Tuesday, 22nd October 2024

ಇವು ಸಾಧುವಾದ ಪ್ರಯೋಗಗಳೇ ?

ಅಭಿಮತ

ಮಂಜುನಾಥ ಅಜ್ಜಂಪುರ

ಭಾರತವನ್ನು, ವಿಶೇಷವಾಗಿ ಸ್ವಾತಂತ್ರ್ಯಪೂರ್ವಕಾಲದ, ಅವಿಭಜಿತ ಭಾರತವನ್ನು (ಭಾರತ – ಪಾಕಿಸ್ತಾನ – ಬಾಂಗ್ಲಾದೇಶ)
ಭಾರತೀಯ ಉಪಖಂಡ,  Indian Sub – Continent ಎಂದು ಸಂಬೋಧಿಸಲಾಗುತ್ತದೆ.

ಇಂಗ್ಲಿಷ್ ಮೂಲ – ಬರವಣಿಗೆಗಳಲ್ಲಿ Indian Sub – Continent ಎಂದು ಇದ್ದರಂತೂ ಮುಗಿದೇಹೋಯಿತು, ನಾವು ಕಣ್ಣು ಮುಚ್ಚಿಕೊಂಡು ಭಾರತೀಯ ಉಪಖಂಡ ಎಂದು ಅನುವಾದಿಸಿಬಿಡುತ್ತೇವೆ. ಇದು ಸರಿಯೇ? ಇದು ಸಾಧುವಾದ ಪ್ರಯೋಗವೇ? ನಾವು ಯೋಚಿಸಬೇಕಾಗಿದೆ. ಭಾರತಕ್ಕೆ, ಭಾರತವರ್ಷಕ್ಕೆ, ಆರ್ಯಾವರ್ತಕ್ಕೆ ಮುಖ್ಯವಾಗಿ ಇರುವುದು ಸಾಂಸ್ಕೃತಿಕ ಸ್ವರೂಪ. ನಮ್ಮದು ಧರ್ಮಪ್ರಧಾನವಾದ, ಸಂಸ್ಕೃತಿ – ಪ್ರಧಾನವಾದ ವಿಶಿಷ್ಟ ಸಮುದಾಯ. ಯಾವುದೇ ದೇಶವೊಂದರ ರಾಜಕೀಯ ಗಡಿಗಳು ಬದಲಾಗುತ್ತಲೇ ಇರುತ್ತವೆ.

ಶತಮಾನಗಳ ಹಿಂದೆ ಇದ್ದ ಕೆಲವು ದೇಶಗಳು ಈಗ ಅಸ್ತಿತ್ವದಲ್ಲಿಯೇ ಇಲ್ಲ. ಹೊಸದೇಶಗಳೂ ಹುಟ್ಟಿಕೊಂಡಿವೆ. ನಮ್ಮ ದೇಶದ ರಾಜಕೀಯ ಗಡಿಗಳೂ ಬದಲಾಗಿವೆ. ಮತೀಯ – ಸಾಮ್ರಾಜ್ಯಶಾಹಿ ದುಃಶಕ್ತಿಗಳ ಜನಸಂಖ್ಯಾ – ಜಿಹಾದ್ ಕಾರಣದಿಂದಲೂ ನಮ್ಮ ಗಡಿಗಳು ಒಳಸರಿಯುತ್ತ ಹೋಗುತ್ತಿವೆ. ಅದೇನೇ ಇರಲಿ, ನಮ್ಮದು ಸಾಂಸ್ಕೃತಿಕ ಭಾರತ. ಆಸೇತು ಹಿಮಾಚಲ, ಉತ್ತರಂ ಯತ್ ಸಮುದ್ರಸ್ಯ ಹಿಮಾದ್ರೇಶ್ಬೈವ ದಕ್ಷಿಣಂ ಮುಂತಾದ ನಮ್ಮ ಪರಂಪರಾಗತ ಪರಿಕಲ್ಪನೆಗಳು ಒತ್ತು ನೀಡುವುದು ನಮ್ಮ ಸಾಂಸ್ಕೃತಿಕ ಸ್ವರೂಪಕ್ಕೇ.

