Vishweshwar Bhat Column: ಆಪ್ತ ಕಾರ್ಯದರ್ಶಿ ಹೆಚ್ಚು ಆಪ್ತರಾದರೆ ಎಷ್ಟು ಆಪತ್ತು !
ಮಥಾಯ್ ಬಗ್ಗೆ ಖುಷ್ವಂತ್ ಸಿಂಗ್ ಹೇಳಿದ್ದಾರೆ - ‘ಅವನು ಕುಬ್ಜ ಮನುಷ್ಯ. ಅದೇ ಅವನ ಸಮಸ್ಯೆ. ಸಣ್ಣ ಕಾಲುಗಳುಳ್ಳ ಮನುಷ್ಯನನ್ನು ನಂಬಬಾರದು. ಕಾರಣ ಅವನ ಮಿದುಳು ನೆಲಕ್ಕೆ ಹತ್ತಿರ ದಲ್ಲಿರುತ್ತದೆ.’ ಆಪ್ತ ಕಾರ್ಯದರ್ಶಿ ಎಷ್ಟು ಆಪ್ತವಾಗಿರಬೇಕು ಎಂಬ ವಿಷಯ ಪ್ರಸ್ತಾಪವಾದಾಗಲೆಲ್ಲ ಮಥಾಯ್ ನೆನಪಾಗುತ್ತಾರೆ! ಏನೇ ಆದರೂ, ಮಥಾಯ್ ಅವರಷ್ಟು ಆಪ್ತರಾಗಬಾರದು!


ನೂರೆಂಟು ವಿಶ್ವ
vbhat@me.com
ನಾನು ಕಳೆದ ಕೆಲ ದಿನಗಳಿಂದ ಭಾರತದಲ್ಲಿ ನಿಷೇಧಕ್ಕೊಳಗಾದ ಒಂದು ಪುಸ್ತಕವನ್ನು ಓದುತ್ತಿದ್ದೇನೆ. ಇಂಥ ಪುಸ್ತಕವನ್ನು ಓದುವುದು ಅಪರಾಧವಾ ಗೊತ್ತಿಲ್ಲ. ಆದರೆ ಜನ ನಿಷೇಧ ಕ್ಕೊಳಗಾದ ಪುಸ್ತಕಗಳನ್ನೇ ಹೆಚ್ಚು ಕುತೂಹಲದಿಂದ, ಕದ್ದು ಮುಚ್ಚಿ ಓದುತ್ತಾರೆ. ಬ್ಯಾನ್ ಆದ ಪುಸ್ತಕಗಳನ್ನು ಜನ ಕೇಳಿದ ಬೆಲೆಗೆ ಕೊಟ್ಟು ಖರೀದಿಸುತ್ತಾರೆ.
ಒಂದು ಪುಸ್ತಕವನ್ನು ಹೆಚ್ಚು ಜನ ಓದುವಂತಾಗಲು, ಅದನ್ನು ನಿಷೇಧಿಸಬೇಕು. ಒಂದು ಕೃತಿಯಲ್ಲಿ ಎಷ್ಟೇ ಸ್ಫೋಟಕ ಮಾಹಿತಿಯಿರಲಿ, ಅದನ್ನು ಬ್ಯಾನ್ ಮಾಡದಿರುವುದೇ ಒಳ್ಳೆಯದು. ನಿಷೇಧ ಕ್ಕೊಳಗಾಗುತ್ತಿದ್ದಂತೆ, ಅದು ಕಾಳಸಂತೆಯಲ್ಲಿ ಮಾರಾಟವಾಗುತ್ತದೆ. ಮೂಲಪ್ರತಿ ಸಿಗದಿದ್ದರೆ, ಜನ ಜೆರಾಕ್ಸ್ ಮಾಡಿಸಿಕೊಂಡಾದರೂ ಓದುತ್ತಾರೆ. ನಿಷೇಧ ಮಾಡಿದ ಉದ್ದೇಶವೇ ವಿಫಲವಾಗುತ್ತದೆ.
ಪುಸ್ತಕ ಬಿಡುಗಡೆಯಾಗಿದ್ದಕ್ಕಿಂತ, ಅದು ನಿಷೇಧಕ್ಕೊಳಗಾದರೆ ಹೆಚ್ಚು ಸುದ್ದಿಯಾಗಿತ್ತದೆ. ಆದರೂ ಅಧಿಕಾರದಲ್ಲಿ ಇದ್ದವರು ಇವೆಲ್ಲವನ್ನೂ ಯೋಚಿಸದೇ, ಪುಸ್ತಕವನ್ನು ನಿಷೇಧಿಸಲು ಮುಂದಾಗು ತ್ತಾರೆ. ನಾನು ಓದುತ್ತಿರುವ ಪುಸ್ತಕ ನಿಷೇಧಕ್ಕೊಳಗಾಗಿ ಸುಮಾರು 47 ವರ್ಷಗಳಾದವು. ಒಂದು ಪುಸ್ತಕವನ್ನು ಇಷ್ಟು ವರ್ಷಗಳ ಕಾಲ ಬ್ಯಾನ್ ಮಾಡಬಹುದೇ ಎಂಬುದೇ ಪ್ರಶ್ನೆ.
