National Herald Case: ನ್ಯಾಷನಲ್ ಹೆರಾಲ್ಡ್ಗೆ 2.5 ಕೋಟಿ ದೇಣಿಗೆ; ಹೌದು, ಕೊಟ್ಟಿದ್ದೇವೆ, ತಪ್ಪೇನಿದೆ ಎಂದ ಡಿಕೆಶಿ
National Herald Case: ನಮ್ಮ ಪಕ್ಷ ನಡೆಸುತ್ತಿದ್ದ ಪತ್ರಿಕೆಗೆ ದೇಣಿಗೆ ಕೊಟ್ಟರೆ ತಪ್ಪೇನು? ಟ್ರಸ್ಟ್ ವತಿಯಿಂದಲೂ ನ್ಯಾಷನಲ್ ಹೆರಾಲ್ಡ್ಗೆ ದೇಣಿಗೆ ನೀಡಿದ್ದೇವೆ. ನಾವೇನು ಕದ್ದು ದೇಣಿಗೆ ಕೊಟ್ಟಿದ್ದೀವಾ? ಸಂಪಾದನೆ ಮಾಡಿದ ಆಸ್ತಿಯಿಂದ ರಾಜಾರೋಷವಾಗಿಯೇ ಕೊಟ್ಟಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.


ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ (National Herald Case) ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಹೆಸರು ಕೇಳಿಬಂದಿದೆ. ಯಂಗ್ ಇಂಡಿಯಾ ಟ್ರಸ್ಟ್ಗೆ ಡಿ.ಕೆ. ಬ್ರದರ್ಸ್ 2.5 ಕೋಟಿ ರೂ. ದೇಣಿಗೆ ನೀಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಹೌದು, ನಾನು 25 ಲಕ್ಷ, ನನ್ನ ತಮ್ಮ ಡಿ.ಕೆ.ಸುರೇಶ್ 25 ಲಕ್ಷ ಕೊಟ್ಟಿದ್ದಾನೆ. ನಮ್ಮ ಪಕ್ಷ ನಡೆಸುತ್ತಿದ್ದ ಪತ್ರಿಕೆಗೆ ದೇಣಿಗೆ ಕೊಟ್ಟಿದ್ದೇವೆ, ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿ.ಕೆ. ಶಿವಕುಮಾರ್ ಅವರು, ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ನಾವು 50 ಲಕ್ಷ ರೂ. ಹಣ ಕೊಟ್ಟಿದ್ದೇವೆ. ನಾನು 25 ಲಕ್ಷ, ನನ್ನ ತಮ್ಮ ಡಿ.ಕೆ.ಸುರೇಶ್ 25 ಲಕ್ಷ ಕೊಟ್ಟಿದ್ದಾನೆ. ನಮ್ಮ ಪಕ್ಷ ನಡೆಸುತ್ತಿದ್ದ ಪತ್ರಿಕೆಗೆ ದೇಣಿಗೆ ಕೊಟ್ಟರೆ ತಪ್ಪೇನು? ಟ್ರಸ್ಟ್ ವತಿಯಿಂದಲೂ ನ್ಯಾಷನಲ್ ಹೆರಾಲ್ಡ್ಗೆ ದೇಣಿಗೆ ನೀಡಿದ್ದೇವೆ. ನಾವೇನು ಕದ್ದು ದೇಣಿಗೆ ಕೊಟ್ಟಿದ್ದೀವಾ? ಸಂಪಾದನೆ ಮಾಡಿದ ಆಸ್ತಿಯಿಂದ ರಾಜಾರೋಷವಾಗಿಯೇ ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಎರಡೂವರೆ ಕೋಟಿ ಕೊಟ್ಟಿದ್ದೇವೆ: ಡಿ.ಕೆ.ಸುರೇಶ್
ಇನ್ನು ಈ ಬಗ್ಗೆ ಮಾಜಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯಿಸಿ, ಯಂಗ್ ಇಂಡಿಯಾ ಟ್ರಸ್ಟ್ಗೆ ಹಣ ಕೊಟ್ಟಿದ್ದೇವೆ. ಎರಡು, ಎರಡೂವರೆ ಕೋಟಿ ರೂ. ಹಣ ಕೊಟ್ಟಿದ್ದೇವೆ. ಈ ಸಂಬಂಧ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇವೆ. ನಾವು