Monday, 25th November 2024

IND vs AUS: ʻವಿರಾಟ್‌ ಕೊಹ್ಲಿಗೆ ನಮ್ಮ ಅಗತ್ಯವಿಲ್ಲʼ-ಅಚ್ಚರಿ ಹೇಳಿಕೆ ನೀಡಿದ ಜಸ್‌ಪ್ರೀತ್‌ ಬುಮ್ರಾ!

Virat Kohli doesn't need us, we need him-Jasprit Bumrah after Perth Test century

ಪರ್ತ್‌: ಆಸ್ಟ್ರೇಲಿಯಾ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ (IND vs AUS) ಭಾರತ ತಂಡ 295 ರನ್‌ಗಳ ಭರ್ಜರಿ ಗೆಲುವು ಪಡೆದದೆ. ಆ ಮೂಲಕ ಐದು ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಟೀಮ್‌ ಇಂಡಿಯಾ 1-0 ಮುನ್ನಡೆ ಪಡೆದಿದೆ. ಪಂದ್ಯದ ಬಳಿಕ ಮಾತನಾಡಿದ ಭಾರತ ತಂಡದ ಹಂಗಾಮಿ ನಾಯಕ ಜಸ್‌ಪ್ರೀತ್‌ ಬುಮ್ರಾ, ತಮ್ಮ ಸಹ ಆಟಗಾರ ವಿರಾಟ್‌ ಕೊಹ್ಲಿಯನ್ನು ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ. ವಿರಾಟ್‌ ಕೊಹ್ಲಿಗೆ ನಮ್ಮ ಅಗತ್ಯವಿಲ್ಲ ಆದರೆ ನಮಗೆ ವಿರಾಟ್‌ ಕೊಹ್ಲಿಗೆ ಅಗತ್ಯವಿದೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 5 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ, ನಂತರ ದ್ವಿತೀಯ ಇನಿಂಗ್ಸ್‌ನಲ್ಲಿ 143 ಎಸೆತಗಳಲ್ಲಿ ಶತಕವನ್ನು ಸಿಡಿಸುವ ಮೂಲಕ ಭರ್ಜರಿಯಾಗಿ ಕಮ್‌ಬ್ಯಾಕ್‌ ಮಾಡಿದ್ದರು. ಆ ಮೂಲಕ ಫಾರ್ಮ್‌ಗೆ ಕಮ್‌ಬ್ಯಾಕ್‌ ಮಾಡಿದ್ದರು ಹಾಗೂ ಟೀಮ್‌ ಇಂಡಿಯಾ ಗೆಲುವಿಗೆ ನೆರವು ನೀಡಿದ್ದರು.

IND vs AUS: ಗೆಲುವಿನೊಂದಿಗೆ ಹಲವು ದಾಖಲೆ ಬರೆದ ಭಾರತ

ವಿರಾಟ್‌ ಕೊಹ್ಲಿಗೆ ನಮ್ಮ ಅಗತ್ಯವಿಲ್ಲ: ಬುಮ್ರಾ

ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಜಸ್‌ಪ್ರೀತ್‌ ಬುಮ್ರಾ, “ವಿರಾಟ್‌ ಕೊಹ್ಲಿಗೆ ನಮ್ಮ ಅಗತ್ಯವಿಲ್ಲ ಹಾಗೂ ನಮಗೆ ವಿರಾಟ್‌ ಕೊಹ್ಲಿಯ ಅಗತ್ಯವಿದೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಅವರು ಅತ್ಯಂತ ಅನುಭವಿ ಆಟಗಾರ, ಅವರ ಪಾಲಿಗೆ 4 ಅಥವಾ 5ನೇ ಆಸ್ಟ್ರೇಲಿಯಾ ಪ್ರವಾಸ ಇದಾಗಿದೆ. ತಮ್ಮ ಬ್ಯಾಟಿಂಗ್‌ ಹಾಗೂ ಸಾಮರ್ಥ್ಯ ಏನೆಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ಇಷ್ಟು ದೀರ್ಘಾವಧಿ ವೃತ್ತಿ ಜೀವನವನ್ನು ಹೊಂದಿರುವಾಗ ಕೆಲವೊಮ್ಮೆ ಕಠಿಣ ಸನ್ನಿವೇಶಗಳಲ್ಲಿ ಆಡಿರುತ್ತೇವೆ ಹಾಗೂ ಇದನ್ನು ವಿರಾಟ್‌ ಕೊಹ್ಲಿ ಹೊಂದಿದ್ದಾರೆ. ಪ್ರತಿಯೊಂದು ಪಂದ್ಯದಲ್ಲಿಯೂ ಆಡುವುದು ನಿಜಕ್ಕೂ ಕಠಿಣವಾಗಿದೆ. ಆದರೆ, ಈ ಪಂದ್ಯದಲ್ಲಿ ಅವರಿಂದ ಅದ್ಭುತ ಇನಿಂಗ್ಸ್‌ ಮೂಡಿಬಂದಿದೆ,” ಎಂದು ಗುಣಗಾಣ ಮಾಡಿದ್ದಾರೆ.