ಅನೇಕರಿಗೆ ಈ ಪುಸ್ತಕ ಸಿಕ್ಕರೆ, ಅದು ನಿಷೇಧಕ್ಕೊಳಗಾಗಿದೆಯೇ, ಇಲ್ಲವೇ ಎಂಬುದು ಸಹ ಗೊತ್ತಾಗುವುದಿಲ್ಲ. ನನಗೆ ಈ ಕೃತಿ ಸಿಕ್ಕಿದ್ದು ತರಗುಪೇಟೆಯ ರದ್ದಿ ಅಂಗಡಿಯಲ್ಲಿ. ಅದನ್ನು ತೆರೆಯು ತ್ತಿದ್ದಂತೆ, ಆ ಪುಸ್ತಕದ ವಾರಸುದಾರ, ಇದು ಬ್ಯಾನ್ ಆದ ಕೃತಿ. ನಾನು ಓದಿ, ಇದನ್ನು ರದ್ದಿಗೆ ಹಾಕಿದ್ದೇನೆ. ಇದನ್ನು ಕದ್ದು ಓದಬಹುದು’ ಎಂದು ಬರೆದಿದ್ದನ್ನು ನೋಡಿ, ಖರೀದಿಸಿ, ಕುತೂಹಲ ದಿಂದ, ರಾಜಾರೋಷವಾಗಿ ಓದಲಾರಂಭಿಸಿದೆ.
ಇದನ್ನೂ ಓದಿ: Vishweshwar Bhat Column: ಏರ್ ಸ್ಪೇಸ್ ಎಂದರೇನು ?
ತಮಾಷೆಯೆಂದರೆ ಈ ಪುಸ್ತಕದಲ್ಲಿ ಯಾವ ಅಧ್ಯಾಯ ಬಹಳ ರಸವತ್ತಾಗಿತ್ತೋ, ವಿವಾದಕ್ಕೊಳ ಗಾಗಿತ್ತೋ, ಅದೇ ಇರಲಿಲ್ಲ. ಪುಸ್ತಕದ ಆರಂಭದಲ್ಲಿ ಪ್ರಕಾಶಕರ ಟಿಪ್ಪಣಿಯಲ್ಲಿ ಬರೆದಿದ್ದರು-‘ಈ ಕೃತಿಯಲ್ಲಿ ಇಪ್ಪತ್ತೊಂಬತ್ತನೇ ಅಧ್ಯಾಯ (ಅದರ ಶೀರ್ಷಿಕೆ She)ವನ್ನು ಲೇಖಕರ ಕೋರಿಕೆಯ ಮೇರೆಗೆ, ಕೊನೆ ಕ್ಷಣದಲ್ಲಿ ತಡೆಹಿಡಿಯಲಾಗಿದೆ. ಈ ಪುಸ್ತಕದಲ್ಲಿ ಆ ಅಧ್ಯಾಯ ಇಲ್ಲ. ಆದರೆ ಓದುಗನ ಕುತೂಹಲ ಅಧ್ಯಾಯದ ಮೇಲೆಯೇ ಕೇಂದ್ರೀಕೃತವಾಗುತ್ತದೆ.
ಇಡೀ ಪುಸ್ತಕ ಓದಿ ಮುಗಿಸಿದ ನಂತರ ಆ ಇಪ್ಪತ್ತೊಂಬತ್ತನೆಯ ಅಧ್ಯಾಯದಲ್ಲಿ ಏನಿದ್ದಿರಬಹುದು ಎಂಬ ಕುತೂಹಲ ಪದೇ ಪದೆ ಕಾಡುತ್ತದೆ. ಅಂದ ಹಾಗೆ ಈ ಪುಸ್ತಕವನ್ನು ಬರೆದವರು ಭಾರತದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರು ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಎಂ.ಓ. ಮಥಾಯ. ಅದರ ಶೀರ್ಷಿಕೆ Reminiscences of the Nehru Age. ಈ ಪುಸ್ತಕ 1978ರಲ್ಲಿ ಪ್ರಕಟ ವಾಯಿತು.
