ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

D K Shivakumar Column: ಪಂಚ ಗ್ಯಾರಂಟಿಗಳಿಂದ ಕರ್ನಾಟಕ ರಾಜ್ಯದಲ್ಲಿ ಅಚ್ಛೇ ದಿನ್

ಕಾಂಗ್ರೆಸ್ ಸರಕಾರ ಇಷ್ಟೆಲ್ಲ ಅಭಿವೃದ್ಧಿ ಮಾಡುತ್ತಿದ್ದರೂ, ಕೇಂದ್ರ ಸರಕಾರದಿಂದ ಸರಿಯಾದ ಸಹಕಾರ ಸಿಗುತ್ತಿಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಬರ ಪರಿಹಾರ, ತೆರಿಗೆ ಮರು ಹಂಚಿಕೆ, ನಬಾರ್ಡ್ ಸಾಲ ಕಡಿತ ಸೇರಿದಂತೆ ಅನೇಕ ರೀತಿಗಳಲ್ಲಿ ಕೇಂದ್ರ ಸರಕಾರ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯ ಮಾಡು ತ್ತಲೇ ಇದೆ. ಬೆಂಗಳೂರಿನಲ್ಲಿ ಸುರಂಗ ರಸ್ತೆ, ಮೆಟ್ರೋ ಸಂಪರ್ಕ ವಿಸ್ತರಣೆ, ನೀರಾವರಿ ಯೋಜನೆಗಳಿಗೆ ವಿಶೇಷ ಅನುದಾನ ನೀಡುವಂತೆಯೂ ಖುದ್ದಾಗಿ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೆ. ಈ ಯಾವುದೇ ಮನವಿಗಳನ್ನು ಕೇಂದ್ರ ಸರಕಾರ ಕಿವಿಗೆ ಹಾಕಿಕೊಳ್ಳಲೇ ಇಲ್ಲ.

ಪಂಚ ಗ್ಯಾರಂಟಿಗಳಿಂದ ಕರ್ನಾಟಕ ರಾಜ್ಯದಲ್ಲಿ ಅಚ್ಛೇ ದಿನ್

Profile Ashok Nayak May 19, 2025 9:47 AM

ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು.

ನುಡಿದಂತೆ ನಡೆಯುವ ಮಹಾ ಪ್ರತಿಜ್ಞೆಯೊಂದಿಗೆ ನಮ್ಮ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಮತ್ತು ನಾನು ಪಂಚ ಗ್ಯಾರಂಟಿಗಳ ಕ್ರಾಂತಿಯೊಂದಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಎರಡು ವರ್ಷ ಎಂದರೆ ಕೇವಲ ದಿನಗಳಲ್ಲ. ಇದು ಆರ್ಥಿಕಾಭಿವೃದ್ಧಿಯ ನಾಗಾಲೋಟದ ದಿನಗಳು, ಬಡ ಕುಟುಂಬಗಳಲ್ಲಿ ಆಶಾಕಿರಣ ತಂದ ದಿನಗಳು, ದಿನಗೂಲಿ ಮಾಡುವ ಬಡವನೊಬ್ಬ ನಿರಾಳತೆಯಿಂದ ಸಂಭ್ರಮಿಸಿದ ದಿನಗಳು, ಗೃಹಿಣಿಯೊಬ್ಬಳು ಮನೆಗೆ ಬೇಕಾದ ವಸ್ತುಗಳನ್ನು ದುಡ್ಡು ಕೊಟ್ಟು ತಂದು ಸ್ವಾಭಿಮಾನ ದಿಂದ ಮುಗುಳ್ನಗೆ ಬೀರಿದ ದಿನಗಳು. ಇದೇ ‘ಗ್ಯಾರಂಟಿಗೂ ಜೈ, ಅಭಿವೃದ್ಧಿಗೂ ಸೈ’ ಎಂದ ಅಮೂಲ್ಯ ದಿನಗಳು. ಈ ಅದ್ಭುತ ದಿನಗಳು ಇನ್ನಷ್ಟು ಪ್ರಗತಿಯೊಂದಿಗೆ ಸಾಗುತ್ತಿವೆ. ಇದು ನಿರಂತರ ಪ್ರಗತಿ.

