Tuesday, 22nd October 2024

ದ್ವೇಷ ರಾಜಕಾರಣ, ಮತ್ತೊಮ್ಮೆ ಅನಾವರಣ

ಅಭಿಮತ

ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ

ಸದಾ ರಾಜಕೀಯ ಸಂಘರ್ಷಗಳ ಮೂಲಕ ಸುದ್ದಿ ಮಾಡುತ್ತಿರುವ ಪಶ್ಚಿಮ ಬಂಗಾಲದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಯವರ ದುಂಡಾವರ್ತನೆ ಮತ್ತೊಮ್ಮೆ ಬಟಾಬಯಲಾಗಿದೆ.

ಪಶ್ಚಿಮ ಬಂಗಾಳದ ಚುನಾವಣೋತ್ತರ ಹಿಂಸಾಚಾರ, ದೌರ್ಜನ್ಯ, ಗಲಭೆಗಳಿಂದ ಹಲವಾರು ಆಸ್ತಿ ಪಾಸ್ತಿ, ಜೀವಹಾನಿಗಳಿಂದ ರೋಸಿ ಹೋಗಿರುವ ಜನತೆ ಒಂದೆಡೆಯಾದರೆ, ದೇಶಕ್ಕೆ ಅಪ್ಪಳಿಸಿದ ತೌಕ್ತೆ, ಯಾಸ್ ಚಂಡಮಾರುತದ ತೀವ್ರತೆಗೆ ಪಶ್ಚಿಮ ಬಂಗಾಳ ನಲುಗಿದೆ.

ಮತ್ತೊಂದೆಡೆ ಕರೋನಾದ ಹರಡುವಿಕೆಯ ತೀವ್ರತೆಯು ಕೂಡ ವೇಗ ಪಡೆಯುತ್ತಿದೆ. ಈ ಎಲ್ಲಾ ವಿಚಾರಗಳನ್ನು ಅವಲೋಕನ ಮತ್ತು ಪರಿಶೀಲನಾ ಸಭೆಗೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದ್ದು, ಈ ವೇಳೆ ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿಯವರು ಗೈರು ಹಾಜರಾಗುವ ಮೂಲಕ ಒಂದರ್ಥದ ಕೀಳು ಮಟ್ಟದ ರಾಜಕೀಯಕ್ಕೆ ಮುನ್ನುಡಿ ಬರೆದಿದ್ದಾರೆ.

ದೇಶ ಸಂಕಷ್ಟದಲ್ಲಿರುವ ಹೊತ್ತಿನಲ್ಲಿ ರಾಜಕೀಯ ಪಕ್ಷಗಳು ತಮ್ಮ ಪಕ್ಷ ಭೇದ ಭಾವ ಮರೆತು ಜನರಿಗೆ ಸ್ಪಂದಿಸಬೇಕಾದ ಈ ಆರೋಗ್ಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ಮುಜುಗರ ಉಂಟು ಮಾಡಲೆಂದೇ ಸಭೆಗೆ ಗೈರು ಹಾಜರಾಗಿ ರುವುದು ಮಮತಾ ಬ್ಯಾನರ್ಜಿಯವರ ದ್ವೇಷ ರಾಜಕಾರಣವನ್ನು ಮತ್ತೊಮ್ಮೆ ಅನಾವರಣಗೊಳಿಸಿದಂತಾಗಿದೆ.

ಈ ಮಧ್ಯೆ ಬಂಗಾಲದ ಮುಖ್ಯ ಕಾರ್ಯದರ್ಶಿ ಅಳಪನ್ ಬಂಡೋಪಾಧ್ಯಾಯ ಕೂಡ ಸಭೆಗೆ ಗೈರಾಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸಿ.ಎಸ್. ರನ್ನು ವಾಪಸ್ ಕರೆಸಿಕೊಂಡು ದೆಹಲಿಯ ಪಿಂಚಣಿ ವಿಭಾಗದ ಸೇವೆಗೆ ನಿಯುಕ್ತಿಗೊಳಿಸಿರುವ ಕ್ರಮದಿಂದ ತೀವ್ರ ಮುಜುಗರಕ್ಕೀಡಾದ ದೀದಿ ಆದೇಶವನ್ನು ವಾಪಸು ಪಡೆಯುವಂತೆ ಮನವಿ ಮಾಡಿದ್ದಾರೆ. ಒಂದರ್ಥದಲ್ಲಿ ಮಮತಾ ಮತ್ತು ಕೇಂದ್ರ ನಡುವಣ ಕಾಳಗ ತಾರಕಕ್ಕೇರಿದ್ದು, ಸುಖಾ ಸುಮ್ಮನೆ ನನ್ನನ್ನು ಅವಮಾನಿಸಲಾಗಿದೆ, ಪ್ರಧಾನಿಯವರ ಬಳಿ ಅನುಮತಿ ಪಡೆದೇ ತಡವಾಗಿ ಸಭೆಗೆ ಆಗಮಿಸಿದ್ದೆ ಎಂದು ಪ್ರತ್ಯಾರೋಪ ಮಾಡಿರುವ ಮಮತಾ ಜನರಿಗಾಗಿ ಮೋದಿಯವರ ಕಾಲು ಹಿಡಿಯಲು ಸಿದ್ಧ ಎಂಬ ದೀದಿ ಮಾತಿನ ಹಿಂದೆ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರಗಳು ಅಡಗಿರುವುದಂತೂ ಸುಳ್ಳಲ್ಲ.