Thursday, 26th December 2024

Saydnaya Prison: ಅಸ್ಸಾದ್‌ನ ಕ್ರೂರ ಆಡಳಿತಕ್ಕೆ ಸಾಕ್ಷಿ ಸಿರಿಯಾದ ಈ ಸೈದ್ನಾಯಾ ಜೈಲು; ಕೈದಿಗಳಿಗೆ ಚಿತ್ರಹಿಂಸೆ ನೀಡಿರುವ ಕುರುಹು ಪತ್ತೆ

Saydnaya Prison

ಡೆಮಾಸ್ಕಸ್‌: ಸಿರಿಯಾ (Syria)ದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ಸಂಭವಿಸಿದ್ದು, 24 ವರ್ಷಗಳ ಬಶರ್ ಅಲ್-ಅಸ್ಸಾದ್ (Bashar al-Assad) ಸರ್ಕಾರದ ಪತನವಾಗಿದೆ. ಇದೀಗ ನರಕ ಸದೃಶ್ಯದಂತಿದ್ದ ಮತ್ತು ಮಾನವ ಕಸಾಯಿಖಾನೆ ಎಂದು ಕುಖ್ಯಾತಿ ಪಡೆದಿದ್ದ ಸೈದ್ನಾಯಾ ಜೈಲಿನಿಂದ (Saydnaya Prison) ಸಾವಿರಾರು ಕೈದಿಗಳನ್ನು ಬಿಡುಗಡೆಗೊಳಿಸಲಾಗಿದೆ. ಸದ್ಯ ಈ ಕಾರಾಗೃಹದ ಕ್ರೂರತೆಯ ಮೇಲೆ ಬೆಳಕು ಚೆಲ್ಲುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

13 ವರ್ಷಗಳ ಅಂತರ್ಯುದ್ಧ, ಅಸಾದ್‌ ಮನೆತನದ ಅರ್ಧ ಶತಮಾನದ ಆಳ್ವಿಕೆಯಲ್ಲಿ ಕಣ್ಮರೆಯಾದ ಪ್ರೀತಿಪಾತ್ರರನ್ನು ಹುಡುಕಲು ಸಿರಿಯನ್ನರು ಸೈದ್ನಾಯಾ ಜೈಲಿಗೆ ಧಾವಿಸಿದ್ದಾರೆ. ಬ್ಲೂಮ್ಬರ್ಗ್ ಪ್ರಕಾರ, ಎಡಪಂಥೀಯರಿಂದ ಹಿಡಿದು ಶಂಕಿತ ಇಸ್ಲಾಮಿಸ್ಟ್‌ ರಾಜಕೀಯ ಭಿನ್ನಮತೀಯರನ್ನು ಬಂಧಿಸಲು ಈ ಜೈಲನ್ನು ಬಳಸಲಾಗುತ್ತಿತ್ತು.

ಮಾನವ ಕಸಾಯಿಖಾನೆ

ಮಾನವ ಕಸಾಯಿಖಾನೆ ಎಂದು ಕರೆಯಲ್ಪಡುವ ಸೈದ್ನಾಯಾ ಜೈಲಿನಲ್ಲಿ ಕೈದಿಗಳಿಗೆ ಕ್ರೂರ ಶಿಕ್ಷೆ ನೀಡಲಾಗುತ್ತಿತ್ತು. ಇದೀಗ ಹೊರ ಬಿದ್ದಿರುವ ವಿಡಿಯೊದಲ್ಲಿ ಈ ಜೈಲಿನಿಂದ ಬಿಡುಗಡೆಗೊಂಡ ಕೈದಿಗಳು ಅಸ್ಥಿಪಂಜರದಂತೆ ಕಂಡು ಬಂದಿದ್ದಾರೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಸೆರೆಮನೆಗಳ ಒಳಗೆ ನೀರು ಮತ್ತು ಮಣ್ಣು ಹರಡಿರುವುದು ಕಂಡು ಬಂದಿದೆ. ಜತೆಗೆ ಮಲವು ಅಲ್ಲಲ್ಲಿ ಹರಡಿದೆ. ಆಹಾರಕ್ಕಾಗಿ ಒಂದೇ ಒಂದು ಬಟ್ಟಲು ಇರಿಸಲಾಗಿದೆ ಎಂದು ಅಲ್ಲಿನ ಶೋಚನೀಯ ಸ್ಥಿತಿಯನ್ನು ಮೂಲಗಳು ಬಹಿರಂಗಪಡಿಸಿವೆ. ಸದ್ಯ ಅಧಿಕಾರಿಗಳು ಜೈಲಿನ ಗೋಡೆಗಳನ್ನು ಒಡೆಯಲು ಯತ್ನಿಸುತ್ತಿದ್ದು, ರಹಸ್ಯ ಕೋಣೆಗಳು, ನೆಲ ಮಳಿಗೆಗಳು ಇವೆಯೇ ಎನ್ನುವುದನ್ನು ಪರಿಶೀಲಿಸುತ್ತಿದ್ದಾರೆ.