ಆಗ ಇಂದಿರಾ ಗಾಂಧಿ ಅಧಿಕಾರ ಕಳೆದುಕೊಂಡಿದ್ದರು. ಅದೇ ಸಂದರ್ಭ ನೋಡಿ ಮಥಾಯ್ ಈ ಕೃತಿಯನ್ನು ಬಿಡುಗಡೆ ಮಾಡಿದ್ದರು. ಆದರೆ ಇಂದಿರಾ ಗಾಂಧಿ ಅಧಿಕಾರಕ್ಕೆ ಬರುತ್ತಿದ್ದಂತೆ, ಈ ಪುಸ್ತಕವನ್ನು ಬ್ಯಾನ್ ಮಾಡಿದರು. ಇದನ್ನು ನಿಷೇಧಿಸುವಾಗ ಕೃತಿಯ ಪ್ರಕಾಶಕರಿಂದ ಮುಚ್ಚಳಿಕೆ ಬರೆಯಿಸಿಕೊಳ್ಳಲಾಯಿತು. ‘ಈ ಕೃತಿಯಲ್ಲಿ She ಎಂಬ ಶೀರ್ಷಿಕೆಯ ಅಧ್ಯಾಯವೇ ಇರಲಿಲ್ಲ. ಲೇಖಕರು ಪಬ್ಲಿಸಿಟಿ ಗಿಮಿಕ್ ಭಾಗವಾಗಿ ಅಂಥದ್ದೊಂದು ಅಧ್ಯಾಯವಿದೆಯೆಂದು ಪ್ರಚಾರ ಮಾಡಿದ್ದಾರೆ’ ಎಂದು ಪ್ರಕಾಶಕರು ಬರೆದುಕೊಟ್ಟರು.
ಆದರೆ ತಮಿಳುನಾಡಿನ ನಾಯಕ ಎಂ.ಜಿ.ರಾಮಚಂದ್ರನ್, ತಾವು ಆ ಅಧ್ಯಾಯವಿರುವ ಪುಸ್ತಕ ವನ್ನು ಹೊಂದಿರುವುದಾಗಿಯೂ, ಆದರೆ ತಾವು ಅದನ್ನು ಓದಿಲ್ಲವೆಂದೂ ಹೇಳಿದ್ದು ಮತ್ತಷ್ಟು ಸಂದೇಹಕ್ಕೆ ಕಾರಣವಾಗಿತ್ತು. ನಂತರ ಅಂದಿನ ಇಂಟೆಲಿಜೆನ್ಸ್ ಬ್ಯೂರೋ ಮುಖ್ಯಸ್ಥ ಟಿ.ವಿ. ರಾಜೇಶ್ವರ ಈ ಎಲ್ಲ ಸಂದೇಹಗಳನ್ನೂ ಮ್ಯಾನೇಜ್ ಮಾಡಿದರು ಎಂದು ಎಲ್ಲೋ ಓದಿದ ನೆನಪು.
1981ರಲ್ಲಿ ಮಥಾಯ್ ತೀರಿಕೊಂಡಾಗ, ಅವರ ಬಗ್ಗೆ ಖುಷ್ವಂತ್ ಸಿಂಗ್ ಶ್ರದ್ಧಾಂಜಲಿ ಲೇಖನ ಬರೆದು ಮರೆತು ಹೋದ ಕೆಲವು ಸಂಗತಿಗಳನ್ನು ನೆನಪಿಸಿದ್ದರು. ಸತ್ತವರ ಬಗ್ಗೆ ಕೆಟ್ಟದ್ದನ್ನು ಬರೆಯಬಾರದು ಎಂದು ಆರಂಭದಲ್ಲಿ ಹೇಳುತ್ತಲೇ ಖುಷ್ವಂತ್ ಸಿಂಗ್, ಮಥಾಯ್ ಅವರ ವ್ಯಕ್ತಿತ್ವವನ್ನು ಬಿಚ್ಚಿಟ್ಟಿದ್ದರು.
‘ನಾನು ಮಥಾಯ್ ಅವರ ಬಗ್ಗೆ ಬರೆಯುವುದಿಲ್ಲ. ಆದರೆ ಮಥಾಯಿಸಂ ಬಗ್ಗೆ ಬರೆಯುತ್ತೇನೆ’ ಎಂದು ಜಾಣತನದಿಂದ ಹೇಳಿದ್ದು ನೆನಪಾಗುತ್ತಿದೆ. ಆ ಲೇಖನಕ್ಕೆ ಖುಷ್ವಂತ್ ಸಿಂಗ್ ‘ನೆಹರು ಪತನಕ್ಕೆ ಕಾರಣನಾದ ಮಥಾಯ’ ಎಂಬ ಶೀರ್ಷಿಕೆ ನೀಡಿದ್ದರು.
