ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಎಲ್ಲರೊಳಗಿನ ನಾರಾಯಣ

ಮಾವುತ ಕೂಗಿ ಎಚ್ಚರಿಸುತ್ತಿದ್ದರೂ ಕಡೆಗಣಿಸಿ ಆನೆಯೆದುರು ಸಾಷ್ಟಾಂಗ ನಮಸ್ಕಾರ ಹಾಕ ತೊಡಗಿದ. ಮೊದಲೇ ಆನೆಗೆ ಮದವೇರಿತ್ತು. ತನ್ನೆದುರು ಮಂಡಿಯೂರುತ್ತಿದ್ದ ಆ ಶಿಷ್ಯನನ್ನು ಅದು ಸೊಂಡಿಲಿ ನಿಂದ ಎತ್ತಿ ಬಿಸಾಡಿತು. ಪೂರ್ವಪುಣ್ಯದಿಂದ ಶಿಷ್ಯ ಸಮೀಪದ ಕೊಳದಲ್ಲಿ ಬಿದ್ದು ಪೆಟ್ಟುಗಳಿಂದ ಬಚಾವಾದ.

ಎಲ್ಲರೊಳಗಿನ ನಾರಾಯಣ

ಒಂದೊಳ್ಳೆ ಮಾತು

rgururaj628@gmail.com

ಒಮ್ಮೆ ಒಬ್ಬ ಗುರು ತನ್ನ ಶಿಷ್ಯನಿಗೆ ಬೋಧನೆ ಮಾಡುತ್ತಾ, “ಪ್ರತಿಯೊಂದು ಜೀವಿಯಲ್ಲೂ ನಾರಾ ಯಣ ನೆಲೆಸಿದ್ದಾನೆ" ಎಂದು ಹೇಳಿದರು. ಗುರುವಿನ ಈ ಮಾತು ಶಿಷ್ಯನ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತಿತು. ಮರುದಿನ ಆ ಶಿಷ್ಯ ಚಿಕ್ಕದೊಂದು ಕಾಲು ದಾರಿಯಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಒಂದು ಆನೆ ಬರುತ್ತಿರುವುದು ಕಾಣಿಸಿತು.

ಆನೆಯ ಮೇಲಿದ್ದ ಮಾವುತನು ದಾರಿಹೋಕರಿಗೆ “ಆನೆಗೆ ಮದವೇರಿದೆ, ನನ್ನ ಅಂಕುಶಕ್ಕೂ ಮಣಿ ಯುತ್ತಿಲ್ಲ, ಎಲ್ಲರೂ ಸ್ವಲ್ಪ ದೂರ ಸರಿಯಿರಿ" ಎಂದು ಕೂಗಿ ಹೇಳುತ್ತಿದ್ದ. ಶಿಷ್ಯನಿಗೂ ಈ ಕೂಗು ಕೇಳಿಸಿತು. ಆದರೆ ಸಕಲ ಪ್ರಾಣಿಗಳಲ್ಲೂ ನಾರಾಯಣ ನೆಲೆಸಿರುತ್ತಾನೆ, ಎಂದು ಗುರುಗಳು ನೆನ್ನೆ ತಾನೆ ಹೇಳಿದ್ದರಲ್ಲ? ಹಾಗಾದರೆ ಆನೆಯಲ್ಲೂ ನಾರಾಯಣ ನೆಲೆಸಿದ್ದಾನೆ ಎಂದು ಆತ ಭಾವಿಸಿದ.

ಮಾವುತ ಕೂಗಿ ಎಚ್ಚರಿಸುತ್ತಿದ್ದರೂ ಕಡೆಗಣಿಸಿ ಆನೆಯೆದುರು ಸಾಷ್ಟಾಂಗ ನಮಸ್ಕಾರ ಹಾಕ ತೊಡಗಿದ. ಮೊದಲೇ ಆನೆಗೆ ಮದವೇರಿತ್ತು. ತನ್ನೆದುರು ಮಂಡಿಯೂರುತ್ತಿದ್ದ ಆ ಶಿಷ್ಯನನ್ನು ಅದು ಸೊಂಡಿಲಿನಿಂದ ಎತ್ತಿ ಬಿಸಾಡಿತು. ಪೂರ್ವ ಪುಣ್ಯದಿಂದ ಶಿಷ್ಯ ಸಮೀಪದ ಕೊಳದಲ್ಲಿ ಬಿದ್ದು ಪೆಟ್ಟುಗಳಿಂದ ಬಚಾವಾದ. ಏದುಸಿರು ಬಿಡುತ್ತಾ ಗುರುವಿನ ಎದುರು ನಿಂತು, “ನೀವು ಹೇಳಿದ್ದು ಸುಳ್ಳಾಯಿತು.