ನೀವು ಯಾವುದೇ ಜಿಗೆ ಹೋದರೂ, ಯಾರದ್ದೇ ಮನೆಗೆ ಹೋದರೂ ‘ಕಾಂಗ್ರೆಸ್ ಬಂತು ಅಭಿವೃದ್ಧಿ ತಂತು’ ಎಂದು ಜನರು ಹೇಳುವುದನ್ನು ಕೇಳಿರಬಹುದು. ಸುಮ್ಮನೆ ಬಡವರೊಬ್ಬರ ಮನೆಗೆ ಹೋದರೆ, ಆ ಮನೆಯಲ್ಲಿ ಕರೆಂಟ್ ಬಿಲ್ ಮೂಲೆಯಲ್ಲಿ ಬಿದ್ದಿರುತ್ತದೆ. ಮನೆಯ ಯಜಮಾನನಿಗೆ ಆ ಬಿಲ್ ಪಾವತಿಸಬೇಕಾದ ಅಗತ್ಯವಿಲ್ಲ. ಮನೆಯಲ್ಲಿ ಊಟಕ್ಕೆ ಬೇಕಾದ ಅಕ್ಕಿ ಇರುತ್ತದೆ.

ಯಜಮಾನನಿಗೆ ಅಕ್ಕಿಯನ್ನು ಹಣ ಕೊಟ್ಟು ಖರೀದಿಸಬೇಕಿಲ್ಲ. ಯಾವಾಗಲೂ ಹಣವಿಲ್ಲ ಎಂಬ
ಹಣೆಬರಹವನ್ನು ಹಳಿಯುತ್ತಿದ್ದ ಆ ಮನೆಯ ಬಡ ಗೃಹಿಣಿ ಈಗ ಚಿಂತೆ ಇಲ್ಲದೆ 2000 ರುಪಾಯಿ ಪಡೆಯುತ್ತಿರುತ್ತಾಳೆ. ಆಕೆ ಈ ಹಿಂದೆ ಎಲ್ಲಿಗಾದರೂ ಹೋಗಬೇಕೆಂದರೆ ಬಸ್‌ನಲ್ಲಿ ಪ್ರಯಾಣಿಸಲು ಚಿಲ್ಲರೆ ಕಾಸು ಹುಡುಕುತ್ತಿದ್ದಳು. ಈಗ ಗುರುತಿನ ಚೀಟಿ ಇಟ್ಟುಕೊಂಡು ಹಗುರ ಮನಸ್ಸಿನಿಂದ ಬಸ್ ಹತ್ತುತ್ತಾಳೆ.

ಇದನ್ನೂ ಓದಿ: Vishweshwar Bhat Column: ಇದು ಭಾಗ್ಯ..ಇದು ಭಾಗ್ಯ !

‘ನಾನು ಬಡವಳಾದರೂ ಪರವಾಗಿಲ್ಲ, ನನ್ನ ಕೈ ಹಿಡಿದೆತ್ತಲು ಕಾಂಗ್ರೆಸ್ ಇದೆಯಲ್ಲ’ ಎಂಬ ಧೈರ್ಯ ಅವಳಲ್ಲಿರುತ್ತದೆ. ಆಕೆಯ ನಿರುದ್ಯೋಗಿ ಮಗನ ಬಗ್ಗೆಯೂ ಆಕೆಗೆ ಚಿಂತೆ ಇಲ್ಲ. ಏಕೆಂದರೆ ಆತ ಯುವನಿಧಿ ಪಡೆದು ಬೇರೆ ಕೋರ್ಸ್, ಕೌಶಲ್ಯ ಕಲಿಯುತ್ತಿದ್ದಾನೆ. ವಿಜಯಪುರ ಜಿಲ್ಲೆಯ ಇಂಡಿಯ
20 ಮಹಿಳೆಯರು ‘ಒಡಲ ಧ್ವನಿ’ ಎಂಬ ಸಂಘ ರಚಿಸಿಕೊಂಡು, ಹೋಳಿಗೆ ತಯಾರಿಸಿ ಬೆಂಗಳೂರಿಗೆ ಬಂದು ಮಾರಾಟ ಮಾಡುತ್ತಿದ್ದಾರೆ.

ತಿಂಗಳಿಗೆ 20 ಸಾವಿರ ರು. ಆದಾಯ ಬರುತ್ತಿದೆ. ಇವರಿಗೆ ನೆರವಾಗಿರುವುದು ಉಚಿತ ಬಸ್-ಶಕ್ತಿ ಯೋಜನೆ. ಇಂತಹ ಕೋಟ್ಯಂತರ ಮಹಿಳೆಯರ ಬದುಕಿಗೆ ಈ ಯೋಜನೆ ಶಕ್ತಿ ನೀಡಿದೆ. ಅದೇ 2023ಕ್ಕಿಂತ ಮೊದಲಿನ ಪರಿಸ್ಥಿತಿ ಹೇಗಿತ್ತು ಎಂದು ಊಹಿಸಿದರೆ ಜನರ ಬವಣೆ ಹೇಳತೀರದು. ಒಬ್ಬ ಬಡವ ಸರಕಾರಿ ಕೆಲಸಕ್ಕೆಂದು ಕಚೇರಿಗೆ ಹೋದರೆ ಅಲ್ಲಿ ಲಂಚ ಕೊಡದೇ ಕೆಲಸ ನಡೆಯುತ್ತಿರ ಲಿಲ್ಲ.

ಯೋಜನೆಗಳು ಸರಿಯಾಗಿ ಕೈ ಸೇರುತ್ತಿರಲಿಲ್ಲ. ಎಲ್ಲಿ ನೋಡಿದರೂ ಭ್ರಷ್ಟಾಚಾರ, ಕಮಿಷನ್, ಅಭಿವೃದ್ಧಿ ಹೀನ ಪರಿಸ್ಥಿತಿ. ಇದರ ನಡುವೆ ಬೆಲೆ ಏರಿಕೆಯ ಹೊಡೆತ. 2023ರ ಬಳಿಕ ಬೆಲೆ ಏರಿಕೆಯ ಬಿಸಿಯನ್ನು ತಗ್ಗಿಸಲು ಕಾಂಗ್ರೆಸ್ ತಂದ ಗ್ಯಾರಂಟಿಗಳು ಆ ಹೊಡೆತಕ್ಕೆ ಉಪಶಮನ ನೀಡಿವೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಕಾಂಗ್ರೆಸ್ ಸರಕಾರ 2 ವರ್ಷಗಳನ್ನು ಪೂರೈಸಿರು ವುದರಲ್ಲಿ ಸಾರ್ವಜನಿಕರ ಹಾಗೂ ಕಾರ್ಯಕರ್ತರ ದೊಡ್ಡ ಪಾತ್ರವಿದೆ.

ಗೃಹ ಜ್ಯೋತಿ ಯೋಜನೆ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ತಿನಂತೆ 1.63 ಕೋಟಿ ಸಂಪರ್ಕಗಳಿಗೆ ಈವರೆಗೆ ಸುಮಾರು 14950 ಕೋಟಿ ಹಣವನ್ನು ವ್ಯಯಿಸಲಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ತಿಂಗಳು ತಲಾ 10 ಕೆ.ಜಿ ಅಕ್ಕಿಯನ್ನು ಸುಮಾರು 4 ಕೋಟಿ ಫಲಾನುಭವಿ ಗಳಿಗೆ ಈವರೆಗೆ ೧೪,೦೨೩ ಕೋಟಿ ಹಣವನ್ನು ವ್ಯಯಿಸಲಾಗಿದೆ.

ಗೃಹ ಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿಗೆ ಪ್ರತಿ ತಿಂಗಳು 2000 ದಂತೆ ಸುಮಾರು 1.27 ಕೋಟಿ ಫಲಾನುಭವಿಗಳಿಗೆ ಈವರೆಗೆ 42,530 ಕೋಟಿ ಹಣವನ್ನು ವ್ಯಯಿಸಲಾಗಿದೆ. ಶಕ್ತಿ ಯೋಜನೆ ಯಲ್ಲಿ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಉಚಿತಿ ಪ್ರಯಾಣವನ್ನು ಈವರೆಗೆ 455 ಕೋಟಿ ಉಚಿತ ಟಿಕೆಟ್ ಅನ್ನು ಮಹಿಳೆಯರು ಪಡೆದಿದ್ದಾರೆ.

ಇದರ ವೆಚ್ಚ 11403 ಕೋಟಿ ರು.ಗಳು ಈವರೆಗೆ ವ್ಯಯಿಸಲಾಗಿದೆ. ಅಂತಿಮವಾಗಿ ಯುವನಿಧಿ ಯೋಜನೆಯಲ್ಲಿ ನಿರುದ್ಯೋಗಿ ಪದವೀಧರರು/ಡಿಪ್ಲೊಮೊ ಪದವೀಧರರಿಗೆ 1.65 ಲಕ್ಷ ನೋಂದಾ ಯಿತರಿಗೆ ತಲಾ 3000/1500 ರು.ಗಳಂತೆ ಈವರೆಗೆ 327 ಕೋಟಿ ಹಣವನ್ನು ವ್ಯಯಿಸಲಾಗಿದೆ.

ಈ ಎಲ್ಲ ಯೋಜನೆಗಳನ್ನು ಬಿಜೆಪಿ ಕೂಡ ಕಾಪಿ ಮಾಡಿ ಮಹಾರಾಷ್ಟ್ರ ಹಾಗೂ ದೆಹಲಿ ಚುನಾ ವಣೆಗೆ ಬಳಸಿತ್ತು. ಇಂತಹ ಶ್ರೇಷ್ಠ ಯೋಜನೆಗಳನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಫಿಲೆಮನ್ ಯಾಂಗ್ ಶ್ಲಾಘಿಸಿದ್ದರು. ಈಗ ಜನರು ಹಿಂದಿನ ದಿನಗಳನ್ನು ಯೋಚಿಸಲು ಕೂಡ ಆತಂಕಪಡುತ್ತಾರೆ. ಬೆಲೆ ಏರಿಕೆಯ ಆ ದಿನಗಳಲ್ಲಿ ಪಟ್ಟ ಕಷ್ಟಗಳು ಹಾಗೂ ಕೈಗೆ ನೇರವಾಗಿ ಹಣ ಸಿಗುವ ಈ ದಿನಗಳಲ್ಲಿ ಪಡುತ್ತಿರುವ ಸಂಭ್ರಮದಿಂದಾಗಿ, ಒಂದೇ ಒಂದು ಮತದಿಂದ ಎಷ್ಟು ಬದಲಾವಣೆಯಾಗಿದೆ ಎಂಬುದು ಪ್ರತಿ ವ್ಯಕ್ತಿಗೂ ಮನವರಿಕೆಯಾಗಿದೆ.

ರಾಜ್ಯದ ಅಭಿವೃದ್ಧಿಗೆ ಪುಷ್ಟಿ: ಒಂದು ಕಡೆ ಅಭಿವೃದ್ಧಿಯ ಮಹಾ ಪರ್ವ ನಡೆಯುತ್ತಿದ್ದರೆ, ಮತ್ತೊಂದು ಕಡೆ ಪ್ರತಿಪಕ್ಷಗಳ ಅಪಪ್ರಚಾರದ ಪರ್ವವೂ ಜೋರಾಗಿಯೇ ನಡೆದಿದೆ. ಖಾಲಿ ಖಜಾನೆ ಎಂಬುದರಿಂದ ಆರಂಭವಾಗಿ, ಕೋಟ್ಯಂತರ ರುಪಾಯಿ ಭ್ರಷ್ಟಾಚಾರ ಎನ್ನುವವರೆಗೆ ಆರೋಪಗಳು ನಡೆಯುತ್ತಲೇ ಇವೆ. ಸರಕಾರದ ಹಣ ನೇರವಾಗಿ ಜನರ ಕೈಗೆ ಹೋಗುವಂತೆ ಮಾಡಿರುವ ಈ ಹೊಸ ವ್ಯವಸ್ಥೆಯನ್ನು ಹೊಗಳಲು ಸಾಧ್ಯವಾಗದೇ ರಾಜಕೀಯ ಕೆಸರೆರೆಚಾಟ ಮಾಡುವುದು ಸಾಮಾನ್ಯ ಸಂಗತಿ. ಗ್ಯಾರಂಟಿಗಳಿಂದಾಗಿ ಅಭಿವೃದ್ಧಿಯ ಪರ್ವಕ್ಕೆ ಯಾವುದೇ ತೊಡಕು ಉಂಟಾಗಿಲ್ಲ ಎಂಬುದು ಮುಚ್ಚಿಡಲಾಗದ ಸತ್ಯ.