ಮುಂಡಪಲ್ಲಿಲ ಊಮ್ಮೆನ್ ಮಥಾಯ್ ಕೇರಳದ ತ್ರಿವಾಂಕೂರಿನ ಸಿರಿಯನ್ ಕ್ರಿಶ್ಚಿಯನ್ ಕುಟುಂಬ ದಲ್ಲಿ ಹುಟ್ಟಿದ ಮಹಾ ಚತುರ ಆಸಾಮಿ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಅಮೆರಿಕನ್ ಆರ್ಮಿಯಲ್ಲಿ ಕ್ಲರಿಕಲ್ ಕೆಲಸ ಮಾಡಿಕೊಂಡಿದ್ದರು. ನೆಹರು ಅವರಿಗೆ ಇವರನ್ನು ಒಬ್ಬ ಬ್ರಿಟಿಷ್ ಅಧಿಕಾರಿ ಪರಿಚಯ ಮಾಡಿಕೊಟ್ಟರು.
‘ನಿಮಗೆ ಇಂಗ್ಲಿಷ್ ಭಾಷೆಯಲ್ಲಿ ಬರೆಯಬಲ್ಲ, ಆಪ್ತ ಕಾರ್ಯದರ್ಶಿಯೊಬ್ಬರ ಅಗತ್ಯವಿದೆ. ಮಥಾಯ್ ನಿಮಗೆ ಒಳ್ಳೆಯ ಸಹಾಯಕರಾಗಬಹುದು. ಇವರು ನಿಮ್ಮ ಜತೆ ಇರಲಿ. ನೀವು ಇವರಿಗೆ ಏನನ್ನೇ ಸೂಕ್ಷ್ಮವಾಗಿ ಹೇಳಿ, ಅವರು ಚೆಂದವಾಗಿ ಡ್ರಾಫ್ಟ್ ಮಾಡಿಕೊಡುತ್ತಾರೆ’ ಎಂದು ಶಿಫಾರಸು ಮಾಡಿದರು.
ನೆಹರುಗೆ ಅಂಥ ಒಬ್ಬ ವ್ಯಕ್ತಿಯ ಅಗತ್ಯವಿತ್ತು. ಬ್ರಿಟಿಷ್ ಅಧಿಕಾರಿ ಶಿಫಾರಸು ಮಾಡಿದ ಮೇಲೆ, ನೆಹರು ಹೆಚ್ಚು ಯೋಚಿಸದೇ ಮಥಾಯ್ ಅವರನ್ನು ತಮ್ಮ ಜತೆ ಇಟ್ಟುಕೊಂಡರು. 1946ಕ್ಕಿಂತ ಮುಂಚೆ ಎಂ.ಓ. ಮಥಾಯ್ ಎಂಬ ವ್ಯಕ್ತಿ ಇದ್ದಾನೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ನೆಹರು ಮಥಾಯ್ ಅವರನ್ನು ತಮ್ಮ ಕಾರ್ಯದರ್ಶಿಯಾಗಿ ಸೇರಿಸಿಕೊಂಡರು.
ಮಥಾಯ್ ಅವರ ನಿಷ್ಠೆ, ಚಾಣಾಕ್ಷತನ, ಜನರ ಜತೆ ಬೆರೆಯುವ ರೀತಿ ನೆಹರುಗೆ ಇಷ್ಟವಾಯಿತು. ಎಲ್ಲಿ ಹೋದರು ಅವರಿಗೆ ಮಥಾಯ್ ಇರಬೇಕಾಗಿತ್ತು. ಎಲ್ಲಾ ಮಹತ್ವದ, ಸೂಕ್ಷ್ಮ ವಿಚಾರಗಳನ್ನು ಅವರಿಗೆ ಒಪ್ಪಿಸುತ್ತಿದ್ದರು. ಕ್ರಮೇಣ ಮಥಾಯ್, ನೆಹರು ಕುಟುಂಬದ ಸದಸ್ಯರಂತೆ ವರ್ತಿಸಲಾ ರಂಭಿಸಿದರು. ನೆಹರು ಪ್ರಧಾನಿಯಾಗುತ್ತಿದ್ದಂತೆ, ಮಥಾಯ್ ಅವರನ್ನು ತಮ್ಮ ವಿಶೇಷ ಕಾರ್ಯ ದರ್ಶಿ ಎಂದು ನೇಮಿಸಿಕೊಂಡರು.
ಈ ಹುದ್ದೆ ಅವರಿಗೆ ನೆಹರು ಅವರ ನೆರಳಿನಂತೆ ಇರಲು ಅವಕಾಶ ಮಾಡಿಕೊಟ್ಟಿತು. ಇದರಿಂದಾಗಿ ಅವರು ಇಂದಿರಾ ಗಾಂಧಿ, ಅವರ ಪತಿ ಫಿರೋಜ್ ಗಾಂಧಿ ಅವರಿಗೂ ಹತ್ತಿರದವರಾದರು. ಇದು ಮಥಾಯ್ ಅವರಿಗೆ ಇನ್ನಿಲ್ಲದ ಅಧಿಕಾರವನ್ನೂ ನೀಡಿತು. ಪ್ರಧಾನಿಯವರ ಕಚೇರಿಯೇ ದೇಶದ ಪ್ರಭಾವಿ ಅಧಿಕಾರ ಸ್ಥಾನವಾದರೆ, ನೆಹರು ನಂತರ ಆ ಸ್ಥಾನವನ್ನು ತಾನೇ ನಿಭಾಯಿಸುವುದು ಎಂಬ ಸಂದೇಶವನ್ನು ಮಥಾಯ್ ಕೊಟ್ಟಿದ್ದರು. ಪ್ರಧಾನಿ ಕಚೇರಿಯಲ್ಲಿ ತಾನು ಹೇಗಿದ್ದೆ ಎಂಬುದನ್ನು My Days with Nehru ಕೃತಿಯಲ್ಲಿ ಮಥಾಯ್ ಬರೆದುಕೊಂಡಿದ್ದಾರೆ - ‘No file or paper reached the Prime Minister except through me. Nothing went out except through me... Officials used to refer to me as Deputy Prime Minister... and the power behind the throne'
ಇದರಲ್ಲಿ ಯಾವ ಉತ್ಪ್ರೇಕ್ಷೆಯೂ ಇರಲಿಲ್ಲ. ಕೇಂದ್ರ ಸಚಿವರು, ಗಣ್ಯ ವ್ಯಕ್ತಿಗಳು ನೆಹರು ಅವರನ್ನು ನೋಡುವುದಕ್ಕಿಂತ ಮುಂಚೆ ಮಥಾಯ್ ಕಾಣಬೇಕಿತ್ತು. ಕೆಲವು ಸಲ ಯಾರನ್ನು ಮಂತ್ರಿಯನ್ನಾಗಿ ಮಾಡಬೇಕು ಎಂಬ ವಿಷಯದಲ್ಲೂ ನೆಹರು ಮಥಾಯ್ ಸಲಹೆ ಕೇಳುತ್ತಿದ್ದರು ಎಂಬ ಮಾತುಗಳು ಅಧಿಕಾರದ ಮೊಗಸಾಲೆಯಲ್ಲಿ ಕೇಳಿ ಬರುತ್ತಿದ್ದವು.
‘ಕೇಂದ್ರ ಸಂಪುಟದಲ್ಲಿ ಸಚಿವರಾಗಿರುವ ಅನೇಕರ ಆಯ್ಕೆ ಹಿಂದೆ ನನ್ನ ಪಾತ್ರವಿದೆ. ಮುಖ್ಯಮಂತ್ರಿ, ರಾಜ್ಯಪಾಲರು, ರಾಯಭಾರಿಗಳ ನೇಮಕದಲ್ಲೂ ನನ್ನ ಪಾತ್ರವಿದೆ’ ಎಂದು ಮಥಾಯ್ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಆದರೆ ಅದು ನಿಜವಾಗಿತ್ತು. ದೇಶದ ಅತಿ ಶ್ರೀಮಂತರ, ಗಣ್ಯರ ಜತೆ ಸ್ಥಾನ ಬಲದಿಂದಾಗಿ ಅವರಿಗೆ ನೇರ ಸಂಪರ್ಕ ಮತ್ತು ಸಖ್ಯವಿತ್ತು.
ನೆಹರು ಪರವಾಗಿ ಅವರು ಯಾರನ್ನಾದರೂ ಸಂಪರ್ಕಿಸುತ್ತಿದ್ದರು ಮತ್ತು ಆದೇಶ ಕೊಡುತ್ತಿದ್ದರು. ಮಥಾಯ್‌ಗೆ ಹೇಳಿದರೆ ಅದು ನೆಹರುಗೆ ತಲುಪುತ್ತದೆ ಎಂಬ ಮಾತು ಜನಜನಿತವಾಗಿದ್ದರಿಂದ, ಅವರಿಗೆ ಹತ್ತಿರವಾಗಲು ಜನ ದುಂಬಾಲು ಬೀಳುತ್ತಿದ್ದರು. ಮಥಾಯ್ ಹೇಳಿದರೆ ನೆಹರು ಇಲ್ಲ ಎನ್ನುವುದಿಲ್ಲ, ನೆಹರು ನಿರ್ಧಾರವನ್ನು ಬದಲಿಸಬಲ್ಲ ತಾಕತ್ತು ಮಥಾಯ್‌ಗೆ ಮಾತ್ರವಿದೆ ಎಂಬುದು ಗುಟ್ಟಾಗಿರಲಿಲ್ಲ.
