ದುಬೈ: ಐಸಿಸಿ ಟಿ20 ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ(ICC T20I Cricketer of the Year) ನಾಲ್ವರು ಆಟಗಾರರ ಹೆಸರು ನಾಮನಿರ್ದೇಶನಗೊಂಡಿದೆ. ಟೀಮ್ ಇಂಡಿಯಾದ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್(Arshdeep Singh) ಕೂಡ ಕಾಣಿಸಿಕೊಂಡಿದ್ದಾರೆ. ಇವರ ಜತೆ ಆಸ್ಟ್ರೇಲಿಯಾ ಟ್ರಾವಿಸ್ ಹೆಡ್, ಜಿಂಬಾಬ್ವೆಯ ಸಿಕಂದರ್ ರಜಾ, ಪಾಕಿಸ್ತಾನದ ಬಾಬರ್ ಅಜಂ ರೇಸ್‌ನಲ್ಲಿದ್ದಾರೆ. ಈ ನಾಲ್ವರು ಆಟಗಾರರು 2024ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದರಿಂದ ಇವರ ಹೆಸರನ್ನು ಐಸಿಸಿ ಆಯ್ಕೆ ಮಾಡಿಕೊಂಡಿದೆ.
ಐಸಿಸಿ ವರ್ಷದ ಟಿ20 ಕ್ರಿಕೆಟಿಗ ರೇಸ್‌ನಲ್ಲಿರುವ ಏಕೈಕ ಭಾರತೀಯ ಆಟಗಾರ ಅರ್ಶದೀಪ್ ಸಿಂಗ್, ಈ ವರ್ಷ ನಡೆದಿದ್ದ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ್ದರು. ಕಳೆದ ಕೆಲ ವರ್ಷಗಳಿಂದ ಭಾರತ ಟಿ20 ತಂಡದ ಅವಿಭಾಜ್ಯ ಅಂಗವಾಗಿರುವ ಅವರು 2024ರಲ್ಲಿ ಭಾರತ ಪರ 18 ಟಿ20 ಪಂದ್ಯಗಳನ್ನಾಡಿ 36 ವಿಕೆಟ್ ಕಬಳಿಸಿದ್ದಾರೆ.
ಇದನ್ನೂ ಓದಿ AUS vs IND: ದಾಖಲೆ ಬರೆದ ಭಾರತ-ಆಸೀಸ್ ಬಾಕ್ಸಿಂಗ್ ಡೇ ಟೆಸ್ಟ್
ಆಸ್ಟ್ರೇಲಿಯಾದ ಸ್ಪೋಟಕ ಎಡಗೈ ಬ್ಯಾಟರ್ ಟ್ರ್ಯಾವಿಸ್ ಹೆಡ್ 2024ರಲ್ಲಿ ಆಸ್ಟ್ರೇಲಿಯಾ ಪರ 15 ಟಿ20 ಪಂದ್ಯಗಳನ್ನಾಡಿ 178.47ರ ಸ್ಟ್ರೈಕ್‌ರೇಟ್‌ನಲ್ಲಿ 539 ರನ್ ಸಿಡಿಸಿದ್ದಾರೆ. ಜಿಂಬಾಬ್ವೆಯ ಆಲ್ರೌಂಡರ್ ಸಿಕಂದರ್ ರಾಜಾ ಈ ವರ್ಷ ಜಿಂಬಾಬ್ವೆ ಪರ 24 ಟಿ20 ಪಂದ್ಯಗಳನ್ನು ಆಡಿ 573 ರನ್ ಸಿಡಿಸಿದ್ದಾರೆ. ಬೌಲಿಂಗ್‌ನಲ್ಲಿ 24 ವಿಕೆಟ್ ಕಬಳಿಸಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಂ 2024ರಲ್ಲಿ 24 ಟಿ20 ಪಂದ್ಯಗಳನ್ನಾಡಿ 738 ರನ್ ಸಿಡಿಸಿದ್ದಾರೆ.
ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ವರ್ಷದ ಆಟಗಾರ್ತಿ ಪ್ರಶಸ್ತಿಗೆ ಒಟ್ಟು ನಾಲ್ಕು ಮಂದಿ ಆಟಗಾರ್ತಿಯರು ನಾಮನಿರ್ದೇಶನಗೊಂಡಿದ್ದಾರೆ. ಈ ಪಟ್ಟಿಯಲ್ಲಿ ಭಾರತೀಯರು ಕಾಣಿಸಿಕೊಂಡಿಲ್ಲ. ಶ್ರೀಲಂಕಾದ ಚಾಮರಿ ಅಟಪಟ್ಟು, ನ್ಯೂಜಿಲ್ಯಾಂಡ್‌ನ ಅಮೇಲಿಯಾ ಕೆರ್, ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ಟ್, ಐರ್ಲೆಂಡ್‌ನ ಓರ್ಲಾ ಪ್ರೆಂಡರ್‌ಗಾಸ್ಟ್ ರೇಸ್‌ನಲ್ಲಿರುವ ಆಟಗಾತ್ರಿಯರು.