ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India-Pak ceasefire: ಕದನ ವಿರಾಮ ಅಂದ್ರೆ ಏನು? ಭಾರತದ ಜೊತೆ ಒಪ್ಪಂದಕ್ಕೆ ಪಾಕಿಸ್ತಾನವೇ ಮುಂದಾಯ್ತೇ? ಮುಂದಿನ ನಡೆ ಏನು? ಇಲ್ಲಿದೆ ಡಿಟೇಲ್ಸ್‌

Operation Sindoor:ಕದನ ವಿರಾಮ ಎಂದರೆ ಯುದ್ಧವನ್ನು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಸ್ಥಗಿತಗೊಳಿಸುವುದು. ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ಸಂಬಂಧಿಸಿದಂತೆ, ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಿಲ್ಲಿಸಲಾಗುತ್ತದೆ. ಕದನ ವಿರಾಮ ಘೋಷಣೆಯಾದ ನಂತರ ಎರಡೂ ಕಡೆಯವರು ನಾಗರಿಕ ಮೂಲಸೌಕರ್ಯವನ್ನು ಗುರಿಯಾಗಿಸಿ ದಾಳಿ ನಡೆಸುವಂತಿಲ್ಲ. ಉಭಯ ರಾಷ್ಟ್ರಗಳ ನಡುವೆ ಶಾಂತಿ ಮಾತುಕತೆಗೆ ಸಮಯ ನೀಡಲು, ಹಿಂಸಾಚಾರ ತಡೆಯಲು, ನಾಗರಿಕರಿಗೆ ಮಾನವೀಯ ನೆರವು ಸಿಗುವಂತೆ ಮಾಡಲು ಈ ಕದನ ವಿರಾಮ ಅನುವು ಮಾಡಿಕೊಡುತ್ತದೆ.

ಕದನ ವಿರಾಮಕ್ಕೆ ಮುಂದಾಗಿದ್ದು ಯಾರು? ಇಲ್ಲಿದೆ ಡಿಟೇಲ್ಸ್‌

Profile Rakshita Karkera May 10, 2025 8:31 PM

ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಅಟ್ಟಹಾಸ(Pahalgam Terror attack) ಮೆರೆದು ಅಮಾಯಕ 26 ಪ್ರವಾಸಿಗರನ್ನು ಬಲಿ ಪಡೆದ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನದ ನಡುವಿನ ಪ್ರಕ್ಷುಬ್ದತೆ ಮತ್ತಷ್ಟು ಹೆಚ್ಚಾಗಿತ್ತು. ಪ್ರತೀಕಾರದ ಪಣ ತೊಟ್ಟಿದ್ದ ಭಾರತ, ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ನೆಲೆಯನ್ನು ಗುರಿಯಾಗಿಸಿ ಒಂಬತ್ತು ಭಯೋತ್ಪಾಕ ಶಿಬಿರಗಳನ್ನು ಪುಡಿಗಟ್ಟಿತ್ತು. ಇದಾದ ಬಳಿಕ ಉಭಯ ರಾಷ್ಟ್ರಗಳ ನಡುವೆ ಒಂದು ರೀತಿಯ ಯುದ್ಧೋನ್ಮಾದದ ವಾತಾವರಣ ಸೃಷ್ಟಿಯಾಗಿತ್ತು. ಕದನ ವಿರಾಮ ಉಲ್ಲಂಘಿಸಿ ಪಾಕ್‌ ಜಮ್ಮು, ಪಂಜಾಬ್‌, ರಾಜಸ್ತಾನ, ಗುಜರಾತ್‌ ಗಡಿ ಪ್ರದೇಶಗಳಲ್ಲಿಗುಂಡಿನ ಚಕಮಕಿ, ಕ್ಷಿಪಣಿ, ಡ್ರೋನ್‌ ದಾಳಿ ನಡೆಸಿ ಪುಂಡಾಟ ಮೆರೆದಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿರುವ ವಾಯನೆಲೆ, ಸೇನಾ ನೆಲೆಯನ್ನು ಪುಡಿಗಟ್ಟಿತ್ತು. ಹೀಗೆ ಕ್ಷಣ ಕ್ಷಣಕ್ಕೂ ಉಭಯ ರಾಷ್ಟ್ರಗಳ ನಡುವಿನ ಯುದ್ಧದ ವಾತಾವರಣ ಭೀತಿಯನ್ನುಂಟು ಮಾಡುವಷ್ಟು ಹೆಚ್ಚಾಗುತ್ತಲೇ ಇತ್ತು. ಈ ಎಲ್ಲದರ ನಡುವೆ ಅನಿರೀಕ್ಷಿತ ಬೆಳವಣಿಗೆಯೊಂದು ಇಂದು ನಡೆದಿದ್ದು, ಉಭಯ ರಾಷ್ಟ್ರಗಳು ಅಚ್ಚರಿ ಎಂಬಂತೆ ಕದನ ವಿರಾಮ(India-Pak ceasefire) ಘೋಷಿಸಿವೆ.

ಕದನ ವಿರಾಮ ಎಂದರೇನು?