ಅವರು ಯಾವ ಹುದ್ದೆಯಲ್ಲಿದ್ದರೋ, ಆ ಹುದ್ದೆಗೆ ಎಷ್ಟು ಅಧಿಕಾರವಿರುವುದೋ, ಅದಕ್ಕಿಂತ ಹೆಚ್ಚಿನ ಅಧಿಕಾರ ಮತ್ತು ಪ್ರಭಾವವನ್ನು ಮಥಾಯ್ ಹೊಂದಿದ್ದರು. ಪ್ರಧಾನಿ ನಿವಾಸವಾದ ತೀನ್ ಮೂರ್ತಿ ಭವನದಲ್ಲಿ ಮಥಾಯ್ ಮುದ್ರೆಯೊತ್ತದೇ ಯಾವುದೂ ಚಲಿಸುತ್ತಿರಲಿಲ್ಲ. ಹಿಂದಿನ ಬಾಗಿಲಿನಿಂದ ಬಂದ ಆಸಾಮಿಯೊಬ್ಬ, ಅತ್ಯಂತ ಪ್ರಭಾವಿ ಮತ್ತು ಅಧಿಕಾರ ಕೇಂದ್ರದ ಅತ್ಯಂತ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದ.
ನೆಹರು ಅವರು ಮಥಾಯ್ ಅವರನ್ನು ಅಷ್ಟು ಹತ್ತಿರಕ್ಕೆ ಬಿಟ್ಟುಕೊಂಡಿದ್ದರು. ಇದು ಮಥಾಯ್ ಅವರ ತಲೆ ತಿರುಗಿಸಿತು. ಅವರಿಗೆ ಸಿಗುತ್ತಿದ್ದ ಮಾನ್ಯತೆಯೂ ಹಾಗೇ ಇತ್ತು. ಎಂಥವರಿಗೂ ಅಧಿಕಾರದ ಮದ ಉಕ್ಕೇರಲೇಬೇಕು, ಅದರಲ್ಲೂ ಅಂಥ ಆಯಕಟ್ಟಿನ ಜಾಗದಲ್ಲಿದ್ದ ಮಥಾಯ್‌ಗೆ ಸ್ವಲ್ಪ ಹೆಚ್ಚೇ ತಲೆ ಹಾಳಾಯಿತು. ಯಾರೂ ನನ್ನನು ಮುಟ್ಟಲಾರರು, ನಾನು ಪ್ರಶ್ನಾತೀತ, ನನ್ನನ್ನು ಬಿಟ್ಟರೆ ನೆಹರು ಅವರಿಗೆ ಯಾರಿದ್ದಾರೆ, ನನಗೆ ನೆಹರು ಮತ್ತು ಅವರ ಮನೆ- ಮಂದಿಯ ಎಲ್ಲಾ ರಹಸ್ಯಗಳು ಗೊತ್ತಿವೆ ಎಂದು ಅನಿಸಲಾರಂಭಿಸಿತು.
ಇದರಿಂದ ಅವರ ವರ್ತನೆಯಲ್ಲಿ ಗಣನೀಯ ಬದಲಾವಣೆಗಳಾದವು. ಈ ಬಗ್ಗೆ ಅನೇಕರು ನೆಹರು ಅವರನ್ನು ಎಚ್ಚರಿಸಿದರು. ಆದರೆ ಅವರು ತಲೆಗೆ ಹಾಕಿಕೊಳ್ಳಲಿಲ್ಲ. ಆದರೆ ಕಮ್ಯುನಿಸ್ಟ್ ನಾಯಕರು, ‘ಮಥಾಯ್ ಒಬ್ಬ ಭ್ರಷ್ಟ. ಪ್ರಧಾನಿ ಕಾರ್ಯಾಲಯವನ್ನೇ ದಲ್ಲಾಳಿ ಕೇಂದ್ರವನ್ನಾಗಿ ಮಾಡಿಕೊಂಡಿ ದ್ದಾರೆ. ನೆಹರು ತಮ್ಮ ಆಪ್ತ ಕಾರ್ಯದರ್ಶಿ ಮೂಲಕ ಭ್ರಷ್ಟಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ’ ಎಂದು ಸಂಸತ್ತಿನಲ್ಲಿ ಆರೋಪ ಮಾಡಿದರು. ಇಂಥ ಆರೋಪಗಳು ಮೇಲಿಂದ ಮೇಲೆ ಕೇಳಿ ಬರಲಾರಂಭಿಸಿದವು. 1959ರಲ್ಲಿ ನೆಹರು ಅವರು ಮಥಾಯ ಅವರನ್ನು ತೆಗೆದು ಹಾಕುವುದು ಅನಿವಾರ್ಯವಾಯಿತು.
