Saturday, 21st December 2024

CM Siddaramaiah: ಶಾಸಕ ಜಿ.ಟಿ.ದೇವೇಗೌಡ ಮಾತು ಸತ್ಯಕ್ಕೆ ಜಯ ಸಿಗಲಿದೆ ಎಂಬುದಕ್ಕೆ ಸಾಕ್ಷಿ: ಸಿದ್ದರಾಮಯ್ಯ

CM Siddaramaiah

ಬೆಂಗಳೂರು: ಶಾಸಕ ಮಿತ್ರರಾದ ಜಿ.ಟಿ.ದೇವೇಗೌಡರು ಬಹಳ ವರ್ಷಗಳಿಂದ ನನ್ನ ವೈಯಕ್ತಿಕ ಮತ್ತು ರಾಜಕೀಯ ಜೀವನವನ್ನು ಸಮೀಪದಿಂದ ಕಂಡು ಬಲ್ಲವರು. ಕಳೆದ ಹಲವು ವರ್ಷಗಳಿಂದ ಅವರು ಮುಡಾದ ಸದಸ್ಯರೂ ಆಗಿದ್ದಾರೆ. ರಾಜಕೀಯವಾಗಿ ನಾವು ಬೇರೆ ಬೇರೆ ಪಕ್ಷದಲ್ಲಿರಬಹುದು. ಆದರೆ ಸತ್ಯ ಮತ್ತು ನ್ಯಾಯಕ್ಕೆ ಪಕ್ಷ ಇಲ್ಲ. ಅದು ವ್ಯಕ್ತಿಯ ಆತ್ಮಸಾಕ್ಷಿಗೆ ಸಂಬಂಧಿಸಿದ್ದು. ಜಿ.ಟಿ.ದೇವೇಗೌಡರು ಇಂದು ತಮ್ಮ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು, ತಾಯಿ ಚಾಮುಂಡೇಶ್ವರಿಯನ್ನು ಸಾಕ್ಷಿಯಾಗಿಟ್ಟುಕೊಂಡು ದಸರಾ ಹಬ್ಬದ ಬೃಹತ್ ಸಮಾರಂಭದಲ್ಲಿ ಸತ್ಯ ಮಾತನಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ನಾನೆಂದೂ ದ್ವೇಷದ ರಾಜಕೀಯ ಮಾಡಿದವನಲ್ಲ, ವಿರೋಧಿ ರಾಜಕಾರಣಿಗಳ ವೈಯಕ್ತಿಕ ಬದುಕು ಇಲ್ಲವೆ, ಅವರ ಕುಟುಂಬವನ್ನು ರಾಜಕೀಯ ಜಿದ್ದಾಜಿದ್ದಿಗೆ ಬಳಸಿಕೊಂಡವನಲ್ಲ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿರುವ ಅನೇಕ ನಾಯಕರಿಗೆ ಜಿ.ಟಿ.ದೇವೇಗೌಡರು ಹೇಳಿರುವ ಸತ್ಯ ಗೊತ್ತಿದೆ. ಆದರೆ ತಮ್ಮ ಪಕ್ಷದ ಕೆಲವು ಹಿರಿಯ ನಾಯಕರ ಒತ್ತಡಕ್ಕೆ ಬಲಿಯಾಗಿ ಮೌನವಾಗಿದ್ದಾರೆ. ಅವರು ಕೂಡ ಮುಕ್ತವಾಗಿ ಮಾತನಾಡಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದ್ದಾರೆ.

ರಾಜಕೀಯವನ್ನು ರಾಜಕೀಯವಾಗಿ ಎದುರಿಸಬೇಕೇ ವಿನಃ ಸುಳ್ಳು ಆರೋಪಗಳ ಮೂಲಕ ಹೆಣೆಯುವ ರಾಜಕೀಯ ಷಡ್ಯಂತ್ರದಿಂದ ಅಲ್ಲ. ಈ ಕೆಟ್ಟ ಪರಂಪರೆಯನ್ನು ತಡೆಗಟ್ಟಬೇಕಾದರೆ ನಮ್ಮ ರಾಜಕೀಯ ನಾಯಕರೆಲ್ಲರೂ ಪಕ್ಷಾತೀತವಾಗಿ ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲುವ ಧೈರ್ಯ ಮಾಡಬೇಕಾಗುತ್ತದೆ. ಈ ಮೂಲಕ ಕರ್ನಾಟಕದಿಂದ ಹೊಸ ರಾಜಕೀಯ ಪರಂಪರೆಗೆ ನಾಂದಿ ಹಾಡಬೇಕಾಗುತ್ತದೆ. “ಸತ್ಯಮೇವ ಜಯತೆ” ಎಂದು ತಿಳಿಸಿದ್ದಾರೆ.

