ರಜನಿಕಾಂತ್ ಓದಿದ ಎಪಿಎಸ್ ಶಿಕ್ಷಣ ಸಂಸ್ಥೆಗೆ 90 ವರ್ಷ
ಸೂಪರ್ ಸ್ಟಾರ್ ರಜನಿಕಾಂತ್, ಭಾರತ ರತ್ನ ಸಿ.ಎನ್.ಆರ್, ರಾವ್ ಮತ್ತಿತರು ಅಧ್ಯಯನ ಮಾಡಿದ ಆಚಾರ್ಯ ಪಾಠಶಾಲಾ ಶಿಕ್ಷಣ ಸಂಸ್ಥೆ 90 ವರ್ಷಗಳನ್ನು ಪೂರ್ಣಗೊಳಿ ಸಿದ್ದು, ಈ ಹಿನ್ನೆಲೆಯಲ್ಲಿ ಜ.26 ರಂದು ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್, ಭಾರತ ರತ್ನ ಸಿ.ಎನ್.ಆರ್, ರಾವ್ ಮತ್ತಿತರು ಅಧ್ಯಯನ ಮಾಡಿದ ಆಚಾರ್ಯ ಪಾಠಶಾಲಾ ಶಿಕ್ಷಣ ಸಂಸ್ಥೆ 90 ವರ್ಷಗಳನ್ನು ಪೂರ್ಣಗೊಳಿ ಸಿದ್ದು, ಈ ಹಿನ್ನೆಲೆಯಲ್ಲಿ ಜ.26 ರಂದು ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಆಚಾರ್ಯ ಪಾಠಶಾಲೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿಎ ಡಾ. ವಿಷ್ಣು ಭರತ್ ಆಲಂಪಲ್ಲಿ, ಎಪಿಎಸ್ ಆಟದ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಆಚಾರ್ಯ ಪಾಠಶಾಲಾ ಶಿಕ್ಷಣ ದತ್ತಿಯು ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಮತ್ತು ಪಿಎಚ್ಡಿ ಹಂತಗಳವರೆಗಿನ ಶೈಕ್ಷಣಿಕ ಕಾರ್ಯಕ್ರಮಗಳನ್ನು ಉತ್ಕೃಷ್ಟ ಮಟ್ಟದಲ್ಲಿ ನೀಡುತ್ತಿದ್ದು, ಬೆಂಗಳೂ ರಿನ ಎನ್.ಆರ್. ಕಾಲೋನಿ ಮತ್ತು ಸೋಮನಹಳ್ಳಿಯ ಅನಂತ ಜ್ಞಾನ ಗಂಗೋತ್ರಿ ಕ್ಯಾಂಪಸ್ ನಲ್ಲಿ ಅತ್ಯುತ್ತಮ ಶೈಕ್ಷಣಿಕ ಸೇವೆಗಳನ್ನು ಒದಗಿಸುತ್ತಿದೆ ಎಂದರು.
ಇದನ್ನೂ ಓದಿ: Emergency Movie: ಕಂಗನಾ ನಟನೆಯ ʻಎಮರ್ಜೆನ್ಸಿʼ ಚಿತ್ರ ಮೊದಲ ದಿನ ಗಳಿಸಿದೆಷ್ಟು?
ಪ್ರಭಾವಿ ನಾಗರಿಕರಾಗಲು ಮತ್ತು ಅವರವರ ವೃತ್ತಿಜೀವನದಲ್ಲಿ ಉತ್ತಮ ಸಾಧನೆ ಮಾಡಲು ದಾರಿ ತೋರಿ, ಲಕ್ಷಾಂತರ ವಿದ್ಯಾರ್ಥಿಗಳನ್ನು ಎಪಿಎಸ್ ಹೆಮ್ಮೆಯಿಂದ ಪೋಷಿಸುತ್ತಿದೆ. ಸಿ.ಎನ್.ಆರ್. ರಾವ್, ಪದ್ಮಭೂಷಣ ರೊದ್ದಂ ನರಸಿಂಹ, ರಜನಿಕಾಂತ್, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಕ್ರಿಕೆಟಿಗರಾದ ಸುಧಾಕರ್ ರಾವ್, ಜಯಪ್ರಕಾಶ ರಾವ್, ರಘುನಾಥ್. ವಿಶೇಷ ಚೇತನ ಕ್ರೀಡಾಪಟು ಎಂ.ಸಿ.ಎನ್.ಜಾನಕಿ, ಜಮ್ಮು ಮತ್ತು ಕಾಶ್ಮೀರದ ಮುಖ್ಯ ನ್ಯಾಯಮೂರ್ತಿ ರಾಮಕೃಷ್ಣ, ಹಿನ್ನೆಲೆ ಗಾಯಕರಾದ ಸಿ ಆರ್ ಅಶ್ವಥ್, ಲಕ್ಕಿ ಅಲಿ, ಕೊಳಲು ವಾದಕ ಪ್ರವೀಣ್ ಡಿ. ರಾವ್ ಮತ್ತಿತರರು ಇಲ್ಲಿ ಅಧ್ಯಯನ ಮಾಡಿದ್ದಾರೆ ಎಂದರು.
