Friday, 27th December 2024

NICE link Road: ದೀಪಾಂಜಲಿ ನಗರ-ಕೆಂಗೇರಿ ನಡುವೆ ನೈಸ್‌ ಲಿಂಕ್‌ ರೋಡ್‌; ಮೈಸೂರು ರಸ್ತೆಯಲ್ಲಿ ತಗ್ಗಲಿದೆ ಸಂಚಾರ ದಟ್ಟಣೆ

NICE link Road

ಬೆಂಗಳೂರು: ರಾಜಧಾನಿಯ ಮೈಸೂರು ರಸ್ತೆಯಲ್ಲಿ ನಿತ್ಯ ಸಂಚಾರ ದಟ್ಟಣೆಯಿಂದ ಹೈರಾಣಾಗುತ್ತಿದ್ದ ವಾಹನ ಸವಾರರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಈ ಮಾರ್ಗದಲ್ಲಿ ಟ್ರಾಫಿಕ್‌ ಜಂಜಾಟವಿಲ್ಲದೇ ದೀಪಾಂಜಲಿ ನಗರ ಜಂಕ್ಷನ್‌ನಿಂದ ನೇರವಾಗಿ ಕೆಂಗೇರಿಗೆ ತಲುಪಲು ಹೊಸ ಲಿಂಕ್‌ ರಸ್ತೆ (NICE link Road) ನಿರ್ಮಾಣವಾಗುತ್ತಿದ್ದು, ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತವಾಗಲಿದೆ.

ಈ ಲಿಂಕ್‌ ರಸ್ತೆಯು ಮೈಸೂರು ರಸ್ತೆಯ ನಾಯಂಡಹಳ್ಳಿ- ಕೆಂಗೇರಿ ನಡುವೆ ಸಂಪರ್ಕ ಕಲ್ಪಿಸಲಿದೆ. ಜತೆಗೆ ಪಿಇಎಸ್ ಕಾಲೇಜು ಮತ್ತು ಹೊಸಕೆರೆಹಳ್ಳಿ ಕಡೆಗೆ ವಾಹನಗಳ ಸಂಚಾರಕ್ಕೂ ಅನುಕೂಲವಾಗಲಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್‌ನಿಂದ (ನೈಸ್) ಈ ಹೊಸ ರಸ್ತೆ ನಿರ್ಮಿಸುತ್ತಿದ್ದು, ಇದು 9 ಕಿ.ಮೀ ಉದ್ದವಿದೆ.

ನೈಸ್‌ ಹೊಸ ಲಿಂಕ್‌ ರಸ್ತೆಯಲ್ಲಿ ಸಾಗಿದರೆ ವಾಹನ ಸವಾರರು ರಾಜರಾಜೇಶ್ವರಿ ನಗರ ಜಂಕ್ಷನ್, ಬೆಂಗಳೂರು ವಿಶ್ವವಿದ್ಯಾಲಯ ಜಂಕ್ಷನ್‌, ಪಟ್ಟಣಗೆರೆಯಲ್ಲಿ ಜಂಕ್ಷನ್‌ ಸೇರಿದಂತೆ ನಾಲ್ಕೈದು ಪ್ರಮುಖ ಸಿಗ್ನಲ್‌ಗಳನ್ನು ತಪ್ಪಿಸಿಕೊಳ್ಳಬಹುದು.ಈ ಮೂಲಕ ಟ್ರಾಫಿಕ್‌ ಜಂಜಾಟವಿಲ್ಲೇ ಕೇವಲ 20 ನಿಮಿಷದಲ್ಲಿ ದೀಪಾಂಜಲಿ ನಗರ ಜಂಕ್ಷನ್‌ನಿಂದ ನೇರವಾಗಿ ಕೆಂಗೇರಿಗೆ ತಲುಪಬಹುದು. ಈ ರಸ್ತೆಗೆ ಯಾವುದೇ ಟೋಲ್‌ ಇರುವುದಿಲ್ಲ. ಈ ಲಿಂಕ್‌ ರಸ್ತೆಯಿಂದ ಮೈಸೂರು ರಸ್ತೆಯಲ್ಲಿ ಕನಿಷ್ಠ ಶೇ.30 ರಷ್ಟು ಸಂಚಾರ ದಟ್ಟಣೆ ತಗ್ಗಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Nandini Milk Price Hike: ಸಂಕ್ರಾಂತಿ ಬಳಿಕ ಕಾದಿದೆ ಹಾಲಿನ ದರ ಏರಿಕೆ ಶಾಕ್‌; ಸುಳಿವು ಕೊಟ್ಟ ಕೆಎಂಎಫ್‌

ಸಿಲಿಂಡರ್ ಸ್ಫೋಟದಲ್ಲಿ ಮೃತಪಟ್ಟ ಅಯ್ಯಪ್ಪ ಮಾಲಾಧಾರಿಗಳಿಗೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಹುಬ್ಬಳ್ಳಿ: ನಗರದ ಉಣಕಲ್‌ನ (Hubballi news) ಅಚ್ಚವ್ವ ಕಾಲೋನಿಯಲ್ಲಿ ನಡೆದಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟ (Cylinder Blast) ಪ್ರಕರಣದಲ್ಲಿ ಗಾಯಗೊಂಡಿದ್ದ ಒಂಬತ್ತು ಅಯ್ಯಪ್ಪ ಮಾಲಾಧಾರಿಗಳ ಪೈಕಿ ಇಬ್ಬರು ಚಿಕಿತ್ಸೆ ಫಲಿಸದೇ ಇಂದು ಬೆಳಗಿನ ಜಾವ ಸಾವಿಗೀಡಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಮೃತ ಅಯ್ಯಪ್ಪ ಮಾಲಾಧಾರಿಗಳನ್ನ 58 ವರ್ಷದ ಅಜ್ಜಾಸ್ವಾಮಿ ಉರ್ಪ್ ನಿಂಗಪ್ಪ ಬೇಪಾರಿ ಹಾಗೂ 20 ವರ್ಷದ ಸಂಜಯ ಸವದತ್ತಿ ಎಂದು ಗುರುತಿಸಲಾಗಿದೆ. ಉಳಿದ ಏಳು ಮಂದಿಗೆ ಚಿಕಿತ್ಸೆ ಮುಂದುವರೆದಿದ್ದು ಬೆಂಗಳೂರು ಮತ್ತಿತರ ಕಡೆಗಳಿಂದ ಉನ್ನತ ಚಿಕಿತ್ಸೆಗಾಗಿ ತಜ್ಞ ವೈದ್ಯರನ್ನು ಕರೆಸಲಾಗಿದೆ.

ಹುಬ್ಬಳ್ಳಿಯ ಸಾಯಿ ನಗರದ ಈಶ್ವರ ದೇವಾಲಯದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿರುವ ಘಟನೆ ನಡೆದಿತ್ತು. ಈಶ್ವರ ದೇವಸ್ಥಾನದಲ್ಲಿ ರಾತ್ರಿ ಮಲಗಿದ್ದಾಗ ಸಿಲಿಂಡರ್ ಸ್ಪೋಟಗೊಂಡಿದೆ. ಘಟನೆಯಲ್ಲಿ 9 ಮಂದಿ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು.