Bengaluru Rains: ಬೆಂಗಳೂರಿನಲ್ಲಿ ಗೋಡೆ ಕುಸಿದು ಮೃತಪಟ್ಟ ಮಹಿಳೆ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
Bengaluru Rains: ರಾಜಧಾನಿ ಬೆಂಗಳೂರಿನಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಸಿಟಿ ರೌಂಡ್ ರದ್ದುಗೊಳಿಸಿದ ಸಿಎಂ ಸಿದ್ದರಾಮಯ್ಯ ಅವರು, ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಕಂಟ್ರೋಲ್ ರೂಮ್‌ಗೆ ತೆರಳಿ, ಮಳೆ ಹಾನಿ ಬಗ್ಗೆಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.


ಬೆಂಗಳೂರು: ರಾಜಧಾನಿಯಲ್ಲಿ ಭಾರಿ ಮಳೆಯಿಂದಾಗಿ (Bengaluru Rains) ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಈ ನಡುವೆ ವೈಟ್ ಫೀಲ್ಡ್ನ ಚನ್ನಸಂದ್ರದ ಸಮೀಪ ಕಟ್ಟಡದ ಗೋಡೆ ಕುಸಿದು ಮೃತಪಟ್ಟಿದ್ದ ಶಶಿಕಲಾ (35) ಅವರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಅವರು ಇದೀಗ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಬಿಬಿಎಂಪಿಯಿಂದ ಮೃತ ಮಹಿಳೆಗೆ ಪರಿಹಾರ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಳೆ ಹಾನಿ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಬೇಕಿತ್ತು. ಆದರೆ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿಟಿ ರೌಂಡ್ ರದ್ದುಗೊಳಿಸಿದ ಬಳಿಕ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಕಂಟ್ರೋಲ್ ರೂಮ್‌ಗೆ ತೆರಳಿ, ಮಳೆ ಹಾನಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ, ಭಾರಿ ಮಳೆಯಿಂದ ಸಂಚಾರ ದಟ್ಟಣೆ ಆಗುತ್ತದೆ ಎಂದು ಸಿಟಿ ರೌಂಡ್ಸ್ ರದ್ದು ಮಾಡಿದ್ದೇವೆ. ಬೆಂಗಳೂರಿನಲ್ಲಿ ತಗ್ಗು ಪ್ರದೇಶಗಳನ್ನು ಗುರುತಿಸಿದ್ದೇವೆ, ರಾಜಕಾಲುವೆ ಕೆಲಸ ಪ್ರಗತಿಯಲ್ಲಿದೆ. 166 ಸೂಕ್ಷ್ಮ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಕೆಲಸ ನಡೆಯುತ್ತಿದೆ. ನಾಡಿದ್ದು ಇಡೀ ದಿನ ಬೆಂಗಳೂರು ನಗರ ಪ್ರದಕ್ಷಿಣೆ ಮಾಡುತ್ತೇವೆ. ಎಲ್ಲೆಲ್ಲಿ ಅನಾಹುತ ಆಗಿದೆ ಅಲ್ಲೆಲ್ಲ ನಾವು ಭೇಟಿ ನೀಡುತ್ತೇವೆ. ಜನರಿಂದ ಸಮಸ್ಯೆ ಆಲಿಸಿ ಪರಿಹಾರಕ್ಕೆ ಸೂಚನೆ ಕೊಡುತ್ತೇವೆ.
ಈ ಸುದ್ದಿಯನ್ನೂ ಓದಿ | Bengaluru Rains: ಭಾರಿ ಮಳೆಗೆ ಬೆಂಗಳೂರಿನ ಹಲವು ಬಡಾವಣೆಗಳಿಗೆ ಜಲ ದಿಗ್ಬಂಧನ; ಬೋಟ್‌ಗಳಲ್ಲಿ ಜನರ ಸ್ಥಳಾಂತರ
ವೈಟ್ ಫೀಲ್ಡ್‌ನಲ್ಲಿ ಗೋಡೆ ಕುಸಿದು ಮಹಿಳೆ ಮೃತಪಟ್ಟಿದ್ದಾರೆ. ಬಿಬಿಎಂಪಿಯಿಂದ ಮಹಿಳೆಯ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ಇಂದು ಡಿಕೆ ಶಿವಕುಮಾರ್ ಕೆಲ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ನಾಡಿದ್ದು ನಾನು ಮತ್ತು ಸಚಿವರು ಇಡೀ ದಿನ ಬೆಂಗಳೂರು ನಗರ ಪ್ರದಕ್ಷಿಣೆ ಹಾಕುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.