Monday, 25th November 2024

IPL 2025: ‌ʻಪಂತ್‌ or ಶ್ರೇಯಸ್‌?ʼ-ಭಾರತದ ಭವಿಷ್ಯದ ನಾಯಕನನ್ನು ಆರಿಸಿದ ರಾಬಿನ್‌ ಉತ್ತಪ್ಪ!

Robin Uthappa Makes Massive Claim After India Star Bags Huge IPL Deal

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಆಟಗಾರರ ಮೆಗಾ ಹರಾಜಿನಲ್ಲಿ 26.75 ಕೋಟಿ ರೂ. ಗಳ ದಾಖಲೆಯ ಮೊತ್ತಕ್ಕೆ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಸೇರ್ಪಡೆಯಾಗಿರುವ ಸ್ಟಾರ್‌ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಅವರನ್ನು ಮಾಜಿ ಕ್ರಿಕೆಟಿಗ ರಾಬಿನ್‌ ಉತ್ತಪ್ಪ ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ. ಶ್ರೇಯಸ್‌ ಅಯ್ಯರ್‌ ಭಾರತ ತಂಡದ ಭವಿಷ್ಯದ ನಾಯಕ ಎಂದು ಕನ್ನಡಿಗ ದೊಡ್ಡ ಹೇಳಿಕೆ ನೀಡಿದ್ದಾರೆ.

ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ 2024ರ ಐಪಿಎಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. ಆದರೂ ಶ್ರೇಯಸ್‌ ಅಯ್ಯರ್‌ ಅವರನ್ನು ಕೋಲ್ಕತಾ ಫ್ರಾಂಚೈಸಿ ರಿಲೀಸ್‌ ಮಾಡಿತ್ತು. ನಾಯಕನ ಹುಡುಕಾಟದಲ್ಲಿದ್ದ ಪಂಜಾಬ್‌ ಕಿಂಗ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಶ್ರೇಯಸ್‌ ಅಯ್ಯರ್‌ ಅವರನ್ನು ಖರೀದಿಸಲು ಬಿಡ್‌ ವಾರ್‌ ನಡೆಸಿದ್ದವು. ಆದರೆ, ಅಂತಿಮವಾಗಿ ಎರಡನೇ ಗರಿಷ್ಠ ಮೊತ್ತಕ್ಕೆ ಪಂಜಾಬ್‌ ಕಿಂಗ್ಸ್‌ಗೆ ಶ್ರೇಯಸ್‌ ಅಯ್ಯರ್‌ ಸೇರ್ಪಡೆಯಾಗಿದ್ದರು.

Shreyas Iyer: ಕೆಕೆಆರ್‌ನಿಂದ ಶ್ರೇಯಸ್‌ ಅಯ್ಯರ್‌ ಕೈ ಬಿಡಲು ಅಸಲಿ ಕಾರಣ ಇದು!

ಜಿಯೋ ಸಿನಿಮಾ ಚರ್ಚೆಯಲ್ಲಿ ಮಾತನಾಡಿದ ರಾಬಿನ್‌ ಉತ್ತಪ್ಪ, “ಶ್ರೇಯಸ್‌ ಅಯ್ಯರ್‌ ಅವರು ಚಾಂಪಿಯನ್‌ ತಂಡದ ನಾಯಕನಾಗಿ ಚೊಚ್ಚಲ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿರುವ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇದೀಗ ಪಂಜಾಬ್‌ ಕಿಂಗ್ಸ್‌ ತಂಡದಲ್ಲಿ ಅವರಿಗೆ ದೊಡ್ಡ ಸವಾಲು ಎದುರಾಗಲಿದೆ. ಅವರು ಈ ತಂಡಕ್ಕೆ ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಟ್ಟರೆ, ಅವರು ಭಾರತ ತಂಡದ ಮುಂದಿನ ನಾಯಕರಾಗಲಿದ್ದಾರೆಂಬುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ ಟೂರ್ನಿಯ ಇತಿಹಾಸದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ ಅತ್ಯಂತ ಹೀನಾಯ ಪ್ರದರ್ಶವನ್ನು ತೋರಿದೆ. ಕಳೆದ 17 ಆವೃತ್ತಿಗಳಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ ಕೇವಲ ಎರಡು ಆವೃತ್ತಿಗಳಲ್ಲಿ ಮಾತ್ರ ಪ್ಲೇಆಫ್‌ಗೆ ಅರ್ಹತೆ ಪಡೆದಿತ್ತು. 2014ರಲ್ಲಿ ಜಾರ್ಜ್‌ ಬೈಲಿ ಅವರ ನಾಯಕತ್ವದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ ರನ್ನರ್‌ ಅಪ್‌ ಆಗಿತ್ತು. ಮುಖ್ಯ ಕೋಚ್‌ ರಿಕಿ ಪಾಂಟಿಂಗ್‌ ಹಾಗೂ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಪಂಜಾಬ್‌ ಕಿಂಗ್ಸ್‌ ಈ ಬಾರಿ ಚೊಚ್ಚಲ ಕಪ್‌ ಗೆಲ್ಲಲು ಎದುರು ನೋಡುತ್ತಿದೆ.

ಶ್ರೇಯಸ್‌ ಅಯ್ಯರ್‌ ಆಯ್ಕೆಯ ಬಗ್ಗೆ ಪಾಂಟಿಂಗ್‌ ಹೇಳಿದ್ದಿದು

“ಶ್ರೇಯಸ್‌ ಅಯ್ಯ್‌ ಅವರ ಜೊತೆ ಕೆಲಸ ಮಾಡಬೇಕಾಗಿದೆ. ಅವರ ಜೊತೆ ಈ ಹಿಂದೆ ಕೆಲಸ ಮಾಡಿದ್ದೇನೆ ಹಾಗೂ ಇವರು ಅದ್ಭುತ ಹುಡುಗ ಹಾಗೂ ಆಟಗಾರ. ನಾವು ಅವರನ್ನು ನಾಯಕ ಎಂದು ನಿರ್ಧರಿಸಿದರೆ, ಶ್ರೇಯಸ್‌ ಅಯ್ಯರ್‌ ಶ್ರೇಷ್ಠ ನಾಯಕರಾಗಲಿದ್ದಾರೆ. ಇದರಲ್ಲಿ ನನಗೆ ಖಚಿತತೆ ಇದೆ. ಇವರ ನಾಯಕತ್ವದಲ್ಲಿಯೇ ಕಳೆದ ಟೂರ್ನಿಯಲ್ಲಿ ಕೆಕೆಆರ್‌ ಚಾಂಪಿಯನ್‌ ಆಗಿತ್ತು,” ಎಂದು ಪಂಜಾಬ್‌ ಕಿಂಗ್ಸ್‌ ಹೆಡ್‌ ಕೋಚ್‌ ರಿಕಿ ಪಾಂಟಿಂಗ್‌ ತಿಳಿಸಿದ್ದಾರೆ.