Sunday, 5th January 2025

HD Kumaraswamy: ಆರೋಪಿ ಐಶ್ವರ್ಯ ಗೌಡ ನಿಖಿಲ್‌‌ನನ್ನು ಯಾವಾಗ ಭೇಟಿಯಾಗಿದ್ದಳು ತಿಳಿಸಿ; ಕುಮಾರಸ್ವಾಮಿ ಸವಾಲು

HD Kumaraswamy

ಬೆಂಗಳೂರು: ಐಶ್ವರ್ಯ ಗೌಡ ಎನ್ನುವ ಮಹಿಳೆ ಯಾವಾಗ, ಎಲ್ಲಿ, ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮತ್ತು ಅನಿತಾ ಕುಮಾರಸ್ವಾಮಿ (Anitha Kumaraswamy) ಅವರನ್ನು ಭೇಟಿ ಮಾಡಿದ್ದಾರೆಂಬ ಮಾಹಿತಿ ಕೊಟ್ಟರೆ ಒಳಿತು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐಶ್ವರ್ಯ ಗೌಡ ಕೇಸ್‌ನಲ್ಲಿ ನಿಖಿಲ್, ಅನಿತಾ ಕುಮಾರಸ್ವಾಮಿ ಅವರ ಹೆಸರುಗಳು ಪ್ರಸ್ತಾಪವಾಗಿವೆ. ಇದರ ಹಿಂದೆ ಯಾರ ಕೈಗಳಿವೆ ಎನ್ನುವುದು ಗೊತ್ತಾಗುತ್ತದೆ. ಈಗ ರಾಜ್ಯದಲ್ಲಿ ಚಿನ್ನ, ಬೆಳ್ಳಿ ಕೇಸ್‌ನಲ್ಲಿ ಅವರ ಹೆಸರುಗಳನ್ನು ಎಳೆದು ತರಲಾಗುತ್ತಿದೆ. ಅಂದಹಾಗೆ ಐಶ್ವರ್ಯ ಗೌಡ ಎಂಬ ಮಹಿಳೆ ಇವರಿಬ್ಬರನ್ನು ಯಾವಾಗ ಭೇಟಿ ಮಾಡಿದ್ದರು? ಈ ಸರ್ಕಾರದಲ್ಲಿ ಎಷ್ಟರ ಮಟ್ಟಿಗೆ ತನಿಖೆ ನಡೆಯುತ್ತಿದೆ ಎನ್ನುವುದು ಗೊತ್ತಿದೆ. ಮಾಧ್ಯಮಗಳಲ್ಲಿ ಈ ವಿಷಯ ಬಂದ ಮೇಲೆ ನಾನು ಮಾಹಿತಿ ಪಡೆದುಕೊಂಡಿದ್ದೇನೆ. ಕೇಸ್ ಹಿನ್ನೆಲೆ ತಿಳಿದುಕೊಂಡಿದ್ದೇನೆ ಎಂದರು.

ಘಟನೆ ನಡೆದಿದ್ದು 2016-2019ರಲ್ಲಿಯಂತೆ. ದೂರು ಸ್ವೀಕರಿಸುವುದು ಈಗ. ಈ ಸರ್ಕಾರ ಯಾರನ್ನು, ಯಾವಾಗ, ಏನು ಬೇಕಾದರೂ ಮಾಡುತ್ತದೆ. ಸರ್ಕಾರದಲ್ಲಿ ಅಧಿಕಾರ ವರ್ಗವನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ ಇವರು ಎನ್ನುವುದು ಗೊತ್ತಿದೆ. 2016ರಲ್ಲಿ ಪ್ರಕರಣ ನಡೆದಿದೆ ಎಂದು 2024 ರಲ್ಲಿ ದೂರು ಕೊಡುತ್ತಾರೆ. 2018 ರಲ್ಲಿ ನಾನೇ ಸಿಎಂ ಇದ್ದೆ. ಆಗ ಯಾಕೆ ನನ್ನ ಬಳಿ ದೂರುದಾರರು ಬರಲಿಲ್ಲ, ಪೊಲೀಸರಿಗೆ ಯಾಕೆ ದೂರು ನೀಡಲಿಲ್ಲ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

ಈ ಸುದ್ದಿಯನ್ನೂ ಓದಿ | Droupadi Murmu: ಸಮಗ್ರ ಔಷಧ ಸೇವೆಯಲ್ಲಿ ನಿಮ್ಹಾನ್ಸ್ ಮಾದರಿಯಾಗಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು

ನನ್ನ ಮಗ, ಪತ್ನಿಯನ್ನು ಯಾಕೆ ಈ ಪ್ರಕರಣದಲ್ಲಿ ಎಳೆದು ತಂದಿದ್ದೀರಿ?

ನಿಖಿಲ್ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಅವರಿಬ್ಬರೂ ಇವರ ಮುಖಗಳನ್ನೇ ನೊಡಿಲ್ಲ. ಹೇಗೆ ಅವರ ಪರಿಚಯ ಅಂತ ಸುದ್ದಿ ಮಾಡಿಸ್ತಾ ಇದ್ದಾರ ಇವರು? ಇದರ ಹಿಂದೆ ಯಾರಿದ್ದಾರೆ? ನನ್ನ ಮಗ, ಪತ್ನಿಯನ್ನು ಯಾಕೆ ಈ ಪ್ರಕರಣದಲ್ಲಿ ಎಳೆದು ತಂದಿದ್ದೀರಿ? ಇದನ್ನು ಸರ್ಕಾರ ಎಂದು ಕರೆಯಲು ಸಾಧ್ಯವೇ? ಎಂದು ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಸರ್ಕಾರವೇ ಇಲ್ಲ

ಸದ್ಯಕ್ಕೆ ನಾನು ಯಾವುದಕ್ಕೂ ಟೀಕೆ ಮಾಡುವುದಿಲ್ಲ. ಟೀಕೆ ಮಾಡಿ ಏನ್ ಮಾಡೋದು? ಕೇಳೋಕೆ ಯಾರ್ ಇದ್ದಾರೆ ಇಲ್ಲಿ? ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಸ್ವೇಚ್ಚಾಚ್ಚಾರವಾಗಿ ಆಡಳಿತ ನಡೆಸುತ್ತಿದ್ದಾರೆ. ಇವರಿಗೆ ಹೇಳೋರು ಕೇಳೋರು ಯಾರು ಇಲ್ಲ ಎಂದು ಅವರು ಆರೋಪಿಸಿದರು.

ನಾನು ಯಾರಿಗೂ ದೋಷ ಕೊಡಲ್ಲ. ಎಲ್ಲವನ್ನು ಕಾಲವೇ ನಿರ್ಣಯ ಮಾಡುತ್ತದೆ. ನಮ್ಮ ಕಾಲವೂ ಬರುತ್ತದೆ. ಇವರು ಇಡೀ ವ್ಯವಸ್ಥೆಯನ್ನು ಬಹಳ ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಈ ಸರ್ಕಾರ ಬಂದ ಮೇಲೆ ಎಷ್ಟು ಆತ್ಮಹತ್ಯೆಗಳು ನಡೆದವು. ಯಾಕೆ ಇಷ್ಟು ಆತ್ಮಹತ್ಯೆಗಳು ಆಗುತ್ತಿವೆ? ಜೀವ ಕಳೆದುಕೊಂಡ ನತದೃಷ್ಟರು ಮರಣಪತ್ರದಲ್ಲಿ ಏನೆಲ್ಲಾ ಬರೆಯುತ್ತಿದ್ದಾರೆ, ಯಾರ ಯಾರ ಹೆಸರುಗಳನ್ನು ಉಲ್ಲೇಖ ಮಾಡುತ್ತಿದ್ದಾರೆ. ಮಂತ್ರಿಗಳ ಮೇಲೆ ಆರೋಪ ಬಂದರೂ ಸತ್ಯಾಂಶ ಹೊರಗೆ ಬರುತ್ತಿಲ್ಲ ಎಂದು ಅವರು ದೂರಿದರು.

ಸಂಕ್ರಾಂತಿ ಕಳಿಯಲಿ. ಎಲ್ಲಾ ವಿಷಯಗಳ ಬಗ್ಗೆ ಮಾತನಾಡುತ್ತೇನೆ ಎಂದು ಇದೇ ವೇಳೆ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ನಮ್ಮ ಯಾವ ಶಾಸಕರು ಪಕ್ಷ ಬಿಟ್ಟು ಹೋಗುವ ಪರಿಸ್ಥಿತಿ ಇಲ್ಲ

ರಾಜ್ಯ ಕಾಂಗ್ರೆಸ್ ಆಪರೇಷನ್ ಹಸ್ತದ ದುಷ್ಪ್ರಯತ್ನ ಮಾಡುತ್ತಿದೆ. ಆದರೆ, ಅದು ವರ್ಕ್ ಆಗುವುದಿಲ್ಲ ಎಂದು ತಿಳಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ಜೆಡಿಎಸ್‌ ಮುಗಿಸಬೇಕು ಎಂದು 12 ಜನ ಶಾಸಕರನ್ನು ಕರೆದುಕೊಂಡು ಬನ್ನಿ, 13 ಜನರನ್ನು ಕರೆದುಕೊಂಡು ಬನ್ನಿ ಎನ್ನುವ ಷಡ್ಯಂತ್ರ ನಡೆಯುತ್ತಿದೆ. ಇದೆಲ್ಲವೂ ನನಗೆ ಗೊತ್ತಿದೆ ಎಂದು ಆರೋಪಿಸಿದ ಅವರು, ನಮ್ಮ ಯಾವ ಶಾಸಕರು ಪಕ್ಷ ಬಿಟ್ಟು ಹೋಗುವ ಪರಿಸ್ಥಿತಿ ಇಲ್ಲ. ಕಾಂಗ್ರೆಸ್‌ನವರು ಏನೇನು ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ. ಕಾಂಗ್ರೆಸ್ಸಿನವರ ಪಾಪದ ಕೊಡ ತುಂಬಿದೆ. ದೇವರೇ ಅವರಿಗೆ ಶಿಕ್ಷೆ ಕೊಡುತ್ತಾನೆ ಎಂದರು.

ಈ ಸುದ್ದಿಯನ್ನೂ ಓದಿ | Budget 2025: 8ನೇ ಬಾರಿಗೆ ಬಜೆಟ್‌ ಮಂಡಿಸಲು ನಿರ್ಮಲಾ ಸೀತಾರಾಮನ್‌ ಸಜ್ಜು; ಈ ಬಾರಿಯ ಪ್ರಮುಖ ಅಂಶಗಳೇನು?

ನಮ್ಮ ಶಾಸಕರ ಬಗ್ಗೆ ನಮಗೆ ಆತಂಕ ಇಲ್ಲ. ಕಾಂಗ್ರೆಸ್ ಏನೆಲ್ಲಾ ಮಾಡುತ್ತಿದೆ ಎಂದು ನಮ್ಮ ಶಾಸಕರು ನನಗೆ ಹೇಳುತ್ತಿದ್ದಾರೆ. ನಮ್ಮ ಪಕ್ಷವನ್ನು ಭದ್ರ ಮಾಡಿಕೊಳ್ಳುವುದು ಹೇಗೆ ಎನ್ನುವುದು ಗೊತ್ತಿದೆ. ಜೆಡಿಎಸ್ ಪಕ್ಷವನ್ನು ಯಾವುದೇ ಶಾಕು.. ವೀಕು ಮಾಡಲು ಆಗುವುದಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.