ಸುಮಾರು 15 ವರ್ಷಗಳ ಕಾಲ ತಮ್ಮ ಅವರ ನೆರಳಿನಂತಿದ್ದ ಮಥಾಯ್ ಅವರನ್ನು ತೆಗೆದು ಹಾಕಿದಾಗ, ನೆಹರು ಚಡಪಡಿಸಿದ್ದರಂತೆ. ಕೆಲ ತಿಂಗಳುಗಳ ನಂತರ, ವಾಪಸ್ ಕರೆಯಿಸಿಕೊಳ್ಳಲು ನೆಹರು ನಿರ್ಧರಿಸಿದ್ದರಂತೆ. ಆದರೆ ಮಥಾಯ್, ‘ನಾಯಿ ಮಾತ್ರ ತಾನು ಕಕ್ಕಿದ ವಾಂತಿಯನ್ನು ತಿನ್ನೋದು!’ ಎಂದುಬಿಟ್ಟರಂತೆ.
ಇದು ನೆಹರು ಅವರಿಗೆ ಗೊತ್ತಾಗಿದ್ದರಿಂದ, ಅವರನ್ನು ವಾಪಸ್ ಕರೆಯಿಸಿಕೊಳ್ಳಬಾರದು ಎಂದು ನಿರ್ಧರಿಸಿದರು. ಪ್ರಧಾನಿ ಕಾರ್ಯಾಲಯದಿಂದ ಹೊರಬಿದ್ದ ಹದಿನೆಂಟು ವರ್ಷಗಳ ಕಾಲ ಮಥಾಯ್ ಸುಮ್ಮನಿದ್ದರು. ನೆಹರು ನಿಧನರಾದ ಎರಡು ವರ್ಷಗಳ ನಂತರ, ಇಂದಿರಾ ಪ್ರಧಾನಿ ಯಾದಾಗ, ಪುನಃ ಪ್ರಧಾನಿ ಕಾರ್ಯಾಲಯ ಸೇರಲು ಬಹಳ ಪ್ರಯತ್ನ ಮಾಡಿದರು. ಆದರೆ ಅವರನ್ನು ಸೇರಿಸಿಕೊಳ್ಳಲು ಇಂದಿರಾ ಮನಸ್ಸು ಮಾಡಲೇ ಇಲ್ಲ.
ಹೇಗಾದರೂ ಮಾಡಿ ತಾನು ಮತ್ತೊಮ್ಮೆ ಅದೇ ಜಾಗಕ್ಕೆ ಹೋಗುತ್ತೇನೆ ಎಂದು ಮಥಾಯ್ ಕನಸು ಕಂಡಿದ್ದರು. ಹೀಗಾಗಿ ಆಗೊಮ್ಮೆ- ಈಗೊಮ್ಮೆ, ಅಲ್ಲಲ್ಲಿ ಹಗುರ ಮಾತುಗಳನ್ನು ಹೇಳುತ್ತಿದ್ದರೂ, ಅವುಡುಗಚ್ಚಿಕೊಂಡಿದ್ದರು. ಇಂದಿರಾ ಅಧಿಕಾರ ಕಳೆದುಕೊಳ್ಳುತ್ತಲೇ, ತಮ್ಮ ನಿಜ ಬಣ್ಣ ಬಯಲು ಮಾಡಿದರು. ಜನತಾ ಪಕ್ಷದ ಸರಕಾರ ಬರುತ್ತಲೇ, Reminiscences of the Nehru Age ಎಂಬ ಪುಸ್ತಕ ಬರೆದು, ಇಂದಿರಾ-ನೆಹರು ಮನೆತನದ ಮರ್ಯಾದೆ ಹರಾಜು ಹಾಕಿದರು.