ಇದನ್ನೂ ಓದಿ: Roopa Gururaj Column: ಭಗವದ್ಗೀತೆಯಂಥ ಧರ್ಮಗ್ರಂಥಗಳನ್ನು ಏಕೆ ಓದಬೇಕು ?

ಎಲ್ಲ ಜೀವಿಗಳಲ್ಲೂ ನಾರಾಯಣ ನೆಲೆಸಿದ್ದು ನಿಜವೇ ಆಗಿದ್ದರೆ ಆ ಆನೆ ನನ್ನನ್ನೇಕೆ ಎಸೆಯಿತು? ಅದರಲ್ಲಿ ನಾರಾಯಣನಿರಲಿಲ್ಲ" ಎಂದು ದೂರಿದ. ಶಾಂತವಾಗಿ ನಗುತ್ತಾ ಗುರುಗಳು “ಆನೆಯ ಮೇಲಿದ್ದ ಮಾವುತ ನಿನಗೇನೂ ಹೇಳಲಿಲ್ಲವೆ?" ಎಂದು ಕೇಳಿದರು.

ಗೊಂದಲಗೊಂಡ ಶಿಷ್ಯ, “ಆನೆಗೆ ಮದವೇರಿದೆ, ನನ್ನ ಹಿಡಿತಕ್ಕೆ ಬಗ್ಗುತ್ತಿಲ್ಲ, ಪಕ್ಕಕ್ಕೆ ಸರಿಯಿರಿ ಎಂದು ಆತ ಕೂಗಿ ಹೆಳುತ್ತಿದ್ದ" ಎಂದ. “ಆನೆಯ ಮೇಲೆ ಕುಳಿತಿದ್ದ ಮಾವುತನಲ್ಲೂ ನಾರಾಯಣನಿದ್ದ ಮತ್ತು ಆತ ನಿನಗೆ ಮುನ್ನೆಚ್ಚರಿಕೆ ನೀಡುತ್ತಿದ್ದ. ನೀನು ಆನೆಯಲ್ಲಿ ನಾರಾಯಣನನ್ನು ಕಂಡು ನಮಸ್ಕರಿಸಲು ಹೋದೆ. ಆದರೆ ಮಾವುತನಲ್ಲಿ ನಾರಾಯಣನನ್ನು ಕಂಡು ಆತನ ಮಾತಿಗೆ ಮನ್ನಣೆ ನೀಡಲಿಲ್ಲವೇಕೆ?" ಎಂದು ಕೇಳಿದರು. ಶಿಷ್ಯನಿಗೆ ತನ್ನ ತಪ್ಪಿನ ಅರಿವಾಯಿತು. ಗುರುವಿನಲ್ಲಿ ಕ್ಷಮೆ ಬೇಡಿ ಅವರ ಮಾತನ್ನೇ ಧೇನಿಸುತ್ತಾ ಕುಳಿತ.

ನಾವು ಯಾವುದಾದರೂ ವಿಷಯದಲ್ಲಿ ನಂಬಿಕೆ ಇರಿಸುವುದಾದರೆ, ಸಂಪೂರ್ಣವಾಗಿ ಆ ಮಾತಿನಲ್ಲಿ ನಂಬಿಕೆ ಇಡಬೇಕು. ಅಷ್ಟೇ ಅಲ್ಲ ಅದರ ಎಲ್ಲ ಆಯಾಮಗಳನ್ನೂ ಗ್ರಹಿಸಿದ ನಂತರವಷ್ಟೇ ನಂಬಿಕೆ ಇಟ್ಟು ಅಳವಡಿಸಿಕೊಳ್ಳಬೇಕು. ಯಾವುದೇ ಬೋಧನೆಯನ್ನು ಅರ್ಧ ತಿಳಿದು, ಇನ್ನು ಅರ್ಧದಷ್ಟು ಮಾತ್ರ ಅನುಷ್ಠಾನಗೊಳಿಸಿದರೆ ಕೇಡು ತಪ್ಪಿದ್ದಲ್ಲ. ಇದನ್ನು ತಮ್ಮ ಶಿಷ್ಯರಿಗೆ ಮನದಟ್ಟು ಮಾಡಿ ಸಲು ರಾಮಕೃಷ್ಣ ಪರಮಹಂಸರು ಹೇಳಿದ ಕಥೆ ಇದು.

