Beer prices hike: ಮತ್ತೆ ಬಿಯರ್ ದರ ಹೆಚ್ಚಳಕ್ಕೆ ಮುಂದಾದ ರಾಜ್ಯ ಸರ್ಕಾರ; ಎಷ್ಟು ಏರಿಕೆಯಾಗಲಿದೆ?
Beer prices hike: ರಾಜ್ಯದಲ್ಲಿ ಬಿಯರ್ ಮೇಲಿನ ತೆರಿಗೆ ಉತ್ಪಾದನಾ ವೆಚ್ಚದ ಶೇ.195 ರಷ್ಟಿದೆ. ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ. 205ಕ್ಕೆ ಹೆಚ್ಚಿಸುವ ಬಗ್ಗೆ ರಾಜ್ಯದ ಹೊಸ ಕರಡು ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಬಿಯರ್ ದರ ಭಾರಿ ಹೆಚ್ಚಳವಾಗುವ ಸಾಧ್ಯತೆ ಇದೆ.


ಬೆಂಗಳೂರು: ರಾಜ್ಯದ ಸರ್ಕಾರ ಎಲ್ಲಾ ಬಿಯರ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು (Additional Excise Duty) ಶೇ.10 ಹೆಚ್ಚಳ ಮಾಡಲು ನಿರ್ಧರಿಸಿದ್ದು, ಇದರಿಂದ ಬಿಯರ್ ದರ (Beer prices hike) ಭಾರಿ ಹೆಚ್ಚಳವಾಗುವ ಸಾಧ್ಯತೆ ಇದೆ. ಬ್ರ್ಯಾಂಡ್‌ಗಳ ಬೆಲೆಯು ಉತ್ಪಾದನಾ ವೆಚ್ಚವನ್ನು ಅವಲಂಬಿಸಿ ಪ್ರತಿ ಬಾಟಲ್ಗೆ ಸುಮಾರು 10 ರೂಪಾಯಿಗಳಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಸದ್ಯ ರಾಜ್ಯದಲ್ಲಿ ಬಿಯರ್ ಮೇಲಿನ ತೆರಿಗೆ ಉತ್ಪಾದನಾ ವೆಚ್ಚದ ಶೇ.195 ರಷ್ಟಿದೆ. ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ. 205ಕ್ಕೆ ಹೆಚ್ಚಿಸುವ ಬಗ್ಗೆ ರಾಜ್ಯದ ಹೊಸ ಕರಡು ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಪ್ರೀಮಿಯಂ ಅಥವಾ ಇತರ ಬಿಯರ್ ಬ್ರ್ಯಾಂಡ್‌ಗಳ ಬೆಲೆಯು ಉತ್ಪಾದನಾ ವೆಚ್ಚವನ್ನು ಅವಲಂಬಿಸಿ ಪ್ರತಿ ಬಾಟಲ್ಗೆ ಸುಮಾರು 10 ರೂಪಾಯಿಗಳಷ್ಟು ಹೆಚ್ಚಾಗಬಹುದು.
ಒಟ್ಟಾರೆಯಾಗಿ ತೆರಿಗೆ ಹೆಚ್ಚಳದ ನಂತರ ಬಿಯರ್ ದರ 10 ರೂ.ನಷ್ಟು ಹೆಚ್ಚಳವಾಗಬಹುದು. ಮಧ್ಯಮ ಶ್ರೇಣಿಯ ಮತ್ತು ಅಗ್ಗದ ಸ್ಥಳೀಯ ಬಿಯರ್‌ಗಳಿಗೆ ಪ್ರತಿ ಬಾಟಲ್ಗೆ 5 ರೂಪಾಯಿ ವರೆಗೆ ದರ ಏರಿಕೆಯಾಗುವ ಸಾಧ್ಯತೆ ಇದೆ. ಬೆಲೆ ಏರಿಕೆಯು ಬ್ರ್ಯಾಂಡ್‌ನಿಂದ ಬ್ರ್ಯಾಂಡ್‌ಗೆ ವ್ಯತ್ಯಾಸವಿರಲಿದೆ.
ಈ ಹಿಂದೆ, ಕರ್ನಾಟಕದಲ್ಲಿ ಬಿಯರ್‌ಗೆ ಎರಡು ಹಂತದ ತೆರಿಗೆ ವ್ಯವಸ್ಥೆ ಇತ್ತು. ಕೆಳ ಹಂತದ ಬ್ರ್ಯಾಂಡ್‌ಗಳಿಗೆ ಲೀಟರ್‌ಗೆ 130 ರೂ. ವರೆಗೆ ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಇತರ ಬ್ರ್ಯಾಂಡ್‌ಗಳಿಗೆ ಶೇಕಡಾವಾರು ತೆರಿಗೆ ವಿಧಿಸಲಾಗುತ್ತಿತ್ತು. ಈ ವ್ಯವಸ್ಥೆಯನ್ನು ಈಗ ರದ್ದುಗೊಳಿಸಲಾಗಿದ್ದು, ಎಲ್ಲಾ ಬಿಯರ್‌ಗಳಿಗೆ ಏಕರೂಪದ ಶೇ. 205ರ ತೆರಿಗೆ ನಿಗದಿಪಡಿಸಲಾಗಿದೆ.
ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಗುರಿಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ. ಕಡಿಮೆ ತೆರಿಗೆ ಶ್ರೇಣಿಯನ್ನು ತೆಗೆದುಹಾಕುವುದರೊಂದಿಗೆ, ಎಲ್ಲಾ ಬಿಯರ್ ಬ್ರ್ಯಾಂಡ್‌ಗಳಿಗೆ ಒಂದೇ ರೀತಿಯ ತೆರಿಗೆ ವಿಧಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ | Class 1 admission: ಒಂದನೇ ತರಗತಿ ಪ್ರವೇಶಕ್ಕೆ ಮುಂದಿನ ವರ್ಷದಿಂದ 6 ವರ್ಷ ಕಡ್ಡಾಯ
ಈಗಿನ ಪ್ರಸ್ತಾವಿತ ಬಿಯರ್ ತೆರಿಗೆ ದರ ಹೆಚ್ಚಳದೊಂದಿಗೆ, ಮೂರು ವರ್ಷಗಳ ಅವಧಿಯಲ್ಲಿ ಬಿಯರ್ ಮೇಲಿನ ತೆರಿಗೆಯನ್ನು ಮೂರನೇ ಬಾರಿ ಹೆಚ್ಚಳ ಮಾಡಿದಂತಾಗಲಿದೆ. 2023 ರ ಜುಲೈನಲ್ಲಿ ಕಾಂಗ್ರೆಸ್ ಸರ್ಕಾರವು ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ 175 ರಿಂದ 185 ಕ್ಕೆ ಹೆಚ್ಚಿಸಿತ್ತು. ಅದೇ ರೀತಿ 2025 ರ ಜನವರಿ 20 ರಂದು ಅಬಕಾರಿ ಸುಂಕವನ್ನು ಶೇ 195 ಕ್ಕೆ ಅಥವಾ ಪ್ರತಿ ಬಲ್ಕ್ ಲೀಟರ್‌ಗೆ ರೂ 130 ರ ವರೆಗೆ (ಯಾವುದು ಹೆಚ್ಚೋ ಅದಕ್ಕೆ ಅನುಗುಣವಾಗಿ) ಹೆಚ್ಚಳ ಮಾಡಿತ್ತು. ಇದೀಗ ಮತ್ತೆ ತೆರಿಗೆ ಹೆಚ್ಚಳ ಮಾಡಿದೆ.
ಮೂಲ ಅಬಕಾರಿ ಸುಂಕವನ್ನು ಸಹ ಪರಿಷ್ಕರಿಸಲಾಗಿದೆ. ಫ್ಲಾಟ್ ರೇಟ್ ಬದಲಿಗೆ, ಆಲ್ಕೋಹಾಲ್ ಅಂಶವನ್ನು ಆಧರಿಸಿದ ಶ್ರೇಣೀಕೃತ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಶೇ 5 ಅಥವಾ ಅದಕ್ಕಿಂತ ಕಡಿಮೆ ಆಲ್ಕೋಹಾಲ್ ಹೊಂದಿರುವ ಬಿಯರ್‌ಗೆ ಪ್ರತಿ ಬಲ್ಕ್ ಲೀಟರ್‌ಗೆ 12 ರೂ., ಮತ್ತು ಶೇ. 5-8 ರ ಆಲ್ಕೋಹಾಲ್ ಹೊಂದಿರುವ ಬಿಯರ್‌ಗೆ 20 ರೂ. ನಿಗದಿಪಡಿಸಲಾಗಿದೆ.