ಬ್ರಿಟಿಷರು 1857ರ ಸ್ವಾತಂತ್ರ್ಯ ಸಮರದ ಅನಂತರ, ಮುಸ್ಲಿಮರನ್ನು ಓಲೈಸಲು ಮತ್ತು ಹಿಂದೂ ಸಮಾಜವನ್ನು ಛಿದ್ರಛಿದ್ರ ಗೊಳಿಸಲು ಇನ್ನಿಲ್ಲದ ಸಾಹಸ ಮಾಡಿದರು. ಇದು ಒಂದು ಸಮಾಜವೇ ಅಲ್ಲ ಎಂದು ಪ್ರತಿಪಾದಿಸಿದರು. ಅನೇಕ ಪಂಥಗಳ ಸಮುದಾಯಗಳನ್ನು, ವನವಾಸಿಗಳನ್ನು, ದಲಿತರನ್ನು ಬೇರೆಬೇರೆ ಮಾಡಲು ಎಲ್ಲ ಕುಕೃತ್ಯಗಳನ್ನೂ ಎಸಗಿದರು. ಹಿಂದೂ (ಸನಾತನ) ಧರ್ಮ ಎಂಬುದೇ ಇಲ್ಲ ಎಂದೂ ಸಾಧಿಸಿದರು. ಬ್ರಿಟಿಷರ, ಕಾಂಗ್ರೆಸ್ಸಿಗರ, ಕಮ್ಯುನಿಸ್ಟರ, ಜಿಹಾದಿಗಳ ಇಂತಹ ಜಂಟಿ – ಪ್ರಯತ್ನದಿಂದಾಗಿ, ನಮ್ಮ ಶಾಲಾ ಕಾಲೇಜುಗಳ ಪಠ್ಯಪುಸ್ತಕಗಳು ಬರೀ ಅನೃತವನ್ನು ವಿಷವನ್ನು ಕಾರುತ್ತಿವೆ.

ಹೀಗಾಗಿ ನಮ್ಮ ಮಾಹಿತಿ – ತಿಳಿವಳಿಕೆ – ಮಾನಸಿಕತೆಗಳೇ ವಿಷಪೂರಿತವಾಗಿಬಿಟ್ಟಿವೆ. ಕನ್ನಡ ಚಳವಳಿಯನ್ನು ಅನೇಕ ದಶಕ ಗಳಿಂದ ಗಮನಿಸಿದ್ದೇನೆ, ತುಂಬ ಹಿರಿಯರ ಭಾಷಣಗಳನ್ನೂ ಕೇಳಿದ್ದೇನೆ. ಭಾರತ ಒಂದು ದೇಶವಲ್ಲ, ಭಾರತವು ಹಲವು ಭಾಷಿಕ ಸಮುದಾಯಗಳ, ರಾಷ್ಟ್ರಗಳ ಒಂದು ಗುಂಪು, ಕರ್ನಾಟಕವೇ ಒಂದು ಪ್ರತ್ಯೇಕ ರಾಷ್ಟ್ರ / ದೇಶ ಎಂದು ಉದ್ಘೋಷಿಸಿದ ಅನೇಕ ಭಾಷಣಗಳನ್ನೂ ಕೇಳಿದ್ದೇನೆ. ಕೆಲವರು ಅನೇಕ ಭಾಷೆಗಳ ದೇಶಗಳಿರುವ ಯುರೋಪ್ ಖಂಡವನ್ನು ಉದಾಹರಣೆಯಾಗಿ ನೀಡುತ್ತಿದ್ದರು (ಸ್ವಿಟ್ಜರ್ಲ್ಯಾಂಡ್, ಚೀನಾ ಮುಂತಾದ ಅನೇಕ ದೇಶಗಳಲ್ಲಿ ಬಹುಭಾಷಾ ಸಮುದಾಯಗಳಿರುವುದನ್ನು, ಪಾಪ, ಅವರು ಬೇಕೆಂದೇ ಮರೆಯುತ್ತಿದ್ದರು). ಸ್ವಾತಂತ್ರ್ಯೋತ್ತರ ಭಾರತದಲ್ಲಿ NCERT, ICHR ನಂತಹ ಅತಿ – ಮಹತ್ತ್ವದ ಸಂಸ್ಥೆ ಗಳಲ್ಲಿ ಕುಳಿತು ವಿಷಬೀಜ ಬಿತ್ತಿದವರ ಶ್ರಮ ಹೀಗೆ ಸಾರ್ಥಕವಾಯಿತು!!