ಕೊಟ್ಟಿಲ್ಲ ಅಂತ ಹೇಳುತ್ತಿಲ್ಲ. ದುರುದ್ದೇಶ ಪೂರ್ವಕವಾಗಿ ಆರೋಪ ಮಾಡುತ್ತಿದ್ದು, ನಮ್ಮ ಕಾಂಗ್ರೆಸ್ ನಾಯಕರ ಮೇಲೆ ಹೊರಿಸುವ ಪ್ರಯತ್ನ ಚಾರ್ಜ್ಶೀಟ್ ನಲ್ಲಿ ಮಾಡಿದ್ದಾರೆ. ನಾವು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ಇದು ರಾಜಕೀಯ ಪ್ರೇರಿತ ಪ್ರಕರಣ. ಸೋನಿಯಾ ಗಾಂಧಿಯವರ ಟ್ರಸ್ಟ್ ಅಲ್ಲ. ಯಂಗ್ ಇಂಡಿಯಾ ಸಂಸ್ಥೆಗೆ ಕೊಟ್ಟಿರುವುದು. ಅವರು ವೈಯುಕ್ತಿಕವಾಗಿ ಹಣ ಬಳಸಿಕೊಂಡಿಲ್ಲ. ಅದು ಟ್ರಸ್ಟ್ಗೆ ಬಳಕೆಯಾಗಿದೆ. ಇಡಿಯವರಿಗೂ ಎಲ್ಲ ಮಾಹಿತಿ ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Ranya Rao Case: ರನ್ಯಾ ಮದುವೆಗೆ ಸಚಿವ ಪರಮೇಶ್ವರ್ 25 ಲಕ್ಷ ಗಿಫ್ಟ್ ನೀಡಿದ್ರಾ?; ಡಿಕೆಶಿ ಹೇಳಿದ್ದೇನು?
ಏನಿದು ಪ್ರಕರಣ?
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಒಡೆತನ ಹೊಂದಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ಗೆ (ಎಜೆಎಲ್) ಕಾಂಗ್ರೆಸ್ ಪಕ್ಷ 90 ಕೋಟಿಯಷ್ಟು ಸಾಲ ನೀಡಿತ್ತು. ಅದರೆ, ಯಂಗ್ ಇಂಡಿಯಾ ಸಂಸ್ಥೆ ಕಾಂಗ್ರೆಸ್ಗೆ ಕೇವಲ 50 ಲಕ್ಷ ಹಣ ನೀಡಿ ಎಜೆಎಲ್ ಕಾಂಗ್ರೆಸ್ಗೆ ನೀಡಬೇಕಿದ್ದ 90 ಕೋಟಿಯಷ್ಟು ಹಣ ಹಿಂಪಡೆಯಬೇಕಾದ ಹಕ್ಕನ್ನು ತನ್ನದಾಗಿಸಿಕೊಂಡಿತ್ತು. ಬಳಿಕ ಎಜೆಎಲ್ನ ಶೇ.99ರಷ್ಟು ಷೇರುಗಳು ಯಂಗ್ ಇಂಡಿಯಾಗೆ ವರ್ಗಾವಣೆ ಆದವು. ಈಕ್ವಿಟಿ ವಹಿವಾಟಿನಲ್ಲಿ 2,000 ಕೋಟಿಗೂ ಅಧಿಕ ಆಸ್ತಿ ಅವ್ಯವಹಾರ ನಡೆದಿದೆ ಎಂಬ ಆರೋಪವೂ ಕೇಳಿಬಂದಿತ್ತು.
ಸೋನಿಯಾ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ ಮತ್ತು ಗಾಂಧಿ ಕುಟುಂಬದ ನಿಯಂತ್ರಣದಲ್ಲಿರುವ ಯಂಗ್ ಇಂಡಿಯನ್ ಲಿಮಿಟೆಡ್ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಖಾಸಗಿ ದೂರು ದಾಖಲಿಸಿ ವಂಚನೆ, ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ನಂಬಿಕೆ ದ್ರೋಹ ಹಾಗೂ ಆಸ್ತಿ ದುರುಪಯೋಗದ ಆರೋಪ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಮೊದಲಿಗೆ ಸಿಬಿಐ ತನಿಖೆ ನಡೆಸಿತು. ಇದರಲ್ಲಿ ಹಣಕಾಸು ಅಕ್ರಮ ಆರೋಪ ಕೇಳಿಬಂದಿದ್ದರಿಂದ ಜಾರಿ ನಿರ್ದೇಶನಾಲಯ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದೆ.