ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narayana Bharamani: ಮುಖ್ಯಮಂತ್ರಿಯಿಂದ ಅವಮಾನಕ್ಕೊಳಗಾಗಿ ರಾಜೀನಾಮೆಗೆ ಮುಂದಾದ ಎಎಸ್‌ಪಿ ನಾರಾಯಣ ಭರಮನಿಗೆ ಪದೋನ್ನತಿ

CM Siddaramaiah: ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅವಮಾನಕ್ಕೀಡಾಗಿ ರಾಜೀನಾಮೆಗೆ ಮುಂದಾಗಿದ್ದ ಧಾರವಾಡ ಎಎಸ್‌ಪಿ ನಾರಾಯಣ ವಿ. ಭರಮನಿ ಅವರಿಗೆ ಇದೀಗ ರಾಜ್ಯ ಸರ್ಕಾರ ಪದೋನ್ನತಿ ನೀಡಿದ್ದು, ಬೆಳಗಾವಿ ಕಾನೂನು ಸುವ್ಯವಸ್ಥೆಯ ಉಪ ಪೊಲೀಸ್‌ ಆಯುಕ್ತ (ಡಿಸಿಪಿ)ರಾಗಿ ನೇಮಿಸಿದೆ.

ಮುಖ್ಯಮಂತ್ರಿಯಿಂದ ಅವಮಾನಕ್ಕೊಳಗಾದ ಭರಮನಿಗೆ ಪದೋನ್ನತಿ

Profile Ramesh B Jul 17, 2025 4:39 PM

ಧಾರವಾಡ: ಕೆಲ ತಿಂಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಂದ ಅವಮಾನಕ್ಕೀಡಾಗಿ ರಾಜೀನಾಮೆಗೆ ಮುಂದಾಗಿದ್ದ ಧಾರವಾಡ ಎಎಸ್‌ಪಿ ನಾರಾಯಣ ವಿ. ಭರಮನಿ (Narayana Bharamani) ಅವರಿಗೆ ಇದೀಗ ರಾಜ್ಯ ಸರ್ಕಾರ ಪದೋನ್ನತಿ ನೀಡಿದ್ದು, ಬೆಳಗಾವಿ ಕಾನೂನು ಸುವ್ಯವಸ್ಥೆಯ ಉಪ ಪೊಲೀಸ್‌ ಆಯುಕ್ತ (ಡಿಸಿಪಿ)ರಾಗಿ ನೇಮಿಸಿದೆ. ಆ ಮೂಲಕ ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ಗುರುವಾರ (ಜು. 17) ಸರ್ಕಾರ ಆದೇಶ ಹೊರಡಿಸಿದೆ.

ಧಾರವಾಡ ಜಿಲ್ಲಾ ಹೆಚ್ಚುವರಿ ‍ಪೊಲೀಸ್‌ ಅಧೀಕ್ಷಕ ನಾರಾಯಣ ಭರಮನಿ ಅವರನ್ನು ಬೆಳಗಾವಿ ಡಿಸಿಪಿಯನ್ನಾಗಿ ನೇಮಿಸಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ. ಸಾರ್ವಜನಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮೇಲೆ ಕೈ ಎತ್ತಿದ್ದರು ಎಂಬ ಕಾರಣಕ್ಕೆ ಬೇಸರಗೊಂಡಿದ್ದ ಭರಮನಿ ರಾಜೀನಾಮೆಗೆ ಮುಂದಾಗಿದ್ದರು. ಈ ವಿಚಾರ ರಾಜ್ಯಾದ್ಯಂತ ಸದ್ದು ಮಾಡಿದ್ದಲ್ಲದೆ ಸರ್ಕಾರ ತೀವ್ರ ಮುಜುಗರ ಅನುಭವಿಸಿತ್ತು. ದಕ್ಷ ಅಧಿಕಾರಿಯೊಬ್ಬರು ತಮ್ಮದಲ್ಲದ ತಪ್ಪಿಗೆ ರಾಜೀನಾಮೆ ನೀಡುತ್ತಿದ್ದಾರೆ ಎಂದು ಸಾವರ್ಜನಿಕರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು.

ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣದ ವೇಳೆ ವೇದಿಕೆಯಲ್ಲಿ ಭರಮನಿ ಅವರಿಗೆ ಹೊಡೆಯಲು ಕೈ ಎತ್ತಿದ್ದರು. ಈ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿ ತೀವ್ರ ಮುಜುಗರಕ್ಕೀಡಾದ ಭರಮನಿ ರಾಜೀನಾಮೆಗೆ ಮುಂದಾಗಿದ್ದರು. ಇದರಿಂದ ವಿಪಕ್ಷಗಳು ವಾಗ್ದಾಳಿ ನಡೆಸಿದ್ದವು. ಹೀಗಾಗಿ ರಾಜ್ಯ ಸರ್ಕಾರ ಅವರ ಮನವೊಲಿಸಲು ಮುಂದಾಗಿತ್ತು. ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಕೂಡ ಈ ಸಂಬಂಧ ಭರಮನಿ ಜತೆ ಮಾತನಾಡಿದ್ದರು. ಇದೀಗ ಕೊನೆಗೂ ಭರಮನಿ ಅವರ ಮನವೊಲಿಸಿದೆ.

ಈ ಸುದ್ದಿಯನ್ನೂ ಓದಿ: CM Siddaramaiah: ಇನ್ನು ರಾಜ್ಯ ಪೊಲೀಸರಿಗೆ ಟೋಪಿ ಬದಲು ಪಿ-ಕ್ಯಾಪ್‌, ಆರೋಗ್ಯ ತಪಾಸಣೆ ವೆಚ್ಚ ಹೆಚ್ಚಳ

ಘಟನೆ ವಿವರ

ಏಪ್ರಿಲ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಅವರು ವೇದಿಕೆ ಮೇಲೇರಿ ಮಾತನಾಡಲು ಮುಂದಾದಾಗ ಬಿಜೆಪಿ ಕಾಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಅಸಮಾಧಾನಗೊಂಡಿದ್ದ ಸಿದ್ದರಾಮಯ್ಯ ಅಲ್ಲೇ ಇದ್ದ ಧಾರವಾಡ ಎಎಸ್‌ಪಿ ಭರಮನಿ ಅವರಿಗೆ ಹೊಡೆಯುವ ರೀತಿ ಕೈ ಎತ್ತಿದರು. ಬಳಿಕ ಸಿದ್ದರಾಮಯ್ಯ ಅವರ ವರ್ತನೆ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ಭರಮನಿ ಹಿನ್ನೆಲೆ

ನಾರಾಯಣ ವಿ ಭರಮನಿ 1994ರ ಬ್ಯಾಚ್‌ನ ಪೊಲೀಸ್ ಅಧಿಕಾರಿ. ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿ ಗ್ರಾಮದವರು. ದಕ್ಷ ಅಧಿಕಾರಿ, ರೌಡಿಗಳ ಪಾಲಿನ ಸಿಂಹಸ್ವಪ್ನ ಎನಿಸಿಕೊಂಡಿದ್ದ ಅವರು ಈ ಹಿಂದೆ ಬೀದರ್, ಗದಗ, ಹುಬ್ಬಳ್ಳಿಯಲ್ಲೂ ಕರ್ತವ್ಯ ನಿರ್ವಹಿಸಿದ್ದರು. ಹೀಗಾಗಿ ಅವರು ರಾಜೀನಾಮೆ ಸಲ್ಲಿಸಲು ಮುಂದಾದಾಗ ಇಡೀ ರಾಜ್ಯವೇ ಅವರ ಪರವಾಗಿ ನಿಂತಿತ್ತು. ಸಾರ್ವಜನಿಕವಾಗಿ ಅವಮಾನಕ್ಕೊಳಗಾಗಿ ನೊಂದುಕೊಂಡಿದ್ದ ಅವರು ಕಳೆದ ತಿಂಗಳು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ವಿಆರ್‌ಎಸ್‌ಗೆ ಮನವಿ ಸಲ್ಲಿಸಿದ್ದರು. ಬಳಿಕ ಸಿದ್ದರಾಮಯ್ಯ ಸ್ವತಃ ಸ್ಪಷ್ಟನೆ ನೀಡಿ, ಘಟನೆ ಉದ್ದೇಶಪೂರ್ವಕವಾಗಿ ನಡೆದುದಲ್ಲ ಎಂದಿದ್ದರು ಎನ್ನಲಾಗಿದೆ.