ಈ ಎರಡು ವರ್ಷಗಳ ಅವಧಿಯಲ್ಲಿ ಜಿಎಸ್‌ಡಿಪಿ ಬೆಳವಣಿಗೆಯಲ್ಲಿ ಕರ್ನಾಟಕ 1ನೇ ಸ್ಥಾನಕ್ಕೇರಿದೆ. ದೇಶದ ಜಿಡಿಪಿ ಶೇ.8.2 ರಷ್ಟಿದ್ದರೆ, ರಾಜ್ಯದ ಜಿಡಿಪಿ ಶೇ.10.2 ಆಗಿದೆ. ತೆರಿಗೆ ಸಂಗ್ರಹ ಮತ್ತು ವಿದೇಶಿ ಬಂಡವಾಳ ಹೂಡಿಕೆಯಲ್ಲಿ ರಾಜ್ಯ 2ನೇ ಸ್ಥಾನಕ್ಕೆ ತಲುಪಿದೆ. 2024ರಲ್ಲಿ ಇಡೀ ದೇಶದಲ್ಲಿ ಕರ್ನಾ ಟಕ ಶೇ.63ರಷ್ಟು ಉದ್ಯೋಗಾವಕಾಶ ಹೊಂದಿದೆ. ಉದ್ಯೋಗ ಪಡೆಯಲು ಅರ್ಹರಾಗಿರುವ ಪದವೀ ಧರರು ಇರುವ ರಾಜ್ಯ ಗಳಲ್ಲಿ ನಮ್ಮ ರಾಜ್ಯಕ್ಕೆ 7ನೇ ಸ್ಥಾನವಿದೆ. 2024-29ರ ಕೈಗಾರಿಕಾ ನೀತಿ ಯಿಂದಾಗಿ 20 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಹೊಸ ನೀತಿಯಿಂದ 7.5 ಲಕ್ಷ ಕೋಟಿ ರು. ಹೂಡಿಕೆ ಆಕರ್ಷಣೆಯಾಗಲಿದೆ.

ಕಳೆದೊಂದು ವರ್ಷದಲ್ಲಿ 48000 ಕೋಟಿ ರು. ಹೂಡಿಕೆಗೆ ಅನುಮೋದನೆ ನೀಡಿದ್ದು, 34115 ಕೋಟಿ ರು. ಮೊತ್ತದ ಬಂಡವಾಳ ಹೂಡಿಕೆಯ 14 ಉದ್ಯಮಗಳ ಆರಂಭಕ್ಕೆ ಒಪ್ಪಿಗೆ ನೀಡಲಾಗಿದೆ. ಇದರಿಂದ 13308 ಜನರಿಗೆ ಉದ್ಯೋಗ ಸಿಕ್ಕಿದೆ. ಇನ್ವೆ ಕರ್ನಾಟಕ-2025 ಕಾರ್ಯಕ್ರಮದಲ್ಲಿ 10.27 ಲಕ್ಷ ಕೋಟಿ ರು. ಹೂಡಿಕೆ ತಂದಿದ್ದು, 6 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ.

ಹಿಂದಿನ ಬಿಜೆಪಿ ಅವಧಿಯಲ್ಲಿ 6.29 ಲಕ್ಷ ಕೋಟಿ ರು. ಹೂಡಿಕೆ ಹಾಗೂ 3.52 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಇತ್ತು. ಅದು ಕೂಡ ಐದು ವರ್ಷಗಳ ಗುರಿ. ಆದರೆ ಕಾಂಗ್ರೆಸ್ ಸರಕಾರ ಒಂದೇ ವರ್ಷದಲ್ಲಿ ಈ ಗುರಿಯನ್ನು ಹೊಂದಿ, ಹೂಡಿಕೆ ತಂದಾಗಿದೆ. ಬರಪೀಡಿತ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರಕ್ಕೆ ನೀರು ಹರಿಸಲು 23,251 ಕೋಟಿ ರು. ವೆಚ್ಚದ ಎತ್ತಿನ ಹೊಳೆ ಯೋಜನೆಯ ೧ನೇ ಹಂತ ಉದ್ಘಾಟನೆಯಾಗಿದೆ.