ಕೇರಳ ಮೂಲದ ಆದಿಶಂಕರರು ಸಕಾರಣವಾಗಿಯೇ ಭಾರತದ ನಾಲ್ಕೂ ದಿಕ್ಕುಗಳಲ್ಲಿ ಶೃಂಗೇರಿ, ದ್ವಾರಕೆ, ಬದರಿ, ಪುರಿಗಳಲ್ಲಿ ಹನ್ನೆರಡು ಶತಮಾನಗಳ ಹಿಂದೆಯೇ ಮಠಗಳನ್ನು ಸ್ಥಾಪಿಸಿದ್ದನ್ನು ನಾವು ಮರೆಯುವಂತಿಲ್ಲ. ಕಾಶಿ – ರಾಮೇಶ್ವರಗಳನ್ನು ಒಂದೇ ನುಡಿಕಟ್ಟಿನಲ್ಲಿ ಬೆಸೆದ ನಮ್ಮ ಪರಂಪರೆಯನ್ನು ಮರೆಯಲಾದೀತೇ! ಇಂಥ ಅನೇಕ ಉದಾಹರಣೆಗಳನ್ನು ಕೊಡಬಹುದು. ಸಾರಾಂಶ ಇಷ್ಟೇ. ನಿರ್ದಿಷ್ಟ ಗಡಿಯ ಏಕರೂಪದ ಸಾಮ್ರಾಜ್ಯಶಾಹಿ ಭಾರತವು ನಮ್ಮ ಕಣ್ಮುಂದೆ ಬರುವುದಿಲ್ಲ. ನಮ್ಮದು ಎಂದಿ ನಿಂದಲೂ ಸಾಂಸ್ಕೃತಿಕ ಭಾರತ.

ಹೀಗಿರುವಾಗ, ಪರೋಕ್ಷವಾಗಿ ಭಾರತೀಯ ಉಪಖಂಡ, Indian Sub – Continent ಎನ್ನುತ್ತಾ ಇದು ಒಂದು ದೇಶವಲ್ಲ, ಇದು ಒಂದು ದೇಶಗಳ ಸಮೂಹ ಎನ್ನುವ ಕುತಂತ್ರದ ಪರಿಕಲ್ಪನೆಯ ವಿರುದ್ಧ ನಾವು ಎಚ್ಛೆತ್ತುಕೊಳ್ಳಬೇಕಾಗಿದೆ. ಕುಟಿಲೋಪಾಯ ಗಳಿಗೆ ನಾವು ಬಲಿಯಾಗದಿರೋಣ. ಕನಿಷ್ಠ, ಇನ್ನು ನಾವೆ ಭಾರತೀಯ ಉಪಖಂಡ, Indian Sub – Continent ಎನ್ನುವ ಪ್ರಯೋಗ ಗಳನ್ನು ಕೈಬಿಡೋಣ. ಭಾಷಾಂತರದಂತೆಯೇ, ಮೂಲಲೇಖನಗಳನ್ನು ಬರೆಯುವಾಗಲೂ, ವಿಘಟನೆಯ ದುರುದ್ದೇಶದ ವಸಾಹತುಶಾಹಿ ಕುಟಿಲ – ಕಲ್ಪನೆಯ ಈ ಭಾರತೀಯ ಉಪಖಂಡ, , Indian Sub – Continent ಪ್ರಯೋಗಗಳನ್ನು ಕೈಬಿಡೋಣ. ವಿಶೇಷತಃ ಕನ್ನಡದ ಪತ್ರಕರ್ತರಲ್ಲಿ, ಲೇಖಕರಲ್ಲಿ ಇದು ನನ್ನ ಪ್ರಾರ್ಥನೆ.