ನೆಹರು ಒಬ್ಬ ವಿಲಾಸಿ, ಅವರಿಗೆ ಅನೇಕ ಮಹಿಳೆಯರ ಜತೆ ಲೈಂಗಿಕ ಸಂಬಂಧವಿತ್ತು, ಅವರಿಗೆ ಬಡವರ ಬಗ್ಗೆ ಸ್ವಲ್ಪವೂ ಕಳಕಳಿ ಇರಲಿಲ್ಲ, ಅಧಿಕಾರಕ್ಕಾಗಿ ಅವರು ರಾಜಿ ಮಾಡಿಕೊಳ್ಳಲು ಹೇಸುತ್ತಿರಲಿಲ್ಲ, ಫಿರೋಜ್ ಗಾಂಧಿ ಒಬ್ಬ ಮೋಜುಗಾರ, ಅವನಿಗೂ ಅನೇಕ ಹೆಂಗಸರ ಜತೆ ಸಖ್ಯವಿತ್ತು, ಇದು ಇಂದಿರಾಗೂ ಗೊತ್ತಿತ್ತು, ಇಂದಿರಾ-ಫಿರೋಜ್ ನಡುವೆ ಆಗಾಗ ಜಗಳವಾಗುತ್ತಿತ್ತು,
ನೆಹರುಗೆ ತಮ್ಮ ಅಳಿಯನನ್ನು ಕಂಡರೆ ಆಗುತ್ತಿರಲಿಲ್ಲ... ಎಂದೆ ಬರೆದರು. ಇಷ್ಟೇ ಆಗಿದ್ದಿದ್ದರೆ ಪರವಾಗಿರಲಿಲ್ಲ. ಅತ್ಯಂತ ವಿವಾದಾತ್ಮಕ ಇಪ್ಪತ್ತೊಂಬತ್ತನೇ ಅಧ್ಯಾಯ ( She) ದಲ್ಲಿ ತಮಗೂ ಇಂದಿರಾಗೂ ಸಂಬಂಧ ಇತ್ತು, ತಮ್ಮಿಂದ ಇಂದಿರಾ ಒಮ್ಮೆ ಗರ್ಭವತಿಯಾಗಿದ್ದರು, ಆದರೆ ಒಲ್ಲದ ಮನಸ್ಸಿನಿಂದ ಅಬಾರ್ಷನ್ ಮಾಡಿಸಿಕೊಂಡರು, ನಾವಿಬ್ಬರೂ ಆಗಾಗ ಸೇರುತ್ತಿದ್ದೆವು,
ಸೆಕ್ಸ್ ವಿಚಾರದಲ್ಲಿ ಫ್ರೆಂಚ್ ಮತ್ತು ಕೇರಳದ ನಾಯರ್ ಮಹಿಳೆಯ ಮಿಶ್ರಣದಂತಿದ್ದ ಇಂದಿರಾ ತನ್ನನ್ನು (ಮಥಾಯ್) ಬಹಳ ಇಷ್ಟಪಡುತ್ತಿದ್ದಳು, ಯೋಗ ಗುರು ಧೀರೇಂದ್ರ ಬ್ರಹ್ಮಚಾರಿ ಅವರ ಜತೆ ಹೆಚ್ಚು ಆತ್ಮೀಯರಾದ ನಂತರ ತಾನು ಅವರ (ಇಂದಿರಾ) ಸಂಪರ್ಕ ಬಿಟ್ಟೆ.... ಎಂದೆ ಆ ಅಧ್ಯಾಯದಲ್ಲಿ ಮಥಾಯ್ ಬರೆದರು. ಆದರೆ ಆ ಪುಸ್ತಕದಲ್ಲಿ ಇಪ್ಪತ್ತೊಂಬತ್ತನೇ ಅಧ್ಯಾಯ ಮಾತ್ರ ಇಲ್ಲದಿರುವುದು ನಿಜ. ಆದರೆ ಆ ಪುಸ್ತಕದಲ್ಲಿ ಏನೇನೆ ಇವೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ.
ಯಾವುದು ನಿಜ, ಎಷ್ಟು ನಿಜ ಎಂಬುದು ಮಥಾಯ್‌ಗೇ ಗೊತ್ತು. ಆ ಕೃತಿ ಪ್ರಕಟವಾದ ಮೂರು ವರ್ಷಗಳ ನಂತರ ಅವರು ನಿಧನರಾದರು. ನೆಹರು-ಗಾಂಧಿ ಮನೆತನ ಅವರ ಮೇಲಿಟ್ಟ ನಂಬಿಕೆ, ವಿಶ್ವಾಸಗಳನ್ನೆಲ್ಲ ಅವರು ಮಣ್ಣುಪಾಲು ಮಾಡಿದರು.
ಮಥಾಯ್ ಬಗ್ಗೆ ಖುಷ್ವಂತ್ ಸಿಂಗ್ ಹೇಳಿದ್ದಾರೆ - ‘ಅವನು ಕುಬ್ಜ ಮನುಷ್ಯ. ಅದೇ ಅವನ ಸಮಸ್ಯೆ. ಸಣ್ಣ ಕಾಲುಗಳುಳ್ಳ ಮನುಷ್ಯನನ್ನು ನಂಬಬಾರದು. ಕಾರಣ ಅವನ ಮಿದುಳು ನೆಲಕ್ಕೆ ಹತ್ತಿರ ದಲ್ಲಿರುತ್ತದೆ.’ ಆಪ್ತ ಕಾರ್ಯದರ್ಶಿ ಎಷ್ಟು ಆಪ್ತವಾಗಿರಬೇಕು ಎಂಬ ವಿಷಯ ಪ್ರಸ್ತಾಪವಾದಾಗಲೆಲ್ಲ ಮಥಾಯ್ ನೆನಪಾಗುತ್ತಾರೆ! ಏನೇ ಆದರೂ, ಮಥಾಯ್ ಅವರಷ್ಟು ಆಪ್ತರಾಗಬಾರದು!