ಕದನ ವಿರಾಮ ಎಂದರೆ ಯುದ್ಧವನ್ನು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಸ್ಥಗಿತಗೊಳಿಸುವುದು. ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ಸಂಬಂಧಿಸಿದಂತೆ, ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಿಲ್ಲಿಸಲಾಗುತ್ತದೆ. ಕದನ ವಿರಾಮ ಘೋಷಣೆಯಾದ ನಂತರ ಎರಡೂ ಕಡೆಯವರು ನಾಗರಿಕ ಮೂಲಸೌಕರ್ಯವನ್ನು ಗುರಿಯಾಗಿಸಿ ದಾಳಿ ನಡೆಸುವಂತಿಲ್ಲ. ಉಭಯ ರಾಷ್ಟ್ರಗಳ ನಡುವೆ ಶಾಂತಿ ಮಾತುಕತೆಗೆ ಸಮಯ ನೀಡಲು, ಹಿಂಸಾಚಾರ ತಡೆಯಲು, ನಾಗರಿಕರಿಗೆ ಮಾನವೀಯ ನೆರವು ಸಿಗುವಂತೆ ಮಾಡಲು ಈ ಕದನ ವಿರಾಮ ಅನುವು ಮಾಡಿಕೊಡುತ್ತದೆ.

ಕದನ ವಿರಾಮಕ್ಕೆ ಮೊದಲ ಅಡಿ ಇಟ್ಟ ಪಾಕ್‌

ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಮತ್ತು ಸಂಜೆ 5 ಗಂಟೆಯಿಂದ (IST) ಮಿಲಿಟರಿ ಕಾರ್ಯಾಚರಣೆಯನ್ನು ವಿರಾಮಗೊಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಶನಿವಾರ ತಿಳಿಸಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ನವದೆಹಲಿಯಲ್ಲಿ ಬಹಳ ಸಂಕ್ಷಿಪ್ತ ಪತ್ರಿಕಾಗೋಷ್ಠಿ ನಡೆಸಿ ಈ ಘೋಷಣೆ ಮಾಡಿದರು. ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಇಂದು ಮಧ್ಯಾಹ್ನ 3:15ಕ್ಕೆ ಭಾರತದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಿಗೆ ಕರೆ ಮಾಡಿದರು. ಇಂದು ಸಂಜೆ 5 ಗಂಟೆಯಿಂದ ಜಾರಿಗೆ ಬರುವಂತೆ ಭೂಮಿ ಮತ್ತು ಗಾಳಿ ಮತ್ತು ಸಮುದ್ರದಲ್ಲಿ ಎಲ್ಲಾ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಒಪ್ಪಿಕೊಂಡ ಪಾಕ್‌ ಭಾರತಕ್ಕೂ ಈ ಕಾರ್ಯಾಚರಣೆ ಕೈಬಿಡುವಂತೆ ಮನವಿ ಮಾಡಿದರು. ಇದಾದ ಬಳಿಕ ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದವು.

ಅಮೆರಿಕದ ಮಧ್ಯಸ್ಥಿಕೆ?

ಏತನ್ಮಧ್ಯೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ತಾನು ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೊಂಡಿದ್ದಾರೆ. ಆ ಮೂಲಕ ಇಡೀ ಪ್ರಪಂಚವೇ ಆತಂಕದಿಂದ ನೋಡುತ್ತಿದ್ದ ಯುದ್ಧವನ್ನು ತಮ್ಮ ಮಧ್ಯಸ್ಥಿಕೆಯಿಂದ ನಿಂತಿತು ಎಂಬ ಕೀರ್ತಿಯನ್ನು ಪಡೆಯುವ ಪ್ರಯತ್ನಕ್ಕೆ ಅಮೆರಿಕ ಮುಂದಾಗಿದೆ. ಅವರ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಟ್ವೀಟ್‌ನಲ್ಲಿ ಎರಡೂ ದೇಶಗಳ ಅಧಿಕಾರಿಗಳು "ತಟಸ್ಥ ಸ್ಥಳದಲ್ಲಿ" ಚರ್ಚೆಗಳನ್ನು ಪ್ರಾರಂಭಿಸುತ್ತಾರೆ ಎಂದು ಹೇಳಿದ್ದಾರೆ. ಆದರೆ ಭಾರತವಾಗಲೀ ಇಲ್ಲವೇ ಪಾಕಿಸ್ತಾನವಾಗಲೀ ಈ ಬಗ್ಗೆ ಖಚಿತ ಪಡಿಸಿಲ್ಲ.

ಕದನ ವಿರಾಮ ಶಾಶ್ವತವೇ?

ಹಾಗಾದರೆ ಭಾರತ-ಪಾಕ್‌ ನಡುವಿನ ಕದನ ವಿರಾಮ ಶಾಶ್ವತವೇ? ಇದಕ್ಕೆ ಭಾರತ ಒಪ್ಪಂದದ ಬೆನ್ನಲ್ಲೇ ಸ್ಪಷ್ಟನೆ ನೀಡಿದೆ. ಕದನ ವಿರಾಮ ಘೋಷಣೆ ಬೆನ್ನಲ್ಲೇ ಸರ್ಕಾರಿ ಮೂಲಗಳು ಈ ಬಗ್ಗೆ ಶತ್ರುರಾಷ್ಟ್ರ ಪಾಕ್‌ಗೆ ಎಚ್ಚರಿಕೆ ನೀಡಿದ್ದು, ಕದನ ವಿರಾಮ ಘೋಷಣೆಯಾಗಿದೆ ಎಂದ ಮಾತ್ರಕ್ಕೆ ಮುಂದಿನ ದಿನಗಳಲ್ಲಿ ಪಾಕ್‌ ಪುಂಡಾಟಕ್ಕೆ ಮುಂದಾದರೆ ಸುಮ್ಮನೆ ಕೂರುವುದಿಲ್ಲ ಎಂದು ಭಾರತ ಸ್ಪಷ್ಟ ಸಂದೇಶ ರವಾನಿಸಿದೆ. ಭವಿಷ್ಯದಲ್ಲಿ ಯಾವುದೇ ಭಯೋತ್ಪಾದಕ ದಾಳಿಯನ್ನು ಯುದ್ಧದ ಕೃತ್ಯವೆಂದು ಪರಿಗಣಿಸಲಾಗುವುದು ಮತ್ತು ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗವುದು. ಇದಕ್ಕೆ ಯಾರ ಅನುಮತಿಯೂ ಬೇಕಾಗಿಲ್ಲ ಎಂದು ಭಾರತ ಎಚ್ಚರಿಕೆ ನೀಡಿದೆ.

ಈ ಸುದ್ದಿಯನ್ನೂ ಓದಿ: India Pakistan Ceasefire: ಉಗ್ರರ ವಿರುದ್ಧದ ಹೋರಾಟ ಮುಂದುವರಿಯಲಿದೆ; ಪಾಕ್‌ ಜತೆಗಿನ ಕದನ ವಿರಾಮದ ಬೆನ್ನಲ್ಲೇ ಎಚ್ಚರಿಕೆ ನೀಡಿದ ಭಾರತ

ಪಾಕ್‌ ವಿರುದ್ಧ ರಾಜತಾಂತ್ರಿಕ ಕ್ರಮಗಳ ಭವಿಷ್ಯವೇನು?

ಪಹಲ್ಗಾಮ್‌ ದಾಳಿ ನಂತರ ಪ್ರತೀಕಾರದ ಮೊದಲ ಹೆಜ್ಜೆಯಾಗಿ ಭಾರತ, ಪಾಕ್‌ ವಿರುದ್ಧ ಕೆಲವು ಮಹತ್ವದ ರಾಜತಾಂತ್ರಿಕ ಕ್ರಮ ಕೈಗೊಂಡಿತ್ತು. ಸಿಂಧೂ ನದಿ ನೀರು ಒಪ್ಪಂದ ರದ್ದು, ಪಾಕಿಸ್ತಾನಿಗಳ ವೀಸಾ ರದ್ದು, ಪ್ರಾಕಿಸ್ತಾನಿ ಪ್ರಜೆಗಳ ಗಡೀಪಾರು ಸೇರಿದಂತೆ ಹಲವು ರಾಜತಾಂತ್ರಿಕ ಕ್ರಮಗಳನ್ನು ಭಾರತ ಘೋಷಿಸಿತ್ತು. ಇದೀಗ ಕದನ ವಿರಾಮ ಘೋಷಣೆಯಾಗಿರುವುದರಿಂದ ಈ ಕ್ರಮಗಳನ್ನು ಹಿಂಪಡೆಯಲಾಗುತ್ತದೆಯೋ ಎಂಬ ಆತಂಕ ಪ್ರತಿಯೊಬ್ಬ ಭಾರತೀಯನಲ್ಲಿತ್ತು. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ, ಇವುಗಳಲ್ಲಿ ಯಾವುದೇ ಬದಲಾವಣೆ ಇಲ್ಲ.ಮೋದಿ ನೇತೃತ್ವದ ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಸಭೆಯಲ್ಲಿ ಐದು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿತ್ತು. ಆದರೆ ಇದೀಗ ಕದನ ವಿರಾಮ ಘೋಷಣೆ ನಂತರ ಎಲ್ಲ ಮುಕ್ತವಾಗುವುದಿಲ್ಲ. ಹಾಗಾಗಿ ಈ ಐದು ನಿರ್ಧಾರಗಳು ಸ್ಥಿರವಾಗಿರುತ್ತದೆ ಎನ್ನಲಾಗಿದೆ. ಅದರಲ್ಲೂ ಸಿಂಧೂ ನದಿ ನೀರನ್ನು ಪಾಕಿಸ್ತಾನಕ್ಕೆ ಹರಿಸುವ ಪ್ರಶ್ನೆಯೇ ಇಲ್ಲ ಎಂದು ಭಾರತ ಖಡಕ್‌ ಆಗಿ ಹೇಳಿದೆ.