ಕಲಬುರಗಿ, ಬೀದರ್ ಜಿಲ್ಲೆಗಳ ಕುಡಿಯುವ ನೀರಿಗೆ 7200 ಕೋಟಿ ರು. ಯೋಜನೆಗೆ ಅನುಮೋದನೆ ದೊರೆತಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ 3740 ಕೋಟಿ ಅನುಮೋದನೆಯಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಬಜೆಟ್ ನಲ್ಲಿ 1 ಲಕ್ಷ 35 ಸಾವಿರ ಕೋಟಿ ರೂ ಅನುದಾನ ಮೀಸಲಿಟ್ಟಿ ದ್ದೇವೆ. ಕರ್ನಾಟಕದ ಪ್ರಗತಿಗಾಗಿ ಕಾಮಗಾರಿಗಳನ್ನು ಜಾರಿ ಮಾಡಲಾಗಿದೆ. ಬಿಜೆಪಿ ಅವಧಿಯಲ್ಲಿ 4618 ಕೆರೆಗಳಗಿದ್ದ ಒತ್ತುವರಿಯನ್ನು ತೆರವು ಮಾಡಿ ಜಲಮೂಲಗಳನ್ನು ಸಂರಕ್ಷಿಸಲಾಗಿದೆ.

ಬ್ರ್ಯಾಂಡ್ ಬೆಂಗಳೂರಿಗೆ ಮುನ್ನುಡಿ: ಬ್ರ್ಯಾಂಡ್ ಬೆಂಗಳೂರು ನನ್ನ ಕನಸಿನ ಯೋಜನೆ ಮಾತ್ರ ವಲ್ಲ, ಇದು ಒಂದು ದೂರದೃಷ್ಟಿ. ನಗರದಲ್ಲಿ ನೆಮ್ಮದಿಯಿಂದ ಬದುಕಲು ಮಾಡಬೇಕಾದ ಬದಲಾವಣೆಯ ಸಮಗ್ರ ನೋಟವೇ ಈ ಯೋಜನೆ. ಕಳೆದೆರಡು ವರ್ಷಗಳಲ್ಲಿ ರಾಜಧಾನಿಯ ಮೂಲ ಸೌಕರ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಬಿಬಿಎಂಪಿಗೆ ಹೊಸದಾಗಿ ಸೇರಿದ 110 ಗ್ರಾಮ ಗಳಿಗೆ ಹೆಚ್ಚುವರಿಯಾಗಿ 775 ಎಂಎಲ್‌ಡಿ ಕಾವೇರಿ ನೀರು ನೀಡುವ 5ನೇ ಹಂತದ ಯೋಜನೆ ಯಲ್ಲಿ 15 ಸಾವಿರ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ.

ದೇಶದಲ್ಲಿಯೇ ಮೊದಲ ಬಾರಿಗೆ ಸಂಚಾರಿ ಕಾವೇರಿ ಯೋಜನೆ ತಂದು ಶುದ್ಧ ಕುಡಿಯುವ ನೀರೊ ದಗಿಸಲಾಗಿದೆ. ಸರ್ಜಾಪುರ ಬಳಿ 1000 ಎಕರೆ ಪ್ರದೇಶದಲ್ಲಿ ಸ್ವಿ- ನಗರ ನಿರ್ಮಾಣವಾಗುತ್ತಿದೆ. 40000 ಕೋಟಿ ಹೂಡಿಕೆ ಆಕರ್ಷಿಸುವ ಹಾಗೂ 80000 ಉದ್ಯೋಗ ಸೃಷ್ಟಿಸುವ ಕ್ವಿನ್ ನಗರವನ್ನು 5800 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

