The Code of Civil Procedure: ಸಿವಿಲ್ ಪ್ರಕರಣಗಳಿಗೆ 2 ವರ್ಷದೊಳಗೆ ಸಿಗಲಿದೆ ಮುಕ್ತಿ; ಮಹತ್ವದ ಮಸೂದೆಗೆ ರಾಷ್ಟ್ರಪತಿ ಅಂಕಿತ
The Code of Civil Procedure: ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಅಧಿನಿಯಮ, 2024ಕ್ಕೆ ರಾಷ್ಟ್ರಪತಿಗಳ ಅಂಕಿತ ದೊರೆತಿದೆ. ಸಿವಿಲ್ ಪ್ರಕರಣಗಳ ತ್ವರಿತ ವಿಲೇವಾರಿ ಮತ್ತು ಶೀಘ್ರವಾಗಿ ನ್ಯಾಯ ಒದಗಿಸುವ ಉದ್ದೇಶಕ್ಕಾಗಿ ಈ ಕಾಯ್ದೆ ರೂಪಿಸಲಾಗಿದೆ.


ಬೆಂಗಳೂರು: ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಅಧಿನಿಯಮ, 2024 (the Code of Civil Procedure (Karnataka Amendment) Act, 2024)ಕ್ಕೆ ರಾಷ್ಟ್ರಪತಿಗಳ ಅಂಕಿತ ದೊರೆತಿದೆ. ಸಿವಿಲ್ ಪ್ರಕರಣಗಳ ತ್ವರಿತ ವಿಲೇವಾರಿ ಮತ್ತು ಶೀಘ್ರವಾಗಿ ನ್ಯಾಯ ಒದಗಿಸುವ ಉದ್ದೇಶಕ್ಕಾಗಿ ಈ ಕಾಯ್ದೆ (The Code of Civil Procedure) ರೂಪಿಸಲಾಗಿದೆ. ಈ ಬಗ್ಗೆ ಕಾನೂನು ಸಚಿವ ಎಚ್.ಕೆ. ಪಾಟೀಲ್ ಮಾಹಿತಿ ನೀಡಿ, ನ್ಯಾಯದಾನ ಪದ್ಧತಿಯಲ್ಲಿ ಸುಧಾರಣೆಗಾಗಿ ಕೇಂದ್ರದ ಕಾನೂನಾದ ಸಿವಿಲ್ ಪ್ರಕ್ರಿಯಾ ಸಂಹಿತೆಗೆ(ಸಿಪಿಸಿ)ಗೆ ಕರ್ನಾಟಕ ತಿದ್ದುಪಡಿಗಳನ್ನು ಮಾಡಿತ್ತು. ಈ ತಿದ್ದುಪಡಿಗಳು ರಾಷ್ಟ್ರದ ಕಾನೂನಿನಲ್ಲಿ ರಾಜ್ಯವ್ಯಾಪಿ ಜಾರಿಯಲ್ಲಿರುತ್ತವೆ. ಶಾಸಕಾಂಗ ಮಾಡಿದ ಈ ತಿದ್ದುಪಡಿಗೆ ರಾಷ್ಟ್ರಪತಿಗಳ ಅಂಕಿತ ದೊರಕಿದೆ ಎಂದು ತಿಳಿಸಿದ್ದಾರೆ.
ಸಿವಿಲ್ ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳಿಗೆ ದಶಕಗಟ್ಟಲೇ ಕಾಯುವ/ವಿಳಂಬಕ್ಕೆ ಮುಕ್ತಿ ನೀಡಲು ಕರ್ನಾಟಕ ಯಶಸ್ವಿಯಾದ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಕರ್ನಾಟಕ ಸರ್ಕಾರ ಕ್ರಾಂತಿಕಾರಕ ತಿದ್ದುಪಡಿಯನ್ನು ಸಿವಿಲ್ ಪ್ರಕ್ರಿಯಾ ಸಂಹಿತೆಗೆ ಮಾಡಿದೆ. ಈ ತಿದ್ದುಪಡಿಗೆ ರಾಷ್ಟ್ರಪತಿಗಳ ಅಂಕಿತ ದೊರಕಿದೆ. ಈ ಐತಿಹಾಸಿಕ ತಿದ್ದುಪಡಿ ರಾಷ್ಟ್ರದಲ್ಲಿಯೇ ಮೊದಲು. ತಕ್ಷಣದಿಂದ ಈ ತಿದ್ದುಪಡಿ ಜಾರಿಗೆ ಬರಲಿದೆ ಎಂದರು.