ಸಿಎಂ ಪರ ಬ್ಯಾಟ್‌ ಬೀಸಿದ ಜೆಡಿಎಸ್‌ ನಾಯಕ ಜಿ.ಟಿ. ದೇವೇಗೌಡ

ಮೈಸೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ (GT Deve Gowda) ಅವರು ಸಿಎಂ ಸಿದ್ದರಾಮಯ್ಯ (Siddaramaiah) ಪರ ಬ್ಯಾಟ್‌ ಬೀಸಿದ್ದಾರೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ರಾಜೀನಾಮೆ ಕೋಡುವುದಾದರೆ ಎಫ್ಐಆರ್ ದಾಖಲಾಗಿರುವ ಎಲ್ಲ ನಾಯಕರು ಕೊಡಲಿ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೂ ಕೊಡಲಿ ಎಂದು ಹೇಳುವ ಮೂಲಕ ರಾಜ್ಯ ರಾಜಕೀಯದಲ್ಲಿ ಸದ್ಯ ಸಂಚಲನ ಮೂಡಿಸಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ʼʼಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜೀನಾಮೆ ಕೇಳುತ್ತಿರಲ್ಲ? ತಾಕತ್ತಿದ್ದರೆ ರಾಜ್ಯದಲ್ಲಿ ಎಫ್ಐಆರ್‌ ದಾಖಲಾಗಿರುವ ಎಲ್ಲರೂ ರಾಜೀನಾಮೆ ನೀಡಲಿʼʼ ಎಂದು ಜಿ.ಟಿ.ದೇವೇಗೌಡ ಅವರು ಬಿಜೆಪಿ, ಜೆಡಿಎಸ್‌ ನಾಯಕರು ಸವಾಲು ಹಾಕಿದ್ದಾರೆ.

ʼʼಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲು ನ್ಯಾಯಾಲಯ ಹೇಳಿದೆಯಾ ? ಕೇಂದ್ರದಲ್ಲಿ ಮಂತ್ರಿ ಆದವರಿಗೆ ಜವಾಬ್ದಾರಿ ಬೇಡವಾ? ಕುಮಾರಸ್ವಾಮಿಗೆ ರಾಜೀನಾಮೆ ಕೊಡು ಅಂದರೆ ಕೊಡುತ್ತಾರಾ? 136 ಸ್ಥಾನ ಗೆದ್ದು ಸಿಎಂ ಆಗಿರುವ ಸಿದ್ದರಾಮಯ್ಯ ರಾಜೀನಾಮೆ ಕೊಡಲು ಆಗುತ್ತಾ? ಹಾಗಾದರೆ ಯಾರ ಯಾರ ಮೇಲೆ ಎಫ್ಐಆರ್‌ ಆಗಿದೆಯೋ ಅವರೆಲ್ಲ ರಾಜೀನಾಮೆ ನೀಡಲಿʼʼ ಎಂದು ಹೇಳಿದ್ದಾರೆ.

ಸಿಎಂ ಬಗ್ಗೆ ಮೆಚ್ಚುಗೆ

ಇದೇ ವೇಳೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ʼʼಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಸಾಕಷ್ಟು ಅನುಕೂಲವಾಗಿವೆ. ರಾಜ್ಯದಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಲು ಅವಕಾಶ ನೀಡದೆ ದಿನ ಬೆಳಗ್ಗೆ ರಾಜೀನಾಮೆ ನೀಡಲು ಕೇಳಿದರೆ ಆಗುತ್ತಾ? ಅವರು ಯಾಕೆ ರಾಜೀನಾಮೆ ಕೊಡಬೇಕು? 2 ಲಕ್ಷ ಮತಗಳಿಂದ ಗೆದ್ದಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರನ್ನು ರಾಜೀನಾಮೆ ಕೇಳಿದರೆ ಕೊಡಲು ಆಗುತ್ತದೆಯೇ?ʼʼ ಎಂದು ಪ್ರಶ್ನಿಸಿದ್ದಾರೆ.

ʼʼಸಿದ್ದರಾಮಯ್ಯ ಅವರು ಕಷ್ಟ ಬಂದಷ್ಟು ಗಟ್ಟಿಯಾಗುತ್ತಾರೆ. ತಾಯಿ ಚಾಮುಂಡೇಶ್ವರಿ ತಾಯಿ ಆಶೀರ್ವಾದ ಅವರಿಗೆ ಸದಾ ಇದ್ದೇ ಇರುತ್ತದೆ. 2006ರ ಉಪ ಚುನಾವಣೆಯಲ್ಲಿ ಜೆಡಿಎಸ್‌ನವರಾದ ನಾವು ಮತ್ತು ಬಿಜೆಪಿ ನಾಯಕರು ಸೇರಿ ಅವರನ್ನು ಸೋಲಿಸಲು ಪ್ರಯತ್ನಪಟ್ಟೆವು. ಆದರೆ ಅವರು ಸೋಲದೆ ಗೆದ್ದು ಬಂದರು. ಈಗಲೂ ಅವರು ಜಯಶಾಲಿಯಾಗುತ್ತಾರೆʼʼ ಎಂದು ಜಿಟಿ.ದೇವೇಗೌಡ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Mysuru Dasara: ಸರಕಾರ ಉರುಳಿಸುವ ದುರಾಲೋಚನೆ ಬರದಂತೆ ಚಾಮುಂಡಿ ದೇವಿ ತಡೆಯಲಿ: ಮೈಸೂರು ದಸರಾ ಉದ್ಘಾಟಿಸಿ ಡಾ. ಹಂಪನಾ

ಸಿದ್ದರಾಮಯ್ಯ ಫುಲ್‌ ಖುಷ್‌

ಜೆಡಿಎಸ್‌ ಶಾಸಕರ ಮೆಚ್ಚುಗೆ ನುಡಿಯನ್ನು ಕೇಳಿ ಸಿಎಂ ಸಿದ್ದರಾಮಯ್ಯ ಖುಷಿ ವ್ಯಕ್ತಪಡಿಸಿದ್ದಾರೆ. ಟಿ.ಜಿ.ದೇವೇಗೌಡರ ಮಾತಿನಿಂದ ನನಗೆ ನೈತಿಕ ಬಲ ಬಂದಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಅವರ ಮಾತುಗಳು ತಮ್ಮಲ್ಲಿನ ನೈತಿಕ ಬಲವನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ. ʼʼಜಿಟಿಡಿ ಬೇರೆ ಪಕ್ಷದಲ್ಲಿ ಇದ್ದರೂ ಸತ್ಯದ ಮಾತು ಹೇಳಿದ್ದಾರೆ. ಸತ್ಯಕ್ಕೆ ಯಾವಾಗಲೂ ಜಯ. ಜಿಟಿಡಿಯೇ ನನ್ನ ಈ ಕ್ಷೇತ್ರದಲ್ಲಿ ಸೋಲಿಸಿದ್ದು. ಅದು ನನ್ನ ಕೈಯಾರೆ ಮಾಡಿಕೊಂಡ ಸೋಲು. ನಾನು 9 ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ. ಚಾಮುಂಡೇಶ್ವರಿ ಕೃಪೆಯಿಂದ ಇಲ್ಲಿಯವರೆಗೆ ಇದ್ದೇನೆ. ನಾನು ಯಾವ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದರೆ ಇಷ್ಟು ಸುದೀರ್ಘ ರಾಜಕಾರಣ ಮಾಡಲು‌ ಆಗುತ್ತಿರಲಿಲ್ಲ. ಜಿಟಿಡಿ ಮಾತಿನಿಂದ ನನಗೆ ಹೆಚ್ಚು ಬಲ ಬಂದಿದೆ. ಅವರಿಗೆ ನನ್ನ ಧನ್ಯವಾದʼʼ ಎಂದು ತಿಳಿಸಿದ್ದಾರೆ.