Bill Gates: ಭಾರತದ ಎಐ ಸಾಧನೆಗೆ ಬಿಲ್ ಗೇಟ್ಸ್ ಶಹಬ್ಬಾಸ್‌ಗಿರಿ; ಲಸಿಕೆ ಉತ್ಪಾದನಾ ಸಾಮರ್ಥ್ಯಕ್ಕೂ ಮೆಚ್ಚುಗೆ
PM Narendra Modi: ಮೈಕ್ರೋಸಾಫ್ಟ್‌ನ ಮಾಜಿ ಸಿಇಒ ಬಿಲ್ ಗೇಟ್ಸ್ ಬುಧವಾರ (ಮಾ. 19) ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಇಬ್ಬರು ದಿಗ್ಗಜರು ಆರೋಗ್ಯ, ಕೃಷಿ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಯ ಬಗ್ಗೆ ಚರ್ಚೆ ನಡೆಸಿದ್ದಾರೆ.

ಬಿಲ್ ಗೇಟ್ಸ್ ಮತ್ತು ನರೇಂದ್ರ ಮೋದಿ.

ಹೊಸದಿಲ್ಲಿ: ಮೈಕ್ರೋಸಾಫ್ಟ್ (Microsoft)ನ ಮಾಜಿ ಸಿಇಒ ಬಿಲ್ ಗೇಟ್ಸ್ (Bill Gates) ಬುಧವಾರ (ಮಾ. 19) ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಇಬ್ಬರು ದಿಗ್ಗಜರು ಆರೋಗ್ಯ, ಕೃಷಿ ಮತ್ತು ಕೃತಕ ಬುದ್ಧಿಮತ್ತೆ (Artificial Intelligence-AI) ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಮುಂಬರುವ ಪೀಳಿಗೆಗೆ ಉತ್ತಮ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಬಳಕೆ ಸೇರಿದಂತೆ ವೈವಿಧ್ಯ ವಿಷಯಗಳ ಬಗ್ಗೆ ಗೇಟ್ಸ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ಮೋದಿ ಹೇಳಿದರು.
"ಬಿಲ್ ಗೇಟ್ಸ್ ಅವರೊಂದಿಗೆ ಸಭೆ ನಡೆಸಲಾಗಿದೆ. ಈ ವೇಳೆ ಮುಂಬರುವ ಪೀಳಿಗೆಗೆ ಉತ್ತಮ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ತಂತ್ರಜ್ಞಾನ, ನಾವೀನ್ಯತೆ ಮತ್ತು ಸುಸ್ಥಿರತೆಯ ಬಳಕೆ ಸೇರಿದಂತೆ ವೈವಿಧ್ಯಮಯ ವಿಷಯಗಳ ಬಗ್ಗೆ ನಾವು ಮಾತನಾಡಿದ್ದೇವೆ" ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
As always, an excellent meeting with Bill Gates. We spoke about diverse issues including tech, innovation and sustainability towards making a better future for the coming generations. https://t.co/XLZ86wDILA
— Narendra Modi (@narendramodi) March 19, 2025
ಇದಕ್ಕೂ ಮುನ್ನ ಬಿಲ್ ಗೇಟ್ಸ್ ಅವರು, "ಭಾರತದ ಅಭಿವೃದ್ಧಿ, ವಿಕಸಿತ್ ಭಾರತ್ @ 2047ರ ಹಾದಿ ಮತ್ತು ಆರೋಗ್ಯ, ಕೃಷಿ, ಎಐ ಮತ್ತು ಇತರ ಕ್ಷೇತ್ರಗಳಲ್ಲಿನ ಪ್ರಗತಿಯ ಬಗ್ಗೆ ನಾನು ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆʼʼ ಎಂದು ತಿಳಿಸಿದ್ದರು. ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಹವಾಮಾನ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಇಂಡಿಯಾ ಎಐ ಮಿಷನ್ ಮತ್ತು ಗೇಟ್ಸ್ ಫೌಂಡೇಶನ್ ಶೀಘ್ರದಲ್ಲೇ ಒಪ್ಪಂದಕ್ಕೆ ಸಹಿ ಹಾಕಲಿವೆ.