ನಮ್ಮ ಶಾಸಕಾಂಗ ಮಾಡಿದ ಈ ತಿದ್ದುಪಡಿಯ ಮುಖಾಂತರ ಪ್ರತಿಯೊಂದು ಸಿವಿಲ್ ಪ್ರಕರಣಗಳು ರಾಜಿ ಸಂಧಾನದ ಮೂಲಕ ಬಗೆಹರಿಸಲು ಕಡ್ಡಾಯವಾದ ಪ್ರಯತ್ನ ಮಾಡಬೇಕು. ಎರಡು ತಿಂಗಳೊಳಗಾಗಿ ರಾಜಿ ಸಂಧಾನದ ಪ್ರಯತ್ನ ತಾರ್ಕಿಕ ಅಂತ್ಯ ಕಾಣಬೇಕು. ಸಾಧ್ಯವಾಗದಿದ್ದಾಗ, ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂಬ ಶಾಸನಾತ್ಮಕ ಅವಕಾಶ ದೊರೆತಿರುವುದು ಕಕ್ಷಿದಾರನ ಪಾಲಿಗೆ ತೆರೆದ ಭಾಗ್ಯದ ಬಾಗಿಲು ಎಂದು ಸಚಿವರು ವಿವರಿಸಿದರು.
ನ್ಯಾಯಾಲಯಗಳ ಕಲಾಪಗಳಲ್ಲಿ ವಿಳಂಬ ನಿರಾಕರಿಸುವ, ಚರಿತ್ರಾರ್ಹ ಸುಧಾರಣೆಗೆ ಶಾಸನಾತ್ಮಕ ಅಂಕುಶ ಹೊಂದಿರುವ ಈ ತಿದ್ದುಪಡಿ ಪ್ರಕರಣ ದಾಖಲಾದ ದಿನಾಂಕದಿಂದ 24 ತಿಂಗಳಲ್ಲಿ ಯಾವುದೇ ಸಿವಿಲ್ ಪ್ರಕರಣ ಇತ್ಯರ್ಥವಾಗಿ, ತಾರ್ಕಿಕ ಅಂತ್ಯ ಕಾಣುವುದಕ್ಕೆ ಸುನಿಶ್ಚಿತಗೊಳಿಸುವ ಶಾಸನ ಜಾರಿಗೆ ಬಂದಿದೆ. ಈ ಪೂರ್ವಗಾಮಿ ಪ್ರಗತಿಯ ಜೊತೆ-ಜೊತೆಗೆ ಈ ಕಾನೂನು ನ್ಯಾಯಾಲಯಗಳಲ್ಲಿ ಆಗುವ ವಿಳಂಬಕ್ಕೆ ಇತಿಶ್ರೀ ಹಾಡಲಿದೆ. ಇನ್ನು ಮುಂದೆ ನ್ಯಾಯಾಲಯಗಳಲ್ಲಿ, ವಿಳಂಬವಿಲ್ಲದೇ ಪ್ರಕರಣಗಳು ಇತ್ಯರ್ಥವಾಗಲು ಶಾಸನ ಮಾಡಲಾಗಿದೆ ಎಂದರು.
ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ ದಿನದಂದು ಅಥವಾ ಮೊದಲ ವಿಚಾರಣೆಯ ದಿನದಂದು ಅಂತಿಮ ತೀರ್ಪು / ಆದೇಶದ ದಿನಾಂಕ ನಿರ್ಣಯವಾಗುವ ಅತ್ಯಂತ ಪರಿಣಾಮಕಾರಿ ಮಹತ್ವದ ಶ್ರೇಷ್ಠವಾದ ನ್ಯಾಯಾಂಗದ ಕಾರ್ಯ ನಿರ್ವಹಣೆಗೆ ಈ ತಿದ್ದುಪಡಿ ಇಂಬು ನೀಡಲಿದೆ ಎಂದು ತಿಳಿಸಿದರು.
ಕಳೆದ ಬೆಳಗಾವಿ ಅಧಿವೇಶನದಲ್ಲಿ 2024ರ ಡಿ. 17ರಂದು ವಿಧಾನ ಸಭೆಯಲ್ಲಿ, ಡಿ. 18ರಂದು ವಿಧಾನ ಪರಿಷತ್ತಿನಲ್ಲಿ ಈ ಕಾನೂನು ಅಂಗೀಕರಿಸಲಾಗಿತ್ತು. ರಾಜ್ಯಪಾಲರು ಈ ವಿಧೇಯಕವನ್ನು ಸಂವಿಧಾನದ ಅನುಚ್ಛೇದ 200 ಮತ್ತು 254 ರಡಿಯಲ್ಲಿ ರಾಷ್ಟ್ರಪತಿಯವರ ಅಂಕಿತಕ್ಕೆ ಕಾಯ್ದಿರಿಸಿದ್ದರು. ಈ ಕಾನೂನಿಗೆ ರಾಷ್ಟ್ರಪತಿಯವರು ಮೇ 19 ರಂದು ತಮ್ಮ ಅಂಕಿತ ಹಾಕಿದ್ದಾರೆ. ಲಿಖಿತ ಹೇಳಿಕೆ, ಸಾಕ್ಷ್ಯ ಸಂಗ್ರಹ ಎಲ್ಲದಕ್ಕೂ ಕಾಲಮಿತಿ ನಿಗದಿಪಡಿಸಲು ಶಾಸನ ಅವಕಾಶ ಕಲ್ಪಿಸಿದೆ. ಯಾವುದೇ ಹಂತದಲ್ಲಿ ಒಂದು ತಿಂಗಳೊಳಗಾಗಿ ಕೇವಲ 3 ಮುಂದೂಡಿಕೆ ಅಥವಾ 3 ದಿನಾಂಕಗಳ ಅವಕಾಶ ಮಾತ್ರ ಕಲ್ಪಿಸಲಾಗುವುದು. ಯಾವುದೇ ಹಂತದಲ್ಲಿ ಅರ್ಜಿದಾರ-ಪ್ರತಿವಾದಿ ಈ ಅವಕಾಶದಲ್ಲಿ ಸಲ್ಲಿಸದಿದ್ದರೆ, ಅಂಥವರ ಹೇಳಿಕೆಗಳನ್ನು ಶೂನ್ಯವೆಂದು ಪರಿಗಣಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Covid-19 cases: ಕೋವಿಡ್ ಆತಂಕ; ಜಿಲ್ಲಾ ಆಸ್ಪತ್ರೆಗಳು ಸರ್ವ ಸನ್ನದ್ಧವಾಗಿರಲು ಸಿಎಂ ಸೂಚನೆ
ಈ ಕಾನೂನಿನಲ್ಲಿ ಪ್ರಕರಣ ನಿರ್ವಹಣೆಯನ್ನು ಪುನರ್ ವ್ಯಾಖ್ಯಾನ ಮಾಡಲಾಗಿದೆ. ಸಾಕ್ಷ್ಯಗಳ ವಿಚಾರಣೆಗಳನ್ನು ನಿಗದಿತ ದಿನಾಂಕದಂದು ಕೈಗೊಳ್ಳಲು ಮತ್ತು ದೈನಂದಿನ ಅಥವಾ ಸಾಪ್ತಾಹಿಕ ಆಧಾರದಲ್ಲಿ ಈ ತಿದ್ದುಪಡಿಗೆ ಅವಕಾಶ ಕಲ್ಪಿಸಿರುವುದರಿಂದ ಯಾವುದೇ ಪ್ರಕರಣ ಅನಿರ್ದಿಷ್ಟಕಾಲ ವಿಳಂಬಕ್ಕೆ ಕಾರಣವಾಗುವುದಿಲ್ಲ. ಆಗದಂತೆ ಸುನಿಶ್ಚಿತಗೊಳಿಸುವ ಜನಪರ ಕಾನೂನು ಅಸ್ತಿತ್ವಕ್ಕೆ ತರಲಾಗಿದೆ. ನ್ಯಾಯದಾನ ವ್ಯವಸ್ಥೆಯನ್ನು ಸಂಪೂರ್ಣವಾಗಿ, ಸುಧಾರಣೆಗೆ ಈ ಕಾನೂನು ಅವಕಾಶ ಕಲ್ಪಿಸಿದೆ. ರಾಜ್ಯದ ಕಕ್ಷಿದಾರರ ನ್ಯಾಯಾಲಯಕ್ಕೆ ವೃಥಾ ಅಲೆದಾಟ ತಪ್ಪಿಸಿ, ಆರ್ಥಿಕವಾಗಿ ಕೈಗೆಟಕುವ ರೀತಿಯಲ್ಲಿ ತ್ವರಿತ ನ್ಯಾಯದಾನ ವ್ಯವಸ್ಥೆಗೆ ಒಂದು ನಿರ್ವಹಣಾ ವ್ಯವಸ್ಥೆಯನ್ನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಇಲಾಖೆ ಕಲ್ಪಿಸಿ, ರೂಪಿಸಿ, ಅನುಷ್ಠಾನಗೊಳಿಸಿದೆ ಎಂದು ವಿವರಿಸಿದರು.