರಲ್ಲಿ ಒಬ್ಬನಾದ. ಮುಂದಿನ ವರ್ಷವೇ ಇಸ್ರೇಲ್ ಸೇನೆ ಆತನನ್ನು ಬಂಧಿಸಿತ್ತು. ಇಬ್ಬರು ಇಸ್ರೇಲ್ ಸೈನಿಕರು ಮತ್ತು ನಾಲ್ಕು ಶಂಕಿತ ಪ್ಯಾಲೇಸ್ತೀನ್‌ ಗೂಢಚಾರರನ್ನು ಸೆರೆ ಹಿಡಿದು ಕೊಂದ ಆರೋಪದಲ್ಲಿ ನಾಲ್ಕು ಬಾರಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇದು 426 ವರ್ಷಗಳ ಜೈಲು ಶಿಕ್ಷೆಗೆ ಸಮಾನವಾಗಿತ್ತು.

ಜೈಲಿನಲ್ಲಿದ್ದು ಇಸ್ರೇಲ್ ವ್ಯವಹಾರ, ರಾಜಕೀಯ ಕಲಿತ ಸಿನ್ವಾರ್

ಇಸ್ರೇಲ್ ಜೈಲಿನಲ್ಲಿ 23 ವರ್ಷ ಕಳೆದ ಸಿನ್ವಾರ್ ಅಲ್ಲಿ ಹೀಬ್ರೂ ಭಾಷೆ ಕಲಿತು ಇಸ್ರೇಲ್ ವ್ಯವಹಾರ, ರಾಜಕೀಯದ ಬಗ್ಗೆ ತಿಳಿದುಕೊಂಡಿದ್ದ. ಖೈದಿಗಳ ವಿನಿಮಯ ಒಪ್ಪಂದದ ಭಾಗವಾಗಿ 2011ರಲ್ಲಿ ಸಿನ್ವಾರ್‌ನನ್ನು ಬಿಡುಗಡೆ ಮಾಡಲಾಗಿತ್ತು.

ಬಿಡುಗಡೆಯ ಅನಂತರ ಸಿನ್ವಾರ್ ಮತ್ತೆ ಹಮಾಸ್‌ನ ಭಯೋತ್ಪಾದಕ ಸಂಘಟನೆಯ ಉನ್ನತ ಹುದ್ದೆಗೆ ಏರಿದ್ದು, 2012ರಲ್ಲಿ ಆತನನ್ನು ರಾಜಕೀಯ ಬ್ಯೂರೋಗೆ ಆಯ್ಕೆ ಮಾಡಲಾಗಿತ್ತು. ಕಸ್ಸಾಮ್ ಬ್ರಿಗೇಡ್‌ಗಳೊಂದಿಗೆ ಸಮನ್ವಯಗೊಳಿಸುವ ಕಾರ್ಯ ವಹಿಸಲಾಯಿತು.

2014ರಲ್ಲಿ ಗಾಜಾ ವಿರುದ್ಧ ಇಸ್ರೇಲ್‌ನ ಏಳು ವಾರಗಳ ಆಕ್ರಮಣದ ಸಮಯದಲ್ಲಿ ಹಮಾಸ್ ನ ರಾಜಕೀಯ ಮತ್ತು ಮಿಲಿಟರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಹೀಗಾಗಿ ಸಿನ್ವಾರ್‌ನನ್ನು ಯುನೈಟೆಡ್ ಸ್ಟೇಟ್ಸ್‌ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಎಂದು ಕರೆದಿತ್ತು.