ಈ ಸುದ್ದಿಯನ್ನೂ ಓದಿ: Ashwini Vaishnaw: ರೈಲಿನ ಲೋವರ್ ಬರ್ತ್ ಹಿರಿಯ ನಾಗರಿಕರು, ಮಹಿಳೆಯರಿಗೆ ಮೀಸಲು; ಸಚಿವ ಅಶ್ವಿನಿ ವೈಷ್ಣವ್
ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರೊಂದಿಗೂ ಚರ್ಚೆ
ಪ್ರಧಾನಿ ಜತೆಗೆ ಬಿಲ್ ಗೇಟ್ಸ್ ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನೂ ಭೇಟಿಯಾಗಿದ್ದಾರೆ. ಆರೋಗ್ಯ ರಂಗದಲ್ಲಿ ಭಾರತದ ಗಮನಾರ್ಹ ಪ್ರಗತಿ ಮತ್ತು ದೇಶದಲ್ಲಿನ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಚರ್ಚೆಯು ತಾಯಿಯ ಆರೋಗ್ಯ, ರೋಗನಿರೋಧಕತೆ ಮತ್ತು ನೈರ್ಮಲ್ಯದಂತಹ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿತ್ತು ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಬಿಲ್ ಗೇಟ್ಸ್ ಅವರು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತ ಸಾಧಿಸುತ್ತಿರುವ ಪ್ರಗತಿಯನ್ನು ಶ್ಲಾಘಿಸಿದ್ದಾರೆ. ಆರೋಗ್ಯ, ಕೃಷಿ, ಶಿಕ್ಷಣ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವದಲ್ಲಿ ಎಐ ಬಳಕೆ ಬಗ್ಗೆ ಗೇಟ್ಸ್ ಫೌಂಡೇಶನ್ ಭಾರತದೊಂದಿಗೆ ಕೆಲಸ ಮಾಡಲಿದೆ ಎಂದು ಘೋಷಿಸಿದ್ದಾರೆ.
AI solutions for better crops, stronger healthcare, smarter education & climate resilience— MoU soon between India AI Mission & @gatesfoundation pic.twitter.com/YnyEHnGhQt
— Ashwini Vaishnaw (@AshwiniVaishnaw) March 19, 2025
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದೇನು?
ʼʼಸಾಮಾಜಿಕ ಪ್ರಯೋಜನಗಳಿಗಾಗಿ ಎಐ ಅನ್ನು ಬಳಸಿಕೊಳ್ಳಲು ಇಂಡಿಯಾ ಎಐ ಮಿಷನ್ ಮತ್ತು ಗೇಟ್ಸ್ ಫೌಂಡೇಶನ್ ಶೀಘ್ರದಲ್ಲೇ ಒಡಂಬಡಿಕೆಗೆ ಸಹಿ ಹಾಕಲಿವೆʼʼ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಖಚಿತಪಡಿಸಿದ್ದಾರೆ. ಈ ಸಂದರ್ಭದಲ್ಲಿ, ಗೇಟ್ಸ್ ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನೂ ಶ್ಲಾಘಿಸಿದರು. "ಭಾರತೀಯ ತಂತ್ರಜ್ಞಾನ ಇಲ್ಲದೆ ಲಸಿಕೆಗಳು ಕೈಗೆಟುಕಲು ಸಾಧ್ಯವಿಲ್ಲʼʼ ಎಂದು ಹೇಳಿದ್ದಾರೆ. ಜೀವ ಉಳಿಸುವ ಲಸಿಕೆಗಳನ್ನು ವಿಶ್ವಾದ್ಯಂತ ಲಭ್ಯವಾಗುವಂತೆ ಮಾಡುವಲ್ಲಿ ಭಾರತದ ಸೀರಮ್ ಇನ್‌ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್‌ನಂತಹ ಕಂಪನಿಗಳ ಕೊಡುಗೆಯನ್ನೂ ಅವರು ಉಲ್ಲೇಖಿಸಿದ್ದಾರೆ.