Congress Protest: ಅಗತ್ಯ ವಸ್ತುಗಳ ಬೆಲೆ ಏರಿಸಿದ ಮೋದಿ ಮಧ್ಯಮ ವರ್ಗ, ಬಡವರ ವಿರೋಧಿ: ಸಿದ್ದರಾಮಯ್ಯ
CM Siddaramaiah: ʼʼಗೊಬ್ಬರ, ಔಷಧಿ, ರಾಗಿ, ಗೋಧಿ, ಡೀಸೆಲ್, ಪೆಟ್ರೋಲ್ ಎಲ್ಲದರ ಬೆಲೆ ಆಕಾಶಕ್ಕೇರಿಸಿದ ಪ್ರಧಾನಿ ನರೇಂದ್ರ ಮೋದಿ ಭಾರತದ ಮಧ್ಯಮ ವರ್ಗ ಮತ್ತು ಬಡವರ ವಿರೋಧಿ. ಬಿಜೆಪಿ ಯಾವ ಮುಖ ಇಟ್ಟುಕೊಂಡು ನಮ್ಮ ಸರ್ಕಾರದ ವಿರುದ್ಧ ಮಾತಾಡುತ್ತಿದೆ?'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.


ಬೆಂಗಳೂರು: ʼʼಗೊಬ್ಬರ, ಔಷಧಿ, ರಾಗಿ, ಗೋಧಿ, ಡೀಸೆಲ್, ಪೆಟ್ರೋಲ್ ಎಲ್ಲದರ ಬೆಲೆ ಆಕಾಶಕ್ಕೇರಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾರತದ ಮಧ್ಯಮ ವರ್ಗ ಮತ್ತು ಬಡವರ ವಿರೋಧಿ. ಬಿಜೆಪಿ ಯಾವ ಮುಖ ಇಟ್ಟುಕೊಂಡು ನಮ್ಮ ಸರ್ಕಾರದ ವಿರುದ್ಧ ಮಾತಾಡುತ್ತಿದೆ? 4 ರೂ. ಹಾಲಿನ ದರ ಹೆಚ್ಚಿಸಿ ಇದನ್ನು ನೇರವಾಗಿ ರೈತರ ಜೇಬಿಗೆ ಹಾಕಿದ್ದೇವೆ. ಈ ಹಣ ಸರ್ಕಾರಕ್ಕೆ ಬರಲ್ಲʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು. ಬಿಜೆಪಿ ಸರ್ಕಾರದ ಬೆಲೆ ಏರಿಕೆ ಪರ್ವವನ್ನು ಖಂಡಿಸಿ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ (Congress Protest) ಮಾತನಾಡಿದರು.
ʼʼರಾಜಕೀಯ ಅಂದರೆ ಬರೀ ಅಧಿಕಾರ ಅಲ್ಲ. ಸೈದ್ಧಾಂತಿಕ ಸ್ಪಷ್ಟತೆಯಿಂದ ಜನರ ಪರವಾಗಿ ನಿಂತು ನಿರಂತರ ಹೋರಾಟ ನಡೆಸುವುದೂ ರಾಜಕೀಯ ಬದ್ಧತೆಯೇ ಆಗಿದೆ. ಸುಳ್ಳೇ ಬಿಜೆಪಿಯ ಮನೆ ದೇವರು. ಆರ್‌ಎಸ್‌ಎಸ್ ಸುಳ್ಳಿನ ಮಹಾ ಕಾರ್ಖಾನೆʼʼ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ: Congress Protest: ಕೇಂದ್ರ ಸರ್ಕಾರದ ಬೆಲೆ ಏರಿಕೆಗಳ ವಿರುದ್ಧ ಇಂದು ಕಾಂಗ್ರೆಸ್ ಬೃಹತ್ ಪ್ರತಿಭಟನೆ
''ಅಂಬೇಡ್ಕರ್ ಅವರನ್ನು ಸೋಲಿಸಿದ್ದೇ ಸಾವರ್ಕರ್ ಮತ್ತು ಢಾಂಗೆ ಎಂದು ಸ್ವತಃ ಅಂಬೇಡ್ಕರ್ ಅವರೇ ಬರೆದಿದ್ದಾರೆ. ಆದರೆ ಕಾಂಗ್ರೆಸ್ ಸೋಲಿಸಿದ್ದು ಎಂದು ಬಿಜೆಪಿ ಬಂಡಲ್ ಬಿಡುತ್ತಿದೆ. ನಾವು ಸುಳ್ಳಿನ ಕಾರ್ಖಾನೆ ಆರ್‌ಎಸ್‌ಎಸ್‌ನ ಸುಳ್ಳುಗಳ ವಿರುದ್ಧ ಸತ್ಯವನ್ನು ಹೇಳುವ ಎದೆಗಾರಿಕೆ ಬೆಳೆಸಿಕೊಳ್ಳಬೇಕುʼʼ ಎಂದು ಕರೆ ನೀಡಿದರು.

