ವಿಜ್ಞಾನದ ಹಾದಿಯೆಂದರೆ ವಿಕಾಸ ಹಾದಿಯೂ ಹೌದು. ಆರೋಗ್ಯ ವಿಜ್ಞಾನವೂ ಹಾಗೆಯೇ, ಇಂದಿನ ಹೌದಾಗಿದ್ದಿದ್ದು, ನಾಳೆ ಅಲ್ಲ ಎನ್ನುವಂಥ ಸಂಶೋಧನೆಗಳು ಬರಬಹುದು. ಆದರೆ ಇವೆಲ್ಲಕ್ಕೂ ವೈಜ್ಞಾನಿಕ ತಳಹದಿ ಎಂಬುದು ಇರುತ್ತದೆ. ಆದರೆ ಮಿಥ್ಯೆಗಳು ಹಾಗಲ್ಲ, ಅದರ ಮೂಲಕ್ಕೂ ಅದು ಬೆಳೆದ ರೀತಿಗೂ ಸಂಬಂಧವೇ ಇರುವುದಿಲ್ಲ. ಸತ್ಯದ ಸೆರಗಿನ ಅಂಚು ಹಿಡಿದ ಮಿಥ್ಯೆ, ಎಲ್ಲರಿಗೂ ಕಾಣುವಂತೆ ದೊಡ್ಡದಾಗಿ ಹಾರಾಡುತ್ತಿರುತ್ತದೆ. ಎಲ್ಲರಿಗೂ ಅದು ಸತ್ಯ ಮತ್ತು ಅದೇ ಸತ್ಯ ಎಂಬ ಭ್ರಮೆಯನ್ನು ಹುಟ್ಟಿಸುತ್ತದೆ. ಆರೋಗ್ಯದ ಕುರಿತಾದ ಯಾವ ಮಿಥ್ಯೆಗಳವು ಮತ್ತು ಅದರಡಿಗಿನ ಸತ್ಯವೇನು ಎಂಬುದನ್ನೀಗ ತಿಳಿಯೋಣ(Health Tips).
ಪಿಷ್ಟವೆಂದರೆ ದೇಹದ ಶತ್ರು:
ಪಿಷ್ಟ ಅಥವಾ ಕಾರ್ಬ್ ಇಲ್ಲದಿದ್ದರೆ ದೇಹವಿಲ್ಲ ಎಂಬುದು ಸತ್ಯ. ಇಡೀ ಶರೀರಕ್ಕೆ ಬೇಕಾದ ಶಕ್ತಿಯನ್ನು ಒದಗಿಸುವ ಮುಖ್ಯ ಮೂಲವಿದು. ಅಂಥಾ ಮೂಲವನ್ನು ಸಂಪೂರ್ಣ ಕಿತ್ತುಕೊಂಡರೆ ಆಗುವ ದುಷ್ಟಪರಿಣಾಮಗಳು ಒಂದೆರಡೇ ಅಲ್ಲ. ಆದರೆ ಸೂಕ್ತವಾದ ಪಿಷ್ಟಮೂಲಗಳನ್ನು ಆಯ್ಕೆ ಮಾಡಿಕೊಳ್ಳುವುದು ಆರೋಗ್ಯ ರಕ್ಷಣೆಯಲ್ಲಿ ʻಗೇಮ್ ಚೇಂಜರ್ʼ ಎನಿಸಬಲ್ಲದು. ಅಂದರೆ ಸರಳ ಮತ್ತು ಸಂಸ್ಕರಿತ ಪಿಷ್ಟಗಳ ಬದಲಿಗೆ ಸಂಕೀರ್ಣ ಪಿಷ್ಟಗಳು ದೇಹಕ್ಕೆ ಸಿಕ್ಕಿದರೆ ಆರೋಗ್ಯವೂ ದೊರೆತಂತೆ.