ಹನಿಯೆಹ್‌ ಉತ್ತರಾಧಿಕಾರಿ

2017ರಲ್ಲಿ ಗಾಜಾದಲ್ಲಿ ಹಮಾಸ್ ಮುಖ್ಯಸ್ಥರಾಗಿ ಆಯ್ಕೆಯಾದ ಸಿನ್ವಾರ್, ರಾಜಕೀಯ ಬ್ಯೂರೋದ ಅಧ್ಯಕ್ಷರಾಗಿ ಆಯ್ಕೆಯಾದ ಇಸ್ಮಾಯಿಲ್ ಹನಿಯೆಹ್‌ನ ಉತ್ತರಾಧಿಕಾರಿಯಾದ. ಹನಿಯೆಹ್‌ ಹತ್ಯೆಯಾದ ಬಳಿಕ ಆತನ ಜವಾಬ್ದಾರಿಯನ್ನು ವಹಿಸಿಕೊಂಡ.

ದೊಡ್ಡ ಯೋಜನೆ

ಗಡಿಯಾಚೆಗೆ ಇಸ್ರೇಲ್‌ನ ಮಿಲಿಟರಿ ಮತ್ತು ನಾಗರಿಕ ತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸುವುದು ಹಮಾಸ್‌ನ ದೊಡ್ಡ ಯೋಜನೆಯಾಗಿತ್ತು. ಈ ಕಾರ್ಯತಂತ್ರದ ಕುರಿತು ಆರಂಭಿಕ ಚರ್ಚೆಗಳು 2022ರ ಜನವರಿಯಲ್ಲಿ ಪ್ರಾರಂಭವಾಗಿತ್ತು. ಇರಾನ್‌ನ ಅಧಿಕಾರಿಗಳಿಗೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ 2021ರ ಜೂನ್‌ನಲ್ಲಿ ಬರೆದ ಪತ್ರಗಳಲ್ಲಿ, ಇಸ್ರೇಲ್‌ನ ಮೇಲೆ ದೊಡ್ಡ ಪ್ರಮಾಣದ ದಾಳಿಗೆ ಆರ್ಥಿಕ ಮತ್ತು ಮಿಲಿಟರಿ ದಾಳಿಗೆ ಬೆಂಬಲ ಕೋರಿಕೆಯಿತ್ತು. ಪತ್ರಗಳಲ್ಲಿ ಸಿನ್ವಾರ್ ಇಸ್ರೇಲ್‌ನೊಂದಿಗಿನ ಘರ್ಷಣೆಯ ಸಮಯದಲ್ಲಿ ಹಮಾಸ್‌ಗೆ ಉಂಟಾದ ವ್ಯಾಪಕ ಹಾನಿಯ ಬಗ್ಗೆ ವಿವರಿಸಿದ್ದ, ಈ ನಷ್ಟವನ್ನು ತುಂಬಲು ಇರಾನಿಯನ್ನರು ಸಹಾಯ ಮಾಡುವಂತೆ ಕೇಳಿಕೊಂಡಿದ್ದ.

2021ರಲ್ಲಿ ಬರೆದ ಪತ್ರಗಳಲ್ಲಿ ಹಮಾಸ್‌ನ ಗಾಜಾ ನಾಯಕ ಹೆಚ್ಚುವರಿ ಆರ್ಥಿಕ ಮತ್ತು ಮಿಲಿಟರಿ ಬೆಂಬಲಕ್ಕಾಗಿ ದೇಶದ ಸರ್ವೋಚ್ಚ ನಾಯಕ ಅಲಿ ಖಮೇನಿ ಸೇರಿದಂತೆ ಹಲವಾರು ಹಿರಿಯ ಇರಾನಿನ ಅಧಿಕಾರಿಗಳಿಗೆ ಮನವಿ ಮಾಡಿದ್ದ ಎನ್ನಲಾಗಿದೆ.