ಜನಪ್ರಿಯ ನಾಯಕ ನಟ ಕಲ್ಯಾಣ್ ಕುಮಾರ್, ಪ್ರಣಯರಾಜ ಶ್ರೀನಾಥ್, ನಟ ಉಪೇಂದ್ರ ಅವರು ಸಹ ಇದೇ ಶಾಲೆಯಲ್ಲಿ ಕಲಿತ ಪ್ರತಿಭೆಗಳು. ಬಹುತೇಕ ಹಳೆಯ ವಿದ್ಯಾರ್ಥಿಗಳು ಈ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಆಚಾರ್ಯ ಪಾಠಶಾಲಾ ಶಿಕ್ಷಣ ದತ್ತಿಯು 1935 ರಲ್ಲಿ ಶ್ರೇಷ್ಠ ದಾರ್ಶನಿಕ ಪ್ರೊ. ಎನ್. ಅನಂತಾ ಚಾರ್, ಸ್ವಾತಂತ್ರ್ಯ ಪೂರ್ವದಲ್ಲಿ ಕೇವಲ ಮೂರು ವಿದ್ಯಾರ್ಥಿಗಳಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಇಂದು, APS 14 ಸಮೂಹ ಸಂಸ್ಥೆಗಳು ಮತ್ತು 6,000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ರೋಮಾಂಚಕ ಸಮೂಹವನ್ನು ಹೊಂದಿದೆ.
ಎಪಿಎಸ್ ನ ಪ್ರಾಥಮಿಕ ಗುರಿಯು ಗ್ರಾಮೀಣ ಮಧ್ಯಮ ವರ್ಗದ ಮತ್ತು ಹಿಂದುಳಿದ ಕುಟುಂಬ ಗಳಿಗೆ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತ ಬಂದಿದೆ. ತನ್ನ 90 ವರ್ಷಗಳ ಸುದೀರ್ಘ ಸೇವೆಯ ಮೂಲಕ ಎಪಿಎಸ್ ಸಮಾಜದ ಮೇಲೆ ಮಹತ್ವದ ಪ್ರಭಾವ ಬೀರಿದೆ ಮತ್ತು ಅದರ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.
ಅಥ್ಲೆಟಿಕ್ಸ್ ಮತ್ತು ಕ್ರೀಡೆಗಳಿಗೆ ಮೀಸಲಾಗಿರುವ ವಿಸ್ತಾರವಾದ ಮೈದಾನವನ್ನು ಹೊಂದಿದೆ. ನರ್ಮದ ಅಂಧರ ಕೇಂದ್ರದಿಂದ 70 ಕ್ಕೂ ಹೆಚ್ಚು ದೃಷ್ಟಿಹೀನ ವಿದ್ಯಾರ್ಥಿಗಳು ಪ್ರಸ್ತುತ ವಿವಿಧ ಎಪಿಎಸ್ ಸಮೂಹ ಸಂಸ್ಥೆಗಳಲ್ಲಿ ದಾಖಲಾಗಿದ್ದಾರೆ.
ನಮ್ಮ ಯುಜಿ ಮತ್ತು ಪಿಜಿ ಕಾಲೇಜು ಲೈಬ್ರರಿಗಳು ಭೌತಿಕ ಮತ್ತು ಡಿಜಿಟಲ್ ಎರಡರಲ್ಲೂ ವ್ಯಾಪಕ ವಾದ ಸಂಪನ್ಮೂಲಗಳನ್ನು ಹೊಂದಿದ್ದು, ಇತ್ತೀಚಿನ ಸಂಶೋಧನಾ ಸಾಮಗ್ರಿಗಳು ಮತ್ತು ಪುಸ್ತಕ ಗಳಿಗೆ ವಿದ್ಯಾರ್ಥಿಗಳಿಗೆ ಸುಲಭ ಪ್ರವೇಶವನ್ನು ನೀಡುತ್ತದೆ ಎಂದು ವಿವರಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಎಪಿಎಸ್ ಎಜುಕೇಷನಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪ್ರೊ. ಎ. ಪ್ರಕಾಶ್, ಲೈಫ್ ಟ್ರಸ್ಟಿ ಸಿ.ಎ . ಎ.ಪಿ. ಆಚಾರ್ಯ, ಅಭಿಮಾನಿ ಟ್ರಸ್ಟಿ ಎ.ಆರ್. ಆಚಾರ್ಯ, ಟ್ರಸ್ಟಿ ರಾಮ್ ಪ್ರಸಾದ್, ಟ್ರಸ್ಟಿ ಕೆ.ಪಿ. ನರಸಿಂಹ ಮೂರ್ತಿ, ಟ್ರಸ್ಟಿ ಸಿ. ನಾಗರಾಜ್, ಜಂಟಿ ಕಾರ್ಯ ದರ್ಶಿ ಪಿ. ಕೃಷ್ಣ ಸ್ವಾಮಿ ಮತ್ತು ಶ್ರೀಧರ್ ಅವರು ಭಾಗವಹಿಸಿದ್ದರು.