ದಿನಕ್ಕೆ 8 ಗ್ಲಾಸ್ ನೀರು ಬೇಕು:
ದೇಹದ ಆರೋಗ್ಯ ಚೆನ್ನಾಗಿರುವುದಕ್ಕೆ ನೀರು ಭರಪೂರ ಬೇಕು ಎನ್ನುವುದು ಹೌದು. ಆದರೆ ʻ8 ಗ್ಲಾಸ್ʼ ಎನ್ನುವುದನ್ನು ಎಲ್ಲರಿಗೂ ಅನ್ವಯಿಸುವುದು ಕಷ್ಟ. ಕೆಲವರಿಗೆ ಒಂದೆರಡು ಕಡಿಮೆ ಸಾಕಾಗಬಹುದು. ಬಿಸಿಲಿನಲ್ಲಿ ಇರುವವರಿಗೆ ಅಥವಾ ದೈಹಿಕ ಶ್ರಮದಿಂದ ಬೆವರುವವರಿಗೆ ಇನ್ನೂ ಹೆಚ್ಚು ಬೇಕಾಗಬಹುದು. ಆದರೆ ಶರೀರದ ಅಗತ್ಯಕ್ಕಿಂತ ಕಡಿಮೆ ನೀರು ಕುಡಿಯುವ ಹಾಗಿಲ್ಲ ಎನ್ನುವುದನ್ನು ಮಾತ್ರ ಮರೆಯುವಂತಿಲ್ಲ.
ಉಪವಾಸದಿಂದ ತೂಕ ಇಳಿಸಬಹುದು:
ಹೀಗೆನ್ನುತ್ತಾ ಎರ್ರಾಬಿರ್ರಿ ಡಯೆಟ್ ಮಾಡುವವರು ಬಹಳ ಮಂದಿ. ಇದರಿಂದ ಆರೋಗ್ಯಕ್ಕೆ ಅಪಾಯವನ್ನು ತಂದುಕೊಳ್ಳುವವರೂ ಸಾಕಷ್ಟು ಜನರಿದ್ದಾರೆ. ಉಪವಾಸ ಅಥವಾ ಯಾವುದೇ ಚುಟುಕು ಡಯೆಟ್‌ನಿಂದ ಮೊದಲಿಗೆ ತೂಕ ಇಳಿದಂತೆ ಅನಿಸಿದರೂ ಅದು ಸುಸ್ಥಿರವಾಗಿದ್ದಲ್ಲ. ಆದರೆ ಇದರಿಂದ ಚಯಾಪಚಯ ಕುಂಠಿತವಾಗಿ ಸಮಸ್ಯೆಗಳು ಅಮರಿಕೊಳ್ಳಬಹುದು. ಜೊತೆಗೆ ಹಸಿವು ತಡೆಯಲಾರದೆ ಅತಿಯಾಗಿ ತಿನ್ನುವಂತಾಗಬಹುದು ಅಥವಾ ಶರೀರ ಸಿಕ್ಕಾಪಟ್ಟೆ ಬಳಲಬಹುದು. ಕ್ಯಾಲರಿ ಕೊರತೆಯನ್ನು ಮಾಡುವುದೆಂದರೆ ಬೇಕಾಬಿಟ್ಟಿ ಉಪವಾಸ ಮಾಡುವುದೆಂದಲ್ಲ, ಅದಕ್ಕೊಂದು ನಿಶ್ಚಿತ ಸ್ವರೂಪವಿದೆ.
