ಸಿಡ್ನಿ: ಬಾರ್ಡರ್-ಗವಾಸ್ಕರ್(Border-Gavaskar Trophy) ಟೆಸ್ಟ್ ಸರಣಿಯನ್ನಾಡಲು ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಟೀಮ್ ಇಂಡಿಯಾ(Team India) ಇದೀಗ ಟೆಸ್ಟ್ ಸರಣಿ ಮುಕ್ತಾಯಗೊಂಡರೂ ಸ್ವದೇಶಕ್ಕೆ ಮರಳಲು ಪರದಾಡುವಂತಾಗಿದೆ. ಇದಕ್ಕೆ ಕಾರಣ ತಕ್ಷಣವೇ ವಾಪಸಾಗಲು ಟಿಕೆಟ್ ಸಿಗದೇ ಇರುವುದು. ಸಿಡ್ನಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯ ನಡುವಿನ ಅಂತಿಮ ಟೆಸ್ಟ್ ಪಂದ್ಯವು ಮೂರೇ ದಿನದಲ್ಲಿ ಮುಕ್ತಾಯಗೊಂಡ ಕಾರಣ ಟಿಕೆಟ್ ಹೊಂದಿಸಲು ಸಾಧ್ಯವಾಗಲಿಲ್ಲ.
ಭಾರತ ಕ್ರಿಕೆಟ್ ತಂಡದ ಆಟಗಾರರು ಜ.8 ರಂದು ಆಸ್ಟ್ರೇಲಿಯದಿಂದ ಹೊರಡಲು ನಿರ್ಧರಿಸಿದ್ದರು. ಆದರೆ 5ನೇ ಟೆಸ್ಟ್ ಪಂದ್ಯವು ಎರಡು ದಿನ ಮೊದಲೇ ಮುಕ್ತಾಯಗೊಂಡ ಕಾರಣ ಕೆಲವು ಆಟಗಾರರು ಬೇಗನೆ ಹೊರಡಲು ಸಿದ್ದರಾಗಿದ್ದರು. ಆದರೆ ಟಿಕೆಟ್ ಲಭ್ಯತೆ ಇಲ್ಲದ ಕಾರಣ ಇದು ಅಸಾಧ್ಯವಾಗಿದೆ. ಟಿಕೆಟ್ ಲಭಿಸಿದ ತಕ್ಷಣವೇ ತಂಡದ ನಿರ್ಗಮನದ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಭಾರತ ತಂಡ ಸರಿ ಸುಮಾರು ಎರಡು ತಿಂಗಳ ಕಾಲ ಆಸೀಸ್ ಪ್ರವಾಸದಲ್ಲಿತ್ತು.
ಗಂಭೀರ್ ಕೋಚ್ ಆದ ಬಳಿಕ ಭಾರತ 10 ಟೆಸ್ಟ್ ಆಡಿದ್ದು, ಕೇವಲ 3ರಲ್ಲಿ ಗೆದ್ದಿದೆ. ಇದರಲ್ಲಿ 2 ಟೆಸ್ಟ್ ಬಾಂಗ್ಲಾ ವಿರುದ್ಧ. ತಂಡ ನ್ಯೂಜಿಲೆಂಡ್, ಆಸ್ಟ್ರೇಲಿಯಾ ವಿರುದ್ಧ 6 ಟೆಸ್ಟ್ ಸೋತಿದೆ. ಚಾಂಪಿಯನ್ಸ್ ಟ್ರೋಫಿ ಗಂಭೀರ್ ಪಾಲಿಗೆ ನಿರ್ಣಾಯಕ ಎನಿಸಿಕೊಂಡಿದೆ. ಒಂದು ವೇಳೆ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲೂ ಭಾರತ ಕಳಪೆ ಪ್ರದರ್ಶನ ನೀಡಿದ್ದರೆ ಗಂಭೀರ್‌ರನ್ನು ಕೆಳಗಿಳಿಸಿ ಬೇರೊಬ್ಬ ಕೋಚ್ ನೇಮಿಸಲು ಬಿಸಿಸಿಐ ಚಿಂತಿಸುತ್ತಿದೆ ಎನ್ನಲಾಗಿದೆ.
ಸರಣಿ ಸೋಲಿನ ಬಳಿಕ ಕೋಚ್ ಗಂಭೀರ್ ಭಾರತದ ಆಟಗಾರರ ಪ್ರದರ್ಶನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ರಣಜಿ ಟ್ರೋಫಿ ಆಡುವಂತೆ ತಂಡದ ಎಲ್ಲ ಆಟಗಾರರಿಗೂ ತಾಕೀತು ಮಾಡಿದ್ದರು. ‘ಮುಂದಿನ 5 ತಿಂಗಳಲ್ಲಿ ಏನಾಗಲಿದೆ ಎಂಬುದರ ಬಗ್ಗೆ ಈಗಲೇ ಏನೂ ಹೇಳಲು ಆಗಲ್ಲ. ರೆಡ್ ಬಾಲ್ ಕ್ರಿಕೆಟ್ ಬಗ್ಗೆ ಆಟಗಾರರಿಗೆ ಬದ್ಧತೆ ಇದ್ದರೆ ಅವರು ರಣಜಿಯ ಎಲ್ಲಾ ಪಂದ್ಯಗಳನ್ನೂ ಆಡಬೇಕು. ದೇಸಿ ಕ್ರಿಕೆಟ್‌ಗೆ ಆದ್ಯತೆ ನೀಡದಿದ್ದರೆ, ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಬೇಕಾದ ಆಟಗಾರನಾಗಲು ಸಾಧ್ಯವಿಲ್ಲ’ ಎಂದು ಗಂಭೀರ್ ಎಚ್ಚರಿಕೆ ನೀಡಿದ್ದರು.