ಬೆಂಗಳೂರು: ಚೀನಾದಲ್ಲಿ (China) ಸ್ಫೋಟಗೊಂಡಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ (HMPV virus) ಸೋಂಕು ಭಾರತಕ್ಕೂ ಕಾಲಿಟ್ಟಿದೆ. ಭಾರತದ ಮೊದಲ ಪ್ರಕರಣ ಬೆಂಗಳೂರಿನಲ್ಲೇ (Bengaluru news) ಪತ್ತೆಯಾಗಿದ್ದು, 8 ತಿಂಗಳ ಮಗುವಿನಲ್ಲಿ ಕಂಡುಬಂದಿದೆ.
ಕಳೆದೆ ಕೆಲ ದಿನಗಳಿಂದ 8 ತಿಂಗಳ ಮಗುವಿನಲ್ಲಿ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. HMPV ರೋಗ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಆಸ್ಪತ್ರೆ ವೈದ್ಯರು ಮಗುವಿನ ರಕ್ಷ ಪರೀಕ್ಷೆ ಮಾಡಿದ್ದಾರೆ. ಈ ವೇಳೆ HMPV ವೈರಸ್ ಪತ್ತೆಯಾಗಿದೆ. ಇದು ಕರ್ನಾಟಕದ ಹಾಗೂ ಭಾರತದ ಮೊದಲ ಪ್ರಕರಣ ಎಂದು ಹೇಳಲಾಗುತ್ತಿದೆ. ಇತರೆಡೆ HMPV ವೈರಸ್ ಪ್ರಕರಣ ವದಿಯಾಗಿಲ್ಲ.
ಮೊದಲ ಪ್ರಕರಣ ವರದಿಯಾಗುತ್ತಿದ್ದಂತೆ ಆರೋಗ್ಯ ಇಲಾಖೆ ಮತ್ತಷ್ಟು ಅಲರ್ಟ್ ಆಗಿದೆ. HMPV ವೈರಸ್‌ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಈ ವೈರಸ್ ತಗುಲಿದವರು ಶೀಘ್ರದಲ್ಲೇ ಗುಣಮುಖರಾಗುತ್ತಾರೆ. ಸದ್ಯ ಆತಂಕದ ಪರಿಸ್ಥಿತಿ ಇಲ್ಲ. ಮಕ್ಕಳು ಹಾಗೂ ಹಿರಿಯರು ಹೆಚ್ಚು ಕಾಳಜಿ ವಹಿಸುವಂತೆ ಸೂಚಿಸಿದ್ದಾರೆ.
HMPV ವೈರಸ್ ಚೀನಾದಿಂದ ಮಲೇಷಿಯಾ, ಸಿಂಗಾಪುರಕ್ಕೆ ಹರಡಿತ್ತು. ಈಗ ಭಾರತಕ್ಕೂ ಕಾಲಿಟ್ಟಿದೆ. ಶೀತ, ಜ್ವರ, ಕೆಮ್ಮು, ಉಸಿರಾಟ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಂಡ ತಕ್ಷಣ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲು ಸೂಚಿಸಲಾಗಿದೆ. ವೈರಸ್ ಕುರಿತು ಆತಂಕ ಇಟ್ಟಕೊಳ್ಳುವ ಅಗತ್ಯವಿಲ್ಲ. ಚಳಿಗಾಲದಲ್ಲಿ ಈ ರೀತಿ ವೈರಸ್ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಮುನ್ನಚ್ಚರಿಕೆ ಉತ್ತಮ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಚೀನಾದಲ್ಲಿ ಡಿಸೆಂಬರ್ ಅಂತ್ಯದಲ್ಲಿ HMPV ವೈರಸ್ ಸ್ಫೋಟಗೊಂಡಿತ್ತು.ಚೀನಾದ ಕೆಲ ಪ್ರಾಂತ್ಯಗಳಲ್ಲಿ ಪ್ರತಿ ದಿನ ಭಾರಿ ಸಂಖ್ಯೆಯಲ್ಲಿ ವೈರಸ್ ಪತ್ತೆಯಾಗುತ್ತಿದೆ. ಕೆಲ ಆಸ್ಪತ್ರೆಗಳು ಭರ್ತಿಯಾಗಿದೆ. ಚೀನಾ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಕೋವಿಡ್ ರೀತಿಯ ಸಮಸ್ಯೆ ಎದುರಾಗದಂತೆ ಭಾರತ ಮುಂಜಾಗ್ರತೆ ವಹಿಸಿದೆ. ಭಾರತದ ಕೇಂದ್ರ ಆರೋಗ್ಯ ಇಲಾಖೆ ಅಂತಾರಾಷ್ಟ್ರೀಯ ಆರೋಗ್ಯ ಎಜೆನ್ಸಿಗಳ ಜೊತೆ ನಿರಂತರ ಸಂಪರ್ಕದಲ್ಲಿದೆ.
ದೆಹಲಿಯಲ್ಲಿ ಆರೋಗ್ಯ ಇಲಾಖೆ ಜನತೆಗೆ ಮಾರ್ಗಸೂಚಿ ಪ್ರಕಟಿಸಿದೆ. ಕೈಗಳನ್ನು ಸೋಪ್‌ನಿಂದ ತೊಳೆದು ಶುಚಿಯಾಗಿಡಲು ಸೂಚಿಸಿದೆ. ಜನಸಂದಣಿ ಇರುವ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು ಉತ್ತಮ ಎಂದಿದೆ. ಅನಗತ್ಯ ಓಡಾಟಕ್ಕೆ ಕಡಿವಾಣ, ಕೆಮ್ಮುವಾಗ ಬಾಯಿ ಹಾಗೂ ಮೂಗು ಮುಚ್ಚಿಕೊಳ್ಳುವಂತೆ ಸೂಚಿಸಿದೆ. HMPV ವೈರಸ್‌ನ ಯಾವುದೇ ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲು ಸೂಚಿಸಿದೆ.
ಇದನ್ನೂ ಓದಿ: Covid Like Virus: ಚೀನಾದಲ್ಲಿ ಹೊಸ ವೈರಸ್ ಪತ್ತೆ; ಭಾರತದಲ್ಲೂ ಮುನ್ನೆಚ್ಚರಿಕೆ ಕ್ರಮ