ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sharath Javali Passes Away: ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕದ ವಕೀಲರಾಗಿದ್ದ ಶರತ್‌ ಜವಳಿ ಇನ್ನಿಲ್ಲ

1968ರಿಂದ ಕೃಷ್ಣಾ, ಕಾವೇರಿ ಮತ್ತು ಮಹದಾಯಿ ಸೇರಿದಂತೆ ಎಲ್ಲಾ ಅಂತಾರಾಜ್ಯ ನದಿ ವಿವಾದಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಅವರು ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಜೊತೆಗೆ ಅವರು ಬೆಳಗಾವಿ ಗಡಿ ವಿವಾದ ಇತ್ಯರ್ಥದ ಕಾನೂನು ಹೋರಾಟದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.

ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕದ ವಕೀಲರಾಗಿದ್ದ ಶರತ್‌ ಜವಳಿ ಇನ್ನಿಲ್ಲ

ಶರತ್‌ ಜವಳಿ

ಹರೀಶ್‌ ಕೇರ ಹರೀಶ್‌ ಕೇರ Apr 17, 2025 6:52 AM

ನವದೆಹಲಿ: ಕೃಷ್ಣಾ-ಕಾವೇರಿ ಸೇರಿದಂತೆ ಅಂತಾರಾಜ್ಯ ನದಿ ವಿವಾದಗಳಲ್ಲಿ (river water disputes) ಹಲವು ದಶಕಗಳ ಕಾಲ ಕರ್ನಾಟಕವನ್ನು ಪ್ರತಿನಿಧಿಸಿದ್ದ ಧಾರವಾಡ ಮೂಲದ ಸುಪ್ರೀಂ ಕೋರ್ಟ್‌ನ (Supreme Court) ಹಿರಿಯ ವಕೀಲ (Senior Counsel) ಶರತ್‌ ಜವಳಿ (Sharath Javali) ಅವರು ದೆಹಲಿಯಲ್ಲಿ ಬುಧವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಮಗಳು ಮತ್ತು ಮಗ, ಸುಪ್ರೀಂ ಕೋರ್ಟ್ ವಕೀಲ ಕಿರಿತ್ ಜವಳಿ ಅವರನ್ನು ಅಗಲಿದ್ದಾರೆ.

ಹಾವೇರಿ ಮೂಲದವರಾದ ಜವಳಿ ಅವರು 1964ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಬೆಂಗಳೂರಿನ ಕಾನೂನು ಕಾಲೇಜಿನಲ್ಲಿ ಪದವಿ ಪಡೆದ ನಂತರ 1964ರಲ್ಲಿಯೇ ದೆಹಲಿಗೆ ಸ್ಥಳಾಂತರಗೊಂಡು ಅಲ್ಲಿ ಹಿರಿಯ ವಕೀಲ ಎಸ್‌ ವಿ ಗುಪ್ತೆ ಅವರ ಬಳಿ ಕಿರಿಯ ವಕೀಲರಾಗಿ ಸೇರಿದ್ದರು. 1968ರಿಂದ ಕೃಷ್ಣಾ, ಕಾವೇರಿ ಮತ್ತು ಮಹದಾಯಿ ಸೇರಿದಂತೆ ಎಲ್ಲಾ ಅಂತಾರಾಜ್ಯ ನದಿ ವಿವಾದಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಅವರು ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಜೊತೆಗೆ ಅವರು ಬೆಳಗಾವಿ ಗಡಿ ವಿವಾದ ಇತ್ಯರ್ಥದ ಕಾನೂನು ಹೋರಾಟದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 52 ವರ್ಷಗಳ ಕಾಲ ಸುದೀರ್ಘ ಕಾಲ ವಕೀಲಿಕೆ ನಡೆಸಿದ್ದರು.

ಸುಮಾರು ಮೂರು ದಶಕಗಳ ಕಾಲ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯಯೊಂದಿಗೆ ಶೈಕ್ಷಣಿಕ ಸಂಬಂಧ ಹೊಂದಿದ್ದ ಅವರಿಗೆ ವಿಶ್ವವಿದ್ಯಾಲಯ ಫೆಲೋಶಿಪ್‌ ನೀಡಿ ಗೌರವಿಸಿತ್ತು, 2024ರಲ್ಲಿಸಿಡ್ನಿಯ ಸಸೆಕ್ಸ್‌ ಕಾಲೇಜು ಅವರಿಗೆ ಫೆಲೋ ನೀಡಿತ್ತು. ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿತ್ತು. ತಮ್ಮ ತಂದೆ ಎಸ್‌ ಸಿ ಜವಳಿ ಗೌರವಾರ್ಥ ಹೈಕೋರ್ಟ್‌ನ ಧಾರವಾಡ ಪೀಠ ಮತ್ತು ಹಾವೇರಿ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಗ್ರಂಥಾಲಯಗಳನ್ನು ಅವರು ತೆರೆದಿದ್ದರು.



ಶ್ರೀಯುತರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ನಾಡಿನ ಗಣ್ಯರು, ನೀರಾವರಿ ತಜ್ಞರು ಸಂತಾಪ ಸೂಚಿಸಿದ್ದಾರೆ. ನಾಡಿಗೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿದ್ದಾರೆ.

ಇದನ್ನೂ ಓದಿ: SK Shyam Sundar: ಹಿರಿಯ ಪತ್ರಕರ್ತ ಶ್ಯಾಮ್‌ಸುಂದರ್‌ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