ಕಲಬುರಗಿ: ಟಿಟಿ ವಾಹನದ ಟೈರ್ ಸ್ಫೋಟಗೊಂಡ ಪರಿಣಾಮ ಸರಣಿ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೂವರು ಮೃತಪಟ್ಟು, ಐದಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ (Afzalpur accident) ಅಫಜಲಪುರ ತಾಲೂಕಿನ ಗೊಬ್ಬುರ(ಬಿ) ಗ್ರಾಮದ ಬಳಿ ಬುಧವಾರ ನಡೆದಿದೆ. ಟೈರ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಟಿಟಿ, ಕಬ್ಬಿನ ಲಾರಿ ಹಾಗೂ ದ್ವಿಚಕ್ರವಾಹನದ ನಡುವೆ ಸರಣಿಯ ಅಪಘಾತ ಸಂಭವಿಸಿದೆ.
ಮೃತರನ್ನು ಕಲಬುರಗಿ ನಗರದ ಸ್ಟೇಷನ್ ಬಜಾರ್ ನಿವಾಸಿಗಳಾದ ವಿನೀತಾ ರವಿರಾವ್ (54), ಅನುಪ್ ಮಾಧವ್ ಬೆಂಗೇರಿ(29) ಮತ್ತು ಗೊಬ್ಬುರ್ (ಬಿ) ಗ್ರಾಮದ ನಿವಾಸಿ, ದ್ವಿಚಕ್ರವಾಹನ ಸವಾರ ಬಸವರಾಜ್ ಚಿಸ್ತಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ 5ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿರುವುದು ವರದಿಯಾಗಿದೆ.
ಟಿಟಿಯಲ್ಲಿದ್ದ ಇಬ್ಬರು ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ದರ್ಶನ ಪಡೆದು ಕಲಬುರಗಿಯತ್ತ ತೆರಳುತ್ತಿದ್ದರು. ಈ ವೇಳೆಯೇ ಲಾರಿ, ಟಿಟಿ ಮತ್ತು ದ್ವಿಚಕ್ರವಾಹನದ ನಡುವೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಮತ್ತು ಡಿಎಸ್ಪಿ ಗೊಪಿ ಬಿ.ಆರ್, ಸಿಪಿಐ ಪ್ರಕಾಶ್ ಯಾತನೂರ್ ಸೇರಿ ಗಾಣಗಾಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ದೇವಲ್ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಈ ಸುದ್ದಿಯನ್ನೂ ಓದಿ | Lakshmi Hebbalkar: ಸಿ.ಟಿ. ರವಿ, ನಿಮ್ಮ ನಾಲಿಗೆಯನ್ನು ಫಿನಾಯಿಲ್ ಹಾಕಿ ತೊಳೆದುಕೊಳ್ಳಿ ಎಂದ ಲಕ್ಷ್ಮೀ ಹೆಬ್ಬಾಳಕರ್
ಶಿಗ್ಗಾಂವಿ ಬಳಿ ಭೀಕರ ಅಪಘಾತ; ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ನಾಲ್ವರ ದಾರುಣ ಸಾವು
ಹಾವೇರಿ: ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಮೃತಪಟ್ಟಿರುವ ಘಟನೆ (Shiggaon Accident) ಶಿಗ್ಗಾಂವಿ ಬಳಿಯ ತಡಸ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗದಲ್ಲಿ ಸಂಚರಿಸುವಾಗ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಮತ್ತೊಂದು ಬದಿಯಲ್ಲಿ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯ ಚಂದ್ರಮ್ಮ (59), ಪುತ್ರಿ ಮೀನಾ (39), ಮಹೇಶಕುಮಾರ.ಸಿ( 41) ಹಾಗೂ ಬಾಲಕ ಧನವೀರ (11) ಮೃತರು. ಹುಬ್ಬಳ್ಳಿಯಿಂದ ತಿಮ್ಮಾಪುರದ ಬೆಳ್ಳಿಗಟ್ಟಿ ಗ್ರಾಮದ ತಡಸ ಪಿಎಸ್ ವ್ಯಾಪ್ತಿಯಲ್ಲಿ ಈ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ. ಸ್ಥಳಕ್ಕೆ ಜಿಲ್ಲಾ ಎಸ್ಪಿ ಅಂಶುಕುಮಾರ ತಡಸ್ ಠಾಣೆಯ ಪಿಎಸ್ಐ, ಸಿಪಿಐ ಸೇರಿ ಪೊಲೀಸ್ ಅಧಿಕಾರಿಗಳು ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಬಿಳಿ ಮಹೀಂದ್ರಾ ಎಕ್ಸ್‌ಯುವಿ 700 ವಾಹನವು ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಹುಬ್ಬಳ್ಳಿಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕೆಂಪು ಬಣ್ಣದ ಟಾಟಾ ಆಲ್ಕ್ರೋಜ್ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕೆಂಪು ವಾಹನದಲ್ಲಿ 10-12 ವರ್ಷದ ಒಂದು ಮಗು ಸೇರಿ 4 ಜನರಿದ್ದರು, ಅವರೆಲ್ಲರೂ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 2 ಜನರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗದೇ ಕೊನೆ ಉಸಿರು ಚೆಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.