ಕ್ರೂರತೆಗೆ ಸಾಕ್ಷಿ

ಡಮಾಸ್ಕಸ್ ಬಳಿಯ ಆಸ್ಪತ್ರೆಯ ಶವಾಗಾರದಲ್ಲಿ ಚಿತ್ರಹಿಂಸೆಯ ಚಿಹ್ನೆಗಳನ್ನು ಹೊಂದಿರುವ ಸುಮಾರು 40 ಶವಗಳನ್ನು ಬಂಡುಕೋರರು ಪತ್ತೆ ಹಚ್ಚಿದ್ದಾರೆ. “ಶವಾಗಾರದ ಬಾಗಿಲು ತೆರೆದೆ. ಅಲ್ಲಿನ ದೃಶ್ಯ ಭಯಾನಕವಾಗಿತ್ತು. ಭೀಕರ ಚಿತ್ರಹಿಂಸೆಯ ಚಿಹ್ನೆಗಳನ್ನು ತೋರಿಸುವ ಸುಮಾರು 40 ಶವಗಳನ್ನು ಅಲ್ಲಿ ರಾಶಿ ಹಾಕಲಾಗಿತ್ತು” ಎಂದು ಬಂಡುಕೋರ ಬಣಗಳ ಹೋರಾಟಗಾರ ಮೊಹಮ್ಮದ್ ಅಲ್-ಹಜ್ ತಿಳಿಸಿದ್ದಾರೆ.

ಇಂಗ್ಲೆಂಡ್‌ ಮೂಲದ ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ವಾರ್ ಮಾನಿಟರ್ ಪ್ರಕಾರ, ಸೈದ್ನಾಯಾ ಜೈಲಿನಲ್ಲಿ ಚಿತ್ರಹಿಂಸೆ ಅಥವಾ ಭಯಾನಕ ಪರಿಸ್ಥಿತಿಗಳಿಂದಾಗಿ ಕನಿಷ್ಠ 60,000 ಜನರು ಸಾವನ್ನಪ್ಪಿದ್ದಾರೆ. ಬಶರ್ ಅಲ್-ಅಸ್ಸಾದ್ ಆಳ್ವಿಕೆಯಲ್ಲಿ ಬಳಲುತ್ತಿದ್ದ ಸಾವಿರಾರು ಪುರುಷರು, ಮಹಿಳೆಯರು ಮತ್ತು ಮಕ್ಕಳು ಈ ಜೈಲಿನಲ್ಲಿದ್ದರು. ಬಂಡುಕೋರರು ಡಮಾಸ್ಕಸ್ ಅನ್ನು ವಶಪಡಿಸಿಕೊಂಡ ಕೂಡಲೇ, ಜೈಲಿನ ಕೋಣೆಗಳ ಬಾಗಿಲುಗಳನ್ನು ತೆರೆದಿದ್ದಾರೆ. ಬದುಕುಳಿದವರು ಅಲ್ಲಿನ ದೌರ್ಜನ್ಯಗಳನ್ನು ವಿವರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Saydnaya Prison: ಅತ್ಯಾಚಾರ, ಎಲೆಕ್ಟ್ರಿಕ್‌ ಶಾಕ್- ಇದು ಜೈಲಲ್ಲ..ಮಾನವ ಕಸಾಯಿಖಾನೆ! ಸೈದ್ನಾಯಾ ಸೆರೆಮನೆಯಿಂದ ನೂರಾರು ಕೈದಿಗಳು ರಿಲೀಸ್‌