“ಪ್ರಥಮ ಇನಿಂಗ್ಸ್‌ನಲ್ಲಿ ವಿರಾಟ್‌ ಕೊಹ್ಲಿ ಶ್ರೇಷ್ಠ ಎಸೆತಕ್ಕೆ ವಿಕೆಟ್‌ ಒಪ್ಪಿಸಿದ್ದರು ಆದರೆ, ಅವರು ಎರಡನೇ ಇನಿಂಗ್ಸ್‌ನಲ್ಲಿ ಅವರು ಕಮ್‌ಬ್ಯಾಕ್‌ ಮಾಡಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ನಮಗೆ ಅನುಭವಿ ಬ್ಯಾಟ್ಸ್‌ಮನ್‌ ಅಗತ್ಯವಿತ್ತು, ಏಕೆಂದರೆ ಮತ್ತೊಂದು ತುದಿಯಲ್ಲಿ ಬೇರೆ ಬ್ಯಾಟ್ಸ್‌ಮನ್‌ ಮುಕ್ತವಾಗಿ ಆಡಲು ಅವಕಾಶ ನೀಡಬೇಕಿತ್ತು. ಆ ಕೆಲಸವನ್ನು ವಿರಾಟ್‌ ಕೊಹ್ಲಿ ಮಾಡುತ್ತಾರೆ. ಅಂದ ಹಾಗೆ ಸರಣಿಯ ಆರಂಭದಲ್ಲಿ ಅವರಿಂದ ಒಂದು ದೊಡ್ಡ ಇನಿಂಗ್ಸ್‌ ಮೂಡಿಬಂದಿದ್ದು ಅವರಲ್ಲಿ ವಿಶ್ವಾಸವನ್ನು ಹೆಚ್ಚಿಸಿದೆ. ಇದು ತಂಡದ ಪಾಲಿಗೆ ಲಾಭದಾಯಕವಾಗಿದೆ,” ಎಂದು ಟೀಮ್‌ ಇಂಡಿಯಾ ಹಂಗಾಮಿ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ ತಂಡಕ್ಕೆ 295 ರನ್‌ಗಳ ಭರ್ಜರಿ ಜಯ

ಭಾರತ ತಂಡ ನೀಡಿದ್ದ 534 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಆಸ್ಟ್ರೇಲಿಯಾ ತಂಡ ನಾಲ್ಕನೇ ದಿನವಾದ ಸೋಮವಾರ 3 ವಿಕೆಟ್‌ ನಷ್ಟಕ್ಕೆ 12 ರನ್‌ಗಳಿಂದ ದ್ವಿತೀಯ ಇನಿಂಗ್ಸ್‌ ಆರಂಭಿಸಿತ್ತು. ಆದರೆ, ಜಸ್‌ಪ್ರೀತ್‌ ಬುಮ್ರಾ ಹಾಗೂ ಮೊಹ್ಮಮದ್‌ ಸಿರಾಜ್‌ ಮಾರಕ ಬೌಲಿಂಗ್‌ ದಾಳಿಗೆ ನಲುಗಿ 58.4 ಓವರ್‌ಗಳಿಗೆ 238 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಸೋಲು ಅನುಭವಿಸಿತು. ಆಸ್ಟ್ರೇಲಿಯಾ ಪರ ದ್ವಿತೀಯ ಇನಿಂಗ್ಸ್‌ನಲ್ಲಿ 89 ರನ್‌ ಗಳಿಸಿದ ಟ್ರಾವಿಸ್‌ ಹೆಡ್‌ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡಿದ್ದಾರೆ. ಭಾರತ ತಂಡದ ಪರ ದ್ವಿತೀಯ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್‌ 161 ರನ್‌ ಗಳಿಸಿದ್ದರು. ಅಂದ ಹಾಗೆ ಈ ಪಂದ್ಯದಲ್ಲಿ ಎಂಟು ವಿಕೆಟ್ ಕಿತ್ತ ಜಸ್‌ಪ್ರೀತ್‌ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.