ಕಾಂಗ್ರೆಸ್ ಸರಕಾರ ಇಷ್ಟೆಲ್ಲ ಅಭಿವೃದ್ಧಿ ಮಾಡುತ್ತಿದ್ದರೂ, ಕೇಂದ್ರ ಸರಕಾರದಿಂದ ಸರಿಯಾದ ಸಹಕಾರ ಸಿಗುತ್ತಿಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಬರ ಪರಿಹಾರ, ತೆರಿಗೆ ಮರು ಹಂಚಿಕೆ, ನಬಾರ್ಡ್ ಸಾಲ ಕಡಿತ ಸೇರಿದಂತೆ ಅನೇಕ ರೀತಿಗಳಲ್ಲಿ ಕೇಂದ್ರ ಸರಕಾರ ಕರ್ನಾಟಕಕ್ಕೆ ನಿರಂತರ ವಾಗಿ ಅನ್ಯಾಯ ಮಾಡುತ್ತಲೇ ಇದೆ. ಬೆಂಗಳೂರಿನಲ್ಲಿ ಸುರಂಗ ರಸ್ತೆ, ಮೆಟ್ರೋ ಸಂಪರ್ಕ ವಿಸ್ತರಣೆ, ನೀರಾವರಿ ಯೋಜನೆಗಳಿಗೆ ವಿಶೇಷ ಅನುದಾನ ನೀಡುವಂತೆಯೂ ಖುದ್ದಾಗಿ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೆ. ಈ ಯಾವುದೇ ಮನವಿಗಳನ್ನು ಕೇಂದ್ರ ಸರಕಾರ ಕಿವಿಗೆ ಹಾಕಿಕೊಳ್ಳಲೇ ಇಲ್ಲ.

ಹಾಗೆಂದು ಕಾಂಗ್ರೆಸ್ ಸರಕಾರವೇನೂ ಕೈ ಕಟ್ಟಿ ಕೂತಿಲ್ಲ. ಕಾಲಕಾಲಕ್ಕೆ ಆಗಬೇಕಾದ ಅಭಿವೃದ್ಧಿ ಯೋಜನೆಗಳಿಗೆ ಚುರುಕು ನೀಡುವ ಕೆಲಸವನ್ನು ನಮ್ಮ ಸರಕಾರ ಮಾಡುತ್ತಲೇ ಇದೆ. ಈ ಹಿಂದೆ ಇದ್ದ ಸರಕಾರಗಳು ಅಭಿವೃದ್ಧಿಯನ್ನು ಮಾಡಿರಬಹುದು. ಆದರೆ ನಮ್ಮ ಸರಕಾರ ಅಭಿವೃದ್ಧಿಯ ಪರಿಕಲ್ಪನೆ ಯನ್ನೇ ಬದಲಾಯಿಸಿದೆ.

ರಸ್ತೆ, ಸೇತುವೆ, ಶಾಲೆ, ಆಸ್ಪತ್ರೆ ನಿರ್ಮಿಸಿದರೆ ನಮ್ಮ ಕೆಲಸ ಮುಗಿಯಿತು ಎಂದು ಈ ಹಿಂದಿನ ಸರಕಾರಗಳು ಆಲೋಚಿಸುತ್ತಿದ್ದವು. ಈಗ ಈ ಪ್ರಗತಿ ಕಾರ್ಯಗಳೊಂದಿಗೆ ಪ್ರತಿ ಕುಟುಂಬಗಳ ಆರ್ಥಿಕ ಪ್ರಗತಿಗೂ ನೇರವಾಗಿ ಸರಕಾರ ಕ್ರಮ ವಹಿಸಬೇಕು ಎಂಬ ಹೊಸ ದೃಷ್ಟಿಯನ್ನು ತರಲಾಗಿದೆ.

ಗ್ಯಾರಂಟಿಗಳೊಂದಿಗೆ ವಿಶಿಷ್ಟವಾದ ಅಭಿವೃದ್ಧಿಯ ಹೆಜ್ಜೆಗಳನ್ನೂ ನಾವು ಇಡುತ್ತಿದ್ದೇವೆ. ಮುಂದಿನ ವರ್ಷಗಳಲ್ಲಿ ಈ ಹೆಜ್ಜೆಗಳನ್ನು ಇನ್ನಷ್ಟು ವೇಗವಾಗಿ ಹಾಗೂ ಆಳವಾಗಿ ಇಡಲಿದ್ದೇವೆ. ಇದು ಜನರ ಭವಿಷ್ಯವನ್ನು ಗಟ್ಟಿಯಾಗಿ ಕಟ್ಟುವ ಹೆಜ್ಜೆಗಳು. ಇವೇ ಬದುಕಿನ ಆಧಾರಗಳು.