ತೂಕ ಎತ್ತುವುದರಿಂದ ಮಹಿಳೆಯರು ದಪ್ಪಗಾಗುತ್ತಾರೆ:
ತೂಕ ಎತ್ತುವುದು ಅಥವಾ ಸ್ಟ್ರೆಂಥ್ ಟ್ರೇನಿಂಗ್‌ನಿಂದ ಪುರುಷರಂತೆ ಮಹಿಳೆಯರೂ ರಟ್ಟೆ ಬೆಳೆಸಿಕೊಂಡು, ದಪ್ಪಗಾಗುತ್ತಾರೆ. ನಯ-ನಾಜೂಕಿಲ್ಲದ ಶರೀರವನ್ನು ಹೊಂದುತ್ತಾರೆ ಮುಂತಾದ ಭಾವನೆಗಳು ಚಾಲ್ತಿಯಲ್ಲಿವೆ. ಆದರೆ ನಿಜವಾಗಿ ಹಾಗಾಗುವುದಿಲ್ಲ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿರುವ ಟೆಸ್ಟೊಸ್ಟಿರಾನ್ ಚೋದಕದ ಪ್ರಮಾಣ ಅತ್ಯಲ್ಪ. ಹಾಗಾಗಿ ಮಹಿಳೆಯರಿಗೆ ಭಾರ ಎತ್ತಿ, ಸ್ನಾಯುಗಳನ್ನು ಬಲಗೊಳಿಸುವ ತರಬೇತಿಯಿಂದ ಪುರುಷರಂತೆ ದೇಹ ಬೆಳೆಯುವುದಿಲ್ಲ.
ಹಸಿ ಸೊಪ್ಪು-ತರಕಾರಿಯ ರಸಗಳಿಂದ ಎಲ್ಲ ರೋಗಗಳೂ ಮಾಯವಾಗುತ್ತವೆ:
ಹಸಿರು ಸೊಪ್ಪು ಅಥವಾ ಬೂದುಗುಂಬಳದಂಥ ಯಾವುದೇ ಹಸಿ ತರಕಾರಿಯ ರಸವು ಸರ್ವರೋಗ ಹರ ಎಂದು ಭಾವಿಸುವಂತಿಲ್ಲ. ಈ ರಸಗಳಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿ ಇರುತ್ತವೆ. ಆದರೆ ನಾರಿನಂಶ ಇರುವುದಿಲ್ಲ. ಜೊತೆಗೆ ಹಸಿಯಾದ ಬೂದುಗುಂಬಳ, ಪಾಲಕ್ ಸೊಪ್ಪು ಮುಂತಾದವುಗಳಲ್ಲಿ ಆಕ್ಸಲೇಟ್ ಅಂಶಗಳು ಹೆಚ್ಚಿರುತ್ತವೆ. ಇದು ಅತಿಯಾಗಿ ದೇಹ ಸೇರಿದರೆ, ಮೂತ್ರಪಿಂಡದಲ್ಲಿ ಕಲ್ಲು ಉಂಟಾಗಬಹುದು. ಹಾಗಾಗಿ ಅವರುಗಳ ರಸ ತೆಗೆಯದೆ, ಇಡಿಯಾಗಿ ಬೇಯಿಸಿಕೊಂಡು ತಿನ್ನುವುದು ಆರೋಗ್ಯಕರ ಆಯ್ಕೆ.
ಎ-2 ತುಪ್ಪ ಶ್ರೇಷ್ಠ ಆಹಾರ, ಎಷ್ಟಾದರೂ ತಿನ್ನಬಹುದು:
ತುಪ್ಪದಲ್ಲಿ ಕಿಂಚಿತ್ತೂ ಪ್ರೊಟೀನ್ ಇಲ್ಲ. ಇರುವುದು ಸಂಪೂರ್ಣ ಕೊಬ್ಬು. ಈ ಕೊಬ್ಬಿನ ಮೂಲ ಯಾವುದೇ ಇದ್ದರೂ, ಅದನ್ನು ಸೇವಿಸುವಲ್ಲಿ ಮಿತಿ ಬೇಕು. ಇದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಎ-2 ತುಪ್ಪವನ್ನಾದರೂ ಅತಿಯಾಗಿ ತಿಂದರೆ ಆರೋಗ್ಯಕ್ಕೆ ಆಪತ್ತು ಖಂಡಿತವಾಗಿ ಬರುತ್ತದೆ.
ಈ ಸುದ್ದಿಯನ್ನೂ: Health Tips: ಅತಿಯಾಗಿ ಕಾಫಿ ಸೇವಿಸಿದರೆ ಆತಂಕದ ಕಾಯಿಲೆ!