ಇಂದಿನ ದಿನಗಳಲ್ಲಿ ನಾವು ಕೂಡ ಇಂಥದ್ದೇ ಕೆಲಸ ಮಾಡುತಿದ್ದೇವೆ ಅಲ್ಲವೇ? ಈಗ ಟಿವಿ ಮಾಧ್ಯಮಗಳಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣ, ಯೂಟ್ಯೂಬ್, ಇನ್ಸ್ಟಾಗ್ರಾಮ್ ಫೇಸ್ಬುಕ್, ಎಲ್ಲದರಲ್ಲೂ ಕೂಡ ಅನೇಕ ಸೂಕ್ಷ್ಮ ವಿಷಯಗಳ ಬಗ್ಗೆ ತಮ್ಮದೇ ಆದ ಗ್ರಹಿಕೆಯನ್ನು ವಿಷಯ ವನ್ನು ಸುದ್ದಿ ಮಾಡುತ್ತಿರುವ ಅನೇಕ ಜನರನ್ನು ನೋಡುತ್ತೇವೆ.

ಅವರ ಪೂರ್ವ ಪರ ತಿಳಿದುಕೊಳ್ಳದೆ, ಮೇಲಿಂದ ಮೇಲೆ ಅವರಿಂದ ಬರುವ ವಿಡಿಯೋಗಳನ್ನು ನೋಡುತ್ತಾ ಸುಳ್ಳು ಸುದ್ದಿಗಳನ್ನೇ, ಅರ್ಧ ಸತ್ಯಗಳನ್ನೇ ನಿಜವಿರಬಹುದುಂದು ನಂಬುತ್ತಾ ಹೋಗು ತ್ತೇವೆ. ಹಲವಾರು ದಾಖಲೆಗಳ ಬಗ್ಗೆ, ಅವರ ಬಳಿ ಇರುವ ಸಾಕ್ಷಿಗಳ ಬಗ್ಗೆ ಮಾತನಾಡುವ ಅವರು ಅದನ್ನು ಸಲ್ಲಿಸಬೇಕಾದದ್ದು ಪೊಲೀಸ್ ಸ್ಟೇಷನ್, ಕೋರ್ಟು ಕಚೇರಿಗಳಲ್ಲಿ. ಆದರೆ ನೇರವಾದ ಮಾರ್ಗ ಅನುಸರಿಸದೇ ಅರ್ಧಂಬರ್ಧ ಸತ್ಯಗಳನ್ನು ಮತ್ತೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳುತ್ತಾ ಹಲವಾರು ಜನರನ್ನು ನಂಬಿಸುತ್ತಾ ಹೋಗುತ್ತಾರೆ. ಇದೊಂದು ಸಾಮೂಹಿಕ ಸನ್ನಿ ಯಂತೆ ಎಲ್ಲರನ್ನು ಆವರಿಸುತ್ತದೆ.

ಆದರೆ ನಿಜ ತಿಳಿಯಬೇಕಾದರೆ ಸಂಪೂರ್ಣ ಸತ್ಯ ಅನಾವರಣವಾಗಬೇಕಾದರೆ ಅದು ಸರಿಯಾದ ಸಂಸ್ಥೆಯಿಂದ, ಸರಿಯಾದ ರೀತಿಯಲ್ಲಿ ಆದಾಗ ಮಾತ್ರ ಅದು ನಂಬಲು ಅರ್ಹ. ಇಲ್ಲದಿದ್ದರೆ ನಾವು ಕೂಡ ಇಂತಹ ಸಮೂಹ ಸನ್ನಿಗೆ ಒಳಗಾಗುತ್ತೇವೆ.