ʼʼನಮ್ಮ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಅಪಪ್ರಚಾರ ಮಾಡುತ್ತ ಮೋದಿ ಸರ್ಕಾರ ತನ್ನ ಬಡವರ, ಮಧ್ಯಮ ವರ್ಗ ವಿರೋಧಿತನವನ್ನು ಬಚ್ಚಿಡಲು ಯತ್ನಿಸುತ್ತಿದೆ. ಸರ್ಕಾರ ದಿವಾಳಿ ಆಗಿದ್ದರೆ ಗ್ಯಾರಂಟಿಗಳಿಗೆ 56 ಸಾವಿರ ಕೋಟಿ ರೂ. ಪ್ರತೀ ವರ್ಷ ತೆಗೆದಿಡಲು ಸಾಧ್ಯವಾಗುತ್ತಿತ್ತಾ?ʼʼ ಎಂದು ತಿಳಿಸಿದರು.
ʼʼಹಾಲಿನ ಬೆಲೆ 4 ರೂ. ಹೆಚ್ಚಳ ಮಾಡಿರುವುದು ರೈತರ ಜೇಬಿಗೆ ಹೋಗುತ್ತಿದೆ. ಸರ್ಕಾರಕ್ಕೆ ಬರುತ್ತಿಲ್ಲ. ನೀವು ಗ್ಯಾಸ್ ಬೆಲೆ ಹತ್ತಾರು ಬಾರಿ ಹೆಚ್ಚಿಸಿ ಈಗ ಮತ್ತೆ 50 ರೂ. ಹೆಚ್ಚಿಸಿದ್ದೀರಿ. ಈ ಹೆಚ್ಚುವರಿ ಹಣ ಯಾರಿಗೆ ಹೋಗುತ್ತಿದೆ ಹೇಳಿ?ʼʼ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ನಾರಾಯಣಸ್ವಾಮಿ ಹೇಳಿದ್ದೇನು?
ಕೆಪಿಸಿಸಿ ಉಪಾಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ʼʼಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಮನಮೋಹನ್ ಸಿಂಗ್ ಇದ್ದಾಗ ಅಗತ್ಯ ವಸ್ತುಗಳ ಬೆಲೆ ಎಷ್ಟಿತ್ತು ಈಗ ಎಷ್ಟಾಗಿದೆ ಎನ್ನುವುದನ್ನು ಅರಿಯಬೇಕು. ಅಚ್ಛೇದಿನ್ ಬರಲಿದೆ, ನಾವು ಅಧಿಕಾರಕ್ಕೆ ಬಂದ ಕೇವಲ 100 ದಿನಗಳಲ್ಲಿ ಕಪ್ಪು ಹಣ ವಾಪಸ್ ತಂದು 15 ಲಕ್ಷ ರೂ. ಪ್ರತಿ ಖಾತೆಗೆ ಹಾಕುತ್ತೇವೆ ಎಂದವರು, 3ನೇ ಅವಧಿಗೆ ಅಧಿಕಾರಕ್ಕೆ ಬಂದರೂ ಅದರ ಬಗ್ಗೆ ಚಕಾರವಿಲ್ಲ. ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 65 ಡಾಲರ್ ಇದ್ದರೂ ಬೆಲೆ ಇಳಿಕೆ ಮಾಡುತ್ತಿಲ್ಲ. ಈ ಎಲ್ಲದರಿಂದಾಗಿ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಇದನ್ನೆಲ್ಲ ಮನಗಂಡು ರಾಜ್ಯ ಕಾಂಗ್ರೆಸ್ ಸರಕಾರ 57 ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಿ 5 ಗ್ಯಾರಂಟಿಗಳನ್ನು ನೀಡುತ್ತಿದೆʼʼ ಎಂದು ವಾಗ್ದಾಳಿ ನಡೆಸಿದರು.