Yahya Sinwar

9/11 ಶೈಲಿಯ ದಾಳಿ ಯೋಜನೆ

ದಾಳಿಯ ಯೋಜನೆಯ ಕುರಿತಾಗಿ ಹಲವಾರು ರೀತಿಯಲ್ಲಿ ಚರ್ಚೆ ನಡೆಸಲಾಗಿದೆ. ಇದರಲ್ಲಿ ಟೆಲ್ ಅವಿವ್‌ನಲ್ಲಿರುವ ಅಜ್ರಿಯೆಲಿ ಟವರ್ಸ್‌ಗೆ ದಾಳಿ ಮಾಡುವುದಾಗಿತ್ತು. ಅಮೆರಿಕದ ಅವಳಿ ಕಟ್ಟಡಗಳಿಗೆ ಸೆಪ್ಟೆಂಬರ್ 2011ರಲ್ಲಿ ತಾಲಿಬಾನ್‌ ದಾಳಿ ಮಾಡಿದ ರೀತಿಯ ಯೋಜನೆಯಾಗಿತ್ತು.

2022ರ ಸೆಪ್ಟೆಂಬರ್ ವೇಳೆಗೆ ಹಮಾಸ್ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಲು ಸಿದ್ಧವಾಗಿತ್ತು. ಇದು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸುವ ಮೊದಲು ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡುವ ಯೋಜನೆ ರೂಪಿಸಿತ್ತು. ಆದರೆ 2023ರ ಅಕ್ಟೋಬರ್ 7ರ ಆಕ್ರಮಣದಲ್ಲಿ ಇದು ಸಾಧ್ಯವಾಗಲಿಲ್ಲ. 2023ರ ಆಗಸ್ಟ್ ನಲ್ಲಿ ಯೋಜಿತ ದಾಳಿಯ ಕಾರ್ಯಾಚರಣೆಯ ವಿವರಗಳನ್ನು ಚರ್ಚಿಸಲು ಸಿನ್ವಾರ್‌ ತನ್ನ ಅಧಿಕಾರಿಗಳ ಮೂಲಕ ಇರಾನ್‌ ಅಧಿಕಾರಿಗಳನ್ನು ಭೇಟಿ ಮಾಡಿದ್ದರು.

2023ರ ಅಕ್ಟೋಬರ್ 7 ರಂದು ಹಮಾಸ್ ತನ್ನ ಕಾರ್ಯಾಚರಣೆ ನಡೆಸಿತ್ತು. ಇದರ ಪರಿಣಾಮವಾಗಿ ದಕ್ಷಿಣ ಇಸ್ರೇಲ್‌ನಾದ್ಯಂತ 1,200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಅಲ್ಲದೆ, 250 ವ್ಯಕ್ತಿಗಳನ್ನು ಅಪಹರಿಸಲಾಗಿತ್ತು

Yahya Sinwar: ಯಾಹ್ಯಾ ಸಿನ್ವರ್‌ ಹತ್ಯೆ; ಯಾರಾಗ್ತಾರೆ ಮುಂದಿನ ಹಮಾಸ್‌ ನಾಯಕ? ಇಲ್ಲಿದೆ ಸಂಭಾವ್ಯರ ಪಟ್ಟಿ

ಈ ವರ್ಷದ ಆರಂಭದಲ್ಲಿ ಇರಾನ್ ಮತ್ತು ಲೆಬನಾನ್‌ ಬೈರುತ್‌ ಮೇಲೆ ಇಸ್ರೇಲ್ ನಡೆಸಿದ ಡ್ರೋನ್ ದಾಳಿಯಲ್ಲಿ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಮತ್ತು ಉಪ ಮುಖ್ಯಸ್ಥ ಸಲೇಹ್ ಅಲ್-ಅರೂರಿ ಕೂಡ ಮೃತಪಟ್ಟಿದ್ದ. ಯಾಹ್ಯಾ ಸಿನ್ವಾರ್ ಮತ್ತು ಆತನ ಸಹೋದರ ಮುಹಮ್ಮದ್ ಕೂಡ ಇಸ್ರೇಲ್ ಪಡೆಗಳ ದಾಳಿಗೆ ಇದೀಗ ಬಲಿಯಾಗಿದ್ದಾರೆ.