Friday, 22nd November 2024

Trishikha Kumari: ಮೈಸೂರು ಅರಮನೆಗೆ ಹಬ್ಬದ ಸಂಭ್ರಮ ದುಪ್ಪಟ್ಟು; ತ್ರಿಶಿಕಾ- ಯದುವೀರ್‌ ದಂಪತಿಗೆ ಗಂಡು ಮಗು ಜನನ

trishikha

ಮೈಸೂರು: ಮೈಸೂರು ನಾಡಹಬ್ಬದ (Navaratri 2024) ಸಂಭ್ರಮದಲ್ಲಿರುವಾಗಲೇ ಈ ಉತ್ಸಾಹವನ್ನು ದುಪ್ಪಟ್ಟಾಗಿಸುವ ಇನ್ನೊಂದು ಸ್ವೀಟ್‌ ನ್ಯೂಸ್‌ ದೊರೆತಿದೆ. ಹೌದು, ಮಹಾರಾಜ, ಮೈಸೂರು ಸಂಸದ ಯದುವೀರ್‌ ಒಡೆಯರ್‌ (Yaduveer Wodeyar) ಅವರ ಪತ್ನಿ ತ್ರಿಷಿಕಾ ಕುಮಾರಿ ದೇವಿ (Trishikha Kumari Devi) ಒಡೆಯರ್‌ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಇದು ಯದುವೀರ್-‌ ತ್ರಿಶಿಕಾ ದಂಪತಿಗೆ ಎರಡನೇ ಗಂಡು ಮಗು. ಮೊದಲ ಮಗು ಆದ್ಯವೀರ್‌ಗೆ ಈಗ ಏಳು ವರ್ಷ. ಈಗ ಮತ್ತೊಬ್ಬ ಪುತ್ರ ರಾಜವಂಶಕ್ಕೆ ಬಂದಿದ್ದಾನೆ. ಯದುವೀರ್‌ ಅವರು ಖಾಸಗಿ ದರ್ಬಾರ್‌ ಚಟುವಟಿಕೆಗಳಲ್ಲಿ ಒಂದು ವಾರದಿಂದ ಭಾಗಿಯಾಗಿದ್ದು. ಶುಕ್ರವಾರ ಆಯುಧಪೂಜೆ ಸಂಭ್ರಮದಲ್ಲಿದ್ದರು. ಈ ವೇಳೆ ಖುಷಿಯ ವಿಚಾರ ಬಂದಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇಡೀ ಕುಟುಂಬ ದಸರಾದ ಸಡಗರದಲ್ಲಿದೆ. ಈಗಾಗಲೇ ಎಂಟು ದಿನ ಖಾಸಗಿ ದರ್ಬಾರ್‌ ನಡೆಸಿರುವ ಯದುವೀರ್‌ ಅವರು ನಾಳೆ ವಿಜಯದಶಮಿಗೆ ಅಣಿಯಾಗುತ್ತಿದ್ದರು. ಇದರ ನಡುವೆ ಗುರುವಾರ ರಾತ್ರಿಯೇ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತ್ರಿಷಿಕಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗಿನ ಜಾವ ತ್ರಿಷಿಕಾ ಅವರು ಗಂಡು ಮಗುವಿಗೆ ಜನ್ಮ ನೀಡಿದ ಸುದ್ದಿ ಅರಮನೆಯಲ್ಲಿದ್ದ ಯದುವೀರ್‌ ಒಡೆಯರ್‌ ಅವರಿಗೆ ತಲುಪಿತು.

ಖಾಸಗಿ ದರ್ಬಾರ್‌ ಇರುವ ಕಾರಣದಿಂದ ಕಂಕಣಧಾರಿಯಾಗಿರುವ ಯದುವೀರ್‌ ಅರಮನೆಯಿಂದ ಹೊರಗೆ ಹೋಗುವುದಿಲ್ಲ. ಇಂದು ಖಾಸಗಿ ದರ್ಬಾರ್‌ ಮುಗಿದ ಬಳಿಕ ಹೊರ ಬರಲಿದ್ದಾರೆ. ಈಗಾಗಲೇ ಎಂಟು ತಿಂಗಳು ಮುಗಿದಿದ್ದರಿಂದ ಹೆರಿಗೆ ದಿನಗಳನ್ನು ತ್ರಿಷಿಕಾ ಎಣಿಸುತ್ತಿದ್ದರು. ಇದರಿಂದ ಈ ಬಾರಿ ಅವರು ಹೆಚ್ಚು ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ನವರಾತ್ರಿ ವೇಳೆಯೇ ಮಗು ಆಗಬಹುದು ಎಂದು ಕುಟುಂಬ ನಿರೀಕ್ಷಿಸಿತ್ತು ಎಂದು ಎಂದು ಅರಮನೆ ಮೂಲಗಳು ಮಾಹಿತಿ ನೀಡಿವೆ.

ರಾಜಸ್ಥಾನ ಮೂಲದ ಡುಂಗರ್‌ ಪುರ್‌ ಕುಟುಂಬದ ತ್ರಿಷಿಕಾಕುಮಾರಿ ಅವರನ್ನು 2016ರಲ್ಲಿ ಯದುವೀರ್‌ ಅವರು ವಿವಾಹವಾಗಿದ್ದರು. ಆನಂತರ ಆದ್ಯವೀರ್‌ ಜನಿಸಿದ್ದ. ಈಗ ಎರಡನೇ ಮಗುವಿನ ಜನನವಾಗಿದೆ. ಯದುವೀರ್‌ ನಾಲ್ಕು ತಿಂಗಳ ಹಿಂದೆಯಷ್ಟೇ ಮೈಸೂರು ಕೊಡಗು ಸಂಸದರಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: Trishikha Kumari: ಮೈಸೂರು ಅರಮನೆಯಲ್ಲಿ ಸದ್ಯವೇ ಇನ್ನೊಂದು ಮಗು? ನವರಾತ್ರಿ ಪೂಜೆಯಲ್ಲಿ ತ್ರಿಶಿಕಾ ಲುಕ್